ಚುನಾವಣಾ ತಂತ್ರಗಾರ ಎಂದೇ ಕರೆಯಲ್ಪಡುವ ಪ್ರಶಾಂತ್ ಕಿಶೋರ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ನಡುವಿನ ಭೇಟಿಯ ಒಂದು ದಿನದ ನಂತರ ಎನ್‌ಸಿಪಿಯಿಂದ ಪ್ರತಿಕ್ರಿಯೆ ಬಂದಿದೆ.
ಶನಿವಾರ ಎನ್‌ಸಿಪಿ ಮುಖಂಡ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಮಾತನಾಡಿ, “ಪ್ರಶಾಂತ್ ಕಿಶೋರ್ ಅವರು ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ನಿನ್ನೆ ಮುಂಬೈ ನಿವಾಸದಲ್ಲಿ ಭೇಟಿಯಾದ್ದರು. ಮಾತುಕತೆ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಆದರೆ ಅವರನ್ನು ಎನ್‌ಸಿಪಿ ತಂತ್ರಗಾರರನ್ನಾಗಿ ನೇಮಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಮಲಿಕ್ ತಮ್ಮ ಮಾತನ್ನು ಮುಂದುವರೆಸಿ, “ಪ್ರಶಾಂತ್ ಒಬ್ಬ ತಂತ್ರಗಾರ, ಅವರು ವಿಷಯಗಳನ್ನು ವಿಭಿನ್ನವಾಗಿ ವಿಶ್ಲೇಷಿಸುತ್ತಾರೆ. ಅವರು ತಮ್ಮ ಅನುಭವವನ್ನು ಪವಾರ್ ಸಾಹೇಬರೊಂದಿಗೆ ಹಂಚಿಕೊಂಡರು. ದೇಶದ ಪ್ರಸ್ತುತ ರಾಜಕೀಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರಬೇಕು. ಪವಾರ್ ಸಾಹೇಬ್ ವಿರೋಧ ಪಕ್ಷಗಳನ್ನು ಒಂದುಗೂಡಿಸಲು ಬಯಸುತ್ತಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಬಲವಾದ ರಾಜಕೀಯ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.
ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ನಡೆಸುತ್ತಿರುವ ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಕಳೆದ ತಿಂಗಳು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಮೈತ್ರಿ ಮಾಡಿಕೊಳ್ಳುವ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದ್ದರು. ಶರದ್ ಪವಾರ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ ಎಂದು ರಾವತ್ ಹೇಳಿದ್ದಾರೆ.
ಆ ಸಮಯದಲ್ಲಿ ರಾವತ್, “ದೇಶದಲ್ಲಿ ವಿರೋಧ ಪಕ್ಷಗಳ ಬಲವಾದ ಮೈತ್ರಿಕೂಟ ಅವಶ್ಯಕತೆಯಿದೆ. ಆದರೆ, ಕಾಂಗ್ರೆಸ್ ಪಕ್ಷವಿಲ್ಲದೆ ಇಂತಹ ಮೈತ್ರಿ ಆಗಲು ಸಾಧ್ಯವಿಲ್ಲ. ಇದರಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದೆ. ನಾಯಕತ್ವದ ಕುರಿತು ಚರ್ಚೆಗಳ ಮೂಲಕ ನಿರ್ಧರಿಸಬಹುದು ಎಂದು ಹೇಳಿದ್ದಾರೆ.