ಕಳೆದ ಕೆಲವು ವಾರಗಳಿಂದ ತೀವ್ರವಾಗಿ ಚರ್ಚೆಯಾಗುತ್ತಿರುವ ರಾಜ್ಯ ನಾಯಕತ್ವ ಬದಲಾವಣೆ ವಿಚಾರದಲ್ಲಿ ಅಧಿಕೃತವಾಗಿ ಇನ್ನೂ ಸ್ಪಷ್ಟ ನಿರ್ಧಾರ ಹೊರಬಂದಿಲ್ಲ. ಬಿಜೆಪಿ ನಾಯಕರ ತದ್ವಿರುದ್ಧ ಹೇಳಿಕೆಗಳು ಈಗಾಗಲೇ ಎದ್ದಿರುವ ಊಹಾಪೋಹಗಳನ್ನು ಗಟ್ಟಿಮಾಡಿದ್ದು, ಇನ್ನಷ್ಟು ಗೊಂದಲಗಳನ್ನು ನಿರ್ಮಿಸಿದೆ.
ಈ ನಡುವೆ, ಸಿಎಂ ಬದಲಾವಣೆ ವಿಚಾರದಲ್ಲಿ ಜನರಿಗೆ ಮಾತ್ರವಲ್ಲ ನಮಗೂ ಗೊಂದಲವಿದೆ ಎಂದು ಬಿಜೆಪಿ ಹಿರಿಯ ನಾಯಕ, ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ʼಸಿಎಂ ಬದಲಾವಣೆ ಬಗ್ಗೆ ನನಗೂ ಗೊತ್ತಿಲ್ಲ. ನನಗೂ ಗೊಂದಲ ಇದೆ. ಈ ಚರ್ಚೆ ಶುರುವಾದದ್ದೇ ಗೊಂದಲದಲ್ಲಿ. ಇದು ಇಡೀ ರಾಜ್ಯದ ಭವಿಷ್ಯದ ವಿಚಾರವಾಗಿದೆ ಎಂದು ಹೇಳಿದ್ಧಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಯಡಿಯೂರಪ್ಪ ನೇತೃತ್ವದ ಈ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಕೆಲಸ ಆಗಿದೆ. ಆದರೆ, ಈಗ ಗೊಂದಲ ಇರುವುದು ನಿಜ. ಅದನ್ನ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ಯಡಿಯೂರಪ್ಪ ಅವರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವುದು ಹೈಕಮಾಂಡ್ ಹಾಗೂ ಯಡಿಯೂರಪ್ಪ ಅವರಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
Also Read: ಗೊಂದಲದ ಗೂಡಾದ ರಾಜ್ಯ ರಾಜಕಾರಣ: ಬಿಎಸ್‌ವೈ ಪರ ಜೆಪಿ ನಡ್ಡಾ ಅಚ್ಚರಿಯ ಹೇಳಿಕೆ!
ಇವತ್ತೇ ಅದರ ಚರ್ಚೆ ಮಾಡಿ ನಿಲುವು ತೆಗೆದುಕೊಳ್ಳುತ್ತಾ ಎಂಬುದೂ ನನಗೆ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಅಂತ ಯಡಿಯೂರಪ್ಪ ಈಗಾಗಲೇ ಹೇಳಿದ್ಧಾರೆ. ಏನಾಗುತ್ತಿದೆ ಎಂದು ವರಿಷ್ಠರು ಮತ್ತು ಯಡಿಯೂರಪ್ಪ ಅವರಿಗೆ ಮಾತ್ರ ಗೊತ್ತು. ಅವರು ಒಟ್ಟಿಗೆ ಕೂತು ಚರ್ಚೆ ಮಾಡಿ ನಿರ್ಧರಿಸುತ್ತಾರೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದ್ಧಾರೆ.
ಏನೇ ಆದರೂ, ಇನ್ನೆರಡು ದಿನಗಳಲ್ಲಿ ಸಿಎಂ ಬದಲಾವಣೆ ಕುರಿತ ಸ್ಪಷ್ಟ ಚಿತ್ರಣ ಸಿಗಲಿದೆ, ಗೊಂದಲಗಳೆಲ್ಲಾ ಮುಂದಿನ ಎರಡು ದಿನಗಳಲ್ಲಿ ಬಗೆಹರಿಯಲಿದೆ ಎಂದು ಈಶ್ವರಪ್ಪ ವಿಶವಾಸ ವ್ಯಕ್ತಪಡಿಸಿದ್ದಾರೆ.
Also Read: ಸಿಎಂ ಪುತ್ರ ವಿಜಯೇಂದ್ರಗೆ ದೆಹಲಿಯಲ್ಲಿ ಸಿಕ್ಕ ಸೂಚನೆ ಏನು?
ಈ ನಡುವೆ, ಸಿಎಂ ಬದಲಾವಣೆಯಿಲ್ಲ ಎಂದು ಆರಂಭದಿಂದಲೂ ಪ್ರತಿಪಾದಿಸುತ್ತಾ ಬಂದಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಮತ್ತೊಮ್ಮೆ ಸಿಎಂ ಬದಲಾವಣೆ ವದಂತಿಯನ್ನು ತಳ್ಳಿಹಾಕಿದ್ದಾರೆ.
ಯಡಿಯೂರಪ್ಪ ಎರಡು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ಅವರು ಪೂರ್ಣಾವಧಿ ಸಿಎಂ ಆಗುವುದು ನಿಶ್ಚಿತ. ರಾಜ್ಯಕ್ಕೆ ಅನೇಕ ಬಾರಿ ಬಂದು ಹೋಗಿರುವ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸಿಎಂ ಬದಲಾವಣೆ ಇಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
Also Read: ಇರಿ ಎಂದರೆ ಇರುತ್ತೇನೆ, ಹೋಗಲು ಹೇಳಿದರೆ ರಾಜಿನಾಮೆ ನೀಡುತ್ತೇನೆ – ಬಿ ಎಸ್ ಯಡಿಯೂರಪ್ಪ
ರೇಣುಕಾಚಾರ್ಯ ಮಾತ್ರವಲ್ಲದೆ, ಡಿಸಿಎಂಗಳಾದ ಗೋವಿಂದ ಕಾರಜೋಳ ಮತ್ತು ಡಾ. ಅಶ್ವಥ ನಾರಾಯಣ ಅವರೂ ಕೂಡ ಸಿಎಂ ಬದಲಾವಣೆ ಸುದ್ದಿಯನ್ನು ಬರೀ ವದಂತಿ ಎಂದು ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಪ್ರಹ್ಲಾದ್ ಜೋಷಿ ಕೂಡಾ ಸಿಎಂ ಬದಲಾವಣೆ ಕುರಿತು ತಮಗೇನೂ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.





