ಕರೋನಾ ಎರಡನೇ ಅಲೆ ರಾಜ್ಯದಲ್ಲಿ ಭೀಕರ ಸ್ವರೂಪ ಪಡೆದಿದೆ. ಸೋಂಕು ಪತ್ತೆ ಪರೀಕ್ಷೆಗಳ ಪ್ರಮಾಣ ತಗ್ಗಿಸಿ ದೈನಂದಿನ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ, ವಾಸ್ತವವಾಗಿ ಆಸ್ಪತ್ರೆಗಳಲ್ಲಿ ಎಂದಿನ ಒತ್ತಡ ಮುಂದುವರಿದಿದೆ. ಈ ನಡುವೆ, ಸಾವಿನ ಪ್ರಮಾಣ ಏರಿಕೆಯಾಗುತ್ತಿರುವ ಆತಂಕದ ಅಂಶವನ್ನು ಸರ್ಕಾರದ ಅಧಿಕೃತ ಮಾಹಿತಿಯೇ ಬಹಿರಂಗಪಡಿಸಿದೆ.
ಈ ನಡುವೆ, ರಾಜ್ಯದಲ್ಲಿ ಈಗಾಗಲೇ 10ರಿಂದ 19 ವರ್ಷ ವಯೋಮಾನದ ಸುಮಾರು ಎರಡು ಲಕ್ಷ ಹದಿಹರೆಯದ ವಯೋಮಾನದವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸುಮಾರು 80ಕ್ಕೂ ಹೆಚ್ಚು ಮಂದಿ ಕರೋನಾಗೆ ಬಲಿಯಾಗಿದ್ದಾರೆ. ಜೊತೆಗೆ ಮೂರನೇ ಅಲೆ, ಹಾಲಿ ಎರಡನೇ ಅಲೆಗಿಂತ ಭೀಕರವಾಗಿರಲಿದ್ದು, ಮುಖ್ಯವಾಗಿ ಮಕ್ಕಳು ಮತ್ತು ಹದಿಹರೆಯದವರಿಗೇ ಅದು ಹೆಚ್ಚು ಅಪಾಯಕಾರಿ ಎಂದು ಈಗಾಗಲೇ ಹಲವು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಅದರಲ್ಲೂ ಕಳೆದ ವರ್ಷಾಂತ್ಯದ ಹೊತ್ತಿಗೆ ರಾಜ್ಯದಲ್ಲಿ ಶಾಲಾ- ಕಾಲೇಜುಗಳನ್ನು ಪುನರಾರಂಭಿಸಿದ ಪರಿಣಾಮವಾಗಿಯೇ ಮಕ್ಕಳಲ್ಲಿ ದಿಢೀರ್ ಸೋಂಕು ಏರಿಕೆಯಾಯಿತು. ಆವರೆಗೆ ಬಹುತೇಕ ಮಕ್ಕಳಿಂದ ದೂರವೇ ಇದ್ದ ಸೋಂಕು ಕಳೆದ ಫೆಬ್ರವರಿ- ಮಾರ್ಚ್ ಬಳಿಕ ಎರಡನೇ ಅಲೆಯ ಹೊತ್ತಿಗೆ ದಿಢೀರನೇ ಮಕ್ಕಳನ್ನು ಆವರಿಸಲು ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸಿದ್ದೇ ಕಾರಣ. ಜೊತೆಗೆ ರಾಜ್ಯದಲ್ಲಿ ಈವರೆಗೆ ಅತಿ ಹೆಚ್ಚು ಮಂದಿ ಶಾಲಾ-ಕಾಲೇಜು ಶಿಕ್ಷಕರು ಕೋವಿಡ್ ಗೆ ಬಲಿಯಾಗಲು ಕೂಡ ಅದೇ ಕಾರಣ. ರಾಜ್ಯದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದ ಸರ್ಕಾರಿ ನೌಕರರ ಪೈಕಿ ದೊಡ್ಡ ಪಾಲು ಶಿಕ್ಷಕರದ್ದೇ ಆಗಿದೆ. ಅದಕ್ಕೆ ಮೂಲ ಕಾರಣ ಶಿಕ್ಷಕರನ್ನು ಕೋವಿಡ್ ಭೀಕರತೆಯ ನಡುವೆಯೂ ಮೌಲ್ಯಮಾಪನ, ಚುನಾವಣಾ ಕರ್ತವ್ಯ ಮತ್ತು ಸೋಂಕಿನ ನಡುವೆಯೇ ಶಾಲಾ-ಕಾಲೇಜು ಪುನರಾರಂಭಿಸಿದ್ದೇ ಕಾರಣ ಎಂಬುದನ್ನು ತಳ್ಳಿಹಾಕಲಾಗದು.
ಇಂತಹ ಆತಂಕಕಾರಿ ಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಬಗ್ಗೆ ವಿಚಿತ್ರ ಹಠಮಾರಿ ಧೋರಣೆ ತಳೆದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ಮೂರನೇ ಅಲೆ ಮಕ್ಕಳ ಪಾಲಿಗೆ ಜೀವಕಂಟಕವಾಗಲಿದೆ ಎಂದು ಸರ್ಕಾರವೇ ರಚಿಸಿದ ಟಾಸ್ಕ್ ಫೋರ್ಸ್ ವರದಿ ನೀಡಿದೆ. ಅದಕ್ಕಾಗಿ ಅಗತ್ಯ ಮಕ್ಕಳ ಚಿಕಿತ್ಸಾ ತಯಾರಿಗಳನ್ನು ಸಮರೋಪಾದಿಯಲ್ಲಿ ನಡೆಸಿ ಎಂದಿದೆ. ಮತ್ತೊಂದು ಕಡೆ, ಕರೋನಾಗೆ ಬಲಿಯಾಗಿರುವ ದೊಡ್ಡ ಸಂಖ್ಯೆಯ ಶಿಕ್ಷಕರ ಪೈಕಿ ಬಹುತೇಕರು ಕಳೆದ ಬಾರಿ ಮೌಲ್ಯಮಾಪನ, ಚುನಾವಣಾ ಕರ್ತವ್ಯಗಳಲ್ಲಿ ಭಾಗಿಯಾದವರೇ ಎಂಬ ಆತಂಕಕಾರಿ ಸಂಗತಿಯನ್ನು ಶಿಕ್ಷಕರ ಸಂಘಟನೆಗಳೇ ದಾಖಲೆಸಹಿತ ಬಹಿರಂಗಪಡಿಸಿವೆ. ಅಷ್ಟಾಗಿಯೂ ಸರ್ಕಾರ ಮತ್ತು ಸ್ವತಃ ಸಂವೇದನಾಶೀಲ ಸಚಿವರು ಎನ್ನಲಾಗುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಪರೀಕ್ಷೆ ವಿಷಯವನ್ನು ಯಾಕಿಷ್ಟು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದ್ದಾರೆ. ಮತ್ತು ಪರೀಕ್ಷೆ ನಡೆಸಿಯೇ ಸಿದ್ಧ ಎಂಬ ಜಿದ್ದಿಗೆ ಬಿದ್ದಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಏಕೆಂದರೆ; ಈಗಾಗಲೇ ಕಳೆದ ಏಪ್ರಿಲ್ ನಲ್ಲಿಯೇ ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದ್ದ ಐಸಿಎಸ್ಸಿ ಮತ್ತು ಸಿಬಿಎಸ್ಸಿ ಮಂಡಳಿಗಳು, ಇದೀಗ ಎರಡನೇ ಅಲೆಯ ಹಿನ್ನೆಲೆಯಲ್ಲಿ ಹನ್ನೆರಡನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಿವೆ. ರಾಷ್ಟ್ರವ್ಯಾಪಿ ಕೋಟ್ಯಂತರ ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಮತ್ತು ಶೈಕ್ಷಣಿಕ ಜೀವನದ ಮಹತ್ವದ ಪರೀಕ್ಷೆಗಳ ವಿಷಯದಲ್ಲಿ, ಮಕ್ಕಳ ಜೀವಕ್ಕಿಂತ ಪರೀಕ್ಷೆ ಮುಖ್ಯವಲ್ಲ ಎಂಬ ಸಕಾಲಿಕ ಮತ್ತು ಸೂಕ್ತ ನಿರ್ಧಾರದೊಂದಿಗೆ ಐಸಿಎಸ್ಸಿ ಮತ್ತು ಸಿಬಿಎಸ್ಸಿ ಬೋರ್ಡ್ ಗಳು ಈ ನಿರ್ಧಾರ ಕೈಗೊಂಡಿವೆ. ಹಾಗೇ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಗೋವಾ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಗೆ ಈಗಾಗಲೇ ಬೋರ್ಡ್ ಪರೀಕ್ಷೆಗಳನ್ನು ರದ್ದುಪಡಿಸಿವೆ. ಅಂತಹ ನಿರ್ಧಾರವನ್ನು ಸಹಜವಾಗೇ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳು ಕೂಡ ಸ್ವಾಗತಿಸಿವೆ.
ಭಾರತದ ಮಟ್ಟಿಗೆ ಮಾತ್ರವಲ್ಲ, ಕೋವಿಡ್ ಬಾಧಿತ ಹಲವು ರಾಷ್ಟ್ರಗಳಲ್ಲೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಪರೀಕ್ಷೆಯನ್ನು ರದ್ದು ಮಾಡಿ, ಹಿಂದಿನ ವರ್ಷಗಳ ಮಕ್ಕಳ ಶೈಕ್ಷಣಿಕ ಕಲಿಕೆಯ ಸರಾಸರಿ ಮಾನದಂಡದ ಮೇಲೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗಿದೆ. ಭಾರತದ ಎರಡು ಮುಂಚೂಣಿ ಶಿಕ್ಷಣ ಮಂಡಳಿಗಳಿರಲಿ, ಅಂತಾರಾಷ್ಟ್ರೀಯ ಶಿಕ್ಷಣ ಸಂಬಂಧಿತ ಸಂಸ್ಥೆಗಳೇ ಇರಲಿ, ಪರೀಕ್ಷೆ ಮತ್ತು ಮಕ್ಕಳ ಜೀವದ ಆಯ್ಕೆ ಬಂದಾಗ, ಪರೀಕ್ಷೆಗಿಂತ ಮಕ್ಕಳ ಜೀವ ಮುಖ್ಯ ಎಂಬ ವಿವೇಕದ ನಿರ್ಧಾರವನ್ನು ಕೈಗೊಂಡಿವೆ ಮತ್ತು ಆ ಮೂಲಕ ಸಂಕಷ್ಟದ ಹೊತ್ತಲ್ಲಿ ತೆಗೆದುಕೊಳ್ಳಬೇಕಾದ ಹೊಣೆಗಾರಿಕೆ ಮತ್ತು ಎಚ್ಚರಿಕೆಗೆ ಮಾದರಿಯಾಗಿ ನಿಂತಿವೆ.
ಎಸ್ ಎಸ್ ಎಲ್ ಸಿ ಮತ್ತು ಪಿಯು ಪರೀಕ್ಷೆಯ ವಿಷಯದಲ್ಲಿ ಸಚಿವರ ಧೋರಣೆಯ ಬಗ್ಗೆ ಈಗಾಗಲೇ ಸಮಾಜದ ವಿವಿಧ ವಲಯದಿಂದ ಪ್ರಶ್ನೆಗಳು ಎದ್ದಿವೆ. ಅದರಲ್ಲೂ ಮುಖ್ಯವಾಗಿ ಸ್ವತಃ ವಿದ್ಯಾರ್ಥಿಗಳು, ಪೋಷಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕೂಡ ಮಕ್ಕಳಿಗೆ ಇಂತಹ ಅಪಾಯಕಾರಿ ಹೊತ್ತಿನಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ; ಸದ್ಯಕ್ಕೆ ಕಳೆದ ವರ್ಷದ ಆನ್ ಲೈನ್ ಮತ್ತು ಆಫ್ ಲೈನ್ ಕಲಿಕೆ ಮತ್ತು ಆ ಹಿಂದಿನ ವರ್ಷಗಳ ಕಲಿಕೆಯ ಮಾನದಂಡದ ಮೇಲೆ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವುದು ವಿವೇಕದ ನಡೆ. ಅದು ಬಿಟ್ಟು ಇಂತಹ ಹೊತ್ತಿನಲ್ಲೂ ಪರೀಕ್ಷೆ ನಡೆಸುತ್ತೇವೆ ಎಂಬುದು ಹುಂಬತನದ ಪರಮಾವಧಿ. ಅದರಲ್ಲೂ ಲಾಕ್ ಡೌನ್ ನಡುವೆ ಸಾರಿಗೆ ಸೌಕರ್ಯಗಳಿಲ್ಲದೆ ಮಕ್ಕಳು ಪರೀಕ್ಷೆಗೆ ಹಾಜರಾಗುವುದು ಸಾಧ್ಯವಿಲ್ಲ. ಜೊತೆಗೆ ಆನ್ ಲೈನ್ ಮೂಲಕ ಪರೀಕ್ಷೆ ಮಾಡುವುದು ಕೂಡ ರಾಜ್ಯದ ಹಳ್ಳಿಗಾಡಿನ ಕುಗ್ರಾಮಗಳ ಮಕ್ಕಳ ದೃಷ್ಟಿಯಿಂದ ಅಸಾಧ್ಯ ಮತ್ತು ಅನ್ಯಾಯದ ಸಂಗತಿ. ಇನ್ನು ಪರೀಕ್ಷೆಯನ್ನು ಭೌತಿಕವಾಗಿ ನಡೆಸುವುದು ಏಕಕಾಲಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಅವರ ಕುಟುಂಬಗಳನ್ನು ಕರೋನಾದ ಸಂಕಷ್ಟಕ್ಕೆ ನೂಕಿದಂತೆಯೇ ಸರಿ. ಇನ್ನು ಮೌಲ್ಯಮಾಪನಕ್ಕೆ ಶಿಕ್ಷಕರನ್ನು ದೂರದ ಊರುಗಳಿಗೆ ನಿಯೋಜಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಕಳೆದ ಬಾರಿ ಸಾಲು ಸಾಲು ಶಿಕ್ಷಕರ ಜೀವಬಲಿಯೇ ಸಾಕ್ಷಿ.
ಕಳೆದ ಬಾರಿ ಹಠಕ್ಕೆ ಬಿದ್ದು ಪರೀಕ್ಷೆ ನಡೆಸಿ, ಕನಿಷ್ಟ ಮೌಲ್ಯಮಾಪನ ಕೇಂದ್ರಗಳನ್ನೂ ಜಿಲ್ಲಾ ಮಟ್ಟದಲ್ಲಿ ವಿಕೇಂದ್ರೀಕರಿಸಿದೆ ಕೆಲವು ವಲಯವಾರು ಹಿಂದಿನಂತೆಯೇ ಸೀಮಿತ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಿದ ಅಧಿಕಾರಿಗಳು ಮತ್ತು ಸಚಿವರ ಮೊಂಡುತನಕ್ಕೆ ನೂರಾರು ಶಿಕ್ಷಕರು ಜೀವ ಕಳೆದುಕೊಂಡರು. ಕುಟುಂಬಗಳು ದುಡಿಯುವ ತಂದೆ-ತಾಯಿಯರನ್ನು ಕಳೆದುಕೊಂಡ ಅನಾಥವಾದವು. ಆ ಎಲ್ಲಾ ಸಾವುಗಳಿಗೆ ನೇರವಾಗಿ ಶಿಕ್ಷಣ ಸಚಿವರು ಮತ್ತು ಪಿಯು ಬೋರ್ಡಿನ ಅಧಿಕಾರಿಗಳೇ ಹೊಣೆ ಎಂಬುದು ನಿರ್ವಿವಾದ.
ಈಗ ಮತ್ತೆ ಪರೀಕ್ಷೆಗಳನ್ನು ನಡೆಸಿ, ಮತ್ತೆ ಅದೇ ಕರಾಳ ಇತಿಹಾಸ ಮರುಸೃಷ್ಟಿಯ ಇರಾದೆ ಬಿಟ್ಟು, ಸಚಿವರು ಕೂಡಲೇ ಪರೀಕ್ಷೆ ರದ್ದು ಮಾಡಬೇಕು ಎಂಬುದು ಶಿಕ್ಷಕರು ಮತ್ತು ಶಿಕ್ಷಕರ ಸಂಘಟನೆಗಳ ಆಗ್ರಹ. “ಕೋವಿಡ್ ರುದ್ರತಾಂಡವದ ಕಾರಣಕ್ಕೆ ಐಸಿಎಸ್ಸಿ ಮತ್ತು ಸಿಬಿಎಸ್ಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಇಡೀ ದೇಶವ್ಯಾಪ್ತಿಯ, ಕೋಟ್ಯಂತರ ಮಕ್ಕಳ ಭವಿಷ್ಯದ ಪ್ರಶ್ನೆಯಾದ ಆ ಪರೀಕ್ಷೆಗಳನ್ನು ಜೀವಕ್ಕಿಂತ ಪರೀಕ್ಷೆ ಮುಖ್ಯವಲ್ಲ ಎಂಬ ಆಶಯದೊಂದಿಗೆ ರದ್ದು ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ಮತ್ತು ಸಚಿವರು ಯಾಕೆ ಈ ವಿಷಯದಲ್ಲಿ ಇಷ್ಟೊಂದು ಹಠಮಾರಿ ಧೋರಣೆ ತಳೆಯುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಅವರು ಈ ಕೂಡಲೇ ಪರೀಕ್ಷೆ ರದ್ದು ಮಾಡಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ, ಯಾವ ಶಿಕ್ಷಕರು ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲಿ ಭಾಗಿಯಾಗುವುದಿಲ್ಲ” ಎಂದು ರಾಜ್ಯ ಪಿಯು ಶಿಕ್ಷಕರ ಸಂಘಟನೆಯ ಮಾಜಿ ಅಧ್ಯಕ್ಷರಾದ ಪುರ್ಲೆ ತಿಮ್ಮಯ್ಯ ‘ಪ್ರತಿಧ್ವನಿ’ಗೆ ಪ್ರತಿಕ್ರಿಯಿಸಿದ್ದಾರೆ.
“ಜನ ಹಾದಿ ಬೀದಿಯಲ್ಲಿ ಸಾಯ್ತಿದಾರೆ. ಕರೋನಾ ವಾರಿಯರ್ಸ್ ಆಗಿ ಕೆಲಸ ಮಾಡುವವರು, ವಯಸ್ಸಾದವರಿಗೆ ಲಸಿಕೆ ನೀಡಿ, ಜೀವ ಉಳಿಸಿಕೊಳ್ಳುವುದು ಕೂಡ ಈ ಸರ್ಕಾರಕ್ಕೆ ಸಾಧ್ಯವಾಗ್ತಿಲ್ಲ. ಕನಿಷ್ಟ ಕೋವಿಡ್ ವಾರಿಯರ್ಸ್ ಆಗಿರುವ ಶಿಕ್ಷಕರಿಗೆ ಸಕಾಲದಲ್ಲಿ ಲಸಿಕೆ ನೀಡಲು ಸರ್ಕಾರ ಸಜ್ಜಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡಿಸಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆಗೆ ಅವರ ಕುಟುಂಬಗಳನ್ನೂ ಕರೋನಾ ದವಡೆಗೆ ನೂಕುವುದು ಅಮಾನವೀಯ ಅಷ್ಟೇ ಅಲ್ಲ, ಕ್ರೌರ್ಯ ಕೂಡ. ಬಹಳ ಸಂವೇದನಾಶೀಲರು, ಸಭ್ಯರು ಎಂದು ಹೆಸರಾಗಿರುವ ಶಿಕ್ಷಣ ಸಚಿವರು ಈ ವಿಷಯದಲ್ಲಿ ಯಾಕೆ ಇಷ್ಟು ಸಂವೇದನಾಹೀನವಾಗಿ ನಡೆದುಕೊಳ್ಳುತ್ತಿದ್ದಾರೆ ಅರ್ಥವಾಗುತ್ತಿಲ್ಲ. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಇಂತಹ ಕ್ರೂರ ನಡೆಯನ್ನು ಬಿಟ್ಟು, ಕೂಡಲೇ ಪರೀಕ್ಷೆ ರದ್ದು ಮಾಡಿ ಆದೇಶ ಹೊರಡಿಸಿ ಈ ಸರ್ಕಾರ ಮತ್ತು ಸಚಿವರು ತಮಗೆ ಕಿಂಚಿತ್ತಾದರೂ ಮನುಷ್ಯತ್ವ ಇದೆ ಎಂದು ತೋರಿಸಲಿ” ಎಂಬುದು ಹೆಸರು ಹೇಳಲಿಚ್ಛಿಸದ ಹಿರಿಯ ಶಿಕ್ಷಕರೊಬ್ಬರ ಅಭಿಪ್ರಾಯ.
ಹಾಗಾಗಿ, ಆನ್ ಲೈನ್ ಶಿಕ್ಷಣ, ಖಾಸಗೀ ಶಾಲೆಗಳ ಶುಲ್ಕ, ಕಳೆದ ಬಾರಿಯ ಪರೀಕ್ಷೆ ಮತ್ತು ಮೌಲ್ಯಮಾಪನ, ಶಾಲಾ-ಕಾಲೇಜು ಪುನರಾರಂಭ, ಹೀಗೆ ಕರೋನಾ ಹೊತ್ತಿನ ಪ್ರತಿ ನಿರ್ಣಾಯಕ ತೀರ್ಮಾನಗಳ ವಿಷಯದಲ್ಲೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಮ್ಮ ಎಂದಿನ ವಿಳಂಬ ನೀತಿ ಮತ್ತು ಗೊಂದಲಗಳ ಮೂಲಕ ಸಾಕಷ್ಟು ವಿವಾದಕ್ಕೀಡಾಗಿದ್ದರು. ಲಕ್ಷಾಂತರ ಮಕ್ಕಳ ಜೀವ ಮತ್ತು ಜೀವನ ರಕ್ಷಣೆಯ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಪ್ರಮುಖ ತೀರ್ಮಾನಗಳನ್ನು ಸಕಾಲದಲ್ಲಿ ಮತ್ತು ಎಲ್ಲಾ ಬಗೆಯ ಹೊಣೆಗಾರಿಕೆಯೊಂದಿಗೆ ತೆಗೆದುಕೊಳ್ಳುವಲ್ಲಿ ಪ್ರತಿ ಬಾರಿಯೂ ಅವರ ವೈಫಲ್ಯವೇ ಹಲವು ಗೊಂದಲ ಮತ್ತು ಬಿಕ್ಕಟ್ಟುಗಳಿಗೆ ಕಾರಣವಾಗಿತ್ತು.
ಇದೀಗ ಪರೀಕ್ಷೆಗಳ ವಿಷಯದಲ್ಲಿ ಕೂಡ ದಕ್ಷತೆ ಮತ್ತು ನಿರ್ಧಾರ ಕೈಗೊಳ್ಳುವ ದಿಟ್ಟತನದ ಕೊರತೆ ಎದ್ದು ಕಾಣುತ್ತಿದೆ. ಜೊತೆಗೆ ಮಕ್ಕಳು, ಶಿಕ್ಷಕರು ಹಾಗೂ ಪೋಷಕರ ಜೀವಕ್ಕಿಂತ ಇನ್ನಾವುದೋ ಹಿತಾಸಕ್ತಿಗಳೇ ಸಚಿವರಿಗೆ ಮುಖ್ಯವಾಗಿರುವಂತಿದೆ. ಆ ಹಿತಾಸಕ್ತಿಗಳು ಯಾವುವು ಎಂಬುದು ಸದ್ಯಕ್ಕೆ ಕುತೂಹಲದ ಪ್ರಶ್ನೆ!