ಚಾಮರಾಜನಗರ ಆಕ್ಷಿಜನ್ ದುರಂತ ಹಿನ್ನಲೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಇದು ಪ್ರಚಾರ ಪ್ರಿಯ ಸರ್ಕಾರ. ಆಕ್ಸಿಜನ್ ವಿಚಾರದಲ್ಲಿ ಯಾರೂ ಮೇಲ್ವಿಚಾರಣೆ ಮಾಡುತ್ತಿಲ್ಲ. ಸರ್ಕಾರದಿಂದಾಗಲಿ ಮುಖ್ಯಮಂತ್ರಿಗಳಿಂದಾಗಲಿ ಈ ಕೋವಿಡ್ ಸಂಕಷ್ಟ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ ಎಂದು ದೂರಿದ್ದಾರೆ.
ಮಳವಳ್ಳಿಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಸತ್ತಿರುವುದಕ್ಕೆ ಯಾರು ಹೊಣೆ..? ಈ ಸಾವಿಗೆ ಸರ್ಕಾರವೇ ಹೊಣೆ ಹೊರಬೇಕು. ಸರ್ಕಾರ ಆಕ್ಸಿಜನ್ ಕೊರತೆಯಿಂದ ಸತ್ತಿಲ್ಲ ಎನ್ನುತ್ತಿದೆ ಎಂದರೆ ಮಾಧ್ಯಮಗಳು ಸುಳ್ಳು ವರದಿ ಪ್ರಸಾರ ಮಾಡಿವೆಯೇ? ನೀವು ತಪ್ಪು ಮಾಡಿದ್ದೀರಾ? ಅಥವಾ ಸರ್ಕಾರ ತಪ್ಪು ಮಾಡುತ್ತಿದೆಯಾ..? ಇದೇ ಕಾರಣಕ್ಕೆ ಜನರಿಗೆ ವಾಸ್ತವಾಂಶ ತಿಳಿಸಿ ಎಂದು ಈ ವೇಳೆ ಮಾಧ್ಯಮ ಮಿತ್ರರಿಗೆ ಮನವಿ ಮಾಡಿಕೊಂಡರು.
ಜನ ಆಕ್ಸಿಜನ್ ಮಟ್ಟದ ಕುಸಿತದಿಂದ ಆತಂಕಕ್ಕೆ ಸಿಲುಕಿದ್ದಾರೆ. ನಮಗೆ ಮುಖ್ಯಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳ ಬದ್ಧತೆ ಬಗ್ಗೆ ಪ್ರಶ್ನೆ ಇಲ್ಲ. ಆದರೆ ಜನರಿಗೆ ವಾಸ್ತವಾಂಶವನ್ನು ನೀವಾದರೂ ತಿಳಿಸಿ. ತಜ್ಞರು ಎಂದು ಇಟ್ಟುಕೊಂಡಿರುವವರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ.ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಸಂದಿಗ್ಧ ಸಮಯದಲ್ಲಿ ನಾನು ಉದ್ಯಮಿಗಳಿಗೆ, ಸಂಘ-ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಜನರ ಜೀವ ಉಳಿಸಲು ನಿಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡಿ ಎಂದು ಡಿಕೆಶಿ ಮನವಿ ಮಾಡಿಕೊಂಡಿದ್ದಾರೆ.
ಹೊರ ರಾಜ್ಯಗಳಲ್ಲಿ ಅಭಾವ ನೀಗಿಸಲು ಹೊರ ದೇಶಗಳಿಂದ ಬೇಕಾದ ವೈದ್ಯಕೀಯ ಸಾಮಾಗ್ರಿಗಳನ್ನು ತರಿಸುತ್ತಿದ್ದಾರೆ. ಹುಟ್ಟಿದ ಮಗುವಿಗೆ ಮೊದಲು ಬೇಕಾಗಿರುವುದು ಉಸಿರಾಡುವ ಗಾಳಿ. ಜನ ಆ ಆಕ್ಸಿಜನ್ ಕೇಳಿದರೆ ಅದನ್ನು ಕೊಡಲು ಈ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಇದನ್ನೆಲ್ಲ ನೋಡುವಂತಹ ಶಿಕ್ಷೆ ಭಗವಂತ ನಮಗೆ ಯಾಕೆ ಕೊಡುತ್ತಿದ್ದಾನೆ ಅಂತಾ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಾರಿಗೆ ಆಗಲಿ ಪೂರ್ವ ಸಿದ್ಧತೆ, ಹೊಣೆಗಾರಿಕೆ ಇರಬೇಕು. ಇದ್ಯಾವುದು ಈ ಸರ್ಕಾರದಲ್ಲಿಲ್ಲ. ಆಕ್ಸಿಜನ್ ಕೊರತೆಯಿಂದ ಸತ್ತಿರುವ 24 ಜನರ ಕುಟುಂಬದ ಸದಸ್ಯರಿಗೆ ಯಾವ ರೀತಿ ಶಕ್ತಿ ತುಂಬಬೇಕೋ ತೋಚುತ್ತಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಜಿಲ್ಲಾ ಸಮಿತಿಗೆ ಮನವಿ ಮಾಡಿಕೊಂಡಿದ್ದಾರೆ.