ಕೊರೋನ ಸಾಂಕ್ರಮಿಕವು ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಇದು ಅನಿವಾರ್ಯ ಕ್ರಮವೂ ಕೂಡ ಆಗಿದೆ. ಆದರೆ ಈ ಲಾಕ್ ಡೌನ್ ಘೋಷಣೆಯಿಂದ ತೀವ್ರ ಹೊಡೆತ ಬೀಳುವುದು ಬಡ ಮತ್ತು ಮಧ್ಯಮ ವರ್ಗದವರಿಗೆ. ಅದರಲ್ಲೂ ಅವತ್ತು ದುಡಿದು ಅವತ್ತೇ ತಿನ್ನುವಂತಹ ಕಡು ಬಡವರು ಈಗ ದುಡಿಯಲು ಆಸ್ಪದವೇ ಇಲ್ಲದಾಗಿದೆ. ಈ ದುಡಿಯುವ ವರ್ಗದವರ ನೆರವಿಗಾಗಿ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ದೇಶದ 80 ಲಕ್ಷ ಬಡ ವರ್ಗದ ಕುಟುಂಬಗಳಿಗೆ ಎರಡು ತಿಂಗಳು ಉಚಿತ ರೇಷನ್ ನೀಡುವುದಾಗಿ ತಿಳಿಸಿದೆ. ಒಟ್ಟು 26 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ದೇಶದ ಪ್ರತೀಯೊಬ್ಬ ಬಡ ಕುಟುಂಬದ ವ್ಯಕ್ತಿಗೂ ತಿಂಗಳಿಗೆ 5 ಕೆಜಿ ಧಾನ್ಯದಂತೆ ಮೇ ಮತ್ತು ಜೂನ್ ತಿಂಗಳು ಉಚಿತ ಆಹಾರ ಧಾನ್ಯ ದೊರಕಲಿದೆ. ಈ ನೆರವನ್ನು ಕೇಂದ್ರವು ಕಳೆದ ಏಪ್ರಿಲ್ ತಿಂಗಳ 21 ರಂದೇ ಘೋಷಿಸಿದೆ. ಲಾಕ್ ಡೌನ್ ಘೊಷಿಸುವ ವಿವೇಚನಾಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೇ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಏಪ್ರಿಲ್ 28 ರಿಂದ ಲೇ ಲಾಕ್ ಡೌನ್ ಘೋಷಿಸಿದೆ. ಅದರಲ್ಲೂ ಮೇ 10 ರಿಂದ 24 ನೇ ತಾರೀಖಿನವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು ರಾಜ್ಯದ ಬಡತನದ ರೇಖೆಗಿಂತ ಕೆಳಗಿರುವ ಬಡ ವರ್ಗದವರಿಗೆ ಯಾವುದೇ ರೀತಿಯ ನೆರವನ್ನು ಘೋಷಿಸದೆ ಬೇಜವವಾಬ್ದಾರಿತನ ಮೆರೆದಿದೆ. ದೇಶದ ವಿವಿಧ ರಾಜ್ಯ ಸರ್ಕಾರಗಳು ಕೇಂದ್ರದ ಉಚಿತ ರೇಷನ್ ಹೊರತುಪಡಿಸಿಯೂ ವಿವಿಧ ರೀತಿಯ ನೆರವನ್ನು ಪ್ರಕಟಿಸಿವೆಯಾದರೂ ನಮ್ಮ ಯಡಿಯೂರಪ್ಪ ಸರ್ಕಾರಕ್ಕೆ ಮಾತ್ರ ಆ ಬಗ್ಗೆ ಯಾವುದೇ ಯೋಚನೆಯೂ ಇಲ್ಲ.
ನೆರೆಯ ತೆಲಂಗಾಣ ರಾಜ್ಯದಲ್ಲಿ ಮುಖ್ಯ ಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ರಾಜ್ಯದಲ್ಲಿ 87.59 ಲಕ್ಷ ಬಿಪಿಎಲ್ ಕುಟುಂಬಗಳಿಗೆ ತಲಾ ರೂ 1500 ಮತ್ತು ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 12 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಿಸಿದ್ದಾರೆ. ಒಂದು ತಿಂಗಳಿಗೆ ನೀಡಲಾಗಿರುವ ಈ ಯೋಜನೆಗೆ ಸರ್ಕಾರವು ಈಗಾಗಲೇ 2417 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ. ಇದಕ್ಕಿಂತ ಹೆಚ್ಚಿನ ಕೊಡುಗೆಯನ್ನು ಘೋಷಿಸಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ರಾಜ್ಯ ಸರ್ಕಾರವು ಸುಮಾರು 72 ಲಕ್ಷ ಸಂಖ್ಯೆಯ ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ಮುಂದಿನ ಎರಡು ತಿಂಗಳವರೆಗೆ ಉಚಿತ ಪಡಿತರ ನೀಡಲು ನಿರ್ಧರಿಸಿದೆ. ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು . ಲಾಕ್ಡೌನ್ ಎರಡು ತಿಂಗಳವರೆಗೆ ಮುಂದುವರಿಯುತ್ತದೆ ಎಂದು ಇದರ ಅರ್ಥವಲ್ಲ. ಆರ್ಥಿಕ ಸಮಸ್ಯೆಗಳು ಬಂದಾಗ ಬಡವರಿಗೆ ಸಹಾಯ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇದಲ್ಲದೆ ದೆಹಲಿಯ ಎಲ್ಲಾ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಡ್ರೈವರ್ಗಳಿಗೆ ತಲಾ ₹ 5,000 ಆರ್ಥಿಕ ಸಹಾಯವನ್ನು ಅವರು ಘೋಷಿಸಿದರು. ವೈರಸ್ ಹರಡುವುದನ್ನು ತಡೆಯಲು ಲಾಕ್ಡೌನ್ ಹೇರುವುದು ಅಗತ್ಯವಾಗಿತ್ತು. ಆದರೆ ಒಂದು ಲಾಕ್ಡೌನ್ ದೀನದಲಿತ ವರ್ಗದವರಿಗೆ, ವಿಶೇಷವಾಗಿ ದೈನಂದಿನ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಆರ್ಥಿಕ ತೊಂದರೆಗಳನ್ನು ಉಂಟುಮಾಡುತ್ತದೆ” ಎಂದು ಕ್ರಮಗಳ ಬಗ್ಗೆ ಕೇಜ್ರಿವಾಲ್ ಹೇಳಿದರು. ದೆಹಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ನೋಂದಾಯಿಸಲಾದ ನಿರ್ಮಾಣ ಕಾರ್ಮಿಕರಿಗೆ ತಲಾ ₹ 5,000 ಎಕ್ಸ್ ಗ್ರೇಟಿಯಾ ಪಾವತಿಗಳನ್ನು ವಿತರಿಸಿದೆ ಎಂದು ದೆಹಲಿ ಸರ್ಕಾರ ಕಳೆದ ವಾರ ತಿಳಿಸಿತ್ತು. ಒಟ್ಟು 2,10,684 ನಿರ್ಮಾಣ ಕಾರ್ಮಿಕರು ಇದ್ದು ಪ್ರಸ್ತುತ, ದೆಹಲಿ ಸರ್ಕಾರವು 1,05,750 ನಿರ್ಮಾಣ ಕಾರ್ಮಿಕರಿಗೆ. 52.88 ಕೋಟಿಯನ್ನು ವಿತರಿಸಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ನಿರ್ಮಾಣ ಕಾರ್ಮಿಕರಿಗೆ ಈ ಮಾಜಿ ಗ್ರೇಟಿಯಾ ಪರಿಹಾರವನ್ನು ನೀಡಲಾಗುವುದು” ಎಂದು ಅದು ಹೇಳಿದೆ.
ಕೇರಳ ರಾಜ್ಯ ಸರ್ಕಾರವು ಸುಮಾರು 89,38,010 ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಆಹಾರ ಕಿಟ್ಗಳನ್ನು ವಿತರಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಈ ಕಿಟ್ ನಲ್ಲಿ 1,000 ರೂಪಾಯಿ ಮೌಲ್ಯದ 18 ಬಗೆಯ ಕಿರಾಣಿ ಇವೆ. ಈ ಕಿಟ್ಗಳ ವಿತರಣೆಗಾಗಿ ರಾಜ್ಯವು ಸುಮಾರು 4,198 ಕೋಟಿ ರೂ.ಗಳನ್ನು ಖರ್ಚು ಮಾಡಿದೆ, ಇದರಲ್ಲಿ ಮುಖ್ಯಮಂತ್ರಿಯವರ ಪರಿಹಾರ ಪರಿಹಾರ ನಿಧಿಯಿಂದ ಹಣವೂ ಸೇರಿದೆ. ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಎಲ್ಡಿಎಫ್ ಸರ್ಕಾರವು ವಿತರಿಸಿದ ಕಿಟ್ಗಳು ಅಲ್ಲದೆ ಆದ್ಯತೆಯಿಲ್ಲದ ಪಡಿತರ ಚೀಟಿ ಹೊಂದಿರುವವರಿಗೆ ಕೂಡ ವಿಶೇಷ ಅಕ್ಕಿ ವಿತರಿಸಲು ಸರ್ಕಾರ ವ್ಯವಸ್ಥೆ ಮಾಡಿತ್ತು.
ಇನ್ನು ನೆರೆಯ ತಮಿಳುನಾಡು ರಾಜ್ಯ ಸರ್ಕಾರವೂ ಕೂಡ ಬಿಪಿಎಲ್ ಕಾರ್ಡುದಾರರಿಗೆ ಲಾಕ್ ಡೌನ್ ಸಮಯದಲ್ಲಿ ಉಚಿತ ಆಹಾರದ ಕಿಟ್ ಗಳನ್ನು ನೀಡಲು ಸಿದ್ದತೆ ನಡೆಸಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಮಾತ್ರ ಕೇಂದ್ರ ಸರ್ಕಾರವು ನೀಡುವ ಗರೀಬ್ ಕಲ್ಯಾಣ್ ಯೋಜನೆಯ ಕಿಟ್ ಗಳನ್ನು ಮಾತ್ರ ನೀಡುತ್ತಿರುವುದು ರಾಜ್ಯದ ಬಡ ಜನತೆಗೆ ಮಾಡುತ್ತಿರುವ ಅನ್ಯಾಯವಲ್ಲದೆ ಬೇರೇನೂ ಅಲ್ಲ.