ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಭಿವೃದ್ದಿ ಕಾರ್ಯಕ್ರಮಗಳ ಶಿಲಾನ್ಯಾಸ ಜೋರಾಗಿಯೇ ಸಾಗಿದೆ. ಖುದ್ದು ಪ್ರಧಾನಮಂತ್ರಿಯೇ ಆಸಕ್ತಿವಹಿಸಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸುತ್ತಿದ್ದಾರೆ. ಇತ್ತೀಚಿಗೆ ಸುಮಾರು ರೂ.744 ಕೋಟಿ ಮೊತ್ತದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ಉತ್ತರ ಪ್ರದೇಶ ವೈದ್ಯಕೀಯ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಅದ್ಬುತವಾದ ಪ್ರಗತಿ ಕಾಣುತ್ತಿದೆ. ಗ್ರಾಮೀಣ ಆರೋಗ್ಯ ಕೇಂದ್ರಗಳು, ಏಮ್ಸ್ ಸಂಸ್ಥೆಗಳು ಸೇರಿದಂತೆ ಹಲವು ರೀತಿಯ ಅಭಿವೃದ್ದಿ ಕೆಲಸಗಳು ನಡೆದಿವೆ. ಕೇವಲ ನಾಲ್ಕು ವರ್ಷದ ಹಿಂದೆ ರಾಜ್ಯದಲ್ಲಿ ಒಂದು ಡಜನ್ (ಹನ್ನೆರಡು) ಮೆಡಿಕಲ್ ಕಾಲೇಜುಗಳಿದ್ದವು. ಈಗ ಅವುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಇನ್ನೂ ಅನೇಕ ಕಾಲೇಜುಗಳು ನಿರ್ಮಾಣ ಹಂತದಲ್ಲಿವೆ,” ಎಂದಿದ್ದರು.
ಉತ್ತರ ಪ್ರದೇಶದಲ್ಲಿ ಕೇವಲ ಹನ್ನೆರಡು ಅಥವಾ ಅದಕ್ಕಿಂತ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು ಎಂಬ ವಾದವನ್ನು ಮುಂದಿಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರಷ್ಟೇ ಅಲ್ಲ, ಇದಕ್ಕೂ ಮೊದಲು ಯೋಗಿ ಆದಿತ್ಯನಾಥ್ ಸರ್ಕಾರದ ಹಲವು ಉನ್ನತ ಮಟ್ಟದ ಅಧಿಕಾರಿಗಳು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.
ಸುಳ್ಳನ್ನು ನೂರು ಬಾರಿ ಹೇಳಿದರೆ ಸತ್ಯವಾಗುತ್ತದೆ ಎಂಬ ಕಾರಣಕ್ಕೇನೋ, ವೈದ್ಯಕೀಯ ಕಾಲೇಜುಗಳ ಕುರಿತಾಗಿರುವ ಅಂಕಿ ಸಂಖ್ಯೆಗಳು ಉತ್ತರ ಪ್ರದೇಶದಲ್ಲಿ ಹಲವು ಬಾರಿ ಕೇಳಿ ಬಂದಿವೆ. ಆದರೆ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿರುವ ಹಾಗೂ ಅಧಿಕೃತವಾಗಿರುವ ಇತರ ದಾಖಲೆಗಳು ಸತ್ಯವನ್ನು ತೆರೆದಿಟ್ಟಿವೆ.
ಸರ್ಕಾರದ ಮೂರು ಅಧಿಕೃತ ದಾಖಲೆಗಳು ಸತ್ಯ ಏನೆಂದು ಹೇಳುತ್ತಿವೆ. ಸಂಸತ್ತಿನ ಗ್ರಂಥಾಲಯದಲ್ಲಿರುವ Status of Medical Education in India ಎಂಬ ದಾಖಲೆಯ ಪ್ರಕಾರ 2016-17ನೇ ಸಾಲಿನಲ್ಲಿ ಉತ್ತರ ಪ್ರದೇಶದಲ್ಲಿ 45 ಮೆಡಿಕಲ್ ಕಾಲೇಜುಗಳಿದ್ದವು. ಅವುಗಳಲ್ಲಿ 16 ಸರ್ಕಾರಿ 29 ಖಾಸಗಿ.
2016 ಜುಲೈ 22ರಂದು ಅಂದಿನ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವರಾಗಿದ್ದ ಫಗ್ಗಾನ್ ಸಿಂಗ್ ಕುಲಾಸ್ತೆ ಅವರು ಲೋಕಸಭೆಯಲ್ಲಿ ನೀಡಿರುವ ಉತ್ತರದಲ್ಲಿ, ಭಾರತದಲ್ಲಿ 439 ಮೆಡಿಕಲ್ ಕಾಲೇಜುಗಳಿದ್ದರೆ, ಉತ್ತರ ಪ್ರದೇಶದಲ್ಲಿ 38 ಕಾಲೇಜುಗಳಿವೆ ಎಂದು ಹೇಳಿದ್ದರು.
ಕೊನೆಯದಾಗಿ ಉತ್ತರ ಪ್ರದೇಶ ಸರ್ಕಾರದ ಅಡಿಯಲ್ಲಿರುವ ವೈದ್ಯಕೀಯ ಶಿಕ್ಷಣ ಹಾಗೂ ತರಬೇತಿ ನಿರ್ದೇಶನಾಲಯದ ದಾಖಲೆಯ ಪ್ರಕಾರ 2017ರ ವರೆಗೆ 48 ಸರ್ಕಾರಿ ಮೆಡಿಕಲ್ ಕಾಲೇಜುಗಳು ಹಾಗೂ 24 ಖಾಸಗಿ ಮೆಡಿಕಲ್ ಕಾಲೇಜುಗಳು ರಾಜ್ಯದಲ್ಲಿ ಅಸ್ಥಿತ್ವದಲ್ಲಿವೆ.
ಹೀಗೆ ಸರ್ಕರದ ದಾಖಲೆಗಳೇ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಹೇಳುತ್ತಿರುವ ಸುಳ್ಳುಗಳನ್ನು ಜನರ ಮುಂದೆ ಬೆತ್ತಲೆ ಮಾಡುತ್ತಿವೆ. ಚುನಾವಣೆ ಹತ್ತಿರ ಬಂದಾಗ ಜನರ ಗಮನ ಹಾಗೂ ವೋಟುಗಳನ್ನು ಸೆಳೆಯಲು ಈ ರಿತಿ ಸುಳ್ಳು ಹೇಳಿರುವುದು ಫ್ಯಾಕ್ಟ್ ಚೆಕ್ ಮುಖಾಂತರ ತಿಳಿದು ಬಂದಿದೆ.










