• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಸ್ವಾತಂತ್ರ್ಯೋತ್ಸವದ ಜನ್ ಕಿ ಬಾತ್

ನಾ ದಿವಾಕರ by ನಾ ದಿವಾಕರ
August 11, 2021
in ಅಭಿಮತ
0
ಸ್ವಾತಂತ್ರ್ಯೋತ್ಸವದ ಜನ್ ಕಿ ಬಾತ್
Share on WhatsAppShare on FacebookShare on Telegram

ADVERTISEMENT

ಸಾಮಾನ್ಯವಾಗಿ ಭಾರತದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ದೇಶದ ಪ್ರಧಾನಮಂತ್ರಿಯಾದವರು ಭಾರತದ ಸಮಸ್ತ ಜನತೆಯ ಮನದಾಭಿಲಾಷೆಗಳನ್ನು ಬಿಂಬಿಸುತ್ತಲೇ ಭವಿಷ್ಯದ ಭರವಸೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವಂತಹ ಮಾತುಗಳನ್ನಾಡುತ್ತಾರೆ. ನೆಹರೂ ಕಾಲದಿಂದ ಮನಮೋಹನ್ ಸಿಂಗ್‍ವರೆಗೂ ಇದು ನಡೆದು ಬಂದಿರುವ ಪರಂಪರೆ. ಈ ದೇಶ ನಡೆದುಬಂದ ಹಾದಿ ಮತ್ತು ನಡೆಯಬೇಕಾದ ಪಥದಲ್ಲಿ ಎದುರಾಗಿದ್ದ, ಎದುರಾಗಬಹುದಾದ ಸಮಸ್ಯೆಗಳನ್ನು , ಸಾರ್ವಭೌಮ ಪ್ರಜೆಗಳನ್ನು ಸಾಂವಿಧಾನಿಕವಾಗಿ ಪ್ರತಿನಿಧಿಸುವ ಒಕ್ಕೂಟ ಸರ್ಕಾರ, ಹೇಗೆ ಪರಿಭಾವಿಸುತ್ತದೆ ಮತ್ತು ಪರಿಹರಿಸುತ್ತದೆ ಎಂದು ಸೂಚಿಸುವ ನಿಟ್ಟಿನಲ್ಲಿ ಈ ಭಾಷಣಗಳು ತಯಾರಾಗುತ್ತವೆ. ಭಾರತದ ರಾಜಕಾರಣ ಗಳಿಸಿರುವ ಏಕಮಾತ್ರ ಅಮೂಲ್ಯ ಸಂಪತ್ತು “ ಭಾಷಣ ಕಲೆ ” ಪ್ರತಿವರ್ಷ ಕೆಂಪುಕೋಟೆಯಲ್ಲಿ ವಿಭಿನ್ನ ರಂಗುಗಳಲ್ಲಿ ಕಂಗೊಳಿಸಿ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡುವುದು 74 ವರ್ಷಗಳ ಅನುಭವ.

ಈಗ ಸ್ವತಂತ್ರ ಭಾರತ ತನ್ನ 75ನೆಯ ವರ್ಷವನ್ನು ಪ್ರವೇಶಿಸುತ್ತಿದೆ. #ಆತ್ಮನಿರ್ಭರಭಾರತ ಎಂಬ ಹೊಸ ನಾಮಾಂಕಿತದೊಂದಿಗೆ, ಸ್ವತಂತ್ರ-ಸ್ವಾಭಿಮಾನಿ-ಸ್ವಾವಲಂಬಿ ಭಾರತದ ಸಾರ್ವಭೌಮ ಪ್ರಜೆಗಳನ್ನುದ್ದೇಶಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ, ಕಾರ್ಪೋರೇಟ್ ಸ್ವತ್ತಾಗಿರುವ ಕೆಂಪುಕೋಟೆಯಿಂದ ಮಾತನಾಡಲಿದ್ದಾರೆ. ತಮ್ಮ ಏಳು ವರ್ಷದ ಆಡಳಿತಾವಧಿಯಲ್ಲಿ ಪ್ರಪ್ರಥಮ ಬಾರಿ ಕಿವಿತೆರೆದ ಪ್ರಧಾನಿ ನಮ್ಮೆದುರು ನಿಲ್ಲಲಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನತೆಯಿಂದಲೇ ಸಲಹೆಗಳನ್ನು (Inputs) ಕೇಳಿರುವುದರಿಂದ ಕೆಂಪುಕೋಟೆಯಲ್ಲಿ ಜನ್ ಕಿ ಬಾತ್ ಮೊಳಗಳಿದೆ ಎಂದು ಭಾವಿಸೋಣ. ಕಳೆದ ಏಳು ವರ್ಷಗಳಿಂದ ಗಾಳಿಗೆ ತೂರಲಾಗುತ್ತಿದ್ದ ಪ್ರಜೆಗಳ ಮಾತುಗಳಿಗೆ ಈ ಬಾರಿ ಪ್ರಧಾನಿಯ ಕಿವಿಯನ್ನು ಪ್ರವೇಶಿಸುವ ಭಾಗ್ಯ. ಇನ್ನು ಏನೇ ಆದರೂ ಮಾತನಾಡುವುದಿಲ್ಲ ಎಂದು ಶಪಥ ಮಾಡಿದ್ದ ನಿಷ್ಕ್ರಿಯ ಪ್ರಜೆಗಳಿಗೂ ಇದೊಂದು ಸದವಕಾಶ.

ನಿಮಗೆ ಏನು ಸಲಹೆ ನೀಡಲು ಸಾಧ್ಯ ಸ್ವಾಮಿ ? ಮುಗಿಲೆತ್ತರದ ಧ್ವನಿಗಳೂ ನಿಷ್ಫಲವಾಗುತ್ತಿರುವ ಈ ಸಂದರ್ಭದಲ್ಲಿ, ಗೋಡೆಗಳಿಗೂ ಕಿವಿ ಇರುತ್ತದೆ ಎಂಬ ಗಾದೆ ಮಾತೂ ಸಹ ಸುಳ್ಳಾಗುತ್ತಿದೆ. #ಆತ್ಮನಿರ್ಭರಭಾರತದಲ್ಲಿ ತೆರೆದಿರಬೇಕಾದ ಕಿವಿಗಳೆಲ್ಲವೂ ಗೋಡೆಗಳಾಗಿಬಿಟ್ಟಿವೆ. ಇತ್ತೀಚೆಗೆ ತಾನೇ ರಾಜಧಾನಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಒಂಬತ್ತು ವರ್ಷದ ಹಸುಳೆಯ ಚೀತ್ಕಾರದ ಧ್ವನಿ ಸಂಸತ್ತಿನ ಗೋಡೆಗಳಿಗೂ ಕೇಳದಂತಾಯಿತಲ್ಲವೇ ? ಆಳುವವರ ಕಿವಿಯ ಪ್ರವೇಶ ಭಾಗ್ಯ ಪಡೆದ ಕೆಲವೇ ಧ್ವನಿಗಳನ್ನು ಶಾಶ್ವತವಾಗಿ ಅಡಗಿಸಲಾಗಿದೆ, ಇನ್ನೂ ಕೆಲವು ಕ್ಷೀಣ ಧ್ವನಿಗಳು ನಾಳಿನ ಕಿರಣಗಳನ್ನು ನಿರೀಕ್ಷಿಸುತ್ತಾ ನ್ಯಾಯಾಂಗದತ್ತ ನೋಡುತ್ತಿವೆ. ಈ ನಡುವೆಯೇ ನಮ್ಮ, ಅಂದರೆ ಸಾರ್ವಭೌಮ ಪ್ರಜೆಗಳ, ಧ್ವನಿಗೆ ನೀವು ಕಿವಿಗೊಡಲಿದ್ದೀರಿ. ಸಂತೋಷ.

ನೀವು ಅಧಿಕಾರ ವಹಿಸಿಕೊಂಡಾಗ ನೀಡಿದ್ದ ಕೆಲವು ಆಶ್ವಾಸನೆಗಳು ಮತ್ತು ಮೂಡಿಸಿದ್ದ ಭರವಸೆಗಳೇ ಇಂದು ನಮ್ಮ ಮಾತಿನಲ್ಲಿ ವ್ಯಕ್ತವಾದರೆ ಅದು ನಮ್ಮ ತಪ್ಪು ಎಂದು ಭಾವಿಸದಿರಿ. ಏಕೆಂದರೆ ನೀವು ಒಮ್ಮೆಲೆ ನಮ್ಮ ಮುಂದೆ ಹಿಮಾಲಯದೆತ್ತರದ ಆಶಾಸೌಧಗಳನ್ನು ನಿರ್ಮಿಸಿಬಿಟ್ಟಿರಿ. 2014ರ ಮುನ್ನ ಭಾರತ ಎನ್ನುವ ಒಂದು ದೇಶವೇ ಅಸ್ತಿತ್ವದಲ್ಲಿರಲಿಲ್ಲ ಎನ್ನುವ ಮಟ್ಟಿಗೆ ನೀವು 67 ವರ್ಷಗಳ ಭಾರತವನ್ನು ಅಲ್ಲಗಳೆದುಬಿಟ್ಟಿರಿ. ನೀವು ನಿಂತಿದ್ದ ನೆಲದ ಸುಸ್ಥಿರತೆಗೆ ಕಾರಣವಾಗಿದ್ದ ಸ್ವಾವಲಂಬಿ ಭಾರತದ ನಿರ್ಮಾತೃಗಳ ಪರಿಶ್ರಮವನ್ನು ಒಮ್ಮೆಲೇ ಅಲ್ಲಗಳೆಯುತ್ತಾ, ಇಂದು ನೀವು ನಿಂತು ಮಾತನಾಡುತ್ತಿರುವ ಕೆಂಪುಕೋಟೆಯನ್ನೂ ಉದ್ಯಮಿಯೊಬ್ಬರಿಗೆ ಬಾಗಿನ ನೀಡಿಬಿಟ್ಟಿರಿ. ಇರಲಿ ಏನೇ ಮಾಡಿದರೂ ಕೋಟೆಯ ಇತಿಹಾಸವನ್ನು ಅಳಿಸಲಾಗುವುದಿಲ್ಲ.

ನೀವು ಅಧಿಕಾರ ವಹಿಸಿಕೊಂಡಾಗ ಭಾರತದಲ್ಲಿ ಕಪ್ಪುಹಣದ ಸಾಮ್ರಾಜ್ಯವೇ ಇತ್ತು ಎಂಬ ಹಾಹಾಕಾರ ಎದ್ದಿತ್ತು. ಭ್ರಷ್ಟಾಚಾರ ದೇಶದ ನರನಾಡಿಗಳಲ್ಲೂ ಹರಿದಾಡುತ್ತಿದೆ ಎಂಬ ಭೀತಿ ಹರಡಿತ್ತು. ಇದಕ್ಕೆ ನೆಹರೂ ಯುಗವೇ ಕಾರಣ ಎಂಬ ಆರೋಪವೂ ಕೇಳಿಬಂದಿತ್ತು. ಭಯೋತ್ಪಾದನೆ ಈ ದೇಶದ ಅಖಂಡತೆಯನ್ನೇ ನಾಶಪಡಿಸುತ್ತದೆ ಎಂಬ ಆತಂಕ ಮನೆಮಾಡಿತ್ತು. ದೇಶದ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದೆ, ಪ್ರಾಮಾಣಿಕ ನಾಯಕತ್ವದ ಕೊರತೆಯಿಂದ, ಈ ದೇಶದ ಕಟ್ಟಕಡೆಯ ಪ್ರಜೆಯೂ ತನ್ನ ನಾಳಿನ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾನೆ ಎಂದು ಬಿಂಬಿಸಲಾಗಿತ್ತು. ಹಾಗಾಗಿಯೇ ನವ ಭಾರತ ನಿರ್ಮಾಣದ ಹಾದಿಯಲ್ಲಿ ನೀವು #ಆತ್ಮನಿರ್ಭರಭಾರತ ಎಂಬ ವಿನೂತನ ಪರಿಕಲ್ಪನೆಗೆ ಚಾಲನೆ ನೀಡಿದಿರಿ. ಸಂತೋಷ.

ಈಗ ಹೇಳಿ, ಈ ದೇಶದ ಔದ್ಯೋಗಿಕ ಮತ್ತು ಔದ್ಯಮಿಕ ವಲಯದ ಅಕ್ರಮ ಸಂತತಿಗಳು ಭಾರತದ ಮೂಲೆಮೂಲೆಗಳಲ್ಲೂ ದುಡಿಯುವ ವರ್ಗಗಳನ್ನು ಶೋಷಣೆಗೊಳಪಡಿಸಿ, ಸಂಪನ್ಮೂಲಗಳನ್ನು ದೋಚಿ, ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ತಾವು ಸಂಪಾದಿಸಿದ ಅಕ್ರಮ ಸಂಪತ್ತನ್ನು ವಿದೇಶಿ ಬ್ಯಾಂಕುಗಳಲ್ಲಿ ಸುರಕ್ಷಿತವಾಗಿ ಇಟ್ಟಿರುವುದು ಅಂದಿಗೂ ಸತ್ಯ, ಇಂದಿಗೂ ಸತ್ಯ. ಅಧಿಕಾರಕ್ಕೆ ಬಂದ ನೂರು ದಿನಗಳೊಳಗಾಗಿ ಈ ಆಕ್ರಮ ಸಂಪತ್ತನ್ನು ಭಾರತಕ್ಕೆ ತಂದು ಸಾರ್ವಭೌಮ ಪ್ರಜೆಗಳಿಗೆ ಹಂಚುವ ನಿಮ್ಮ ಆಶ್ವಾಸನೆಯಿಂದ ಇಡೀ ದೇಶವೇ ಪುಳಕಿತವಾಗಿತ್ತು. ಆಂತರಿಕವಾಗಿ ಭಾರತದ ಮತಧಾರ್ಮಿಕ ಕೇಂದ್ರಗಳಲ್ಲಿ, ಶೈಕ್ಷಣಿಕ ಸ್ಥಾವರಗಳಲ್ಲಿ, ಆರೋಗ್ಯ ಕಾಳಜಿಯ ಸೌಧಗಳಲ್ಲಿ,ಅಧ್ಯಾತ್ಮದ ಗಣಿಗಳಲ್ಲಿ ಕಪ್ಪುಹಣ ಇರುವುದು ಅಂದಿಗೂ ಸತ್ಯ ಇಂದಿಗೂ ಸತ್ಯ. ಈ ಅಕ್ರಮ ಸಂಪತ್ತು ಈಗ ಏನಾಗಿದೆ ?

ಸ್ವಿಸ್ ಬ್ಯಾಂಕ್ ಒತ್ತಟ್ಟಿಗಿರಲಿ, ಈ ದೇಶದ ಕಣಜಗಳಲ್ಲಿರುವ ಅಕ್ರಮ ಸಂಪತ್ತು ಎಷ್ಟಿದೆ ಎಂಬ ನಿಖರ ಮಾಹಿತಿಯೇ ನಮ್ಮ ಬಳಿ ಇಲ್ಲ. ಇರಲು ಸಾಧ್ಯವೂ ಇಲ್ಲ.ಏಕೆಂದರೆ ಮಾರುಕಟ್ಟೆ ವ್ಯವಸ್ಥೆ ಅಕ್ರಮ ಸಂಪತ್ತಿಗೂ ಒಂದು ಮೌಲ್ಯ ನಿಗದಿ ಮಾಡಿರುತ್ತದೆ. ನಿಮ್ಮ ಇತ್ತೀಚಿನ ಸಂಪುಟದಲ್ಲೇ ಶೇ 90ರಷ್ಟು ಕೋಟ್ಯಧೀಶ್ವರರಿದ್ದಾರೆ ಎಂದು ಹೇಳಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಭಾರತದ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಹಸಿವಿನ ಸೂಚ್ಯಂಕದಲ್ಲಿ ಭಾರತ ಕಳಪೆ ಪ್ರದರ್ಶನವನ್ನು ಮುಂದುವರೆಸುತ್ತಲೇ ಇದೆ. ಅಂದರೆ ನಿರ್ಗತಿಕರೂ ಹೆಚ್ಚಾಗುತ್ತಿದ್ದಾರೆ ಎಂದರ್ಥ ಅಲ್ಲವೇ? ಭ್ರಷ್ಟಾಚಾರ ಇಲ್ಲದೆ ಬಂಡವಾಳಶಾಹಿಯ ಅಸ್ತಿತ್ವವೇ ಇರುವುದಿಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಎಷ್ಟೇ ಮರೆಮಾಚಿದರೂ, ಸತ್ಯ ಢಾಳಾಗಿ ಕಾಣುತ್ತಲೇ ಇದೆ ಅಲ್ಲವೇ ? ಈಗ ಹೇಳಿ ಕಪ್ಪು ಹಣ ಎಲ್ಲಿದೆ ?

ನೋಟು ಅಮಾನ್ಯೀಕರಣ ಮಾಡುವ ಮೂಲಕ ಭೂಗರ್ಭದಲ್ಲಿ ಅಡಗಿರುವ ಕಪ್ಪುಹಣವನ್ನೆಲ್ಲಾ ಒಮ್ಮೆಲೆ ಬಾಚಿ ಹೊರಹಾಕಲಾಗುತ್ತದೆ ಎಂಬ ಅದ್ಭುತ ಅಲ್ಲಾದೀನದ ದ್ವೀಪವನ್ನೇ ಸೃಷ್ಟಿಸಿಬಿಟ್ಟಿರಿ. ಹೆಚ್ಚಿನ ಮೌಲ್ಯದ ನೋಟುಗಳೇನೋ ರದ್ದಾದವು ಆದರೆ ಕಪ್ಪುಹಣ ಹೊರಬರಲಿಲ್ಲ. ಕಾರಣ ನಿಮಗೂ ಗೊತ್ತಿದೆ. ಯಾವ ಉದ್ಯಮಿಯೂ ತನ್ನ ಅಕ್ರಮ ಸಂಪತ್ತನ್ನು ನಗದು ರೂಪದಲ್ಲಿ ಬಚ್ಚಿಡುವುದಿಲ್ಲ ಹಾಗೊಮ್ಮೆ ಇಟ್ಟರೆ ಅವರನ್ನು ಮಾರುಕಟ್ಟೆ ಉದ್ಯಮಿ ಎಂದು ಒಪ್ಪಿಕೊಳ್ಳುವುದೂ ಇಲ್ಲ. ಹಣಕಾಸು ಬಂಡವಾಳದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಕೂಪಗಳು ಬಳ್ಳಾರಿಯ ಗಣಿಯಿಂದ ಫ್ರಾನ್ಸಿನ ರಾಫೆಲ್‍ವರೆಗೂ ಚಾಚಿಕೊಂಡಿರುತ್ತವೆ. ಇದನ್ನು ಹೊರ ಹೆಕ್ಕುವ ಪಾತಾಳಸೂಜಿಯನ್ನು ಬಳಸುವ ಇಚ್ಚಾಶಕ್ತಿ ಭಾರತದ ಆಳುವ ವರ್ಗಗಳಿಗೆ ಇಲ್ಲ. ಅಲ್ಲವೇ ? ಆದರೂ ಅಮಾನ್ಯೀಕರಣದ ಅದ್ಭುತ ದ್ವೀಪ ಬಂಡವಾಳ ವ್ಯವಸ್ಥೆಯ ಬುನಾದಿಯನ್ನು ಮತ್ತಷ್ಟು ಭದ್ರಪಡಿಸಿ, ಲಕ್ಷಾಂತರ ಶ್ರಮಜೀವಿಗಳನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಿಬಿಟ್ಟಿತು. ಈ ಉರಿಯುವ ಒಲೆಗೆ ಜಿಎಸ್‍ಟಿ ಎಂಬ ತುಪ್ಪ ಸುರಿದು ಕೋಟ್ಯಂತರ ಜನರ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿರಿ. ಹಾಗೇನಿಲ್ಲ ಎಂದು ನೀವು ಹೇಳಲಾಗದು ಸ್ವಾಮಿ, ಕಳೆದ ವರ್ಷ ಕೋವಿದ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ನಿಕೃಷ್ಟ ಬದುಕಿನ ಚಿತ್ರಣ ಇನ್ನೂ ನಮ್ಮ ಕಣ್ಣ ಮುಂದಿದೆ.

ನೆಹರೂ ಯುಗದ ಪ್ರತಿಯೊಂದು ಹೆಜ್ಜೆ ಗುರುತುಗಳನ್ನೂ ಅಳಿಸಿಹಾಕುವ ನಿಮ್ಮ ಕಾರ್ಯಯೋಜನೆಯಲ್ಲಿ, ಆರೂವರೆ ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ಪ್ರಜಾತಂತ್ರದ ಸಡಿಲ ಬೇರುಗಳನ್ನೂ ಅಳಿಸಿಹಾಕಲಾಗಿದ್ದನ್ನು ನಾವು ಹೇಗೆ ಮರೆಯಲು ಸಾಧ್ಯ ? ಮಾನವ ಹಕ್ಕು, ಪ್ರತಿರೋಧದ ಹಕ್ಕು, ಪ್ರಜಾಸತ್ತಾತ್ಮಕ ಹಕ್ಕು ಹೀಗೆ ಹಲವು ಹಕ್ಕುಗಳ ನಡುವೆಯೇ ಅಲ್ಪ ಪ್ರಮಾಣದಲ್ಲಾದರೂ ಅವಕಾಶವಂಚಿತ ಜನಸಮುದಾಯಗಳಿಗೆ ಲಭ್ಯವಾಗುತ್ತಿದ್ದ ಆರೋಗ್ಯದ ಹಕ್ಕು, ಆಹಾರದ ಭದ್ರತೆಯ ಹಕ್ಕು, ಶಿಕ್ಷಣದ ಹಕ್ಕು ಇವೆಲ್ಲವನ್ನೂ ಹಂತಹಂತವಾಗಿ ಶಿಥಿಲಗೊಳಿಸುತ್ತಾ ಬಂದಿರುವ ನಿಮ್ಮ #ಆತ್ಮನಿರ್ಭರಭಾರತ ಇದೀಗ ಪ್ರಜಾತಂತ್ರದ ಉಳಿವಿಗೂ ಸಂಚಕಾರ ತಂದಿದೆ. ಸಂವಿಧಾನದ ರಚನೆಗೆ ಶ್ರಮಿಸಿದ್ದಕ್ಕಿಂತಲೂ ಹೆಚ್ಚು ಈಗ ಸಂವಿಧಾನದ ರಕ್ಷಣೆಗೆ ಶ್ರಮಿಸಬೇಕಿರುವುದು ದುರಂತ, ಆದರೂ ಸತ್ಯ.  ಈಗ ಕಿವಿದೆರೆದು ನಿಂತಿರುವುದರಿಂದ ಹೇಳುತ್ತಿದ್ದೇವೆ.

ಮಾತನಾಡಿದ ತಪ್ಪಿಗೆ ನೂರಾರು ಜನರು ಸೆರೆಮನೆ ಸೇರಿದ್ದಾರೆ. ಟೀಕೆ ಮಾಡಿದ ತಪ್ಪಿಗೆ ಸಾವಿರಾರು ಜನರು ಅಪರಾಧಿಗಳಾಗಿದ್ದಾರೆ. ಪ್ರತಿರೋಧದ ತಪ್ಪಿಗೆ ನೂರಾರು ಜನ ಪ್ರಾಣ ತೆತ್ತಿದ್ದಾರೆ. ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಭಾರತ 30 ವರ್ಷದ ಹಿಂದೆ ಅಪ್ಪಿಕೊಂಡಿದ್ದೇನೋ ಹೌದು. ಆದರೆ ಇದರಿಂದ ಪ್ರಜೆಗಳ ಅಭಿವ್ಯಕ್ತಿಯೂ ಬಿಕರಿಯಾಗುವ ವಸ್ತುವಾಗಿಬಿಡುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಬಿಕರಿಯಾಗಿರುವ ಮಾಧ್ಯಮಗಳು ಈ ಪ್ರಜಾಭಿವ್ಯಕ್ತಿಯನ್ನು ಸಂತೆಮಾಳದಲ್ಲಿರಿಸಿ ಆಳುವವರ ಸೇವೆಗೆ ಟೊಂಕಕಟ್ಟಿ ನಿಂತುಬಿಟ್ಟಿವೆ. ಇದು ಮಾಧ್ಯಮಗಳ ಅಸ್ತಿತ್ವದ ಪ್ರಶ್ನೆ. ಉಳಿಯಬೇಕೆಂದರೆ ಅವು ಹೀಗೆಯೇ ಇರಬೇಕು ಅಲ್ಲವೇ ? ಈ ಪರಿಸ್ಥಿತಿ ನಿರ್ಮಾಣವಾಗಿದ್ದಾದರೂ ಹೇಗೆ ? ಔದ್ಯಮಿಕ ಸಾಮ್ರಾಟರು ಮಾಧ್ಯಮಗಳನ್ನು ಖರೀದಿಸಿದ್ದಾರೆ, ಮಾಧ್ಯಮಗಳು ಪ್ರಜೆಗಳ ಅಭಿಪ್ರಾಯಗಳನ್ನು ಸ್ಟುಡಿಯೋಗಳಲ್ಲೇ ಉತ್ಪಾದಿಸಿ ಬಿಕರಿ ಮಾಡುತ್ತಿವೆ. ಈ ಸಂತೆಮಾಳದಲ್ಲಿ ಅಬ್ಬೇಪಾರಿ ಪ್ರಜೆಗಳು ತಮ್ಮ ಹಕ್ಕೊತ್ತಾಯಗಳಿಗಾಗಿ ನಿರಂತರವಾಗಿ ಹೋರಾಡುತ್ತಲೇ ಇದ್ದಾರೆ.

ಇನ್ನು ಕೆಲವು ಅನುಮಾನಗಳೂ, ಪ್ರಶ್ನೆಗಳೂ ಇವೆ.

ಪುಲ್ವಾಮಾದಲ್ಲಿ ಐವತ್ತಕ್ಕೂ ಹೆಚ್ಚು ಯೋಧರು ಭಯೋತ್ಪಾದಕರ ಧಾಳಿಗೆ ಬಲಿಯಾಗಿ ಹುತಾತ್ಮರಾದರು. ಸತ್ತವರ ಲೆಕ್ಕ ಬೇಕಿಲ್ಲ ಆದರೆ ಆ ಹುತಾತ್ಮರ ಜೀವಗಳಿಗೊಂದು ಮೌಲ್ಯ ಇದೆ ಎಂದಾದರೆ, ಈ ಕೃತ್ಯದ ಹಿಂದಿನ ಸತ್ಯಾಸತ್ಯತೆಗಳು ಪ್ರಜೆಗಳಿಗೆ ತಿಳಿಯಬೇಕಲ್ಲವೇ ? ಭೀಮಾ ಕೊರೆಗಾಂವ್ ಬಗ್ಗೆ ತೋರಿದಷ್ಟು ಉತ್ಸಾಹ ಪುಲ್ವಾಮಾದಲ್ಲಿ ಏಕೆ ತೋರಿಲ್ಲ ? ಗುಜರಾತ್ ಬಿಡಿ, 2000ಕ್ಕೂ ಹೆಚ್ಚು ಜನ ಅವರವರೇ ಪರಸ್ಪರ ಬಡಿದಾಡಿಕೊಂಡು, ಸುಟ್ಟುಕೊಂಡು ಧ್ವಂಸವಾಗಿಹೋದರು. ಯಾರಿಗೂ ನ್ಯಾಯ ಸಿಗಲಿಲ್ಲ. ಶಿಕ್ಷೆಯೂ ಆಗಲಿಲ್ಲ. ಅವರೂ ಭೂಪಾಲ್ ಅನಿಲ ದುರಂತದ ಅಮಾಯಕರಂತೆ, ಅನಾಥರಾಗಿ ಹೋದರು. ಇತ್ತೀಚೆಗೆ ಗಂಗೆಯಲ್ಲಿ ತೇಲಿಬಂದ ನೂರಾರು ಶವಗಳ ಪೂರ್ವಿಕರು ಇವರೆಲ್ಲಾ ಅಲ್ಲವೇ ? ಈ ಸಾವುಗಳಿಗೆ, ಮುಝಫರಪುರದ ಸಾವುಗಳಿಗೆ, ದೆಹಲಿ ಗಲಭೆಯಲ್ಲಿ ಸತ್ತವರಿಗೆ, ಅಕ್ಲಾಖ್, ಪೆಹ್ಲೂಖಾನ್, ಹಾಥ್ರಸ್  ಮುಂತಾದ ನೂರಾರು ಜೀವಗಳಿಗೆ ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಿಂಚಿತ್ತಾದರೂ ಮೌಲ್ಯ ಇರಬೇಕಲ್ಲವೇ ? ಉತ್ತರ ಬೇಕಿದೆ !

ಇನ್ನು ಕಾಶ್ಮೀರ, ನಿಮ್ಮ ಚಾರಿತ್ರಿಕ ಘೋಷವಾಕ್ಯವನ್ನು ಸಾಕಾರಗೊಳಿಸಲು ವಿಧಿ 370 ರದ್ದು ಮಾಡಿದ್ದಾಯಿತು. ಆದರೆ ಕಳೆದ ಎರಡು ವರ್ಷಗಳಿಂದ ಕಣಿವೆಯ ಜನತೆ ತಮ್ಮ ಮೂಲಭೂತ ಬದುಕಿನ ಹಕ್ಕುಗಳನ್ನೂ ಕಳೆದುಕೊಂಡು ಬದುಕುತ್ತಿದ್ದಾರೆ. ಡಿಜಿಟಲ್ ಭಾರತದಲ್ಲೂ ಅಂತರ್ಜಾಲ ಸಂಪರ್ಕ ಇಲ್ಲದೆ ಬಾಳು ಸವೆಸುತ್ತಿದ್ದಾರೆ. ಮೊದಲು ಕಾಶ್ಮೀರದಲ್ಲಿ ಸಂಭವಿಸುವ ಸಾವಿನ ಸುದ್ದಿಯಾದರೂ ನಮಗೆ ತಲುಪುತ್ತಿತ್ತು. ಈಗ ಅಲ್ಲಿ ಬದುಕಿರುವವರ ಸುದ್ದಿಯೂ ತಲುಪುತ್ತಿಲ್ಲ. ಕಬ್ಬಿಣದ ಪರದೆಯ ಹಿಂದೆ ಏನು ನಡೆಯುತ್ತಿದೆ ಎಂದು ಕೇಳುವ ಹಕ್ಕು ಪ್ರಜೆಗಳಿಗೆ ಇದೆಯಲ್ಲವೇ ? 370 ರದ್ದಾದ ಮೇಲೆ ಅಲ್ಲಿ ಉಗ್ರವಾದಿಗಳ ಧಾಳಿಯೂ ಹೆಚ್ಚಾಗಿದೆ, ಸಾವುಗಳೂ ಹೆಚ್ಚಾಗಿದೆ. ಕೋವಿದ್ ಸಂದರ್ಭದ “ ಮನೆಯಲ್ಲೇ ಇರಿ ” ಆದೇಶ ಕಾಶ್ಮೀರಿಗಳಿಗೆ ಶಾಶ್ವತವಾಗಿಬಿಟ್ಟಿದೆ. ಕಾಶ್ಮೀರ ನಮ್ಮದೇ ಎಂದು ಎದೆತಟ್ಟಿಹೇಳುವ ನಮಗೆ ಕಾಶ್ಮೀರಿಗಳು ನಮ್ಮವರೇ ಎಂಬ ಪರಿಜ್ಞಾನವೂ ಇರಬೇಕಲ್ಲವೇ ? ಆದರೂ ವಸ್ತುಸ್ಥಿತಿ ನಿಗೂಢವಾಗಿಯೇ ಇದೆ. ಉತ್ತರ ಬೇಕಿದೆ.

ನಿಮ್ಮ ಅಧಿಕಾರಾವಧಿಯಲ್ಲಿ ಎಲ್ಲವೂ ಬಿಕರಿಯಾಗುತ್ತಿದೆ, ಜನಪ್ರತಿನಿಧಿಗಳನ್ನೂ ಸೇರಿದಂತೆ. ಚುನಾವಣೆ, ಮತದಾನ ಎನ್ನುವುದು ನಿಮಿತ್ತ ಮಾತ್ರವಾಗಿದೆ. ಅಧಿಕಾರಗ್ರಹಣ ಅಂತಿಮ ಧ್ಯೇಯವಾಗಿದೆ. ಇಲ್ಲಿ ಎಲ್ಲ ಸಾಂವಿಧಾನಿಕ ಮೌಲ್ಯಗಳೂ ಸಮಾಧಿಯಾಗಿಬಿಟ್ಟಿವೆ. ನಿಮ್ಮ ಕೇಂದ್ರ ಸಂಪುಟದಲ್ಲಿ ಶೇ 42ರಷ್ಟು ಅಪರಾಧದ ಹಿನ್ನೆಲೆಯವರಿದ್ದಾರೆ ಎಂಬ ಸುದ್ದಿ ನಮಗೆ ಆಘಾತಕಾರಿಯಾಗಿ ಕಾಣುತ್ತದೆ. ಇತ್ತ ಆರೂವರೆ ದಶಕಗಳ ಕಾಲ ನಾವು ಬೆವರು ಸುರಿಸಿ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕುಗಳು, ವಿಮಾ ಕಂಪನಿಗಳು, ರೈಲ್ವೆ, ವಿಮಾನ ಯಾನ, ಸಾರಿಗೆ, ಜಲಯಾನ, ಜಲಸಂಪನ್ಮೂಲಗಳು, ಕೃಷಿ ಭೂಮಿ, ಅರಣ್ಯ ಭೂಮಿ, ಬೆಟ್ಟಗುಡ್ಡಗಳು ಮತ್ತು ನಿಸರ್ಗದೊಡಲಿನ ಸಕಲ ಸಂಪನ್ಮೂಲಗಳನ್ನೂ “ಆತ್ಮನಿರ್ಭರಭಾರತದ” ಸಂತೆಮಾಳದಲ್ಲಿ ಬಿಕರಿ ಮಾಡಲಾಗುತ್ತಿದೆ. ಇದರೊಂದಿಗೆ ಶಿಕ್ಷಣ ಮತ್ತು ಆರೋಗ್ಯ ಮಾರುಕಟ್ಟೆ ಸರಕುಗಳಾಗಿವೆ. ಇದು ನೆಹರೂ ಒಬ್ಬರೇ ಕಟ್ಟಿದ್ದ ಸಾಮ್ರಾಜ್ಯವಲ್ಲ. ಅವರ ಕನಸನ್ನು ಸಾಕಾರಗೊಳಿಸಲು ಈ ದೇಶದ ಸಮಸ್ತ ಪ್ರಜೆಗಳು ಬೆವರುಸುರಿಸಿ ಕಟ್ಟಿದ ಕೋಟೆ ಅಲ್ಲವೇ ? ಏನಾಗುತ್ತಿದೆ ? ಉತ್ತರ ಬೇಕಿದೆ !

ಈ ಹರಾಜು ಪ್ರಕ್ರಿಯೆಯ ಪರಿಣಾಮ ಈ ದೇಶದ ಯುವ ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ನಗರ ಪ್ರದೇಶಗಳಿಂದಾಚೆಗೆ, ಆಂಡ್ರಾಯ್ಡ್ ಸ್ಮಾರ್ಟ್‍ಫೋನ್ ಲೋಕದಿಂದಾಚೆಗೆ, ಹಿತವಲಯವನ್ನೂ ದಾಟಿ ಒಂದು ಬೃಹತ್ ಯುವ ಸಮುದಾಯ ಈ ದೇಶದಲ್ಲಿದೆ ಎಂದು ನಾವಂತೂ ನಂಬಿದ್ದೇವೆ. ಕೋವಿದ್ ಈ ವಾಸ್ತವವನ್ನು ಕಣ್ಣಿಗೆ ರಾಚುವಂತೆ ಬಿಚ್ಚಿಟ್ಟಿದೆ. ಉದ್ಯೋಗಾವಕಾಶಗಳು ಕುಸಿಯುತ್ತಿರುವಂತೆಯೇ ನಿರುದ್ಯೋಗ ಪ್ರಮಾಣವೂ ಹೆಚ್ಚಾಗುತ್ತಿದೆ. ಇಷ್ಟರ ನಡುವೆ ನೂತನ ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗಗಳ ಕುತ್ತಿಗೆ ಹಿಸುಕಲು ಸಾಂವಿಧಾನಿಕ ಸಮ್ಮತಿಯೊಂದಿಗೆ ಧಾವಿಸುತ್ತಿವೆ. ಈ ದೇಶದ ಶೇ 60ರಷ್ಟು ಜನರು ಅವಲಂಬಿಸುವ ಕೃಷಿ ಮತ್ತು ವ್ಯವಸಾಯ ಕ್ಷೇತ್ರವನ್ನೂ ಕಾರ್ಪೋರೇಟ್ ಉದ್ಯಮಿಗಳಿಗೆ ನೀಡಲು ಹೊಸ ಕಾಯ್ದೆಗಳೂ ಜಾರಿಯಾಗಿವೆ. ಈ ಕಾಯ್ದೆಗಳ ವಿರುದ್ಧ ಒಂಬತ್ತು ತಿಂಗಳಿಂದ ಸಮಸ್ತ ರೈತ ಸಮುದಾಯ ಹೋರಾಡುತ್ತಿದ್ದರೂ ಅವರ ನೋವಿನ ಧ್ವನಿ ನಿಮಗೆ ಕೇಳಿಸಿಲ್ಲ. ಈಗ ತೆರೆದ ಕಿವಿಗಾದರೂ ಕೇಳಿಸಬಹುದೇ ? ಉತ್ತರ ಬೇಕಿದೆ !

ಶಿಕ್ಷಣ, ಆರೋಗ್ಯ, ಜಲ ಸಂಪತ್ತು, ನೆಲ ಸಂಪತ್ತು, ಅರಣ್ಯ, ನಿಸರ್ಗದೊಡಲು, ಆಹಾರ ಉತ್ಪಾದನೆ, ದುಡಿಮೆ ಇವೆಲ್ಲವೂ ಈ ಗಣತಂತ್ರದ ಸಾರ್ವಭೌಮ ಪ್ರಜೆಗಳ ಸ್ವತ್ತು. ಈ ಸ್ವತ್ತನ್ನು ಸಂರಕ್ಷಿಸಲೆಂದೇ ಒಂದು ಸಂವಿಧಾನವನ್ನು ರಚಿಸಲಾಗಿದೆ. ಈ ಸಂವಿಧಾನದ ಆಶಯದಂತೆಯೇ ಒಂದು ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯನ್ನು ಭಾರತ ಅನುಸರಿಸಿಕೊಂಡುಬಂದಿದೆ. ಮಾನವ ಹಕ್ಕುಗಳು, ಶೋಷಿತರ ಸಾಮಾಜಿಕ ಘನತೆ, ಶ್ರಮಜೀವಿಗಳ ಬದುಕಿನ ಹಕ್ಕು ಮತ್ತು ಅನ್ನದಾತರ ಭೂಮಿಯ ಹಕ್ಕು ಇವೆಲ್ಲವನ್ನೂ ಸ್ವತಂತ್ರ ಭಾರತದಲ್ಲಿ ಪರಿಪೂರ್ಣತೆಯಿಂದ ಅನುಭವಿಸಲು ಸಾಧ್ಯವಾಗಿಲ್ಲ. ಆದರೆ ಈ ಹಕ್ಕುಗಳು ನಮ್ಮ ಪಾಲಿಗೆ ಇವೆ ಎಂಬ ಒಂದು ಆಶಾಭಾವನೆಯೊಂದಿಗೇ ಭಾರತದ ಪ್ರಜೆಗಳು ಏಳು ದಶಕಗಳ ಸ್ವತಂತ್ರ ಬದುಕನ್ನು ಸವೆಸಿದ್ದಾರೆ.

1947ಕ್ಕೂ ಮುನ್ನ ನಾವು ಪ್ರಜಾತಂತ್ರಕ್ಕಾಗಿ ಹಂಬಲಿಸುತ್ತಿದ್ದೆವು. ಮಾನವ ಹಕ್ಕುಗಳಿಗಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹಪಹಪಿಸುತ್ತಿದ್ದೆವು. ಸಮ ಸಮಾಜದ ಕನಸು ಕಾಣುತ್ತಿದ್ದೆವು. ಶೋಷಣೆ, ದೌರ್ಜನ್ಯ, ಅತ್ಯಾಚಾರಗಳನ್ನು ಕೊನೆಗೊಳಿಸಲು ಆಶಿಸುತ್ತಿದ್ದೆವು.  ಪ್ರತಿರೋಧದ ಧ್ವನಿಗಳನ್ನು ದಮನಿಸುವ ಆಳ್ವಿಕೆಯ ವಿರುದ್ಧ ಹೋರಾಡುತ್ತಿದ್ದೆವು. ನಮ್ಮ ಸಂವಿಧಾನ ಈ ಎಲ್ಲ ಕನಸುಗಳನ್ನು ಸಾಕಾರಗೊಳಿಸಲು ಒಂದು ಸ್ಪಷ್ಟ ಮಾರ್ಗವನ್ನು ನಮ್ಮ ಮುಂದಿಟ್ಟಿತ್ತು. ಈ ಹಾದಿಯಲ್ಲೇ ಏಳುತ್ತಾ, ಬೀಳುತ್ತಾ ಏಳು ದಶಕಗಳನ್ನು ಸವೆಸಿದ್ದೇವೆ. ಇನ್ನೂ ಗುರಿಮುಟ್ಟಬೇಕಿದೆ. ಇನ್ನೂ ಕೈಗೆಟುಕದ, ಮನಕೆ ನಿಲುಕದ ಕನಸುಗಳು ಬೆಟ್ಟದಷ್ಟಿವೆ. ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ. ವಿಪರ್ಯಾಸ ಎಂದರೆ ಇಂದಿಗೂ ಇದೇ ಕೂಗಿನೊಂದಿಗೆ ಹೋರಾಟಗಳು ನಡೆಯುತ್ತಿವೆ.

ಆದರೆ ಈ ಹಾದಿಯಲ್ಲಿ ಈವರೆಗೂ ಪೂರ್ವಿಕರು ಇಟ್ಟ ಹೆಜ್ಜೆಗಳನ್ನು ಅಳಿಸಿಹಾಕುವ ಭರದಲ್ಲಿ ಪ್ರಜೆಗಳಿಗೆ ಮುಂದೆ ಹೆಜ್ಜೆ ಇಡುವುದೇ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ನವ ಉದಾರವಾದದ ಮಾರುಕಟ್ಟೆ ವ್ಯವಸ್ಥೆ ನಿರ್ಮಿಸುತ್ತಿದೆ. 75 ವಸಂತಗಳನ್ನು ಪೂರೈಸಲಿರುವ ಸ್ವತಂತ್ರ ಭಾರತ ತಾನು ಗಳಿಸಿದ್ದ ಸ್ವಾವಲಂಬನೆಯನ್ನು ಕಳೆದುಕೊಂಡು, #ಆತ್ಮನಿರ್ಭರತೆಯನ್ನು ಸಾಧಿಸಲು ದಾಪುಗಾಲು ಹಾಕುತ್ತಿದೆ. ನಿಂತ ನೆಲ ಕುಸಿಯುತ್ತಿರುವ ಭೀತಿಯಲ್ಲಿ ಈ ದೇಶದ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಮಹಿಳೆಯರು, ಬಡಜನರು, ಶೋಷಿತ ಸಮುದಾಯಗಳು, ಅವಕಾಶವಂಚಿತರು ತಾವು ಗಳಿಸಲಾರಂಭಿಸಿದ್ದ ಸ್ವಾವಲಂಬನೆಯ ಹಾದಿಗಳನ್ನು ಮರಳಿ ಪಡೆಯಲು ಈ ಆತ್ಮನಿರ್ಭರತೆ ಅಡ್ಡಿಯಾಗುತ್ತಿದೆ. ಏಕೆ ಹೀಗೆ ? ಉತ್ತರ ಬೇಕಿದೆ !

ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕಾರ್ಪೋರೇಟ್ ಒಡೆತನದ ಕೆಂಪುಕೋಟೆಯಿಂದ ನೀವು ಭಾಷಣಕ್ಕೆ ಭಾರತದ ಪ್ರಜೆಗಳಿಂದ (Inputs) ಕೇಳಿದ್ದೀರಿ. ನಿಘಂಟಿನ ಅರ್ಥದಲ್ಲಿ ಇದು, ಒಳಕ್ಕೆ ಹಾಕಬೇಕಾದ ಮಾಹಿತಿ ಅಥವಾ ಸಂಜ್ಞೆ ಎಂದಾಗುತ್ತದೆ. ಕಿವಿತೆರೆದಿರುವುದೇ ನಮ್ಮ ಸೌಭಾಗ್ಯ ಎಂದೆಣಿಸುತ್ತಾ ಈ ಮಾಹಿತಿಗಳನ್ನು ನಿಮ್ಮ ಕಿವಿಯೊಳಗೆ ಹಾಕಲು ಇಲ್ಲಿ ಯತ್ನಿಸಲಾಗಿದೆ. ಇಲ್ಲಿ ಕೆಲವು ಪ್ರಶ್ನೆಗಳಿವೆ, ಅನುಮಾನಗಳಿವೆ, ಜಿಜ್ಞಾಸೆಗಳಿವೆ, ಗೊಂದಲಗಳಿವೆ. ಸ್ವತಂತ್ರ ಭಾರತದ ಅಮೃತ ಮಹೋತ್ಸವ ವರ್ಷವನ್ನು ಪ್ರವೇಶಿಸುತ್ತಿರುವ ಭಾರತದ ಪ್ರಜೆಗಳಾದ ನಾವು ಹೆಮ್ಮೆಯೊಂದಿಗೇ  ಉತ್ತರವನ್ನೂ ನಿರೀಕ್ಷಿಸುತ್ತೇವೆ.

ಸತ್ಯಮೇವ ಜನತೆ ಎಂದು ಶತಮಾನಗಳಿಂದಲೂ ಹೇಳುತ್ತಲೇ ಕಟು ಸತ್ಯಗಳನ್ನು ಸಮಾಧಿ ಮಾಡುತ್ತಾ ಬಂದಿರುವ ನಾವು ಇನ್ನು ಮೇಲಾದರೂ “ ಸತ್ಯ ” ಸಾಕ್ಷಾತ್ಕಾರದತ್ತ ಗಮನಹರಿಸಬೇಕಿದೆ. ನಾವು ಹೇಳಿದ್ದೇ ಸತ್ಯ ಎನ್ನುವ ವಿತಂಡವಾದವನ್ನು ಬದಿಗಿಟ್ಟು “ ವಾಸ್ತವ ಸತ್ಯ ” ಕಾಪಾಡುವ ಹೊಣೆಯೂ ನಮ್ಮ ಮೇಲಿದೆ. ಈ ದೃಷ್ಟಿಯಿಂದಾದರೂ, ನೀವು ನಂಬಿರುವ, ಆರಾಧಿಸುವ ಮತ್ತು ಅವಲಂಬಿಸುವ ಭಾರತಾಂಬೆಯ ಮುಕುಟದ ಮೇಲೆ ಕೈಯ್ಯಿಟ್ಟು ಹೇಳುವಂತವರಾಗಿ :

“ಸತ್ಯವನ್ನೇ ಹೇಳುತ್ತೇನೆ, ನಾನು ಹೇಳುವುದೆಲ್ಲವೂ ಸತ್ಯ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ”

Tags: 2021Independence DayNarendra Modi
Previous Post

2022 ರ ಆಗಸ್ಟ್‌ 15 ಒಳಗೆ ಹೊಸ ಸಂಸತ್‌ ಭವನ ನಿರ್ಮಾಣ ಪೂರ್ಣ : ಲೋಕ ಸಭಾ ಸ್ಪೀಕರ್‌ ಓಮ್‌ ಬಿರ್ಲಾ

Next Post

‘ಆನೆ’ಯ ಮೇಲೆ ಸವಾರಿಗೆ ಹೊರಟ ಮಾಜಿ ಐಪಿಎಸ್ ಅಧಿಕಾರಿ

Related Posts

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ
ಅಭಿಮತ

ಚಿತ್ತಾಪುರ RSS ಪಥಸಂಚಲನ: ಒಂದು ವಾರದಲ್ಲಿ ಸರ್ಕಾರದ ನಿರ್ಧಾರ

by ಪ್ರತಿಧ್ವನಿ
November 7, 2025
0

  https://youtu.be/iZY7Q0JnGnY ಬೆಂಗಳೂರು: ಹೈಕೋರ್ಟ್ ನಲ್ಲಿಂದು ಮತ್ತೆ ಚಿತ್ತಾಪುರ ಪಥಸಂಚಲನ ಕುರಿತ ಅರ್ಜಿ ವಿಚಾರಣೆ ನಡೆದಿದೆ. ೮ ವೇಳೆ ಅರ್ಜಿದಾರರಿಗೆ ಅನುಮತಿ ಮಂಜೂರು ಮಾಡಲು ಸರ್ಕಾರಕ್ಕೆ ನವೆಂಬರ್...

Read moreDetails

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

January 12, 2025

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024
Next Post
‘ಆನೆ’ಯ ಮೇಲೆ ಸವಾರಿಗೆ ಹೊರಟ ಮಾಜಿ ಐಪಿಎಸ್ ಅಧಿಕಾರಿ

‘ಆನೆ’ಯ ಮೇಲೆ ಸವಾರಿಗೆ ಹೊರಟ ಮಾಜಿ ಐಪಿಎಸ್ ಅಧಿಕಾರಿ

Please login to join discussion

Recent News

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ
Top Story

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

by ಪ್ರತಿಧ್ವನಿ
December 24, 2025
Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

ಬೇರುಬಿಟ್ಟ ಚಿಂತನೆಗಳೂ ಸುಡುವ ಹಾಳೆಗಳೂ

December 24, 2025

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada