ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಫೇಸ್ಬುಕ್ ಪೋಸ್ಟ್ ಮುಖಾಂತರ ರಾಜಕೀಯ ನಿವೃತ್ತಿಯ ವಿಚಾರ ತಿಳಿಸಿರುವ ಅವರು, ಸುದೀರ್ಘವಾಗಿ ತಮ್ಮ ಭಾವನೆಗಳನ್ನು ಬಿಚ್ಚಿಟ್ಟಿದ್ದಾರೆ. ಬಾಲಿವುಡ್’ನಲ್ಲಿ ಗಾಯಕನಾಗಿದ್ದ ಬಾಬುಲ್, 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿದ್ದ ಏಕೈಕ ಬಿಜೆಪಿ ಸಂಸದರಾಗಿದ್ದರು.
ಬಹುತೇಕ ಬೆಂಗಾಲಿ ಭಾಷೆಯಲ್ಲಿ ಬರೆಯಲಾಗಿದ್ದ ಪೋಸ್ಟ್’ನಲ್ಲಿ “ನಾನು ಬೇರೆ ಪಕ್ಷಕ್ಕೆ ಸೇರುವುದಿಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವುದಕ್ಕೂ ಹೋಗುವುದಿಲ್ಲ. ನಾನು ಏಕ ಪಕ್ಷವನ್ನು ಬೆಂಬಲಿಸುವ ಆಟಗಾರ. ಒಂದು ತಂಡ ಮೋಹನ್ ಬಾಗನ್ (ಪಶ್ಚಿಮ ಬಂಗಾಳದ ಪ್ರಖ್ಯಾತ ಫುಟ್ಬಾಲ್ ತಂಡ). ಒಂದು ಪಕ್ಷ ಬಿಜೆಪಿ. ಅಷ್ಟೇ. ನಾನು ಹೋಗುತ್ತಿದ್ದೇನೆ,” ಎಂದು ಅವರು ಬರೆದುಕೊಂಡಿದ್ದಾರೆ.
ರಾಜಕೀಯದಲ್ಲಿ ಇರದೆಯೇ ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯವಿದೆ. ನನ್ನನ್ನು ನಾನು ಮೊದಲು ಸರಿಪಡಿಸಿಕೊಳ್ಳುತ್ತೇನೆ, ಎಂದ ಅವರು, ಸಂಸದ ಸ್ಥಾನಕ್ಕೂ ರಾಜಿನಾಮೆ ನೀಡುವುದಾಗಿ ಘೋಷಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಮುಖಂಡ ಕುನಾಲ್ ಘೋಷ್ ಇದೊಂದು ನಾಟಕ ಎಂದು ಕರೆದಿದ್ದಾರೆ. ಅವರಿಗೆ ನಿಜವಾಗಿಯೂ ರಾಜಿನಾಮೆ ನೀಡಲು ಮನಸಿದ್ದಿದ್ದರೆ, ನೀಡುತ್ತಿದ್ದರು. ಬರೀ ಬಾಯಿ ಮಾತಲ್ಲಿ ಹೇಳುವುದಲ್ಲ. ಇದು ನಾಟಕ, ಶೋಲೆ ಸಿನಿಮಾದ ರೀತಿ, ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೋರ್ವ ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಅವರು, ಪಕ್ಷ ಹಾಗೂ ಕೇಂದ್ರ ಸರ್ಕಾರದೊಂದಿಗೆ ಹೊಸ ಡೀಲ್ ಕುದುರಿಸಲು ಮಾಡುತ್ತಿರುವ ನಾಟಕ ಇದು ಎಂದು ಹೇಳಿದ್ದಾರೆ.
ಈ ಅಪವಾದಗಳಿಗೆ ಫೇಸ್ಬುಕ್ ಪೋಸ್ಟ್’ನಲ್ಲಿ ಉತ್ತರಿಸಿರುವ ಬಾಬುಲ್ ಸುಪ್ರಿಯೋ, ಯಾವುದೇ ಸ್ಥಾನಕ್ಕಾಗಿ ‘ಚೌಕಾಸಿ’ ಮಾಡಲು ನಾನು ರಾಜಕೀಯ ನಿವೃತ್ತಿ ಪಡೆಯುತ್ತಿಲ್ಲ. ಜೆ ಪಿ ನಡ್ಡಾ ಹಾಗೂ ಅಮಿತ್ ಶಾ ಹಾಗೆ ತಿಳಿಯಬಾರದು. ಅವರು ನೀಡಿದ ಪ್ರೋತ್ಸಾಹಕ್ಕೆ ನಾನು ಚಿರಋಣಿಯಾಗಿದ್ದೇನೆ. ನಾನು ನಿವೃತ್ತಿ ಪಡೆಯುವ ವಿಚಾರ ಹೇಳಿದಾಗಲೂ ಅವರು ಪ್ರೋತ್ಸಾಹಕ ನುಡಿಗಳನ್ನಾಡಿದ್ದರು, ಎಂದು ಹೇಳಿದ್ದಾರೆ.
ಇನ್ನು ಕೇಂದ್ರ ಸಚಿವ ಸ್ಥಾನ ಕೈತಪ್ಪಿದ್ದು, ಭಾಗಶಃವಾಗಿ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಿದ್ದಾರೆ. ಕೇಂದ್ರ ಮಂತ್ರಿ ಮಂಡಲದಿಂದ ಅವರನ್ನು ಕೈಬಿಟ್ಟಾಗ, ಅವರ ಟ್ವೀಟ್ ವಿವಾದ ಸೃಷ್ಟಿಸಿತ್ತು. ‘ನನಗೆ ರಾಜಿನಾಮೆ ನೀಡಲು ಹೇಳಲಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದರು. ಇದನ್ನು ನಂತರ ಅಳಿಸಿದ್ದರು.
2014ರ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಕಷ್ಟು ಬದಲಾಗಿರುವುದು ಕೂಡಾ ತಮ್ಮ ನಿರ್ಧಾರಕ್ಕೆ ಕಾರಣ ಎಂದಿದ್ದಾರೆ. ಅಂದು ರಾಜ್ಯದಲ್ಲಿ ಇವರು ಒಬ್ಬರೇ ಸಂಸದರಿದ್ದರು. ಇಂದು ಬಿಜೆಪಿ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷವಾಗುವ ಮಟ್ಟಿಗೆ ಬೆಳೆದು ನಿಂತಿದೆ. ಪಕ್ಷಕ್ಕೆ ಯುವಕರು ಘಟಾನುಘಟಿಗಳ ಸೇರ್ಪಡೆಯಾಗಿದೆ, ಎಂದ ಸುಪ್ರಿಯೋ, ನನ್ನಂತಹ ಜನರ ಅಗತ್ಯ ಪಕ್ಷಕ್ಕಿಲ್ಲ ಎಂದಿದ್ದಾರೆ.

ಇದಕ್ಕಿಂತಲೂ ಗಹನವಾದ ಸಮಸ್ಯೆ ಏನೆಂದರೆ, ಬಂಗಾಳ ರಾಜ್ಯ ಬಿಜೆಪಿಯಲ್ಲಿನ ಒಡಕು. ವಿಧಾನಸಭೆ ಚುನಾವಣೆಗೂ ಮೊದಲೇ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಿತ್ತು. ಪಶ್ಚಿಮ ಬಂಗಾಳ ಬಿಜೆಪಿ ಎಂಬುದು ಗೊಂದಲದ ಗೂಡಾಗಿತ್ತು. ದಿಲೀಪ್ ಘೋಷ್, ಮುಕುಲ್ ರಾಯ್ (ಈಗ ಟಿಎಂಸಿ ಸೇರಿದ್ದಾರೆ) ಹಾಗೂ ಇತರ ಘಟಾನುಘಟಿ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬೆಂಕಿಗೆ ತುಪ್ಪ ಸುರಿದಂತೆ ಸುವೆಂಧು ಅಧಿಕಾರಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಸ್ಪರ್ಧೆ ಇನ್ನಷ್ಟು ತೀವ್ರವಾಗಿತ್ತು.
ಬಾಬುಲ್ ಅವರ ತೀರ್ಮಾನಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರು, ರಾಜಕೀಯ ಮಾಡುವಾಗ ರಾಜಕೀಯ ಮಾಡುತ್ತಾರೆ. ಇದರ ಕುರಿತು ಏನೂ ಹೇಳುವುದಿಲ್ಲ. ಅವರು ರಾಜಿನಾಮೆ ಕೊಟ್ಟಿದ್ದಾರೆಯೇ? ಇಲ್ಲವಲ್ಲಾ? ಅವರು ಲೋಕಸಭೆಯಲ್ಲಿ ಇದ್ದಾರೆ ಎಂಬ ಕುರಿತಷ್ಟೇ ಮಾಹಿತಿಯಿದೆ. ಅವರು ಈಗ ನನ್ನ ಸಹೋದ್ಯೋಗಿ ಒಬ್ಬ ಸಂಸದ. ಇದರ ಹೊರತಾಗಿ ಬೇರೆ ಮಾಹಿತಿ ಇಲ್ಲ, ಎಂದಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಒಡಕಿನ ಹೊರತಾಗಿ, ಬಾಬುಲ್ ಅವರ ದಿಢೀರ್ ನಿವೃತ್ತಿಗೆ ಕಾರಣವಾದ ಮುಖ್ಯ ಅಂಶವೆಂದರೆ, ಅಸಾನ್ಸೋಲ್’ನ ಮಾಜಿ ಟಿಎಂಸಿ ಮೇಯರ್ ಜಿತೇಂದ್ರ ತಿವಾರಿತಯವರ ಬಿಜೆಪಿ ಸೇರ್ಪಡೆ. ಇವರಿಬ್ಬರೂ ಹಿಂದಿನಿಂದಲೂ ಹಾವು ಮುಂಗುಸಿಯಂತೆ ಇದ್ದರು. ತಿವಾರಿ ಬಿಜೆಪಿ ಸೇರ್ಪಡೆಯನ್ನು ಬಾಬುಲ್ ತೀವ್ರವಾಗಿ ವಿರೋಧಿಸಿದ್ದರು. ಪಕ್ಷದ ಹೈಕಮಾಂಡ್ ಬಳಿಯೂ ಈ ಕುರಿತಾಗಿ ತಕರಾರು ಎತ್ತಿದ್ದರು. ಆದರೆ, ಇವರ ಮಾತಿಗೆ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗಲಿಲ್ಲ.

ತಿವಾರಿಗೆ ಪಾಂಡವೇಶ್ವರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸೀಟು ಸಿಕ್ಕಿತು. ಅವರು ಚುನಾವಣೆಯಲ್ಲಿ ಸೋತರು.ಬಾಬುಲ್ ಸುಪ್ರಿಯೊ ಅವರ ಇಚ್ಚೆಯ ವಿರುದ್ದವಾಗಿ ಟಾಲಿಗುಂಜ್ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಲಾಯಿತು. ಅಲ್ಲಿ ಅವರು 50,000 ಮತಗಳಿಗಿಂತಲೂ ಅಧಿಕ ಅಂತರದ ಹೀನಾಯ ಸೋಲು ಅನುಭವಿಸಿದರು. ಇದು ಬಾಬುಲ್ ಅವರನ್ನು ಮತ್ತಷ್ಟು ಘಾಸಿಗೊಳಿಸಿತು.
ಹೀಗೆ, ಪಕ್ಷದಲ್ಲಿ ಕುಗ್ಗುತ್ತಿರುವ ಪ್ರಭಾವ, ಸಚಿವ ಸ್ಥಾನ ಕಳೆದುಕೊಂಡ ಬೇಸರ ಅವರ ರಾಜಕೀಯ ನಿವೃತ್ತಿಗೆ ಕಾರಣವೆನ್ನಲಾಗಿದೆ. ಅವರಿನ್ನೂ ರಾಜಿನಾಮೆ ನೀಡದ ಕಾರಣ, ಈ ವಿಚಾರದ ಕುರಿತಾಗಿ ಬಿಜೆಪಿ ಹೈಕಮಾಂಡ್ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.