ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಮುಂದಿನ ಸಿಎಂ ಯಾರು ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ.
ಬಿ ಎಸ್ ಯಡಿಯೂರಪ್ಪ ಅವರ ರಾಜಿನಾಮೆ ನೀಡಿದ ಘಳಿಗೆಯಿಂದ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿತ್ತು. ಪ್ರಹ್ಲಾದ್ ಜೋಷಿ, ಬಿ ಎಲ್ ಸಂತೋಷ್, ಅರವಿಂದ್ ಬೆಲ್ಲಡ್, ಸಿಟಿ ರವಿ ಮೊದಲಾದವರ ಹೆಸರು ಸಿಎಂ ರೇಸಿನಲ್ಲಿತ್ತಾದರೂ ಅಂತಿಮವಾಗಿ ಬೊಮ್ಮಾಯಿ ಅವರನ್ನು ಹೈಕಮಾಂಡ್ ಮುಂದಿನ ಸಿಎಂ ಆಗಿ ಆಯ್ಕೆ ಮಾಡಿದೆ.
ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಹೊರಬಿದ್ದಿದೆ.

ಆ ಮೂಲಕ ಬಿಎಸ್‌ವೈಗೂ ಬಿಎಸ್‌ವೈ ವಿರೋಧಿ ಬಣಕ್ಕೂ ಸಮಾಧಾನಕರ ಆಯ್ಕೆಯನ್ನೇ ಮಾಡಲಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಹಾಗೂ ಲಿಂಗಾಯತರನ್ನು ಎದುರು ಹಾಕಿ ಬಿಜೆಪಿಗೆ ರಾಜಕಾರಣ ಮಾಡಲು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
ಬಿ ಎಸ್ ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದೆಂದೂ, ಕೆಳಗಿಳಿಸಿದರೆ ಮತ್ತೆ ಲಿಂಗಾಯತರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕೆಂದೂ ಲಿಂಗಾಯತ ಸಮುದಾಯದೊಳಗಿನ ಒತ್ತಡಕ್ಕೆ ಕೊನೆಗೂ ಹೈಕಮಾಂಡ್ ಮಣಿದಿದೆ.

ಬಸವರಾಜ್ ಬೊಮ್ಮಾಯಿ ಪರಿಚಯ:
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಜನವರಿ 28, 1960 ರಂದು ಜನಿಸಿದರು.
ಬಸವರಾಜ್ ಬೊಮ್ಮಾಯಿ ಅವರು ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದು, ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅಲ್ಲದೆ, ‘ಜನತಾ ಪರಿವಾರ’ ದಿಂದಲೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾದವರು.
ಜನತಾದಳದಿಂದ ಬಿಜೆಪಿಗೆ ಬಂದ ಬೊಮ್ಮಾಯಿ, 2008 ರಲ್ಲಿ ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರ ಸಂಪುಟದಲ್ಲಿ ಸತತ ಐದು ವರ್ಷವೂ ಜಲಸಂಪನ್ಮೂಲ ಸಚಿವರಾಗಿ ಸೇವೆ ಸಲ್ಲಿಸಿದ್ದರು.