ಪೆಟ್ರೋಲ್, ಡಿಸೇಲ್ ಬೆಲೆ ಇಂದೂ ದೇಶಾದ್ಯಂತ ಏರಿಕೆ ಕಂಡಿದೆ. ಲೀಟರ್ ಪೆಟ್ರೋಲ್ ದರದಲ್ಲಿ 27 ಪೈಸೆ ಹಾಗೂ ಲೀಟರ್ ಡೀಸೆಲ್ ದರದಲ್ಲಿ 28 ಪೈಸೆ ಹೆಚ್ಚಳ ಮಾಡಲಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳನ್ನು ದಾಟಿದೆ.
ದೆಹಲಿಯಲ್ಲಿ, ಪೆಟ್ರೋಲ್ ಸಾರ್ವಕಾಲಿಕ ಗರಿಷ್ಠ 94.76 ರೂ.ಗೆ ತಲುಪಿದ್ದರೆ, ಡೀಸೆಲ್ 85.66 ರೂ ಗೆ ತಲುಪಿದೆ. ಮೇ ತಿಂಗಳ ಪ್ರಾರಂಭದಿಂದ ಈವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ 18 ಬಾರಿ ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್ನಲ್ಲಿ 4.36 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರದಲ್ಲಿ 4.93 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಮುಂಬೈನಲ್ಲಿ 100.98 ರೂ, ಜೈಪುರದಲ್ಲಿ 100.94 ರೂ, ಬೆಂಗಳೂರಿನಲ್ಲಿ 97.92 ರೂ, ಹೈದರಾಬಾದ್ನಲ್ಲಿ 98.48 ರೂ, ತಿರುವನಂತಪುರದಲ್ಲಿ 96.47 ರೂ, ಚೆನ್ನೈನಲ್ಲಿ 96.23 ರೂ, ಕೊಲ್ಕತ್ತಾದಲ್ಲಿ 94.76 ರೂ. ಇದೆ. ಡಿಸೇಲ್ ದರ ಪ್ರತಿ ಲೀಟರ್‌ಗೆ ಚೆನ್ನೈನಲ್ಲಿ 90.38 ರೂ, ಮುಂಬೈನಲ್ಲಿ 92.99 ರೂ, ಬೆಂಗಳೂರಿನಲ್ಲಿ 90.81 ರೂ, ಹೈದರಾಬಾದ್ನಲ್ಲಿ 93.38 ರೂ. ತಲುಪಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾದ ಕಾರಣ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ ಸೇರಿಸಿದ ನಂತರ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಇದರ ಆಧಾರದ ಮೇಲೆ ಪ್ರತಿದಿನ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ.
ದೇಶದಲ್ಲಿ ಕರೋನಾ ಸಂಕಷ್ಟದ ಮಧ್ಯೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ತಂದಿದೆ. ಏಕೆಂದರೆ ಕೋವಿಡ್ ನಿಯಂತ್ರಣದ ಸಲುವಾಗಿ ಲಾಕ್ಡೌನ್ ವಿಧಿಸಿದ ಹಿನ್ನೆಲೆ ಕೆಲಸವಿಲ್ಲದೆ ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ದಿನಸಿ ಸಾಮಾನು ಸೇರಿದಂತೆ ಇತರೆ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಯಿದ್ದು, ಇದರಿಂದ ಜನಸಾಮಾನ್ಯರು ಮತ್ತೊಂದು ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿದ್ದಾರೆ.