ಗಾಜಾ ಸಿಟಿಲ್ಲಿನ ಭೀಕರ ಏರ್ ಸ್ಟ್ರೈಕ್ ಮತ್ತು ರಾಕೆಟ್ ದಾಳಿಯಲ್ಲಿ ನೂರಾರು ಜನರು ಹತರಾದ ಬಳಿಕ ಇದೀಗ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಈ ಮೂಲಕ ಗಾಜಾ ಪ್ರದೇಶದಲ್ಲಿ ಭಾರಿ ಪ್ರಾಣ ಹಾನಿ, ನಷ್ಟಕ್ಕೆ ಕಾರಣವಾದ 11 ದಿನಗಳ ಭೀಕರ ಯುದ್ಧಕ್ಕೆ ತೆರೆಬಿದ್ದಿದೆ.
ಇಸ್ರೇಲ್ ಗುರುವಾರ ಕದನ ವಿರಾಮವನ್ನು ಘೋಷಿಸಿದೆ. ಗಾಜಾದ ಹಮಾಸ್ ಬಂಡುಕೋರರ ಮೇಲೆ ಕಳೆದ 11 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಗೆ ಇಸ್ರೇಲ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದು ಈ ಬೆಳವಣಿಗೆಯನ್ನು ವಿಶ್ವಸಂಸ್ಥೆ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸ್ವಾಗತಿಸಿದ್ದಾರೆ.
ಗಾಜಾ ಪ್ರದೇಶದಲ್ಲಿ ನಡೆಯುತ್ತಿರುವ ಕದನ ವಿರಾಮಕ್ಕೆ ಗುರುವಾರ ರಾತ್ರಿ ಇಸ್ರೇಲ್ ಭದ್ರತಾ ಸಂಪುಟ ಅನುಮೋದನೆ ನೀಡಿದ್ದು ಸುಮಾರು ಎರಡು ಗಂಟೆಗಳ ಕಾಲ ಈ ಸಭೆ ನಡೆದಿದ್ದು ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಛೇರಿ ಒಪ್ಪಿಗೆ ನೀಡಿರುವ ಸುದ್ದಿ ಹೊರಬಂದಿದೆ. ಹಾಗೆಯೇ ಮಂತ್ರಿಗಳ ಸರ್ವಾನುಮತದಿಂದ ಈ ನಿರ್ಧಾರವು ಅಂಗೀಕೃತಗೊಂಡಿದೆ ಎಂದು ಕೂಡಾ ವರದಿಯಾಗಿದೆ.
ಕೆಲ ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡ ಬದುಕಿದ್ದ ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಕದನ ವಿರಾಮ ವಿಚಾರಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡಿರುವ ಹಮಾಸ್ ಉಗ್ರರು, ಇದು ಪ್ಯಾಲೆಸ್ತಿನ್ ಜನರ ಜಯ ಮತ್ತು ಇಸ್ರೇಲ್ ನ ಸೋಲು ಎಂದಿದೆ.
ಮೇ 10ರಿಂದ ಗಾಜಾದಲ್ಲಿ ಇಸ್ರೇಲಿ ವಾಯು ದಾಳಿಯಿಂದ 65 ಮಕ್ಕಳು ಸೇರಿದಂತೆ 232 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. 1,900 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿತ್ತು.
ಗಾಜಾ ಪಟ್ಟಿಯ ಇಸ್ಲಾಮಿಸ್ಟ್ ಮೋಮೆಂಟ್ಸ್ ಪೊಲಿಟಿಕಲ್ ಬ್ಯೂರೋದ ಹಿರಿಯ ಸದಸ್ಯ ಖಲೀಲ್ ಅಲ್-ಹಯ್ಯ ಈ ಯುದ್ಧ ವಿರಾಮದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇಸ್ರೇಲ್ ವಾಯುದಾಳಿಯಿಂದ ಅನೇಕ ಮನೆಗಳು ಧ್ವಂಸವಾಗಿವೆ. ಆ ಮನೆಗಳನ್ನು ನಾವೇ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮುಸ್ಲಿಂ ಹಾಗೂ ಯಹೂದಿಗಳ ಪವಿತ್ರವಾದ ಸ್ಥಳವಾದ ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದದ ಕೇಂದ್ರ ಬಿಂದುವಾಗಿದ್ದು ಇಲ್ಲಿ ಉಂಟಾದ ಸಂಘರ್ಷವನ್ನು ತಡೆಯಲು ಪೊಲೀಸಲು ಅಶ್ರುವಾಯು ಹಾಗೂ ಗ್ರೆನೇಡ್ ಪ್ರಯೋಗಿಸಿದ್ದರು. ಬಳಿಕ ಗಾಜಾ ಪಟ್ಟಿಯಲ್ಲಿ ಭಾರಿ ಸಂಘರ್ಷ ನಡೆದಿತ್ತು.