ಭಕ್ತಿಯನ್ನೂ ಮೀರಿದ ‘ದೇವಸ್ಥಾನಗಳ ಮುಕ್ತಿ’: ತಮಿಳುನಾಡಿನಲ್ಲಿ ಸದ್ಗುರು ವರ್ಸಸ್ ಸಚಿವ

                

ಹಿಂದೂ ದೇವಾಲಯಗಳು ಸರಕಾರದ ಅಧೀನದಲ್ಲೇ ಉಳಿಯಬೇಕೆ ಅಥವಾ ಅದನ್ನು ಸಮುದಾಯಗಳೇ ನಿರ್ವಹಿಸಬೇಕೆ ಎಂಬ ಚರ್ಚೆ ದೀರ್ಘ ಕಾಲದಿಂದ ನಡೆಯುತ್ತಿದ್ದರೂ ಅದು ಬರಿಯ ಹರಟೆ ರೂಪದ ಚರ್ಚೆಯಾಗಿಯೇ ಉಳಿದಿತ್ತು. ದೇವರನ್ನು ನಂಬುವವರಿಗೆ ದೇವರು ಮುಖ್ಯವೇ ಹೊರತು ಯಾರ ಅಧೀನದಲ್ಲಿ “ದೇವರು” ಇದ್ದಾರೆ ಎನ್ನುವುದಲ್ಲ ಎಂಬ ಕಾರಣದಿಂದಲೋ ಏನೋ, ಅದೊಂದು ಬೃಹತ್ ಸಮಸ್ಯೆಯಾಗಿ ಯಾವ ಭಕ್ತರನ್ನೂ ಕಾಡಿದ ಹಾಗಿಲ್ಲ.

ಆದರೆ ಸದ್ಗುರು ಜಗ್ಗಿ ವಾಸುದೇವ್ ಮತ್ತು ತಮಿಳುನಾಡು ಸರಕಾರದ ಹಣಕಾಸು ಸಚಿವರ ನಡುವೆ ಈ ‘ಚರ್ಚೆ’ ಇನ್ನೊಂದು ಹಂತಕ್ಕೆ ತಲುಪಿದೆ. ತಮಿಳುನಾಡಿನ ದೇವಸ್ಥಾನಗಳ ನಿರ್ವಹಣೆ ಸಂಬಂಧದ ವಿಚಾರವನ್ನು ಸದ್ಗುರು ಜಗ್ಗಿ ವಾಸುದೇವ್ ಅವರು ಹೈಕೋರ್ಟಿಗೂ ಒಯ್ದಿರುವುದರಿಂದ ಹಾಗೂ ತಮಿಳುನಾಡಿನಲ್ಲಿ ಈಗ ಡಿಎಂಕೆ ಸರಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ವಿಚಾರ ಇನ್ನಷ್ಟು ಕಾವೇರಲು ಕಾರಣವಾಗಿದೆ.

ಅಲ್ಲದೆ, ಸರಕಾರ ನೇಮಿಸಿದ ಟ್ರಸ್ಟಿಗಳಿಗಿಂತಲೂ ಸಮುದಾಯದಿಂದ ಆಯ್ಕೆಯಾದ ವಂಶಪಾರಂಪರ್ಯದಿಂದ ಬಂದ ಟ್ರಸ್ಟಿಗಳು ದೇವಾಲಯವನ್ನು ಚೆನ್ನಾಗಿ ನಿರ್ವಹಿಸಬಲ್ಲರೇ ಎಂಬ ಪ್ರಶ್ನೆಯನ್ನು ಈ ವಿವಾದ ಜನಸಾಮಾನ್ಯರ ಮುಂದಿರಿಸಿದೆ.

ಸದ್ಗುರು ವರ್ಸಸ್ ತ್ಯಾಗ ರಾಜನ್ ಸಮರ:

ಮೊದಲಿನಿಂದಲೂ ಸದ್ಗುರು ಜಗ್ಗಿ ವಾಸುದೇವ್ ಅವರ ಪ್ರಬಲ ಟೀಕಾಕಾರರಾಗಿರುವ ಪಿ.ಟಿ.ಆರ್. ಪಳನಿವೇಲ್ ತ್ಯಾಗ ರಾಜನ್ ಅವರೀಗ ತಮಿಳುನಾಡಿನ ಡಿಎಂಕೆ ಸರಕಾರದ ನೂತನ ಹಣಕಾಸು ಸಚಿವ. ಧರ್ಮ ಹಾಗೂ ಆಧ‍್ಯಾತ್ಮಿಕತೆಯನ್ನು ಹಣ ಮಾಡುವ ಮಾರ್ಗವಾಗಿ ಬಳಸಿಕೊಳ್ಳುವ “ವಾಣಿಜ್ಯ ನಿರ್ವಾಹಕ” ಎಂದು ಸದ್ಗುರು ಅವರನ್ನು ಟೀಕಿಸುವ ತ್ಯಾಗ ರಾಜನ್, ವಾಸುದೇವನ್ ಅವರ ನೇತೃತ್ವದ ಇಶಾ ಪೌಂಡೇಶನ್ ನೇತೃತದಲ್ಲಿ ನಡೆಯುತ್ತಿರುವ, ತಮಿಳುನಾಡು ಸರಕಾರದಿಂದ ಹಿಂದೂ ‘ದೇವಸ್ಥಾನಗಳ ಮುಕ್ತಿ’ ಆಂದೋಲನದ ವಿರುದ್ಧವೂ ಅದೊಂದು ಹಣ ಮಾಡುವ ತಂತ್ರ ಎಂದು ಕಿಡಿ ಕಾರಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಚಿವ ತ್ಯಾಗ ರಾಜನ್, “ಜಗ್ಗಿ ಅವರೊಬ್ಬ ಪ್ರಚಾರ ಪ್ರಿಯರಾಗಿದ್ದು, ಹಣ ಮಾಡುವ ಇನ್ನೊಂದು ಮಗ್ಗುಲನ್ನು ತನ್ನದಾಗಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ. ಟ್ವೀಟರ್ ನಲ್ಲೂ ಸದ್ಗುರು ವಿರುದ್ಧ ಎಚ್ಚರಿಕೆ ರವಾನಿಸಿರುವ ಸಚಿವರು, ‘ಸದ್ಗುರು ಒಬ್ಬ ಕಾನೂನು ಭಂಜಕ, ಅವರು ಅದರ ಪರಿಣಾಮಗಳನ್ನು ಎದುರಿಸಲಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಸದ್ಗರು ಜಗ್ಗಿ ವಾಸುದೇವ್ ಪರ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಮಾಲಿನಿ ಪಾರ್ಥಸಾರಥಿ, ‘ಸದ್ಗುರು ಮತ್ತು ಇಶಾ ಪೌಂಡೇಶನ್ , ತಮಿಳುನಾಡಿನ ವಿವಿಧ ಚುನಾಯಿತ ಸರಕಾರಗಳ ಜತೆ ಕೆಲಸ ಮಾಡಿದೆ. ನಮ್ಮ ಸಹಕಾರ ಮತ್ತು ಬೆಂಬಲವು ಪ್ರತಿ ಸರಕಾರವು ನಮ್ಮೊಂದಿಗೆ ಇರಿಸಿಕೊಂಡಿರುವ ಸಂಬಂಧದ ಸ್ವರೂಪದ ಮೇಲೆ ಅವಲಂಬಿತವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಹಾಗೆ ನೋಡಿದರೆ, ತ್ಯಾಗ ರಾಜನ್ ಅವರನ್ನು ಮೊದಲಿನಿಂದಲೂ ಗಮನಿಸುತ್ತಿರುವವರಿಗೆ ವಾಸುದೇವ್ ವಿರುದ್ಧದ ಇತ್ತೀಚಿನ ಹೇಳಿಕೆಗಳು ಅಚ್ಚರಿ ಮೂಡಿಸಲು ಸಾಧ್ಯವಿಲ್ಲ. ಡಿಎಂಕೆ ಪಕ್ಷದ ಸದಸ್ಯರಾಗಿರುವ ಅವರು ಕೆಲವು ತಿಂಗಳಿನಿಂದಲೂ ಸದ್ಗುರು ಅವರ ದೇವಾಲಯ ಮುಕ್ತಿ ಆಂದೋಲನವನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದರು. ಫೌಂಡೇಶನ್ ಹಣ ಸಂಪಾದಿಸಲು ಇದೊಂದು ಹೊಸ ವಿಧಾನವನ್ನು ಕಂಡುಕೊಂಡಿದೆ ಎಂದು ಲೇವಡಿ ಮಾಡುತ್ತಲೇ ಇದ್ದರು.

ಇದೀಗ ತ್ಯಾಗ ರಾಜನ್ ಅವರ ಪಕ್ಷ ಚುನಾವಣೆಯಲ್ಲಿ ಗೆದ್ದು ತಮಿಳುನಾಡಿನ ಗದ್ದುಗೆ ಏರಿದೆ. ಅವರಿಗೆ ಹಣಕಾಸು ಸಚಿವ ಸ್ಥಾನದಂಥ ಪ್ರಮುಖ ಖಾತೆಯೂ ಸಿಕ್ಕಿದೆ. ಈಗ ಅವರ ಹೇಳಿಕೆಗಳಿಗೂ ತೂಕ ಬಂದಿದೆ. ಇದೀಗ ಸಚಿವರು ಹಾಗೂ ಇಶಾ ಫೌಂಡೇಶನ್ ನಡುವಿನ ಮಾತಿನ ಸಮರ ಅಷ್ಟೇ ಆಗಿ ಉಳಿದಿಲ್ಲ. ತಮಿಳುನಾಡಿನ ಹಿಂದೂ ಆಸ್ತಿಕರ ಜೀವನದಲ್ಲಿ ದೇವಸ್ಥಾನಗಳು ದೊಡ್ಡ ಪಾತ್ರ ನಿರ್ವಹಿಸುವುದರಿಂದ ಈ ಚರ್ಚೆ ಈಗ ತಮಿಳುನಾಡಿನ ಸಮಾಜದಲ್ಲಿ ಬಹಳ ಮಹತ್ವವನ್ನು ಪಡೆದಿದೆ.

ಏನಿದು ‘ದೇವಸ್ಥಾನ ಮುಕ್ತಿ’ ಆಂದೋಲನ..?

ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು “ದೇವಸ್ಥಾನಗಳ ಮುಕ್ತಿ” ಆಂದೋಲನವನ್ನು ತಮಿಳುನಾಡಿನಲ್ಲಿ ಆರಂಭಿಸಿದ್ದರು. ತಮಿಳುನಾಡು ಸರಕಾರದ ಅಧೀನದಲ್ಲಿರುವ ಹಿಂದೂ ದೇವಾಲಯಗಳು ನಿರ್ವಹಣೆ ಇಲ್ಲದೆ ನಲುಗುತ್ತಿದ್ದು, ಅದನ್ನು ಮರಳಿ ಸಮುದಾಯದ ನಿರ್ವಹಣೆಗೆ ನೀಡಬೇಕೆನ್ನುವುದು ಅವರ ಆಂದೋಲನದ ಪ್ರಮುಖ ಉದ್ದೇಶ. ಇದೇ ಹಿನ್ನೆಲೆಯಲ್ಲಿ ಅವರು ದೇಶದ ಜನಪ್ರಿಯ ಟಿವಿ ಚಾನೆಲ್ ಗಳಿಗೆ ಸಂದರ್ಶನ ನೀಡುವ ಮೂಲಕ  ಹಾಗೂ ದೇಶದ ಜನಪ್ರಿಯ ಪತ್ರಿಕೆಗಳಿಗೆ ಒಪೆಡ್ ಗಳನ್ನು ಬರೆದು ತಮ್ಮ ಆಂದೋಲನಕ್ಕೆ ದೊಡ್ಡ ಮಟ್ಟದ ಮಾಧ್ಯಮದ ಕವರೇಜ್ ಪಡೆದುಕೊಂಡಿದ್ದರು.

ಸಂವಿಧಾನವು ಪ್ರತಿಯೊಬ್ಬನಿಗೂ ತಮ್ಮ ಪೂಜಾ ಸ್ಥಳದ ಆಡಳಿತದ ಹಕ್ಕು ನೀಡಿದೆ. ಆರ್ಥಿಕ, ನೈತಿಕ, ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪೂಜಾಸ‍್ಥಳವನ್ನು ನಿರ್ಬಂಧಿಸುವ, ನಿಯಂತ್ರಿಸುವ ಅಧಿಕಾರ ಸರಕಾರಕ್ಕಿದ್ದರೂ, ಸರಕಾರವೇ ಪೂಜಾಸ್ಥಳಗಳ ಆಡಳಿತ ನಡೆಸಬಹುದು ಎಂದು ಎಲ್ಲೂ ಹೇಳಿಲ್ಲ. ಆದರೆ ತಮಿಳುನಾಡಿನಲ್ಲಿ ದೇವಸ್ಥಾನಗಳ ಆಡಳಿತ ನಡೆಸುವ ಆಧಾರದಲ್ಲೇ ಹಿಂದೂ ರಿಲಿಜಿಯಸ್ ಅಂಡ್  ಚಾರಿಟೇಬಲ್ ಆಕ್ಟ್ (ಎಚ್.ಆರ್. ಅಂಡ್ ಸಿ.ಎ.) ರೂಪಿಸಲಾಗಿದ್ದು, ಸಂವಿಧಾನ ವಿರೋಧಿಯಾಗಿದ್ದರೂ ಈ ಕಾನೂನು ಹಲವು ದಶಕಗಳಿಂದ ನಡೆದುಬಂದಿದೆ. ಅಲ್ಲದೆ ಸರಕಾರದ ಆಡಳಿತ ಇದ್ದರೂ ಹಿಂದೂ ದೇವಸ್ಥಾನಗಳ ಸ್ಥಿತಿ ಅಧೋಗತಿಯಲ್ಲಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್, ಇಸ್ಲಾಮಿಕ್  ಆಡಳಿತದಲ್ಲಿ ದೇವಸ್ಥಾನಗಳಿಗೆ ಭಾರಿ ಹಾನಿಯಾಗಿದೆ. ಸ್ವಾತಂತ್ರ್ಯ ಸಿಕ್ಕ ನಂತರವೂ ನಮ್ಮಿಂದಲೇ ಆಯ್ಕೆಯಾದ ಸರಕಾರಗಳು ದೇವಸ್ಥಾನಗಳ ಉಸಿರುಕಟ್ಟಿಸಿ, ಇನ್ನಷ್ಟು ಹಾನಿ ಮಾಡುತ್ತಿವೆ ಎನ್ನುವುದು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ವಾದ. ಇದನ್ನೇ ಅವರು ಮದ್ರಾಸ್ ಹೈಕೋರ್ಟ್ ನಲ್ಲೂ ಮಂಡಿಸುತ್ತಿದ್ದಾರೆ.

ಸ್ವತಃ ದುಃಸ್ಥಿತಿ ಒಪ್ಪಿಕೊಂಡಿದ್ದ ತಮಿಳುನಾಡು ಸರಕಾರ:

ಕಳೆದ ಜುಲೈನಲ್ಲಿ ಮದ್ರಾಸ್ ಹೈಕೋರ್ಟ್ ಮುಂದೆ ತಮಿಳುನಾಡು ಸರಕಾರ ಮಂಡಿಸಿದ್ದ ಅಫಿಡವಿಟ್ ಒಂದು ಸದ್ಗುರು ಅವರ ಆಂದೋಲನಕ್ಕೆ ಸ್ಫೂರ್ತಿಯಾಗಿತ್ತು. ಆ ಅಫಿಡವಿಟ್ ನಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು, ತನ್ನ ಅಧೀನದಲ್ಲಿರುವ 11,999 ದೇವಸ್ಥಾನಗಳಲ್ಲಿ ಕನಿಷ್ಠ ದಿನಕ್ಕೆ ಒಂದು ಬಾರಿಯೂ ಯಾವ ಪೂಜೆ, ಪುನಸ್ಕಾರವೂ ನಡೆಯುತ್ತಿಲ್ಲ ಎಂದು ಹೇಳಿತ್ತು. ಅಲ್ಲದೆ, ತನ್ನ ನೇರ ಅಧೀನದಲ್ಲಿ 38,655 ದೇವಸ್ಥಾನಗಳಿದ್ದು, ಇವುಗಳಲ್ಲಿ 34,102 ದೇವಸ್ಥಾನಗಳು, ಅಂದರೆ 88.22 ಶೇಕಡಾ ದೇವಸ್ಥಾನಗಳು ವಾರ್ಷಿಕ ತಲಾ10 ಸಾವಿರ ರೂ. ಆದಾಯವನ್ನೂ ಗಳಿಸುತ್ತಿಲ್ಲ. ಕೇವಲ 1 ಸಾವಿರ ದೇವಸ್ಥಾನಗಳು ಮಾತ್ರ ಹೆಚ್ಚುವರಿ ಆದಾಯ ಹೊಂದಿದ್ದು, ತಮ್ಮದೇ ಖರ್ಚು ವೆಚ್ಚಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿತ್ತು.

ಒಂದು ವೇಳೆ ಇದೇ ರೀತಿ ಇನ್ನೂ 100 ವರ್ಷ ತಮಿಳುನಾಡು ರಾಜ್ಯ ಸರಕಾರ ದೇವಸ್ಥಾನಗಳನ್ನು ನಿರ್ವಹಿಸಿದರೆ, ತಮಿಳುನಾಡಿನ ಬಹುತೇಕ ಹಿಂದೂ ದೇವಾಲಯಗಳು ಸರ್ವನಾಶವಾಗುತ್ತವೆ. ಹಾಗಾಗಿ ದೇವಸ್ಥಾನದ ಆಡಳಿತದ ಹೊಣೆಯನ್ನು ಸಮುದಾಯಕ್ಕೆ ಹಾಗೂ ಭಕ್ತರಿಗೆ ಬಿಡಬೇಕೆನ್ನುವುದು ಸದ್ಗುರು ಜಗ್ಗಿ ವಾಸುದೇವ್ ಅವರ ವಾದ ಮತ್ತು ಬೇಡಿಕೆ.

ಸಂಘ ಪರಿವಾರ ದಶಕಗಳಿಂದ ಇದೇ ಬೇಡಿಕೆ ಮಂಡಿಸುತ್ತಿದ್ದು, ಭಾರತೀಯ ಜನತಾ ಪಕ್ಷ ಕೂಡ ತನ್ನ ಚುನಾವಣಾ ಪ್ರಣಾಳಿಕೆಗಳಲ್ಲಿ ಪ್ರಕಟಿಸುತ್ತ ಬಂದಿದೆ. ದೇವಸ್ಥಾನಗಳ ಆಸ್ತಿಪಾಸ್ತಿಯನ್ನು ಅಪರಾಧದ ಹಿನ್ನೆಲೆ ಇರುವವರು ಕಬಳಿಸುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿದೆ ಎನ್ನುವುದು ಅದರ ನಾಯಕರ ಆರೋಪ. ಕೆಲವರಂತೂ ಈಗಾಗಲೇ ಹಲವು ದೇವಸ್ಥಾನಗಳು ಮಾಯವಾಗಿದ್ದು, ಆ ಜಾಗದಲ್ಲಿ ವಾಣಿಜ್ಯ ಕಟ್ಟಡಗಳು ಎದ್ದು ನಿಂತಿವೆ ಎಂದು ಆರೋಪಿಸುತ್ತಿದ್ದಾರೆ.

ದೇವಸ್ಥಾನದ ದಾಖಲೆಗಳ ಡಿಜಿಟಲೀಕರಣಕ್ಕೆ ಮುಂದಾದ ಸರಕಾರ:

ಪರ, ವಿರೋಧ ಚರ್ಚೆಗಳ ನಡುವೆಯೇ ತಮಿಳುನಾಡು ರಾಜ್ಯ ಸರಕಾರವು ತಮ್ಮ ಅಧೀನದಲ್ಲಿರುವ ದೇವಸ್ಥಾನಗಳ ಆಸ್ತಿಪಾಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಹೊರಟಿದೆ. ಜತೆಗೆ ದೇವಸ್ಥಾನಗಳ ಆಸ್ತಿ, ಆಡಳಿತ, ನಿರ್ವಹಣೆಯ ಮಾಹಿತಿಯನ್ನು ಸಾರ್ವಜನಿಕವಾಗಿ ತೆರೆದಿಡುವುದಕ್ಕೂ ಮುಂದಾಗಿದೆ.

ಸರಕಾರದ ಈ ಕ್ರಮವನ್ನು ಸ್ವಾಗತಿಸಿರುವ ಇಶಾ ಫೌಂಡೇಶನ್, ‘ಇದೊಂದು ಐತಿಹಾಸಿಕ ಹೆಜ್ಜೆ’ ಎಂದು ಸ್ವಾಗತಿಸಿದೆ. ‘ಸರಿಯಾದ ದಿಕ್ಕಿನಲ್ಲಿ ಇಟ್ಟಿರುವ ಐತಿಹಾಸಿಕ ಹೆಜ್ಜೆ ಇದಾಗಿದ್ದು, ಪಾರದರ್ಶಕತೆಯು ಉತ್ತಮ ಆಡಳಿತದ ಮೊದಲ ಹೆಜ್ಜೆ’ ಎಂದು ಪ್ರಶಂಸಿಸಿದ್ದಾರೆ.

ಈ ಮೂಲಕ ತಮಿಳುನಾಡಿನಲ್ಲಿ ದೇವಸ್ಥಾನಗಳ ಹಿನ್ನೆಲೆಯಲ್ಲಿ ಡಿಎಂಕೆ ನೇತೃತ್ವದ ರಾಜ್ಯ ಸರಕಾರ ಹಾಗೂ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ ನಡುವಿನ ಹಗ್ಗ ಜಗ್ಗಾಟ ಇನ್ನೊಂದು ತಿರುವನ್ನು ಪಡೆದಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...