ಮಧ್ಯಪ್ರದೇಶದಲ್ಲಿ ಕಿರಿಯ ವೈದ್ಯರು ಕಳೆದ ನಾಲ್ಕುದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಕಾನೂನು ಬಾಹಿರ ಎಂದು ಮ.ಪ್ರ. ಹೈಕೋರ್ಟ್ ತೀರ್ಪು ನೀಡಿದೆ. ತೀರ್ಪು ನೀಡಿದ ಬಳಿಕ 24 ತಾಸಿನ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಕೋರ್ಟ್ ತಿಳಿಸಿತ್ತು. ಈ ತೀರ್ಪಿನ ಬೆನ್ನಲ್ಲೇ, ಸುಮಾರು 3,000ದಷ್ಟು ವೈದ್ಯರು ತಮ್ಮಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಮಧ್ಯಪ್ರದೇಶದ ಆರು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ತಮ್ಮ ತಮ್ಮ ಕಾಲೇಜುಗಳ ಡೀನ್’ಗಳಿಗೆ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ. ಸೋಮವಾರ ಆರಂಭವಾದ ಈ ಮುಷ್ಕರವು ಬೇಡಿಕೆ ಈಡೇರುವವರೆಗೂ ಮುಂದುವರೆಯಲಿದೆ ಎಂದು ಮಧ್ಯಪ್ರದೇಶ ಕಿರಿಯ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಅರವಿಂದ ಮೀನಾ ಹೇಳಿದ್ದಾರೆ.
ಗೌರವಧನದಲ್ಲಿ ಹೆಚ್ಚಳ, ಕರೋನಾ ಸೋಂಕು ತಗುಲಿದ ವೈದ್ಯರ ಹಾಗು ಅವರ ಕುಟುಂಬಸ್ಥರಿಗೆ ಉಚಿತ ಚಿಕಿತ್ಸೆ ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ಪ್ರತಿಭಟನೆ ಕಾನೂನು ಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿರುವುದು ವೈದ್ಯರನ್ನು ಕೆರಳಿಸಿದೆ. ಹಾಗಾಗಿ ಸಾಮೂಹಿಕ ರಾಜಿನಾಮೆಯ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ.
“ಮೂರನೇ ವರ್ಷಕ್ಕೆ ಮಾಡಬೇಕಾದ ನಮ್ಮ ದಾಖಲಾತಿಯನ್ನು ಸರ್ಕಾರ ಈಗಾಗಲೇ ತಡೆಹಿಡಿದಿದೆ. ನಾವು ಈ ಬಾರಿ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹೈಕೋರ್ಟ್ ತೀರ್ಪಿನ ವಿರುದ್ದ ನಾವು ಸುಪ್ರಿಂ ಮೊರೆ ಹೋಗುತ್ತೇವೆ,” ಎಂದು ಡಾ. ಅರವಿಂದ್ ಹೇಳಿದ್ದಾರೆ.
ಇನ್ನು ತಮ್ಮ ಪ್ರತಿಭಟನೆಗೆ ವೈದ್ಯಾಧಿಕಾರಿಗಳ ಸಂಘ, ಸ್ಥಾನಿಕ ವೈದ್ಯರ ಸಂಘಗಳ ಒಕ್ಕೂಟ, ರಾಜಸ್ಥಾನ, ಬಿಹಾರ್, ಛತ್ತೀಸ್’ಘಢ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ ಮತ್ತು ಏಮ್ಸ್ ಋಷಿಕೇಶ್’ನ ಹಿರಿಯ ಮತ್ತು ಕಿರಿಯ ವೈದ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರ ನಮ್ಮ ಗೌರವಧನವನ್ನು 24%ದಷ್ಟು ಏರಿಸುತ್ತದೆ ಎಂಬ ಭರವಸೆ ನೀಡಿತ್ತು. ಭರವಸೆ ಈಡೇರುವವರೆಗೆ ನಾವು ವಿರಮಿಸುವುದಿಲ್ಲ ಎಂದು ಅರವಿಂದ ಮೀನಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಇತರ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಂತೆ ವೈದ್ಯರು ಕೂಡಾ ಎಸ್ಮಾ ಅಡಿಯಲ್ಲಿ ಬರುವುದರಿಂದ ಅವರ ಪ್ರತಿಭಟನೆಯು ಕಾನೂನುಬಾಹಿರವಾಗಿದೆ ಎಂದು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಆಯುಕ್ತರಾದ ನಿಶಾಂತ್ ವರ್ವಾಡೆ ಅವರು ಹೇಳಿದ್ದಾರೆ.