ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿ ನಡೆಸಿ 80ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ISIS-K ಉಗ್ರವಾದಿ ಸಂಘಟನೆಯ ಮುಂದಿನ ಗುರಿ ಭಾರತವಾಗಿರುವ ಸಾಧ್ಯತೆಯಿದೆ. ಭಾರತದಲ್ಲಿಯೂ ಇಸ್ಲಾಮಿಕ್ ರಾಷ್ಟ್ರ ಸ್ಥಾಪನೆ ಮಾಡುವ ಉದ್ದೇಶವನ್ನು ಈ ಸಂಘಟನೆ ಹೊಂದಿದೆ, ಎಂದು ಎನ್ಡಿಟಿವಿ ವರದಿ ಮಾಡಿದೆ.
ಸರ್ಕಾರದ ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿರುವ ಎನ್ಡಿಟಿವಿ, ಈಗಾಗಲೇ ಅಫ್ಘಾನಿಸ್ತಾನದಲ್ಲಿ ಭದ್ರವಾಗಿ ನೆಲೆಯೂರಿರುವ IS-K ಅಥವಾ ISIS-K ಎಂದೂ ಕರೆಯಲ್ಪಡುವ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ತನ್ನ ಜಿಹಾದಿ ಕೃತ್ಯಗಳನ್ನು ಮಧ್ಯ ಏಷ್ಯಾ ಹಾಗೂ ನಂತರ ಭಾರತದಲ್ಲಿ ವಿಸ್ತಿರುಸವ ಯೋಜನೆಯನ್ನು ಹೊಂದಿದೆ, ಎಂದು ವರದಿ ಮಾಡಿದೆ.
ಧರ್ಮದ ಅಮಲನ್ನು ಯುವಕರಲ್ಲಿ ತುಂಬಿ ಸೈದ್ದಾಂತಿಕವಾಗಿ ಮಧ್ಯ ಏಷ್ಯಾ ಹಾಗೂ ಭಾರತದಲ್ಲಿ ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪಿಸುವ ಉದ್ದೇಶ ISIS-K ಹೊಂದಿದೆ. ಇದಕ್ಕಾಗಿ ಭಾರತದಲ್ಲಿಯೂ ಭಯೋತ್ಪಾದನಾ ಕೃತ್ಯಗಳನ್ನು ನಡೆಸುವ ಸಾಧ್ಯತೆಯಿದೆ. ಮುಂಬೈ, ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳ ಯುವಕರು ISISಗೆ ಸೇರುತ್ತಿದ್ದಾರೆ. ದೇಶದಲ್ಲಿರುವ ಧಾರ್ಮಿಕ ಮೂಲಭೂತವಾದಿಗಳ ಮುಖಾಂತರ ಈ ಕೆಲಸ ನಡೆಯುತ್ತಿದೆ, ಎಂದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ನಂತರ, ಉಗ್ರ ಸಂಘಟನೆಗಳ ಪ್ರಯೋಗಾಲಯವಾಗಿ ಅಫ್ಘಾನ್ ಮಾರ್ಪಾಡಾಗುತ್ತಿದೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯು ಅಫ್ಘಾನಿಸ್ತಾನಕ್ಕೆ ವರ್ಗಾವಣೆಯಾಗಿದೆ. 2008ರ ಮುಂಬೈ ದಾಳಿಯ ರೂವಾರಿಯಾಗಿದ್ದ ಲಷ್ಕರ್-ಎ-ತೋಯ್ಬಾ ಸಂಘಟನೆಯೂ ಅಫ್ಘಾನ್’ಗೆ ಸ್ಥಳಾಂತರವಾಗಿರುವ ಕುರಿತು ಮಾಹಿತಿಯಿದೆ.
ಈ ಹಿಂದೆ ಅಫ್ಘಾನಿಸ್ತಾನದಲ್ಲಿದ್ದ ಅಮೇರಿಕ ಬೆಂಬಲಿತ ಸರ್ಕಾರ ಹಾಗೂ ತಾಲಿಬಾನ್ ವಿರುದ್ದವೂ ಐಸಿಸ್-ಕೆ ಉಗ್ರ ಸಂಘಟನೆ ದಾಳಿ ನಡೆಸಿತ್ತು. ಇತ್ತೀಚಿಗೆ ಕಾಬೂಲ್ ಏರ್ಪೋರ್ಟ್ ಮೇಲೆ ದಾಳಿ ನಡೆಸಿ, ತಾಲಿಬಾನಿಗಳಿಂದ ಅಫ್ಘಾನಿಸ್ತಾನಕ್ಕೆ ಘೋಷಿಸಿದ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನಿರೂಪಿಸಲು ಪ್ರಯತ್ನಿಸಿತ್ತು.




