ವೈಜ್ಞಾನಿಕ ಸಂಶೋಧನೆ ಮತ್ತು ಸಮಗ್ರ ಮಾಹಿತಿಗಳ ಆಧಾರದ ಮೇಲೆ ತಜ್ಞರು ನೀಡಿದ ಕರೋನಾ ಎರಡನೇ ಅಲೆಯ ಸುಳಿವನ್ನು ತಳ್ಳಿಹಾಕಿದ ಪ್ರಧಾನಿ ನರೇಂದ್ರ ಮೋದಿ ಅವರ ವರ್ತನೆಯಿಂದ ಇಂದು ದೇಶ ಪರಿತಪಿಸಬೇಕಾಗಿದೆ. ನರೇಂದ್ರ ಮೋದಿ ಸದಾ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಳ್ಳಲು, ಚುನಾವಣೆಗಳನ್ನು ಗೆಲ್ಲಲು, ಚರ್ಚೆಯಲ್ಲಿರಲು ಬಯಸುತ್ತಾರೆ. ಕರೋನಾ ವಿಷಯವನ್ನು ಅವರು ಇದೇ ಮನೋಸ್ಥಿತಿಯಲ್ಲೇ ಎದುರಿಸಿದರು. ‘ವಿಶ್ವಗುರು’ ಆಗಲು ವಿದೇಶಗಳಿಗೆ ಲಸಿಕೆ ಕಳುಹಿಸಿಕೊಟ್ಟರು. ಕರೋನಾ ತೀವ್ರವಾಗಿ ಹರಡುತ್ತಿದ್ದರೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಗೆಲ್ಲಲು ಬೃಹತ್ ಸಮಾವೇಶಗಳನ್ನು ನಡೆಸಿದರು. ‘ಸರ್ಕಾರ ನೀಡಿದ್ದೇ ಸುದ್ದಿ’ ಎಂಬ ವಾತಾವರಣ ನಿರ್ಮಿಸಿ ತಾವು ‘ಘನಕಾರ್ಯ’ ಮಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಕರೋನಾದ ಹುಟ್ಟಡಗಿಸಬೇಕಾದ ಇಡೀ ವ್ಯವಸ್ಥೆಯೇ ಹಳಿ ತಪ್ಪಿದೆ.
ಸದ್ಯ ಈಗ ಸಮಸ್ಯೆಗಳ ಸರಮಾಲೆಯೇ ಇದೆ. ಮೇ 1ರಿಂದ 18 ವರ್ಷದ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ಹಾಕಬೇಕು. ಆದರೆ ಇನ್ನೂ ಕೂಡ ರಾಜ್ಯಗಳಿಗೆ ಸಮರ್ಪಕವಾಗಿ ಲಸಿಕೆಗಳ ಪೂರೈಕೆಯಾಗಿಲ್ಲ. ದೇಶದಲ್ಲೇ ಉತ್ಪಾದಿಸುತ್ತಿರುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳು ಸಾಲಲ್ಲ ಎಂಬ ಕಾರಣಕ್ಕೆ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಬರಮಾಡಿಕೊಳ್ಳಲಾಗುತ್ತಿದೆ. ಸ್ಪುಟ್ನಿಕ್ ಲಸಿಕೆಗಳ ಮೊದಲ ಬ್ಯಾಚ್ ಮೇ 1ರಂದು ಬರಲಿದೆ. ಒಟ್ಟಿನಲ್ಲಿ ಈಗಲೂ ಲಸಿಕೆಗಳ ವಿಷಯದಲ್ಲಿ ಕೊರತೆ ಎದ್ದು ಕಾಣುತ್ತಿದೆ. ರಾಜಸ್ಥಾನ, ಛತ್ತೀಸ್ಗಢ, ಪಂಜಾಬ್ ಮತ್ತು ಜಾರ್ಖಂಡ್ ಸರ್ಕಾರಗಳು ಲಸಿಕೆ ಇಲ್ಲದ ಕಾರಣಕ್ಕೆ ಮೇ 1ರಿಂದ ನಡೆಯುವ ಮೂರನೇ ಹಂತದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಿಲ್ಲ ಎಂದಿವೆ.
ಇನ್ನೂ ದೇಶದಲ್ಲಿ ಕರೋನಾದಿಂದ ಆಗುತ್ತಿರುವ ಸಾವುಗಳನ್ನು ಕೂಡ ಪರಿಗಣಿಸಬೇಕು. ಕಳೆದ ಒಂದು ವಾರದಿಂದ ಪ್ರತಿ ದಿನ ಎರಡು ಸಾವಿರ ಸಾವುಗಳು ಸಂಭವಿಸುತ್ತಿವೆ. ದೇಶದಲ್ಲಿ ಈವರೆಗೆ ಕರೋನಾದಿಂದ ಸತ್ತವರ ಸಂಖ್ಯೆ ಎರಡು ಲಕ್ಷದ ಗಡಿ ದಾಟುತ್ತಿದೆ. ಎರಡನೇ ಅಲೆಯ ವೇಳೆ ಬಹುತೇಕ ಮಂದಿ ಆಕ್ಸಿಜನ್ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿ ನಡುವೆಯೂ 2021ರ ಜನವರಿಯಲ್ಲಿ ಭಾರತವು ಕಳೆದ ವರ್ಷಕ್ಕಿಂತ ಹೆಚ್ಚು ಆಮ್ಲಜನಕವನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಿದೆ. ಈ ನಡೆಯ ಹಿಂದೆಯೂ ವಿಶ್ವಗುರು ಇಮೇಜ್ ಕಾಪಾಡಿಕೊಳ್ಳುವ ಯೋಚನೆ ಇದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಈಗ ಆಮ್ಲಜನಕ ಕಳುಹಿಸಿಕೊಡಿ ಎಂದು ಭಾರತ, ಅಮೇರಿಕಾ ಮತ್ತಿತರ ದೇಶಗಳ ಮುಂದೆ ಮಂಡಿಯೂರುತ್ತಿದೆ. ‘ಮಾನ ಹೋಗುವುದಾದರೆ ದೇಶದ ಮಾನ ಹೋಗಲಿ, ಹೆಗ್ಗಳಿಕೆ ಬರುವುದಾದರೆ ಅದು ತಮ್ಮ ಮುಡಿಗೇರಲಿ’ ಎಂಬಂತಿದೆ ಮೋದಿ ಕಾರ್ಯವೈಖರಿ. ಇನ್ನೊಂದು ಅಂಶ; ಯಾವಾಗ ದೇಶಾದ್ಯಂತ ಆಮ್ಲಜನಕದ ಸಮಸ್ಯೆಯಾಗಿ ಆಹಾಕಾರ ಉಂಟಾಯಿತೋ ಆಗ, ‘ಬೆಂಕಿ ಬಿದ್ದಾಗ ಬಾವಿ ತೋಡಿದರು’ ಎಂಬಂತೆ ದೇಶಾದ್ಯಂತ 150 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಮೋದಿ ಅಬ್ಬರಿಸಿದರು. ಮಾಧ್ಯಮಗಳು ಮುಗಿಬಿದ್ದು ಪ್ರಚಾರ ಮಾಡಿದವು. ಈವರೆಗೆ 150 ಘಟಕಗಳು ಎಲ್ಲೆಲ್ಲಿ? ಯಾವಾಗ ಕೆಲಸ ಶುರು? ಉತ್ಪಾದನಾ ಸಾಮರ್ಥ್ಯ ಎಷ್ಟು? ಎಂಬ ಯಾವೊಂದು ಮಾಹಿತಿಯನ್ನು ಕೇಂದ್ರ ಸರ್ಕಾರ ಹೇಳಿಲ್ಲ. ಅದೂ ಇರಲಿ, ಹಿಂದೊಮ್ಮೆ ಮೋದಿ ಘೋಷಿಸಿದ್ದರಲ್ಲಾ 162 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ, ಅವುಗಳು ಯಾವ ಹಂತದಲ್ಲಿವೆ ಎಂಬುದನ್ನಾದರೂ ಕೇಂದ್ರ ಸರ್ಕಾರ ತಿಳಿಸಬೇಕಾಗಿದೆ.
ಕರೋನಾ ವ್ಯಾಕ್ಸಿನ್ ಮಾತ್ರವಲ್ಲ, ಕರೋನಾ ಪಾಸಿಟಿವ್ ಬಂದ ರೋಗಿಗಳ ಚಿಕಿತ್ಸೆಗೆ ಬಳಸುವ ಇತರೆ ಔಷಧಿಗಳ ಕೊರತೆಯೂ ಕಂಡುಬರುತ್ತಿದೆ. ರೆಮಿಡೆಸಿವಿರ್ ಲಭ್ಯ ಆಗುತ್ತಿಲ್ಲ. ಐಸಿಯು ಮತ್ತು ವೆಂಟಿಲೇಟರ್ ಗಳು ಸಿಗುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಇಲ್ಲ ಎನ್ನುವಂತಾಗಿದೆ. ಕರೋನಾ ಮೊದಲ ಅಲೆ ಕಾಣಿಸಿಕೊಂಡಾಗ ಪೂರ್ವ ತಯಾರಿಗಳಿರಲಿಲ್ಲ ಹಾಗಾಗಿ ಪರಿಸ್ಥಿತಿ ಕೈ ಮೀರಿತು ಎನ್ನಬಹುದು. ಅದಕ್ಕಾಗಿ ಕ್ಷಮೆಯೂ ಇತ್ತು. ಆದರೆ ಎರಡನೇ ಅಲೆ ಬರುತ್ತದೆ ಎಂಬ ದಟ್ಟ ಮುನ್ಸೂಚನೆ ಇದ್ದರೂ ಕೇಂದ್ರ ಸರ್ಕಾರ ಮೌನವಾಗಿದ್ದುದು ಏಕೆ? ಈ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡುವುದಿರಲಿ, ಕೇಳಿಸಿಕೊಳ್ಳುವ ವ್ಯವದಾನವೇ ಸರ್ಕಾರಕ್ಕೆ ಇಲ್ಲ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಂತಹ ಮೇಧಾವಿಗಳು ನೀಡಿದ ಅತ್ಯಮೂಲ್ಯ ಸಲಹೆಗಳನ್ನು ತಮಗೆ ತಾವೇ ಟೀಕೆ ಎಂದು ಅರ್ಥೈಸಿಕೊಂಡು ಅವರಿಗೂ ತಿರುಗೇಟು ನೀಡುವ ಉದ್ಧಟತನ ತೋರುತ್ತದೆ.
ಈಗಿನ ಪರಿಸ್ಥಿತಿಯೇ ಹೀಗಿದೆ. ಈ ನಡುವೆ ಮೇ ತಿಂಗಳ ಮಧ್ಯದಲ್ಲಿ ಕರೋನಾ ಸೋಂಕು ಹರಡುವಿಕೆ ಇನ್ನಷ್ಟು ತೀವ್ರ ಆಗುತ್ತದೆ. ಅಧ್ಯಯನದ ಪ್ರಕಾರ ಮೇ 14ರಿಂದ 18ರವರೆಗಿನ ಅವಧಿಯಲ್ಲಿ ದೇಶದಲ್ಲಿ 38ರಿಂದ 48 ಲಕ್ಷ ಸಕ್ರಿಯ ಪ್ರಕರಣಗಳು ಕಾಣಿಸಿಕೊಳ್ಳಲಿವೆ. ಆಗ ಪ್ರತಿದಿನ 4.4 ಲಕ್ಷ ಹೊಸ ಪ್ರಕರಣಗಳು ಕಂಡುಬರುವ ಸಾಧ್ಯತೆ ಇದೆ ಎಂದು ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಇಂಥದೇ ಇನ್ನೂ ಹಲವು ಅಂದಾಜುಗಳು ಕೇಳಲ್ಪಡುತ್ತಿವೆ. ಕೇಂದ್ರ ಸರ್ಕಾರ ಅಥಾವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಥವಾ ಇನ್ನಿತರ ಪ್ರತಿಪಕ್ಷದ ನಾಯಕರು ಹಾಗೂ ಸ್ವಪಕ್ಷೀಯರು ನೀಡುವ ಸಲಹೆ ಶಿಫಾರಾಸುಗಳನ್ನಂತೂ ಕೇಳುವುದಿಲ್ಲ. ಕಡೆಯಪಕ್ಷ ವಿಜ್ಞಾನಿಗಳ ಅಧ್ಯಯನ ವರದಿಗಳನ್ನು, ತಜ್ಞರ ಅಭಿಪ್ರಾಯಗಳನ್ನು ಈ ಹಂತದಲ್ಲಾದರೂ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಅವರು ವಿಶ್ವಗುರುವಾದರೂ ಭಾರತದ ಭವಿಷ್ಯ ಇನ್ನಷ್ಟು ಕರಾಳ ಆಗುವುದರಲ್ಲಿ ಯಾವ ಅನುಮಾನಗಳೂ ಉಳಿದಿಲ್ಲ.