ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪಟು ರಚನೆಯಾಗಿದೆ. ಹೈಕಮಾಂಡ್ ಆದೇಶದ ಮೇರೆಗೆ ಬಸವರಾಜ್ ಬೊಮ್ಮಾಯಿ ಕೆಲವರಿಗೆ ಅಚ್ಚರಿ ಖಾತೆಗಳನ್ನು ನೀಡಿದ್ದು, ಹಲವು ಹಿರಿಯರಿಗೆ ಸಾಮಾನ್ಯ ಖಾತೆಗೆಳನ್ನು ನೀಡಲಾಗಿದೆ. ಇದರಿಂದ ಬೇಸತ್ತ ಹಲವರು ನೀವ್ಯಾಕೆ ಹೊಸಬರಿಗೆ ಪ್ರಮುಖ ಖಾತೆಗಳನ್ನು ನೀಡಿದ್ದೀರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಸಿಡಿದೆದ್ದಿದ್ದಾರೆ. ನಾವು ಕೇಳಿದ ಖಾತೆ ನೀಡದೆ, ಮತ್ಯಾವುದೋ ಕೊಟ್ಟಿದ್ದೀರಿ ಎಂದು ಖ್ಯಾತೆ ತೆಗೆದಿದ್ದಾರೆ.
ಹೌದು, ನನಗೆ ಸಾರಿಗೆ ಇಲಾಖೆ ಬೇಡ, ಬದಲಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ಕೊಡಿ ಎಂದು ಸಂಪುಟದ ಹಿರಿಯ ಸಚಿವ ಬಿ. ಶ್ರೀರಾಮುಲು ಪಟ್ಟು ಹಿಡಿದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿರುವ ಶ್ರೀರಾಮುಲು ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿದ್ದಾರೆ
ಸಾರಿಗೆ ಖಾತೆ ನೀಡಿ ಸಚಿವರನ್ನಾಗಿ ಮಾಡಿದರೂ ಶ್ರೀರಾಮುಲು ಇನ್ನೂ ಅಧಿಕೃತವಾಗಿ ಇನ್ಚಾರ್ಜ್ ತೆಗೆದುಕೊಂಡಿಲ್ಲ. ಯಾವುದೇ ಕಾರಣಕ್ಕೂ ನನಗೆ ಸಮಾಜ ಇಲಾಖೆಯಿಂದ ತೆಗೆಯಬಾರದು ಎಂದು ಮೊದಲೇ ಹೇಳಿದ್ದೇ. ಈಗ ನೋಡಿದರೆ ಇದ್ಯಾವುದೋ ಸಾರಿಗೆ ಖಾತೆ ಕೊಟ್ಟಿದ್ದೀರಿ. ಇದರ ಉಸ್ತುವಾರ ನನಗೇ ಬೇಡವೇ ಬೇಡ ಎಂದು ಸಾರಿಗೆ ಇಲಾಖೆಯ ಚಾರ್ಜ್ ತೆಗೆದುಕೊಳ್ಳದೇ ಶ್ರೀರಾಮುಲು ಸತಾಯಿಸುತ್ತಿದ್ದಾರಂತೆ. ಅಲ್ಲದೇ ಈ ಹಿಂದೆ ನಿಭಾಯಿಸಿದ್ದ ಸಮಾಜ ಕಲ್ಯಾಣ ಜವಾಬ್ದಾರಿಯನ್ನೇ ನೀಡಿ ಎಂದು ಹೈಕಮಾಂಡ್ ಭೇಟಿಯಾಗಿ ಬೇಡಿಕೆಯಿಟ್ಟಿದ್ದಾರೆ.
ಇದರ ಜತೆಗೆ ಹಲವು ಬೇಡಿಕೆಗಳನ್ನು ಕೇಂದ್ರದ ನಾಯಕರ ಮುಂದಿಟ್ಟಿರುವ ಬಿ. ಶ್ರೀರಾಮುಲು ಈಡೇರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ ಭೇಟಿ ಮಾಡಿದ್ದಾಗ ಡಿಸಿಎಂ ಹುದ್ದೆ ಕೊಡ್ತೀನಿ ಅಂದಿದ್ರಿ, ಇನ್ನೂ ಕೊಟ್ಟಿಲ್ಲ. ನನ್ನ ಬಳಿ ಇದ್ದ ಸಮಾಜ ಕಲ್ಯಾಣ ಇಲಾಖೆಯನ್ನು ಕಸಿದುಕೊಂಡಿರಿ. ಈಗ ನನಗೆ ಡಿಸಿಎಂ ಪೋಸ್ಟ್ ಮತ್ತು ಸಮಾಜ ಕಲ್ಯಾಣ ಇಲಾಖೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.
ನನ್ನನ್ನು ಹೊರತುಪಡಿಸಿ ಕೆಲವರಿಗೆ ಹಿಂದಿನ ಇಲಾಖೆಯೇ ಸಿಕ್ಕಿದೆ. ನನಗೆ ಮಾತ್ರ ಯಾಕೇ ಸಾರಿಗೆ ಖಾತೆ ಕೊಟ್ಟಿದ್ದೀರಿ. ನನಗೆ ಸಾರಿಗೆ ಇಲಾಖೆ ಬೇಡ, ನನ್ನ ಹಿಂದಿನ ಖಾತೆಯನ್ನೇ ವಾಪಸ್ಸು ಕೊಡಿ. ಇಲ್ಲದೆ ಹೋದರೆ ನಮ್ಮ ಸಮುದಾಯ ಬಂಡಾಯ ಏಳಲಿದೆ. ನಾನು ಸರಿಯಾಗಿ ಕೆಲಸ ಮಾಡಲು, ಪಕ್ಷ ಸಂಘಟನೆ ಮಾಡಲು ಸಮಾಜ ಕಲ್ಯಾಣ ಇಲಾಖೆ ಖಾತೆ ಅಗತ್ಯ ಎಂದಿದ್ದಾರೆ.
ಇನ್ನು, ಬಿ. ಶ್ರೀರಾಮುಲು ನಡೆಗೆ ಹೈಕಮಾಂಡ್ ಬೆಚ್ಚಿಬಿದ್ದಿದೆ. ಯಾವ ಕಾರಣಕ್ಕೆ ನಿಮಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಬೇಕು. ಕೊಟ್ಟ ಖಾತೆಯನ್ನು ನಿಭಾಯಿಸಿ, ಪಕ್ಷ ಸಂಘಟನೆ ಮಾಡಿ ಎಂದು ಶ್ರೀರಾಮುಲುಗೆ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದೆ. ಹೀಗಿದ್ದರೂ ನೀವು ನಾಯಕ ಸಮುದಾಯಕ್ಕೆ ಡಿಸಿಎಂ ಪೋಸ್ಟ್ ನೀಡಲೇಬೇಕು ಎಂದಿರುವುದು ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ.
ಕೇವಲ ಶ್ರೀರಾಮುಲು ಮಾತ್ರವಲ್ಲ ಬಿಜೆಪಿ ಹಲವು ಹಿರಿಯ ನಾಯಕರು ಹೀಗೆ ಖಾತೆ ಬದಲಾವಣೆಗೆ ಒತ್ತಡ ಹಾಕುತ್ತಿದ್ದಾರೆ. ನಾವು ಕೇಳಿದ ಯಾಕೇ ಕೊಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸಿದರೇ ಯಾವುದೇ ಪ್ರಯೋಜನವಿಲ್ಲ ಎಂದು ನೇರ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಮೇಲೂ ಈ ಒತ್ತಡ ಇದೆ ಎಂದು ಹೇಳಲಾಗುತ್ತಿದೆ.