ತಮ್ಮ 75ನೆಯ ಸ್ವಾತಂತ್ರ್ಯೋತ್ಸವದ ಕೆಂಪುಕೋಟೆಯ ಭಾಷಣಕ್ಕೆ ಮಾನ್ಯ ಪ್ರಧಾನಮಂತ್ರಿಗಳು ಸಾರ್ವಜನಿಕರ ಸಲಹೆಗಳನ್ನು ಕೋರಿದ್ದರು. ಹಾಗೆಯೇ ದೇಶದ ಸಮಸ್ತ ಪ್ರಜೆಗಳೂ ರಾಷ್ಟ್ರಗೀತೆಯನ್ನು ಹಾಡಿ, ರೆಕಾರ್ಡ್ ಮಾಡಿ ಒಂದು ಜಾಲತಾಣಕ್ಕೆ ಅಪ್ಲೋಡ್ ಮಾಡುವ ಬೃಹತ್ ಭಾವನಾತ್ಮಕ ಯೋಜನೆಯೂ ಕಾರ್ಯಗತವಾಗಿತ್ತು. ರಾಷ್ಟ್ರೀಯ ಉನ್ಮಾದ ಸೃಷ್ಟಿಸುವ ಈ ಎರಡೂ ಯೋಜನೆಗಳ ಉದ್ದೇಶ ಜನರಲ್ಲಿ ‘ ದೇಶಪ್ರೇಮ ’ವನ್ನು ಉದ್ಧೀಪನಗೊಳಿಸುವುದೇ ಆಗಿರಬೇಕು. ಆದರೆ ಉನ್ಮತ್ತ ರಾಷ್ಟ್ರೀಯತೆಯ ಭ್ರಮಾಲೋಕದಿಂದ ವಾಸ್ತವಿಕ ಜಗತ್ತಿಗೆ ಬಂದು ನೋಡಿದಾಗ, ಅಮೃತ ಮಹೋತ್ಸವದ ಸಂದರ್ಭದಲ್ಲಿ ಭಾರತದ ಸಾರ್ವಭೌಮ ಜನತೆ ತಮ್ಮ ಅಭಿಪ್ರಾಯ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿರುವುದು ಢಾಳಾಗಿ ಕಾಣಿಸುತ್ತದೆ. ಕೆಂಪುಕೋಟೆಯಿಂದ ಮೂಡಿದ ಚುನಾವಣಾ ಭಾಷಣದಲ್ಲಿ ಸಾಮಾನ್ಯ ಜನತೆಯ ಆತಂಕ, ಆಶಯ, ಹತಾಶೆ ಇದಾವುದೂ ಕಾಣದಿರುವುದನ್ನು ನೋಡಿದರೆ, ಸ್ವತಂತ್ರ ಭಾರತದ ಪ್ರಜಾತಂತ್ರ ವ್ಯವಸ್ಥೆಯ ಒಂದು ಸ್ತಂಭ ಸಂಪೂರ್ಣ ಕುಸಿದಿರುವುದು ಸ್ಪಷ್ಟವಾಗುತ್ತದೆ.
ಸಂವಹನ ಮತ್ತು ಸಂಪರ್ಕ ಮುಕ್ತವಾಗಿದ್ದರೆ ಮಾತ್ರವೇ ಒಂದು ಪ್ರಜಾಪ್ರಭುತ್ವ ಸುಸ್ಥಿತಿಯಲ್ಲಿರಲು ಸಾಧ್ಯ. ಸಾರ್ವಜನಿಕರೊಡನೆ ಆಳುವ ವ್ಯವಸ್ಥೆ ನೇರ ಮುಖಾಮುಖಿಯಾಗದೆ ಹೋದಲ್ಲಿ ಆಡಳಿತ ಯಂತ್ರ ತನ್ನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತದೆ. ಜನತೆಯ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂವಹನ ಮಾಧ್ಮಮಗಳು ಮಹತ್ವದ ಪಾತ್ರ ವಹಿಸುತ್ತವೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ನಡುವೆ, ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವೆ ಇರಬೇಕಾದ ಮುಕ್ತ ಸಂವಾದದ ಪರಿಸರ ಕ್ರಮೇಣ ಕಲುಷಿತವಾಗುತ್ತಿರುವುದನ್ನು ಕಳೆದ ಏಳು ವರ್ಷಗಳ ಸಾಂಸ್ಕೃತಿಕ ರಾಜಕಾರಣದಲ್ಲಿ ಕಾಣುತ್ತಿದ್ದೇವೆ. ಸ್ವಾತಂತ್ರೋತ್ಸವ ಭಾಷಣಕ್ಕೆ ಜನತೆಯಿಂದ ಸಲಹೆ ಕೇಳುವ ಪ್ರಧಾನಿ ಏಳು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೆ ಇರುವುದು, #ಆತ್ಮನಿರ್ಭರ ಭಾರತದ ನಿರ್ಭಾವುಕ ನಿರಂಕುಶಾಧಿಕಾರದ ಸೂಚನೆಯೇ ಆಗಿದೆ.
ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿರುವುದು ಭಾರತದ ಮಾಧ್ಯಮ ಜಗತ್ತು. ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮರೆತಿರುವುದೇ ಅಲ್ಲದೆ ಪ್ರಜಾತಂತ್ರ ವ್ಯವಸ್ಥೆಯ ಮೂಲ ಆಶಯಗಳನ್ನೇ ಮರೆತು, ಪ್ರಭುತ್ವದ ಅಥವಾ ಆಳುವ ವರ್ಗಗಳ ಕೃಪೆಗಾಗಿ ಅಂಗಲಾಚುತ್ತಿರುವುದನ್ನು ಅಮೃತ ಮಹೋತ್ಸವದ ಸಂದರ್ಭದಲ್ಲಿ ಗಂಭೀರವಾಗಿ ಪರಾಮರ್ಶಿಸಬೇಕಿದೆ. ಸಂವಿಧಾನ ಮತ್ತು ಪ್ರಜಾತಂತ್ರವನ್ನು ಸದಾ ಜಾಗ್ರತೆಯಿಂದ ಕಾಯಬೇಕಾದ ಸಂವಹನ ಮಾಧ್ಯಮಗಳು ಇಂದು ಆಳುವವರ ಹಿತಾಸಕ್ತಿ ಕಾಯುವತ್ತ ಹೊರಳಿರುವುದು ಭಾರತದ ಬದಲಾಗುತ್ತಿರುವ ರಾಜಕೀಯ ಚಹರೆಯ ಸೂಚನೆಯಾಗಿಯೇ ಕಾಣುತ್ತದೆ. ಜನತೆಯ ವರ್ತಮಾನದ ಹತಾಶೆಗಳನ್ನು, ಭವಿಷ್ಯದ ಆತಂಕಗಳನ್ನು ಪ್ರಭುತ್ವಕ್ಕೆ ಪರಿಣಾಮಕಾರಿಯಾಗಿ ಮುಟ್ಟಿಸಬಲ್ಲ ಒಂದು ಸಾಧನವೆಂದರೆ ಮಾಧ್ಯಮ.
ಈ ಹಿಂದೆ 1960ರ ದಶಕದ ತಲ್ಲಣಗಳ ನಡುವೆ, ವಿಪ್ಲವಕಾರಿ ಪಲ್ಲಟಗಳ ನಡುವೆ, 1970ರ ಪ್ರಕ್ಷುಬ್ಧತೆಯ ನಡುವೆ ಮತ್ತು 1980-90 ದಶಕದ ಕ್ಷೋಭೆಯ ನಡುವೆಯೂ ಭಾರತದ ಮಾಧ್ಯಮ ವಲಯ ಜನತೆಗೆ ಸ್ಪಂದಿಸಿದೆ. ತುರ್ತುಪರಿಸ್ಥಿತಿಯಂತಹ ಕರಾಳ ಕಾಲಘಟ್ಟದಲ್ಲಿ ಪ್ರಭುತ್ವದ ದಮನಕಾರಿ ನೀತಿಯ ವಿರುದ್ಧ ಇಡೀ ದೇಶವೇ ಎದ್ದುನಿಲ್ಲುವಂತೆ ಮಾಡುವುದರಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಅವಿಸ್ಮರಣೀಯ. ಆಗಲೂ ಭಾರತದ ಸುದ್ದಿಪತ್ರಿಕೆಗಳೇನೂ ದೇಶದ ನಿರ್ಗತಿಕ, ಅವಕಾಶವಂಚಿತ ಜನತೆಯ ಸ್ವತ್ತಾಗಿರಲಿಲ್ಲ. ಔದ್ಯೋಗಿಕ ಬಂಡವಾಳಿಗರ ವಶದಲ್ಲೇ ಇದ್ದವು. ಆದರೆ ಆ ಕಾಲಘಟ್ಟದ ಪತ್ರಿಕಾ ಧರ್ಮ ಮತ್ತು ವೃತ್ತಿಪರತೆ ಜನಪರವಾಗಿದ್ದಿತು. ಪತ್ರಿಕೆಗಳ ಒಡೆತನ ಮತ್ತು ಪತ್ರಿಕೆಯ ಸಂಪಾದಕೀಯ ಧೋರಣೆಯ ನಡುವೆ ಒಂದು ಸೂಕ್ಷ್ಮ ಗೆರೆ ಸದಾ ಇದ್ದೇ ಇರುತ್ತಿತ್ತು.
ಈ ಗೆರೆ ಇಂದು ಮಾಯವಾಗಿದೆ. ಔದ್ಯೋಗಿಕ ಬಂಡವಾಳದ ಯುಗದಲ್ಲಿ ಬಂಡವಾಳಿಗರು ಪ್ರಭುತ್ವದ ನೀತಿಗಳನ್ನು ಅವಲಂಬಿಸಿ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ರಾಜಕೀಯ ಮತ್ತು ಸಾಮಾಜಿಕ ಒತ್ತಡ ಹೇರುತ್ತಿದ್ದರು. ಚುನಾವಣಾ ರಾಜಕಾರಣದಲ್ಲಿ ಈ ಒತ್ತಡದ ನಗದೀಕರಣವನ್ನೂ ಅಂದು ಕಾಣಬಹುದಿತ್ತು. ಭಾರತದ ಆಳುವ ವರ್ಗಗಳೂ ಸಹ ಬಂಡವಾಳಿಗರ ಹಿತಾಸಕ್ತಿಯ ರಕ್ಷಣೆಗಾಗಿಯೇ ಹಲವು ಕಾಯ್ದೆ ಕಾನೂನುಗಳನ್ನು ತಿದ್ದುಪಡಿ ಮಾಡುವುದನ್ನೂ ಕಾಣಬಹುದಿತ್ತು. ಆದರೆ ಡಿಜಿಟಲ್ ಯುಗದ ಹಣಕಾಸು ಬಂಡವಾಳ ಇಂದಿನ ಪ್ರಭುತ್ವದ ನೀತಿಗಳನ್ನು ತಾನೇ ನಿಯಂತ್ರಿಸುತ್ತಿದೆ. ಚುನಾಯಿತ ಸರ್ಕಾರಗಳ ಅಸ್ತಿತ್ವಕ್ಕೂ ಷೇರು ಮಾರುಕಟ್ಟೆಯ ವ್ಯತ್ಯಯಗಳಿಗೂ ನೇರ ಸಂಬಂಧಿವಿರುವ ಮಟ್ಟಿಗೆ, ಬಂಡವಾಳಿಗರು ದೇಶದ ಆರ್ಥಿಕ ನೀತಿಗಳ ರೂವಾರಿಗಳಾಗಿದ್ದಾರೆ.
ಈ ಸನ್ನಿವೇಶದಲ್ಲೇ ಭಾರತದ ಮಾಧ್ಯಮ ಕ್ಷೇತ್ರ ಬಂಡವಾಳಶಾಹಿಗಳ ಒಕ್ಕೂಟದ ಸಾಮೂಹಿಕ ಧ್ವನಿಯಾಗಿ ಪರಿಣಮಿಸಿದೆ. ಒಬ್ಬ ರಾಜಕೀಯ ನಾಯಕ ಅಥವಾ ಉದ್ಯಮಿಯ ಹುಟ್ಟುಹಬ್ಬ ದೇಶದ ಪ್ರತಿಷ್ಠಿತ ಪತ್ರಿಕೆಗಳನ್ನೂ ಜಾಹೀರಾತು ಕರಪತ್ರಗಳನ್ನಾಗಿ ಮಾಡಿಬಿಡುತ್ತಿವೆ. ಡಿಜಿಟಲ್ ತಂತ್ರಜ್ಞಾನದ ಬಂಡವಾಳ ಹೂಡಿಕೆ ಮತ್ತು ವಿದೇಶಿ ಬಂಡವಾಳದ ನೇರ ಹೂಡಿಕೆಯ ಪರಿಣಾಮ ಭಾರತದ ಇಡೀ ವಿದ್ಯುನ್ಮಾನ ಕ್ಷೇತ್ರ ಇಂದು ಬಂಡವಾಳಿಗರ ಕೈವಶವಾಗಿದೆ, ತನ್ಮೂಲಕ ರಾಜಕೀಯ ಪಕ್ಷಗಳ ಕರಪತ್ರಗಳಾಗಿವೆ. ಬಂಡವಾಳಿಗ–ರಾಜಕಾರಣಿ–ಉದ್ಯಮಿಗಳ ಸಂಪೂರ್ಣ ಹಿಡಿತದಲ್ಲಿರುವ ಪತ್ರಿಕಾ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಇಂದು ಸುದ್ದಿ ಪ್ರಸರಣಕ್ಕಿಂತಲೂ ಹೆಚ್ಚು ಅಭಿಪ್ರಾಯ ಉತ್ಪಾದನೆಯಲ್ಲಿ ತೊಡಗಿರುವುದಕ್ಕೆ ಇದು ಮೂಲ ಕಾರಣವೂ ಆಗಿದೆ.
ಮಾಧ್ಯಮ ಕ್ಷೇತ್ರದ ಎರಡು ಮುಖಗಳು
ಭಾರತದ ಇಂದಿನ ಮಾಧ್ಯಮ ವಲಯವನ್ನು ಎರಡು ಮಜಲುಗಳಲ್ಲಿ ನೋಡಬಹುದು. ಮೊದಲನೆಯದು, ಒಂದಿಷ್ಟು ವೃತ್ತಿಪರತೆ ಮತ್ತು ಸಂಪಾದಕೀಯ ಸ್ವಂತಿಕೆಯನ್ನು ಉಳಿಸಿಕೊಂಡು, ವ್ಯವಸ್ಥೆಯ ವಿರುದ್ಧ ಅಲ್ಲದಿದ್ದರೂ ಶೋಷಿತರ, ಅವಕಾಶವಂಚಿತರ, ತುಳಿತಕ್ಕೊಳಗಾದವರ ಪರ ವಹಿಸುವ ಒಂದು ವಲಯ, ಈ ಕಾರಣಕ್ಕಾಗಿಯೇ ಸರ್ಕಾರದ ಕೆಲವು ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಾ, ಸಂವಿಧಾನದ ಚೌಕಟ್ಟಿನಲ್ಲಿ ಪರ್ಯಾಯಗಳನ್ನು ಹುಡುಕುವುದರಲ್ಲಿ ತೊಡಗಿವೆ. ಸರ್ಕಾರದ ಕರಾಳ ಶಾಸನಗಳನ್ನು, ಜನತೆಯ ದನಿಯನ್ನು ಹತ್ತಿಕ್ಕುವ ದಮನಕಾರಿ ನೀತಿಗಳನ್ನು ಮತ್ತು ಸಾಮಾನ್ಯ ಜನರನ್ನು ಆರ್ಥಿಕ ಸಂಕಷ್ಟಕ್ಕೀಡುಮಾಡುವ ಸಾಮಾಜಿಕಾರ್ಥಿಕ ನೀತಿಗಳನ್ನು ವಿರೋಧಿಸದಿದ್ದರೂ, ವಿಮರ್ಶಾತ್ಮಕವಾಗಿ ನೋಡುವ ಧೋರಣೆಯನ್ನು ಈ ಮಾಧ್ಯಮ ಸಮೂಹಗಳು ಉಳಿಸಿಕೊಂಡಿವೆ. ವಿದ್ಯುನ್ಮಾನ ವಲಯದಲ್ಲಿ ಈ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೂ ಮುದ್ರಣ ವಲಯದಲ್ಲಿ ಗಣನೀಯವಾಗಿದೆ. ಈ ಸುದ್ದಿಮನೆಗಳ ಮುದ್ರಣ ಮತ್ತು ಪ್ರಸರಣ ಪ್ರಕ್ರಿಯೆಯೂ ಬಂಡವಾಳಿಗರ ಹಿತಾಸಕ್ತಿಯ ದೃಷ್ಟಿಯಿಂದಲೇ ಚಲನೆಯಲ್ಲಿದ್ದರೂ, ಪತ್ರಿಕೋದ್ಯಮದ ಮೌಲ್ಯಗಳು ಕಿಂಚಿತ್ತಾದರೂ ಉಳಿಸಿಕೊಳ್ಳಲು ಹೆಣಗಾಡುತ್ತಿವೆ.
ಇಂತಹ ಟಿವಿ ವಾಹಿನಿಗಳು, ಪತ್ರಿಕೆಗಳು, ಅಂತರ್ಜಾಲ ಮಾಧ್ಯಮಗಳು #ಆತ್ಮನಿರ್ಭರ ಭಾರತದ ಆಡಳಿತ ನೀತಿಗಳ ಟೀಕಾಕಾರರಾಗಿ, ವಿಮರ್ಶಕರಾಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ರಾಜದ್ರೋಹ ಕಾಯ್ದೆ, ಯುಎಪಿಎ ಕಾಯ್ದೆಯಡಿ ಸುಳ್ಳು ಮೊಕದ್ದಮೆಗಳನ್ನು ಎದುರಿಸುತ್ತಿರುವ ಈ ವಲಯದ ಪತ್ರಕರ್ತರು, ವರದಿಗಾರರು, ಸಂಪಾದಕರು, ನೂರಾರು ಸಂಖ್ಯೆಯಲ್ಲಿ ಜೈಲು ವಾಸ ಅನುಭವಿಸಿದ್ದೂ ಇದೆ. ಕಳೆದ ಏಳೆಂಟು ವರ್ಷಗಳಲ್ಲಿ 200ಕ್ಕೂ ಹೆಚ್ಚು ಮಾಧ್ಯಮ ಮಿತ್ರರು ಮಾಫಿಯಾಗಳ ದಾಳಿಗೆ ಜೀವತೆತ್ತಿದ್ದಾರೆ. ಇತ್ತೀಚೆಗೆ ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ (ಆರ್ಎಸ್ಎಫ್) ಸಂಸ್ಥೆ ಬಿಡುಗಡೆ ಮಾಡಿದ 2020ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 142ನೆಯ ಸ್ಥಾನ ಗಳಿಸಿತ್ತು. ಇದು ಕೇಂದ್ರ ಬಿಜೆಪಿ ಸರ್ಕಾರವನ್ನು ಚಿಂತೆಗೀಡುಮಾಡಿತ್ತು. 2020ರಲ್ಲೇ ತನ್ನ ಶ್ರೇಣಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರೆತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಫಲಕಾರಿಯಾಗಿಲ್ಲ. ಈ ವರ್ಷದ ವರದಿಯಲ್ಲೂ ಭಾರತ ಅದೇ 142ನೆಯ ಸ್ಥಾನದಲ್ಲೇ ಮುಂದುವರೆದಿದ್ದು, ಮೋದಿ ಮಾಧ್ಯಮಗಳ ಮೇಲೆ ತಮ್ಮ ನಿಯಂತ್ರಣವನ್ನು ಬಿಗಿಗೊಳಿಸಿದ್ದಾರೆ ಎಂಬ ಹೆಡ್ ಲೈನ್ಗಳು ಅಂತರರಾಷ್ಟ್ರೀಯ ಸುದ್ದಿ ಪತ್ರಿಕೆಗಳಲ್ಲಿ ಹರಿದಾಡಲಾರಂಭಿಸಿವೆ.
“ ಪತ್ರಕರ್ತರಿಗೆ ಮತ್ತು ಪತ್ರಿಕಾ ಮಾಧ್ಯಮದವರಿಗೆ ನಿರ್ಭೀತಿಯಿಂದ ತಮ್ಮ ಕಾರ್ಯ ನಿರ್ವಹಿಸಲು ಭಾರತ ಅತಿ ಹೆಚ್ಚು ಅಪಾಯಕಾರಿ ರಾಷ್ಟ್ರವಾಗಿದೆ. ಪತ್ರಕರ್ತರು ಎಲ್ಲ ರೀತಿಯ ದಾಳಿಗಳಿಗೂ ಒಳಗಾಗುತ್ತಿದ್ದಾರೆ. ಪತ್ರಕರ್ತರ ವಿರುದ್ಧ ಪೊಲೀಸರು ಹಿಂಸಾತ್ಮಕ ದಾಳಿ ನಡೆಸುವುದು, ರಾಜಕೀಯ ಕಾರ್ಯಕರ್ತರು ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದು, ಕ್ರಿಮಿನಲ್ ಗುಂಪುಗಳು ಮತ್ತು ಭ್ರಷ್ಟ ಸ್ಥಳೀಯ ನಾಯಕರು ಪ್ರಾಮಾಣಿಕ ವರದಿ ಮಾಡುವ ಪತ್ರಕರ್ತರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ ” ಎಂದು ಹೇಳಿರುವ ವರದಿಯಲ್ಲಿ, “ 2019ರಲ್ಲಿ ಪ್ರಧಾನಿ ಮೋದಿ ಪುನರಾಯ್ಕೆಯಾದ ನಂತರದಲ್ಲಿ ಮಾಧ್ಯಮಗಳೆಲ್ಲವೂ ಸರ್ಕಾರದ ಪರವಾಗಿಯೇ ಕಾರ್ಯನಿರ್ವಹಿಸುವ ಒತ್ತಡ ಹೆಚ್ಚಾಗಿದೆ, ಹಿಂದುತ್ವವಾದಿಗಳ ವಿರುದ್ಧ ವರದಿ ಮಾಡುವ ಪತ್ರಕರ್ತರ ಮೇಲೆ ದ್ವೇಷಪೂರಿತ ಪ್ರಚಾರವನ್ನು ಕೈಗೊಳ್ಳಲಾಗುತ್ತಿದೆ, ಇಂತಹ ಮಾಧ್ಯಮಗಳ ವಿರುದ್ಧ ಮತ್ತು ಸಾಮಾಜಿಕ ತಾಣಗಳ ವಿರುದ್ಧ ಹಿಂದುತ್ವ ಗುಂಪುಗಳು ದ್ವೇಷ ರಾಜಕಾರಣ ಮಾಡುವ ಮೂಲಕ ಅಡ್ಡಿಯುಂಟುಮಾಡುತ್ತಿವೆ ” ಎಂದೂ ವರದಿಯಲ್ಲಿ ಹೇಳಲಾಗಿದೆ
ಈ ಗುಂಪಿಗೆ ವ್ಯತಿರಿಕ್ತವಾಗಿ ಭಾರತದ ಮಾಧ್ಯಮ ವಲಯದ ಒಂದು ಗುಂಪು ಸರ್ಕಾರದ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಕನ್ನಡದ ವಿದ್ಯುನ್ಮಾನ ಸುದ್ದಿಮನೆಗಳು ಸಾರಾಸಗಟಾಗಿ ಈ ಗುಂಪಿಗೆ ಸೇರಿವೆ. ಈ ಸುದ್ದಿಮನೆಗಳಲ್ಲಿ ‘ ಉತ್ಪಾದಿಸಲಾಗುವ ‘ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಸಾರ್ವತ್ರಿಕತೆ ಪಡೆಯುವಷ್ಟು ಮಟ್ಟಿಗೆ ಸುದ್ದಿ ಪ್ರಸರಣ ಮಾಧ್ಯಮಗಳು ಎಚ್ಚರ ವಹಿಸಿವೆ. ಕಾಶ್ಮೀರದ ಬೆಳವಣಿಗೆಗಳು, ಸಿಎಎ–ಎನ್ಆರ್ಸಿ ವಿರೋಧಿ ಹೋರಾಟಗಳು, ಈಗ ನಡೆಯುತ್ತಿರುವ ರೈತ ಮುಷ್ಕರ, ಕೋವಿದ್ ನಿರ್ವಹಣೆ, ಲಾಕ್ಡೌನ್ ಸಮಯದ ವಲಸೆ ಕಾರ್ಮಿಕರ ಬವಣೆ, ದೇಶಾದ್ಯಂತ ನಡೆಯುತ್ತಿರುವ ಹಿಂದೂ ಮತೀಯವಾದಿಗಳ ಆಕ್ರಮಣಗಳು ಈ ಎಲ್ಲ ವಿಚಾರಗಳಲ್ಲಿ, ಕೆಲವು ಮುದ್ರಣ ಮತ್ತು ವಿದ್ಯುನ್ಮಾನ ಸುದ್ದಿಮನೆಗಳ ಧೋರಣೆ ಒಂದು ನಿದರ್ಶನವಷ್ಟೆ. ಇದು ಪ್ರಜಾತಂತ್ರ ಭಾರತಕ್ಕೆ ಮತ್ತು ಸಾಂವಿಧಾನಿಕ ಚೌಕಟ್ಟಿಗೆ ಅಪಾಯಕಾರಿಯಾದ ಅಂಶ.
ಒಂದೆಡೆ ಮಾಧ್ಯಮ ಸಮೂಹಗಳ ಒಡೆತನವನ್ನು ಹೊಂದಿರುವ ಬಂಡವಾಳಿಗರು ಸರ್ಕಾರದ ಆಡಳಿತ ನೀತಿಗಳ ಮೇಲೆ ತಮ್ಮ ಹಿಡಿತ ಸಾಧಿಸುತ್ತಲೇ ಮತ್ತೊಂದೆಡೆ ಸಂವಹನ ಮಾಧ್ಯಮಗಳ ಮೂಲಕ ಜನಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಸುದ್ದಿಮನೆಗಳಲ್ಲಿ ಸಾರ್ವಜನಿಕ ಅಭಿಪ್ರಾಯಗಳನ್ನು ‘ಉತ್ಪಾದಿಸುವ’ ನಿಟ್ಟಿನಲ್ಲಿ ತಮ್ಮ ಮಾರುಕಟ್ಟೆ ವ್ಯಾಪ್ತಿ ಮತ್ತು ಪ್ರಾಬಲ್ಯವನ್ನು ವ್ಯವಸ್ಥಿತವಾಗಿ ಬಳಸುತ್ತಿದ್ದಾರೆ. ಇಲ್ಲಿ ಬಂಡವಾಳ ಹೂಡಿಕೆದಾರರ ಹಿತಾಸಕ್ತಿ, ಮಾಧ್ಯಮ ಸಮೂಹದ ಮಾಲೀಕರ ರಾಜಕೀಯ ಹಿತಾಸಕ್ತಿ ಮತ್ತು ಸಂಪಾದಕ ಮಂಡಲಿಯ ರಾಜಕೀಯ–ಸೈದ್ಧಾಂತಿಕ ನಿಲುವು ಇವೆಲ್ಲವೂ ಒಟ್ಟಿಗೇ ಕೆಲಸ ಮಾಡುತ್ತವೆ. ಆಡಳಿತಾರೂಢ ಸರ್ಕಾರಗಳೂ ಹೇಗೆ ಪತ್ರಿಕೆಗಳನ್ನು ತಮ್ಮ ‘ಜಾಹೀರಾತು ರಾಜಕಾರಣ’ದ ಮೂಲಕ ನಿಯಂತ್ರಿಸುತ್ತವೆ ಎನ್ನುವುದನ್ನು ಇತ್ತೀಚೆಗೆ ಕರ್ನಾಟಕದ ವಾರ್ತಾಇಲಾಖೆ ರಾಜ್ಯ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗಮನಿಸಬಹುದಿತ್ತು.
ಪತ್ರಿಕಾ ಮೌಲ್ಯ ಮತ್ತು ಮಾರುಕಟ್ಟೆ ಮೌಲ್ಯ
ಅಧಿಕಾರರೂಢ ಪಕ್ಷಗಳು ಸುದ್ದಿ ಮಾಧ್ಯಮಗಳನ್ನು ವಿಭಿನ್ನ ಮಾರ್ಗಗಳನ್ನು ಅನುಸರಿಸುವ ಮೂಲಕ ನಿಯಂತ್ರಿಸುವುದು ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಹೊಸತೇನಲ್ಲ. ವಸ್ತುನಿಷ್ಠ–ಜನಪರ ಸುದ್ದಿಮನೆಗಳಿರುವಂತೆಯೇ ವಂದಿಮಾಗಧ ಪತ್ರಿಕೆಗಳು ದಶಕಗಳಿಂದಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡುಬಂದಿವೆ. 2000ದ ನಂತರ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೆಚ್ಚಾದ ನಂತರದಲ್ಲಿ ನವ ಉದಾರವಾದದ ಹಣಕಾಸು ಬಂಡವಾಳವೂ ದೇಶದ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿರುವುದರ ಪರಿಣಾಮ, ಇಂದು ವಿದ್ಯುನ್ಮಾನ ಮಾಧ್ಯಮಗಳು ಹೆಚ್ಚು ಪ್ರಭಾವ ಬೀರುವಂತಾಗಿವೆ. ಡಿಜಿಟಲ್ ವೇದಿಕೆಗಳ ಒಡೆತನ ಮತ್ತು ಪ್ರಸರಣದ ಹಕ್ಕು ಹಣಕಾಸು ಬಂಡವಾಳಿಗರ ಆಧಿಪತ್ಯಕ್ಕೊಳಪಟ್ಟಂತೆಲ್ಲಾ, ಟಿವಿ ವಾಹಿನಿಗಳಲ್ಲಿನ ಮನರಂಜನಾ ಕಾರ್ಯಕ್ರಮಗಳೂ ಸಹ ತಮ್ಮ ಸಮಾಜಮುಖಿ ಸ್ವರೂಪವನ್ನು ಕಳೆದುಕೊಂಡು, ಮಾರುಕಟ್ಟೆಗೆ ಸ್ಪಂದಿಸುವಂತಾಗುತ್ತಿರುವುದನ್ನು ಗಮನಿಸಬಹುದು. ಕೆಲವು ಅಪವಾದಗಳನ್ನು ಹೊರತುಪಡಿಸಬಹುದೇನೋ.
ಈ ಸಂದರ್ಭದಲ್ಲಿ ಮಾಧ್ಯಮ ಲೋಕ ವೃತ್ತಿಪರತೆ ಮತ್ತು ಪತ್ರಿಕಾ ಮೌಲ್ಯಗಳ ರಕ್ಷಣೆಯನ್ನು ಬಯಸುತ್ತದೆ. ದುರಂತ ಎಂದರೆ ಭಾರತದ ಸಂದರ್ಭದಲ್ಲಿ ಈ ಎರಡನ್ನೂ ಕಳೆದುಕೊಂಡಿದ್ದೇವೆ. ಸಂವಿಧಾನದ ಚೌಕಟ್ಟಿನಲ್ಲೇ ಅನುಸರಿಸಲಾಗುತ್ತಿರುವ ನಿರಂಕುಶಾಧಿಕಾರ ಮತ್ತು ಸಾಂವಿಧಾನಿಕ ಸಂಸ್ಥೆಗಳ ವ್ಯಾಪಕ ದುರುಪಯೋಗ ಮಾಧ್ಯಮ ಲೋಕದ ಭ್ರಷ್ಟತೆ ಮತ್ತಷ್ಟು ಆಳವಾಗಿ ಬೇರೂರಲು ನೆರವಾಗಿದೆ. ಭಾರತದಲ್ಲಿ ಮಾಧ್ಯಮ/ಪತ್ರಿಕಾ ಸ್ವಾತಂತ್ರ್ಯ ಇದೆಯೇ ಎನ್ನುವುದಕ್ಕಿಂತಲೂ, ಈ ಸ್ವಾತಂತ್ರ್ಯವನ್ನು ದಮನಿಸಲು, ಮೊಟಕುಗೊಳಿಸಲು ಪ್ರಭುತ್ವ, ಸರ್ಕಾರ ಮತ್ತು ಬಂಡವಾಳ ಮಾರುಕಟ್ಟೆ ಹೇಗೆ ವ್ಯವಸ್ಥಿತ ಪ್ರಯತ್ನ ಮಾಡುತ್ತಿವೆ ಎನ್ನುವುದು ಇಂದಿನ ಮೂರ್ತ ಪ್ರಶ್ನೆಯಾಗಿದೆ. ಈ ಸಂದಿಗ್ಧತೆಯ ನಡುವೆಯೂ, ಅಳಿವು ಉಳಿವಿನ ವಾತಾವರಣದಲ್ಲೂ ಪತ್ರಿಕಾ ಮೌಲ್ಯಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ವ್ಯಕ್ತಿಗತ ನೆಲೆಯಲ್ಲೇ ನಿರ್ಧಾರವಾಗಬೇಕಿದೆ.
ಸಂವಿಧಾನ ನಿಷ್ಠೆ , ಜನಪರ ಕಾಳಜಿ, ಸಾಮಾಜಿಕ ಕಳಕಳಿ ಮತ್ತು ಸಮಾಜಮುಖಿ ಧೋರಣೆ ಇರುವ ವ್ಯಕ್ತಿಗಳು ಇಂದು ಮುಖ್ಯವಾಹಿನಿಯ ಮಾಧ್ಯಮಗಳಿಂದ ವಿಮುಖರಾಗಿ ಸಾಮಾಜಿಕ ತಾಣಗಳ ಮೊರೆಹೋಗುತ್ತಿರುವುದನ್ನು ಗಮನಿಸಿದಾಗ, ನಮ್ಮ ಸಮಾಜದ ಗರ್ಭದಲ್ಲಿ ಇನ್ನೂ ಸಾರ್ವಜನಿಕ ಪ್ರಜ್ಞೆ ಉಳಿದಿದೆ ಎಂಬ ಆಶಾಭಾವನೆ ಮೂಡುತ್ತದೆ. ಕೋವಿದ್ ಸಂದರ್ಭದಲ್ಲಿ, ಸಿಎಎ–ಎನ್ಆರ್ಸಿ ಸಂದರ್ಭದಲ್ಲಿ ಮತ್ತು ಕಾಶ್ಮೀರದ ಬೆಳವಣಿಗೆಗಳಲ್ಲಿ ಸಮಾಜಕ್ಕೆ ಸತ್ಯ ಸಂದೇಶವನ್ನು ತಲುಪಿಸಿದ ಶ್ರೇಯ ಸಾಮಾಜಿಕ ತಾಣಗಳಿಗೆ ಮತ್ತು ಇದರ ಹಿಂದಿನ ವೃತ್ತಿನಿಷ್ಠೆಯ ಮನಸುಗಳಿಗೆ ಸಲ್ಲಬೇಕಾಗುತ್ತದೆ.
ಈ ದ್ವಂದ್ವ, ಗೊಂದಲ, ಪ್ರಕ್ಷುಬ್ಧತೆ ಮತ್ತು ಆತಂಕಗಳ ನಡುವೆಯೇ ಸ್ವತಂತ್ರ ಭಾರತ ತನ್ನ 75ನೆಯ ವರ್ಷಕ್ಕೆ ಕಾಲಿರಿಸುತ್ತಿದೆ. ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಭಾರತ ಉಳಿಯಬೇಕೆಂದರೆ ಪ್ರಜಾತಂತ್ರ ಉಳಿಯಬೇಕು. ಪ್ರಜಾತಂತ್ರ ಉಳಿಯಲು ಸಂವಿಧಾನ ಉಳಿಯಬೇಕು. ಈ ಉಳಿಯುವಿಕೆಯಲ್ಲಿ ಸಂವಹನ ಮಾಧ್ಯಮದ ಪಾತ್ರ ಹಿರಿದು. ಈ ಪ್ರಜ್ಞೆ ಇಂದಿನ ಸಮಾಜದ ಯುವ ಪೀಳಿಗೆಯಲ್ಲಿದ್ದರೆ ಅಮೃತ ಮಹೋತ್ಸವದ ವಿಜೃಂಭಣೆಯೂ ಸಾರ್ಥಕವಾಗುತ್ತದೆ.