“ದೇಶದಲ್ಲಿ ಕರೊನಾ ಎರಡನೇ ಅಲೆಯಲ್ಲಿಆಮ್ಲಜನಕ ಕೊರತೆಯಿಂದ ಒಂದೇ ಒಂದು ಸಾವು ಸಂಭವಿಸಿಲ್ಲ” – ಇದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ನೀಡಿದ ಆಘಾತಕಾರಿ ಹೇಳಿಕೆ.
ದೇಶದಲ್ಲಿ ಕಳೆದ ಏಪ್ರಿಲ್-ಮೇ ಅವಧಿಯಲ್ಲಿ ಕರೋನಾ ಎರಡನೇ ಅಲೆ ಭೀಕರ ಸಾವು-ನೋವುಗಳ ರುದ್ರನರ್ತನ ನಡೆಯುತ್ತಿರುವಾಗ ದೇಶದ ಉದ್ದಗಲಕ್ಕೆ ಆಮ್ಲಜನಕ ಕೊರತೆಯಿಂದ, ಸಕಾಲದಲ್ಲಿ ಜೀವವಾಯು ಲಭ್ಯವಾಗದೆ ಲಕ್ಷಾಂತರ ಮಂದಿ ಸಾವು ಕಂಡಿದ್ದರು. ಜನ ಹಾಗೆ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ ಸಾವು ಕಾಣುತ್ತಿರುವುದನ್ನು ರೋಗಿಗಳ ಸಂಬಂಧಿಕರು, ಆಸ್ಪತ್ರೆಯ ವೈದ್ಯರು, ಆಸ್ಪತ್ರೆಗಳ ಆಡಳಿತ ಮಂಡಳಿಗಳು, ಮಾಧ್ಯಮಗಳು ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಕೂಡ ವರದಿ ಮಾಡಿದ್ದವು. ಜನರ ಜೀವ ಉಳಿಸುವ ನಿಟ್ಟಿನಲ್ಲಿ ಸಕಾಲದಲ್ಲಿ ಅಗತ್ಯ ಪ್ರಮಾಣದ ಆಮ್ಲಜನಕ ಸರಬರಾಜು ಮಾಡಲಾಗುತ್ತಿಲ್ಲ ಎಂಬ ಆಕ್ರೋಶ ಮತ್ತು ಅಸಹಾಯಕತೆಯ ಮಾತುಗಳು ಈ ಎಲ್ಲಾ ವಲಯದಿಂದ ಕೇಳಿಬಂದಿದ್ದವು.
ಆ ಹಿನ್ನೆಲೆಯಲ್ಲಿ ಸ್ವಯಂ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ನ್ಯಾಯಮೂರ್ತಿಗಳ ನೇತೃತ್ವದ ಕಾರ್ಯಪಡೆ ರಚಿಸಿ ಇಡೀ ಅವ್ಯವಸ್ಥೆಯನ್ನು ಸರಿಪಡಿಸುವ ಯತ್ನ ಮಾಡಿತ್ತು ಮತ್ತು ಆಮ್ಲಜನಕ ವ್ಯವಸ್ಥೆ ಮಾಡುವಲ್ಲಿ ಮೈಮರೆತ, ಕರ್ತವ್ಯಲೋಪ ಎಸಗಿದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಚಾಟಿ ಬೀಸಿತ್ತು. ಪ್ರತಿ ದಿನವೂ ಆಮ್ಲಜನಕ, ಆಸ್ಪತ್ರೆ ಹಾಸಿಗೆ, ಔಷಧಿ, ಚಿಕಿತ್ಸೆ ವಿಷಯದಲ್ಲಿ ನಿರಂತರ ವಿಚಾರಣೆ ಮತ್ತು ಮೇಲ್ವಿಚಾರಣೆಯ ಮೂಲಕ ಸರ್ಕಾರದ ಜುಟ್ಟು ಹಿಡಿದು ಜನರ ಜೀವ ಉಳಿಸುವ ಕೆಲಸ ಮಾಡಿತ್ತು.

ಆದರೆ, ಜನರ ಕಣ್ಣೆದುರಲ್ಲೇ ನಡೆದ ಆ ಎಲ್ಲವೂ ಕನಸು ಎಂಬಂತೆ ಇದೀಗ ಪ್ರಧಾನಿ ಮೋದಿಯವರ ಸರ್ಕಾರ ದೇಶದ ಸಂಸತ್ತಿನಲ್ಲಿ ಇಡೀ ದೇಶದಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಸತ್ಯದ ತಲೆಮೇಲೆ ಹೊಡೆದಂತಹ ಸುಳ್ಳು ಹೇಳಿದೆ! ಈ ಸುಳ್ಳು ಕೇಳಿ ದೇಶದ ಜನ ಬೆಚ್ಚಿಬಿದ್ದಿದ್ದಾರೆ.
ಇಂತಹ ಹಸೀ ಸುಳ್ಳನ್ನು ಮಂಗಳವಾರ ಕೇಂದ್ರ ಆರೋಗ್ಯ ಖಾತೆ ಕ್ಯಾಬಿನೆಟ್ ದರ್ಜೆ ಸಚಿವ ಮನಸುಖ್ ಮಾಂಡವೀಯ ಮತ್ತು ರಾಜ್ಯಖಾತೆ ಸಚಿವ ಭಾರತಿ ಪ್ರವೀಣ್ ಪವಾರ್ ಇಬ್ಬರೂ ಹೇಳಿದ್ದಾರೆ. ಒಬ್ಬರು ರಾಜ್ಯಸಭೆಯಲ್ಲಿ ಹೇಳಿದ್ದರೆ, ಮತ್ತೊಬ್ಬರು ಲೋಕಸಭೆಯಲ್ಲಿ ಹೇಳಿದ್ದಾರೆ. ಆ ಸುಳ್ಳಿಗೆ ಅವರು ನೀಡಿದ ಸಮರ್ಥನೆ ಆರೋಗ್ಯ ವಿಷಯ ರಾಜ್ಯಗಳ ವ್ಯಾಪ್ತಿಗೆ ಸೇರುತ್ತದೆ. ಹಾಗಾಗಿ ಸಾವುಗಳ ಬಗ್ಗೆ ಮಾಹಿತಿ ನೀಡಬೇಕಾದದ್ದು ರಾಜ್ಯಗಳ ಹೊಣೆ. ಆದರೆ, ಈವರೆಗೆ ಯಾವುದೇ ರಾಜ್ಯವೂ ನಿರ್ದಿಷ್ಟವಾಗಿ ಆಮ್ಲಜನಕ ಕೊರತೆಯಿಂದ ಸಾವುಕಂಡವರ ಬಗ್ಗೆ ವರದಿ ನೀಡಿಲ್ಲ ಎಂಬುದು.
ಆದರೆ, ಕರ್ನಾಟಕದ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಬರೋಬ್ಬರಿ 29 ಮಂದಿ ರೋಗಿಗಳು ಒಂದೇ ರಾತ್ರಿ ಸಾವು ಕಂಡಿದ್ದರು. ಹಾಗೇ ದೆಹಲಿಯ ಆಸ್ಪತ್ರೆಯೊಂದರಲ್ಲಿ 21 ಮಂದಿ ಒಂದೇ ದಿನ ಆಮ್ಲಜನಕ ಸಿಗದೆ ಉಸಿರುಗಟ್ಟಿ ಸತ್ತಿದ್ದರು. ಗೋವಾದಲ್ಲಿ ಐದು ದಿನಗಳ ಅಂತರದಲ್ಲಿ ಬರೋಬ್ಬರಿ 80 ಮಂದಿ ಆಮ್ಲಜನಕವಿಲ್ಲದೆ ಸಾವು ಕಂಡಿದ್ದರು. ಆಂಧ್ರಪ್ರದೇಶದ ತಿರುಪತಿಯಲ್ಲಿ ಒಂದೇ ದಿನ 11 ಮಂದಿ ಆಮ್ಲಜನಕ ಸಿಗದೆ ಸತ್ತಿದ್ದರು. ತೆಲಂಗಾಣದ ಹೈದರಾಬಾದ್ ಆಸ್ಪತ್ರೆಯಲ್ಲಿ 7 ಮಂದಿ ಆಮ್ಲಜನಕ ಕೊರತೆಗೆ ಬಲಿಯಾಗಿದ್ದರು. ಈ ಎಲ್ಲಾ ಘಟನೆಗಳು ಒಂದೇ ದಿನದಲ್ಲಿ ಆಮ್ಲಜನಕ ಸಿಗದೆ ಸಂಭವಿಸಿದ ಭಾರೀ ಸಾವುಗಳ ಕಾರಣಕ್ಕೆ ದೇಶದ ಗಮನ ಸೆಳೆದಿದ್ದವು. ಕಳೆದ ಮೇನಲ್ಲಿ ಸಂಭವಿಸಿದ ಈ ಆಘಾತಕಾರಿ ಘಟನೆಗಳಷ್ಟೇ ಅಲ್ಲದೆ, ಏಪ್ರಿಲ್ ಮತ್ತು ಮೇ ಅಂತ್ಯದ ವರೆಗೆ ದಿನ ನಿತ್ಯ ದೇಶಾದ್ಯಂತ ಪ್ರತಿ ದಿನ ನೂರಾರು ಮಂದಿ ಸಕಾಲದಲ್ಲಿ ಆಮ್ಲಜನಕ ಸಿಗದ ಒಂದೇ ಒಂದು ಕಾರಣಕ್ಕೆ ಜೀವ ಕಳೆದುಕೊಂಡಿದ್ದರು.

ಆಡಳಿತರೂಢ ಸರ್ಕಾರ ಮತ್ತು ವೈದ್ಯಕೀಯ ವ್ಯವಸ್ಥೆಯ ಹೊಣೆಗೇಡಿತನ, ಜನರ ಜೀವದ ಬಗೆಗಿನ ಉಡಾಫೆಯ ಕಾರಣಕ್ಕೆ ಸಂಭವಿಸಿದ ಈ ಸರಣಿ ಸಾವುಗಳ ಕಾರಣದಿಂದಾಗಿಯೇ ಕೋವಿಡ್ ಎರಡನೇ ಅಲೆಯಲ್ಲಿ ದೇಶದ ಕೋವಿಡ್ ಸಾವುಗಳ ಸಂಖ್ಯೆ ಇಡೀ ಜಗತ್ತೇ ಬೆಚ್ಚಿಬೀಳುವ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಆ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದೇಶದ ಸರ್ವೋಚ್ಛ ನ್ಯಾಯಾಲಯ ಆಮ್ಲಜನಕ ಕೊರತೆ ಸೇರಿದಂತೆ ಆರೋಗ್ಯ ವ್ಯವಸ್ಥೆಯ ಮೇಲೆ ನಿತ್ಯ ಕಣ್ಗಾವಲು ಇಡಲು ವಿಶೇಷ ಕಾರ್ಯಪಡೆ ತಂಡವನ್ನೇ ರಚಿಸಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶದ ಬಳಿಕ ಎಚ್ಚೆತ್ತುಕೊಂಡಿದ್ದ ಚೌಕಿದಾರ್ ಮೋದಿಯವರ ಸರ್ಕಾರ, ಆ ಬಳಿಕವಷ್ಟೇ ಹಂತಹಂತವಾಗಿ ಆಮ್ಲಜನಕ ಸರಬರಾಜು ವ್ಯವಸ್ಥೆಯನ್ನು ಸುಸೂತ್ರಗೊಳಿಸಿತ್ತು. ಆ ಹಿನ್ನೆಲೆಯಲ್ಲಿ ಜೂನ್ ಆರಂಭದ ಹೊತ್ತಿಗೆ ದೇಶದ ಕರೋನಾ ಸಾವುಗಳ ಸಂಖ್ಯೆಯಲ್ಲಿ ಸಮಾಧಾನಕರ ಇಳಿಕೆ ಕಂಡುಬಂದಿತ್ತು.
ಆದರೆ, ಈ ಎಲ್ಲಾ ಸಂಗತಿಗಳು ದೇಶದ ಜನಮಾನಸದಲ್ಲಿ ಇನ್ನೂ ಹಚ್ಚ ಹಸಿರಾಗಿ ಇರುವಾಗಲೇ ಪ್ರಧಾನಿ ಮೋದಿಯವರ ಸರ್ಕಾರ ದೇಶದಲ್ಲಿ ಆಮ್ಲಜನಕ ಕೊರತೆಯಿಂದ ಒಂದೇ ಒಂದು ಸಾವು ಸಂಭವಿಸಿಲ್ಲ ಎಂಬಂತಹ ನಾಚಿಕೆಗೇಡಿನ ವರಸೆ ಪ್ರದರ್ಶಿಸಿದೆ. ಇದು ಹೇಯ ಮತ್ತು ಲಜ್ಜೆಗೆಟ್ಟ ಸುಳ್ಳುಬುರಕತನ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಂತಹ ಸುಳ್ಳುಗಳು ದೇಶದ ಹೀನಾಯ ಆರೋಗ್ಯ ವ್ಯವಸ್ಥೆಯ ಕಾರಣಕ್ಕೆ ಜೀವ ಕಳೆದುಕೊಂಡ ಲಕ್ಷಾಂತರ ಮಂದಿಗೆ ಮಾಡುವ ಅವಮಾನ ಮತ್ತು ನ್ಯಾಯಾಂಗಕ್ಕೆ ಮಾಡುವ ಅಪಮಾನ ಎಂಬ ಕನಿಷ್ಟ ಹಿಂಜರಿಕೆಯೂ ಇಲ್ಲದೆ ಹೀಗೆ ಮೋದಿಯವರ ಸರ್ಕಾರ ಹಸೀಸುಳ್ಳುಗಳ ಮೂಲಕ ತನ್ನ ಹೊಣೆಗಾರಿಕೆ ಕೊಡವಿಕೊಳ್ಳುವ ಮಟ್ಟಕ್ಕೆ ಕುಸಿದಿದೆ.

ಇದು ಭಾರತೀಯ ಜನತಾ ಪಕ್ಷದ ಆಡಳಿತ ತಲುಪಿರುವ ನೈತಿಕ ಅಧಃಪತನದ ಮಹಾ ಕುಸಿತ ಎನ್ನದೇ ಇನ್ನೇನು ಹೇಳಲು ಸಾಧ್ಯ?