ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಧಾನ್ಯಚಂದ್ ಖೇಲ್ರತ್ನ ಎಂದು ಬದಲಿಸಿದ ಬೆನ್ನಲ್ಲೇ ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಿಸುವಂತೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಒತ್ತಾಯಿಸಿದ್ದರು. ಇಂದಿರಾ ಹೆಸರು ಬದಲು ಅನ್ನಪೂರ್ಣೇಶ್ವರಿ ಹೆಸರನ್ನು ಇಡುವಂತೆ ಆಗ್ರಹಿಸಿದ್ದು, ಕಾಂಗ್ರೆಸ್ಸಿಗರ ಕಣ್ಣು ಕೆಂಪಾಗಿಸಿತ್ತು. ಈಗ ಮತ್ತೆ ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್ಸಿಗರನ್ನು ಸಿ.ಟಿ.ರವಿ ಕೆರಳಿಸಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ಕ್ಯಾಂಟೀನ್ ತೆಗೆಯಲಿ ಎಂದು ಸಿ.ಟಿ.ರವಿ ಮತ್ತೆ ನಾಲಗೆ ಹರಿಬಿಟ್ಟಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಅವರ ಖರ್ಚಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಈಗ ಇಂದಿರಾ ಕ್ಯಾಂಟೀನನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಲಿ ಎಂದು ಹೇಳಿಕೆ ನೀಡಿದ್ದಾರೆ. ನೆಹರು, ಇಂದಿರಾ ಗಾಂಧಿ ಒಳ್ಳೆಯ ಕೊಡುಗೆಗಳನ್ನು ನೆನೆಯೋಣ, ಆದ್ರೆ ಅವರು ಮಾಡಿದ ಎಲ್ಲವನ್ನೂ ಒಪ್ಪಿಕೊಳುವುದ್ದಕ್ಕೆ ನಾವೇನು ಗುಲಾಮರಲ್ಲ ಎಂದು ಕಿಡಿಕಾರಿದರು. ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಂಗಳನ್ನ ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್ ಅವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ ಎಂದು ಕುಟುಕಿದರು.
ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ
ಇಂದಿರಾ ಹೆಸರು ಬದಲಾವಣೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ನಮ್ಮ ರಾಜಕೀಯ ವಿರೋಧಿಗಳು ಹಳೆಯ ಗ್ರಾಮಾಫೋನ್ ಪ್ಲೇಟ್ ತಿರುಗಿಸ್ತಾನೆ ಇರ್ತಾರೆ, ಸಿದ್ದರಾಮಯ್ಯ ಅದರಲ್ಲಿ ಒಬ್ಬರು. ಸಿದ್ದರಾಮಯ್ಯ ಅಪ್ ಡೇಟ್ ಆಗಬೇಕು. ನಾವು ಅಂಬೇಡ್ಕರ್ ವಿರೋಧಿ ಅಲ್ಲ, ಅವರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ನವರೇ ಅಂಬೇಡ್ಕರ್ ವಿರೋಧಿ ಎಂದು ಆರೋಪಿಸಿದರು. ನಿಮ್ಮ ಸಾಫ್ಟ್ ವೇರ್ ಅಪ್ಡೇಟ್ ಮಾಡ್ಕೊಳ್ಳಿ ಎಂದು ಸಿಟಿ ರವಿ ಲೇವಡಿ ಮಾಡಿದರು.
ಒಂದು ಕುಟುಂಬದ ರಕ್ಷಣೆಗೆ ನಾಟಕ
671 ಒಬಿಸಿ ಸಮುದಾಯಗಳು ನ್ಯಾಯ ಪಡೆಯೋಕೆ ಸಾಧ್ಯವಾಗಲಿದೆ. ಬಿಜೆಪಿಗೆ ಮೀಸಲಾತಿ ಬದ್ಧತೆ ಇದೆ. ಸಾಮಾಜಿಕ ನ್ಯಾಯ ಬಿಜೆಪಿಯ ಬದ್ಧತೆ. ಅದಕ್ಕೆ ಪೂರಕವಾಗಿ ನಮ್ಮ ಸರ್ಕಾರ ನಡೆದುಕೊಳ್ತಿದೆ. ಪಾರ್ಲಿಮೆಂಟ್ ಅನ್ನು ಖಾನ್ ಮಾರ್ಕೆಟ್ ಆಗಿ ಪರಿವರ್ತಿಸಿದ್ದವರು ಕಾಂಗ್ರೆಸ್ ಅವರು ಎಂದು ಕಟುವಾಗಿ ಟೀಕಿಸಿದರು. ಒಂದು ಕುಟುಂಬವನ್ನ ಕಾಪಾಡಲು ಕಾಂಗ್ರೆಸ್ ನಾಟಕ ಮಾಡುತ್ತಿದೆ. ಮೀಸಲಾತಿ ನಮ್ಮ ಬದ್ಧತೆ ಆದರೆ ಮೀಸಲಾತಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದರು. ಆಗ ಅಖಂಡ ಶ್ರೀನಿವಾಸ್ ಪರವಾಗಿ ಮಾತನಾಡಲಿಲ್ಲ, ಅವರ ರಕ್ಷಣೆ ಮಾಡದ ಕಾಂಗ್ರೆಸ್ ತನ್ನ ನೀಚತನ ತೋರಿದೆ. 27 ಜನ ಒಬಿಸಿಯವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ, 12 ಜನ ದಲಿತರಿಗೆ ಕೇಂದ್ರದಲ್ಲಿ ಅವಕಾಶ ಸಿಕ್ಕಿದೆ. 8 ಜನ ಪರಿಶಿಷ್ಟ ವರ್ಗದವರು ಸಚಿವರಾಗಿದ್ದಾರೆ, ನಿಮಗೆ ಯಾವ ಬದ್ಧತೆಯಿದೆ. 300 ಕೋಟಿ ಖರ್ಚು ಮಾಡಿ ಜಾತಿ ಗಣತಿ ಮಾಡಿದ್ದೀರ, 2018ರಲ್ಲೇ ಜಾತಿಗಣತಿ ಸಿದ್ದವಾಗಿದೆ. ಆದರೆ ಅದರ ಸದಸ್ಯರೇ ವಿರೋಧ ವ್ಯಕ್ತಪಡಿಸಿದರು. ನಿಮ್ಮದು ಗೋಸುಂಬೆ ರಾಜಕಾರಣ, ನಮ್ಮದು ಐಡಿಯಾಲಜಿಕಲ್ ಬದ್ಧತೆ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿದ ಅವರು, ನನ್ನದು ಭಾರತದ ನಿಲುವು. ರಾಜಕೀಯ ದೃಷ್ಟಿಯಿಂದ ಈ ಯೋಜನೆಯನ್ನು ಯಾರು ದುರ್ಬಳಕೆ ಮಾಡಿಕೊಳ್ಳಬಾರದು. ಈ ಯೋಜನೆ ಬಗ್ಗೆ ವಾಸ್ತವತೆ ತಿಳಿದು ಮಾತಾಡಬೇಕು. ಕುಡಿಯುವ ನೀರಿನ ವಿಷಯ ವನ್ನು ವಾಸ್ತವ ನೆಲಗಟ್ಟಿನಲ್ಲಿ ನೋಡಬೇಕು. ಅದು ಬಿಟ್ಡು ಎರಡು ರಾಜ್ಯಗಳ ನಡುವೆ ಸಂಘರ್ಷ ರೀತಿಯಲ್ಲಿ ನೋಡಬಾರದು. ಬಿಜೆಪಿ ಸೌಹಾರ್ದ ರಾಜಕಾರಣ ಮಾಡ್ತಿದೆ. ನಮ್ಮ ರಾಜ್ಯದ ಪಾಲಿನ ನೀರನ್ನು ಬಳಸಿಕೊಳ್ಳಲು ನಾನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸರ್ಕಾರಕ್ಕೆ ಸಹಕಾರ ಕೊಡ್ತೇನೆ ಎಂದರು.
ಸಿಟ ರವಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೇಶ್ ಹಿರಿಯ ನಾಯಕ ರಾಮಲಿಂಗಾರೆಡ್ಡಿಯವರು “ಕುಡಿದು ಗಾಡಿ ಚಲಾಯಿಸಿ ಪ್ರಾಣ ಬಲಿ ಪಡೆಯುವುದು ಸಿ.ಟಿ ರವಿ ಸಂಸ್ಕೃತಿ” ಎಂದು ಖಡಕ್ ತಿರುಗೇಟು ನೀಡಿದ್ದಾರೆ.