ಶಿವಕುಮಾರ್ ಎ
ಮನುಕುಲಕ್ಕೆ ಮಾರಕವಾದ ಪಿಡುಗುಗಳು ಪ್ರಪಂಚವನ್ನು ಬಾಧಿಸಿದಾಗ ಜನರ ಕೈ ಹಿಡಿದಿದ್ದು ವಿಜ್ಞಾನ. ಪೋಲಿಯೋ, ಪ್ಲೇಗ್, ದಡಾರ, ಸಿಡುಬುಗಳಂತಹ ಭೀಕರ ರೋಗಗಳಿಗೆ ಇಂದು ಲಸಿಕೆಗಳ ಮುಖಾಂತರ ತಡೆ ಒಡ್ಡಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲಿನ ಪ್ರಮುಖ ಪ್ರಗತಿಗೆ ಕಾರಣವಾದ ಅಂಶಗಳು. ಈಗ, ಕರೋನಾದಂತಹ ಸಂಕಷ್ಟದಲ್ಲಿಯೂ ಜನರು ಭರವಸೆಯ ದೃಷ್ಟಿ ನೆಟ್ಟಿರುವುದು ವಿಜ್ಞಾನ ಹಾಗೂ ವಿಜ್ಞಾನಿಗಳೆಡೆಗೆ.
ಭರವಸೆಯ ಬೆಳಕೊಂದು ಮತ್ತಷ್ಟು ಪ್ರಜ್ವಲಿಸಬೇಕಾದ ಸಂದರ್ಭದಲ್ಲಿ ಆಯುರ್ವೇದ ಮತ್ತು ಅಲೋಪಥಿ ನಡುವಿನ ಕೆಸರೆರಚಾಟ, ಜನರ ಭರವಸೆಯ ಮೇಲೆ ಪರಿಣಾಮ ಬೀರುತ್ತಿದೆ. ದೇಶದ ಆಯುರ್ವೇದ ಮಾರುಕಟ್ಟೆಯಲ್ಲಿ ಅತೀ ದೋಡ್ಡ ಪಾಲು ಹೊಂದಿರುವ ಪತಂಜಲಿ ಮತ್ತು ಅಲೋಪಥಿಕ್ ವೈದ್ಯರ ನಡುವೆ ಆರಂಭವಾದ ವಾಕ್ಸಮರ ಇನ್ನೂ ಅಂತ್ಯ ಕಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಾಬಾ ರಾಮ್ ದೇವ್ ಅವರ ಒಂದು ವೀಡಿಯೋದಿಂದ ಆರಂಭವಾದ ಈ ಸಮರವು, ಒಬ್ಬರು ಇನ್ನೊಬ್ಬರನ್ನು ಪದೇ ಪದೇ ಕೆಣಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಶನಿವಾರದಂದು ಬಾಬಾ ರಾಮ್ ದೇವ್ ಅವರ ವೀಡಿಯೋ ಒಂದು ವೈರಲ್ ಆಗಿತ್ತು. ಅದರನ್ನು ಅಲೋಪಥಿ ಚಿಕಿತ್ಸಾ ವಿಧಾನದ ಕುರಿತು ಬಾಬಾ ರಾಮ್ ದೇವ್ ಅವರು ಕೀಳಾಗಿ ಮಾತನಾಡಿದ್ದರು. ಅಲೋಪಥಿ ಎಂಬುದು ಅವಿವೇಕದ ವೈದ್ಯಪದ್ಧತಿ ಎಂದು ಅವರು ಮೂದಲಿಸಿದ್ದರು.
ಈ ವೀಡಿಯೋ ವಿರುದ್ದ ಸಿಡಿದೆದ್ದ ಭಾರತೀಯ ವೈದ್ಯಕೀಯ ಸಂಘ (Indian Medical Association – IMA), ಅಲೋಪಥಿಕ್ ವೈದ್ಯರನ್ನು ಬಾಬಾ ರಾಮ್ ದೇವ್ ಕೊಲೆಗಾರರು ಎಂದು ಸಂಬೋಧಿಸಿದ್ದಾರೆ ಎಂದು ಆರೋಪಿಸಿತ್ತು. ಇನ್ನು ಕೂಡಾ ಅನುಮತಿ ಸಿಗದ ತಮ್ಮ ಅಕ್ರಮ ಔಷಧಿಯ ಪ್ರಚಾರಕ್ಕಾಗಿ ಬಾಬಾ ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದರೊಂದಿಗೆ ಬಾಬಾ ರಾಮ್ ದೇವ್, ಪತಂಜಲಿ ಯೋಗಪೀಠ ಮತ್ತು ಇದರ ವ್ಯವಸ್ಥಾಪಕ ನಿರ್ದೇಶಕರಾದ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.
ಇದಕ್ಕೆ ಉತ್ತರ ನೀಡಿದ್ದ ಪತಂಜಲಿ ಸಂಸ್ಥೆಯು, ಒಂದು ಖಾಸಗಿ ಕಾರ್ಯಕ್ರಮದಲ್ಲಿ ಬಾಬಾ ರಾಮ್ ದೇವ್ ಸೇರಿದಂತೆ ಇತರರಿಗೆ ಬಂದಿದ್ದ ವಾಟ್ಸಾಪ್ ಮೆಸೇಜ್ ಅನ್ನು ಓದಲಾಗಿತ್ತು ಎಂದು ಸಮಜಾಯಿಷಿ ನೀಡುವ ಪ್ರಯತ್ನವನ್ನೂ ಮಾಡಿದ್ದರು.
ಆದರೆ, ಈ ವಿಚಾರ ಇಷ್ಟಕ್ಕೇ ನಿಲ್ಲಲಿಲ್ಲ. ಕೇಂದ್ರ ಆರೋಗ್ಯ ಸಚಿವರಾಗಿರುವ ಹರ್ಷವರ್ಧನ್ ಅವರು, ಬಾಬಾ ರಾಮ್ ದೇವ್ ಅವರ ಹೇಳಿಕೆಯನ್ನು ಖಂಡಿಸಿ ಎರಡು ಪುಟಗಳ ತೀಕ್ಷ್ಣ ಪತ್ರವನ್ನು ಬರೆದಿದ್ದರು. “ಅಲೋಪಥಿಕ್ ವೈದ್ಯರ ಕುರಿತು ನೀವು ಆಡಿರುವ ಮಾತುಗಳು ದೇಶದ ಜನರನ್ನು ಘಾಸಿಗೊಳಿಸಿದೆ. ನೀವು ಕೋವಿಡ್ ವಾರಿಯರ್ಸ್ ಗಳನ್ನು ಕೂಡಾ ಅವಮಾನಿಸಿದ್ದೀರ. ನೀವು ನೀಡಿರುವ ಸಮಜಾಯಿಷಿ ಪೂರಕವಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಅಲೋಪಥಿಕ್ ವೈದ್ಯರು ಕೋಟ್ಯಾಂತರ ಜನರ ಜೀವವನ್ನು ಉಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನೀವು ಕೇವಲ ಮೃತರ ಕುರಿತು ಮಾತನಾಡಿರುವುದು ನಿಜಕ್ಕೂ ದುರದೃಷ್ಟಕರ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಗೆಲ್ಲಲು ಸಾಧ್ಯ,” ಎಂದು ಪತ್ರದಲ್ಲಿ ಬರೆಯಲಾಗಿತ್ತು.
(https://mobile.twitter.com/drharshvardhan/status/1396451287328202756)
ಇದಕ್ಕೆ ಉತ್ತರ ನೀಡಿದ್ದ ಬಾಬಾ ರಾಮ್ ದೇವ್ ಅವರು, ತಮ್ಮ ಮೊದಲ ಪ್ಯಾರಾದಲ್ಲಿಯೇ ತಾವು ಅಲೋಪಥಿಕ್ ಚಿಕಿತ್ಸಾ ಪದ್ದತಿಯ ವಿರೋಧಿಯಲ್ಲ ಎಂಬ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದ್ದರು. “ಕಳೆದ ಹಲವು ವರ್ಷಗಳಲ್ಲಿ ಅಲೋಪಥಿಕ್ ಚಿಕಿತ್ಸಾ ವಿಧಾನ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಾಮಾನ್ಯ ಚಿಕಿತ್ಸೆ ಸೇರಿದಂತೆ ಸರ್ಜರಿಗಳಿಂದ ಮಾನವಕುಲಕ್ಕೆ ಸೇವೆ ನೀಡಿದೆ,” ಎಂದ ಅವರು ಮತ್ತೆ ಪತಂಜಲಿ ನೀಡಿದ್ದ ಹೇಳಿಕೆಯನ್ನೇ ಪುನರುಚ್ಚರಿಸಿದ್ದಾರೆ. ನಾನು ಕೇವಲ ವಾಟ್ಸಾಪ್ ಸಂದೇಶ ಓದುತ್ತಿದ್ದೆ. ಅದು ನನ್ನ ಅಭಿಪ್ರಾಯವಲ್ಲ. ಇಷ್ಟಾದ ಮೇಲೂ ಯಾರ ಮನಸ್ಸಿಗಾದರೂ ನೋವುಂಟಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು.
(https://mobile.twitter.com/yogrishiramdev/status/1396501823058415616)
ಈ ಪತ್ರ ಬಹಿರಂಗವಾದ ಬೆನ್ನಲ್ಲೇ ಅಂದರೆ ಸೋಮವಾರ ಬೆಳಿಗ್ಗೆ ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನ್ ಅವರು ಬಾಬಾ ರಾಮ್ ದೇವ್ ಅವರನ್ನು ಹೊಗಳಿದ್ದರು.
(https://mobile.twitter.com/drharshvardhan/status/1396538254904610818)
ಆದರೆ, ಸಂಜೆಯ ವೇಳೆಗೆ ಮತ್ತೆ ಕೆಂಡಕಾರಿದ್ದಾರೆ. IMA ಗೆ 25 ತೀಕ್ಷ್ಣ ಪ್ರಶ್ನೆಗಳನ್ನು ಕೇಳುವ ಮೂಲಕ ನಾನು ಈ ವಿವಾದದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
(https://mobile.twitter.com/yogrishiramdev/status/1396809666529619974)
ಬಾಬಾ ರಾಮ್ ದೇವ್ ಕೇಳಿರುವ ಪ್ರಮುಖ ಪ್ರಶ್ನೆಗಳು ಇಲ್ಲಿವೆ:
ಅಲೋಪಥಿಯಿಂದ ರಕ್ತದೊತ್ತಡ ಮತ್ತು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವೇ?
ಥೈರಾಯ್ಡ್, ಆರ್ಥ್ರೈಟಿಸ್, ಕೊಲಿಟಿಸ್ ಮತ್ತು ಆಸ್ತಮಾಕ್ಕೆ ಖಾಯಂ ಚಿಕಿತ್ಸೆಯನ್ನು ಫಾರ್ಮಾ ಉದ್ಯಮ ನೀಡಬಲ್ಲದೇ?
ಲಿವರ್ ಸಿರೋಸಿಸ್ ಮತ್ತು ಫ್ಯಾಟೀ ಲಿವರ್ ಸಮಸ್ಯೆಗೆ ಅಲೋಪಥಿ ಪರಿಹಾರ ಕಂಡುಕೊಳ್ಳಬಲ್ಲದೇ?
ಕೊಲೆಸ್ಟ್ರಾಲ್ ಗೆ ಅಲೋಪಥಿಯಲ್ಲಿ ಏನು ಚಿಕಿತ್ಸೆ ಇದೆ?
ಮೈಗ್ರೇನ್ ಗೆ ಇರುವ ಚಿಕಿತ್ಸಾ ವಿಧಾನ ಏನು? ಬ್ಲಾಟಿಂಗ್ ಅಮ್ನೀಷಿಯಾ, ಮಲಬದ್ದತೆಗೆ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಚಿಕಿತ್ಸೆ ನೀಡಬಲ್ಲರೇ?
ಅಲೋಪಥಿ ಸರ್ವಗುಣ ಸಂಪನ್ನವಾಗಿದ್ದರೆ ವೈದ್ಯರು ಏಕೆ ರೋಗಗಳಿಗೆ ತುತ್ತಾಗುತ್ತಿದ್ದಾರೆ?
ಹೀಗೆ ಸುಮಾರು ಇಪ್ಪತ್ತೈದು ಪ್ರಶ್ನೆಗಳನ್ನು ಬಾಬಾ ರಾಮ್ ದೇವ್ IMA ಮುಂದಿಟ್ಟಿದ್ದಾರೆ.
ಅಲೋಪಥಿ VS ಆಯುರ್ವೇದ:
ಈ ಎಲ್ಲಾ ಘಟನೆಗಳು ಕರೋನಾ ರೋಗಕ್ಕೆ ಆಯುರ್ವೇದ ಮದ್ದು ಬಿಡುಗಡೆಗೊಳಿಸಲು ಬಾಬಾ ರಾಮ್ ದೇವ್ ಮಾಡುತ್ತಿರುವ ಪಬ್ಲಿಸಿಟಿ ಸ್ಟಂಟ್ ಎಂಬ ಆರೋಪಗಳು ಕೂಡಾ ಇವೆ. ಪ್ರಸ್ತುತ ದೇಶದ ಬಹುಪಾಲು ಜನರು ಅಲೋಪಥಿಕ್ ಚಿಕಿತ್ಸಾ ಪದ್ದತಿಗೆ ಒಗ್ಗಿಕೊಂಡಿದ್ದಾರೆ. ಇವರನ್ನು ಆಯುರ್ವೇದೆಡೆಗೆ ಸೆಳೆಯಲು ಅಲೋಪಥಿಕ್ ವೈದ್ಯರ ವಿರುದ್ದ ಕೆಸರು ಎರಚುವ ಕೆಲಸಕ್ಕೆ ಬಾಬಾ ರಾಮ್ ದೇವ್ ಅವರು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಸಂಶಯವೂ ಹುಟ್ಟಿಕೊಂಡಿದೆ. ಇದೇ ಆರೋಪವನ್ನು IMA ಕುಡಾ ಮಾಡಿತ್ತು.
ಸದ್ಯ ದೇಶವಿರುವ ಪರಿಸ್ಥಿತಿಯಲ್ಲಿ ಕರೋನಾ ಸಂಕಷ್ಟದಿಂದ ಪಾರಾಗಲು ಅಲೋಪಥಿಕ್ ವೈದ್ಯರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಆಯುರ್ವೇದ ಆರೋಗ್ಯಕ್ಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಸಹಾಕಾರಿಯಾಗಬಲ್ಲದೇ ಹೊರತು ಕರೋನಾ ರೋಗಕ್ಕೆ ತಕ್ಷಣದ ಪರಿಹಾರವನ್ನು ಸೂಚಿಸಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ.