ಕೋವಿಡ್ ರೋಗಿಗಳಿಗೆ ನೀಡುವ ಔಷಧದ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಂ ಗಂಭೀರ್ ಫೌಂಡೇಶನ್ ತಪ್ಪಿತಸ್ಥ ಎಂದು ದೆಹಲಿ ಸರ್ಕಾರದ ಔಷಧ ನಿಯಂತ್ರಕ ಮಂಡಳಿ ಗುರುವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಈ ಮೂಲಕ ಡ್ರಗ್ಸ್ & ಕಾಸ್ಮೆಟಿಕ್ಸ್ ಕಾಯ್ದೆ, 1940 ನ್ನು ಗೌತಂ ಗಂಭೀರ್ ಫೌಂಡೇಶನ್ ಉಲ್ಲಂಘಿಸಿ, ಸೆಕ್ಷನ್ 27 (ಬಿ) (iii) ಮತ್ತು 27 (ಡಿ) ಅಡಿಯಲ್ಲಿ ಕಾನೂನುಬಾಹಿರ / ಶಿಕ್ಷಾರ್ಹವಾದ ಅಪರಾಧವನ್ನು ಮಾಡಿದೆ ಮಾಡಿದೆ ಎಂದು ಔಷಧ ನಿಯಂತ್ರಕ ಮಂಡಳಿ ನ್ಯಾಯಾಲಯಕ್ಕೆ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಔಷಧಿಗಳನ್ನು ಖರೀದಿಸಲು, ಸಂಗ್ರಹಿಸಲು ಮತ್ತು ವಿತರಿಸಲು ಅಗತ್ಯವಾದ ಪರವಾನಗಿಯನ್ನು ಹೊಂದಿರದ ಫೌಂಡೇಷನ್ ವಿರುದ್ಧ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಔಷಧ ನಿಯಂತ್ರಕ ಕೋರ್ಟ್ಗೆ ತಿಳಿಸಿದೆ..
ಔಷಧವನ್ನು ಗೌತಮ್ ಗಂಭೀರ್ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪ್ರಕರಣದಲ್ಲಿ ಔಷಧ ನಿಯಂತ್ರಕವನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಪರಿಸ್ಥಿತಿಯ ಲಾಭ ಪಡೆದು ರಕ್ಷಕರೆಂಬಂತೆ ತೋರಿಸಿಕೊಳ್ಳುವ ಜನರ ಮನಸ್ಥಿತಿಯನ್ನು ಖಂಡಿಸಬೇಕಿದೆ ಎಂದು ದೆಹಲಿ ಹೈಕೋರ್ಟ್ ಖಾರವಾಗಿ ಪ್ರತಿಕ್ರಯಿಸಿತ್ತು.
ಗೌತಮ್ ಗಂಭೀರ್ ಗೆ ಹೇಗೆ ಅಷ್ಟು ಪ್ರಮಾಣದ ಫಾಬಿಫ್ಲೂ ಔಷಧ ಸಿಗುವುದಕ್ಕೆ ಸಾಧ್ಯವಾಯಿತು ಎಂಬುದನ್ನು ಸರಿಯಾಗಿ ಪರಿಶೀಲನೆ ನಡೆಸದ ಡ್ರಗ್ ಕಂಟ್ರೋಲರ್ ಬಗ್ಗೆ ಅಸಮಾಧಾನ ಹೊರಹಾಕಿದ್ದ ಕೋರ್ಟ್, ಔಷಧ ನಿಯಂತ್ರಕದ ಮೇಲಿದ್ದ ತನ್ನ ವಿಶ್ವಾಸ ಅಲುಗಾಡಿದೆ ಎಂದು ಹೇಳಿತ್ತು.
ಈ ಔಷಧದ ಕೊರತೆ ಇತ್ತು ಎಂಬುದು ಎಲ್ಲರಿಗೂ ತಿಳಿದಿತ್ತು, ಆದರೂ ಗೌತಮ್ ಗಂಭೀರ್ ಸಾವಿರಾರು ಸ್ಟ್ರಿಪ್ ಗಳಷ್ಟು ಮಾತ್ರೆಗಳನ್ನು ಸಂಗ್ರಹಿಸಿದ್ದರು. ಆ ದಿನ ಔಷಧದ ಅಗತ್ಯವಿದ್ದ ಅದೆಷ್ಟೋ ಮಂದಿಗೆ ಸಿಗಲಿಲ್ಲ ಎಂದು ಹೇಳಿರುವ ಕೋರ್ಟ್ ಔಷಧ ನಿಯಂತ್ರಕ ಸಲ್ಲಿಸಿದ್ದ ತನಿಖಾ ಸ್ಥಿತಿಗತಿ ವರದಿಯನ್ನು ಸ್ವೀಕರಿಸಲು ನಿರಾಕರಿಸಿತ್ತು.
ಅಲ್ಲದೆ, ಗೌತಮ್ ಗಂಭೀರ್ರನ್ನು ಕೂಡಾ ತರಾಟೆಗೆ ತೆಗದುಕೊಂಡಿದ್ದ ನ್ಯಾಯಾಲಯ, “ಈ ರೀತಿ ಮಾಡುವುದು ತಪ್ಪು ಎಂದು ಈಗಾಗಲೇ ಕೋರ್ಟ್ ಹೇಳಿದೆ, ತಾವೇ ಸಮಸ್ಯೆ ಸೃಷ್ಟಿಸಿ ತಾವೇ ರಕ್ಷಕರಂತೆ ಜನತೆಗೆ ತೋರಿಸಿಕೊಳ್ಳುವ ಜನರ ಮನಸ್ಥಿತಿಯನ್ನು ಖಂಡಿಸಬೇಕಿದೆ. ಒಂದು ವೇಳೆ ಇದು ಮುಂದುವರೆದರೆ ಅಂಥಹ ವರ್ತನೆಗಳೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಮಗೆ ಗೊತ್ತಿದೆ ಎಂದು ನ್ಯಾಯಾಲಯ ಎಚ್ಚರಿಸಿತ್ತು.