ಹಥ್ರಾಸ್ ಅತ್ಯಾಚಾರ ವರದಿಗಾರಿಕೆಗೆ ತೆರಳಿದ್ದ ವೇಳೆ ಉತ್ತರಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್‌ರನ್ನು ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸಿದ್ದೀಕ್ ಚೇತರಿಸಿದ್ದಾರೆಂದು ವೈದ್ಯರು ಪ್ರಮಾಣೀಕರಿಸಿದ ನಂತರ ಕಪ್ಪನ್ ಅವರನ್ನು ಮಥುರಾ ಜೈಲಿಗೆ ವರ್ಗಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸಿದ್ದೀಕ್ ಕಪ್ಪನ್ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಅವರಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿಲ್ಲ. ನಾಯಿಯನ್ನು ಕಟ್ಟಿಹಾಕುವಂತೆ ಅಮಾನವೀಯವಾಗಿ ಅವರನ್ನು ಕಟ್ಟಿ ಹಾಕಲಾಗಿದೆ. ಅವರ ಜೀವಕ್ಕೆ ಅಪಾಯವಿದೆ ಎಂದು ಕಪ್ಪನ್ ಪರ ವಕೀಲರು ಭಾರತದ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ಉತ್ತರಪ್ರದೇಶ ಸರ್ಕಾರಕ್ಕೆ ಪತ್ರ ಬರೆದು ಸಿದ್ದೀಕ್ ಕಪ್ಪನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಅವರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವರ್ಗಾಯಿಸುವಂತೆ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದರು.