ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆ ಕಾರ್ಯ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಪರ ಚುನಾವನಾ ಪ್ರಚಾರ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ, ಚುನಾವಣಾ ರಣತಂತ್ರ ಪರಿಣಿತನೆಂದೇ ಹೆಸರು ಪಡೆದ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಜ್ಞ ಹುದ್ದೆಗೆ ತ್ಯಜಿಸುವುದಾಗಿ ಘೋಷಿಸಿದ್ದಾರೆ.
ನಾನು ಎಂಟು-ಒಂಬತ್ತು ವರ್ಷಗಳಿಂದ ಚುನಾವಣಾ ತಂತ್ರಜ್ಞನ ಕೆಲಸ ಮಾಡುತ್ತಿದ್ದೇನೆ, ನಾನು ಸಾಕಷ್ಟು ನೋಡಿದ್ದೇನೆ, ನಾನು ಈ ಹುದ್ದೆಯಲ್ಲಿ ಮತ್ತೆ ಮುಂದುವರೆಯಲು ಬಯಸುವುದಿಲ್ಲ. ಈಗಾಗಲೇ ಈ ಸ್ಥಾನದಲ್ಲಿದ್ದು, ಸಾಕಷ್ಟು ಮಾಡಿದ್ದೇನೆ. ಈಗ ಸ್ವಲ್ಪ ವಿರಾಮ ತೆಗೆದುಕೊಂಡು ಮುಂದೆ ಜೀವನದಲ್ಲಿ ಇನ್ನೇನಾದರೂ ಮಾಡಲು ಬಯಸುತ್ತೇನೆ. ಇದೀಗ ಈ ಜವಾಬ್ದಾರಿಯಿಂದ ತ್ಯಜಿಸಲು ಬಯಸುತ್ತೇನೆ” ಎಂದು ಪ್ರಶಾಂತ್ ಕಿಶೋರ್ ಎನ್ಡಿಟಿವಿ ಯ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಾನು ವಿಫಲ ರಾಜಕಾರಣಿ ಎಂದ ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಸೇರುವುದರ ಅಥವಾ ರಾಜಕೀಯದಿಂದ ದೂರ ಉಳಿವ ಬಗ್ಗೆ ಮಾತನಾಡಿಲ್ಲ. ತಮ್ಮ ಸಂಸ್ಥೆಯಾದ ಐಪಾಕ್ ಸಮರ್ಥರ ಕೈನಲ್ಲಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಹೆಚ್ಚು ಸದ್ದು ಮಾಡಿದ ಪ್ರಶಾಂತ್ ಕಿಶೋರ್ ಟ್ವೀಟ್
ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಮಲವನ್ನು ಅರಳಿಸಲು ಪ್ರಧಾನಿ ಮೋದಿ, ಅಮಿತ್ ಶಾ ಸೇರಿಂದ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕರು ಕೋವಿಡ್ ಎರಡನೇ ಅಲೆಯನ್ನೂ ಲೆಕ್ಕಿಸದೆ. ಪಶ್ಚಿಮ ಬಂಗಾಳದಲ್ಲಿ ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರು. ಮಮತಾ ಬ್ಯಾನರ್ಜಿ ಮತ್ತು ಮೋದಿ ನಡುವೆ ಸಾಕಷ್ಟು ವಾಕ್ ಸಮರಗಳು ನಡೆದಿದ್ದವು, ಈ ಮಧ್ಯೆ ಭಾರತದ ರಾಜಕೀಯ ಚಾಣಾಕ್ಷನೆಂದೇ ಹೆಸರು ಪಡೆದಿರುವ ಪ್ರಶಾಂತ್ ಕಿಶೋರ್ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿ ಮಾಡಿರುವ ಟ್ವೀಟ್ ಹೆಚ್ಚು ಸದ್ದು ಮಾಡುತ್ತು.
ದೇಶದ ಪ್ರಜಾಪ್ರಭುತ್ವದ ಪ್ರಮುಖ ಯುದ್ಧಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯೂ ಒಂದು, ಎನ್ನುವ ಮೂಲಕ ಟಿಎಂಸಿಯ ಘೋಷವಾಕ್ಯವನ್ನು ಹಂಚಿಕೊಂಡು ತೃಣಮೂಲ ಕಾಂಗ್ರೆಸ್ ಗೆಲುವಿಗೆ ಪ್ರಶಾಂತ್ ಬೆನ್ನೆಲುಬಾಗಿ ನಿಂತಿದ್ದರು.
“ಬಂಗಾಳ ಮಾತ್ರ ತನ್ನ ಸ್ವಂತ ಮಗಳನ್ನು ಬಯಸುತ್ತದೆ”. ಈ ಚುನಾವಣೆ ಭಾರತದ ಪ್ರಜಾಪ್ರಭುತ್ವದ ಪ್ರಮುಖ ಸಮರಗಳಲ್ಲಿ ಒಂದಾಗಿದೆ. ಬಂಗಾಳದ ಜನತೆ ತಮ್ಮ ಸಂದೇಶ ನೀಡಲು ಸಜ್ಜಾಗಿದ್ದಾರೆ. ಜನತೆ ಚುನಾವಣೆಯಲ್ಲಿ ಸರಿಯಾದ ಉತ್ತರ ನೀಡಲು ಧೃಢ ನಿರ್ಧಾರ ಮಾಡಿಕೊಂಡಿದ್ದಾರೆ. ಮೇ 2 ರಂದು ನನ್ನ ಈ ಕೊನೆಯ ಟ್ವೀಟನ್ನು ಗಮನಿಸಿ ಎಂಬ ಸಂದೇಶವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದರು.
2020ರ ಡಿಸೆಂಬರ್ 21 ರಂದು ಪ್ರಶಾಂತ್ ಕಿಶೋರ್ ಬಿಜೆಪಿಗೆ ಮತ್ತೊಂದು ಸವಾಲು ಹಾಕಿದ್ದರು. ” ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ಸ್ಥಾನ ಮುಟ್ಟಲು ಹೆಣಗಾಡಲಿದೆ. ನನ್ನ ಮಾತು ಸುಳ್ಳಾದರೆ ಈ ಕ್ಷೇತ್ರ ತ್ಯಜಿಸುತ್ತೇನೆ, ಬರೆದಿಟ್ಟುಕೊಳ್ಳಿ” ಎಂದಿದ್ದರು.
ಟಿಎಂಸಿ ಗೆಲುವಿನ ಬಗ್ಗೆ ನನಗೆ ಭರವಸೆ ಇತ್ತು
ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 8 ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತ ಏಣಿಕೆ ಇಂದು ನಡೆಯುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್ ನನಗೆ ಮೊದಲಿನಿಂದಲೂ ಟಿಎಂಸಿ ಗೆಲುವಿನ ವಿಚಾರ ಕುರಿತು ಬಹಳ ಭರವಸೆಯಿತ್ತು. ಬಿಜೆಪಿಯ ಜೊತೆ ನಾವು ತೀವ್ರ ಸ್ಪರ್ಧೆ ಮಾಡಿದ್ದೇವೆ. ಹಾಗು ಕಠಿಣ ಹೋರಾಟ ಎದುರಿಸಿದ್ದೇವೆ ಎಂದಿದ್ದಾರೆ. ಇಂದು ಬೆಳಗ್ಗೆಯಿಂದ ನಡೆಯುತ್ತಿರುವ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅನ್ನು ಹಿಂದಿಕ್ಕಿ ಟಿಎಂಸಿ ಭರ್ಜರಿಯಾಗಿ ಮುನ್ನುಗುತ್ತಿದೆ.