ಇಂದು ವಿಶ್ವದಾದ್ಯಂತ ಶೇಕಡಾ 90 ರಷ್ಟು ಬಳಕೆದಾರರು ವಿಳಾಸ ಹುಡುಕಲು ಬಳಸುವುದು ಗೂಗಲ್ ಮ್ಯಾಪ್ನನ್ನು. ನಾವು ಯಾರಿಗಾದರೂ ವಿಳಾಸ ನೀಡಬೇಕಾದರೆ ಗೂಗಲ್ ಮ್ಯಾಪ್ ನ ಲೊಕೇಷನ್ ಕಳಿಸುತ್ತೇವೆ. ಇಂದಿನ ದಿನಗಳಲ್ಲಿ ಇದು ಅತ್ಯಂತ ಸಾಮಾನ್ಯವೇ ಅಗಿದೆ. ಕೆಲವೊಮ್ಮೆ ಗೂಗಲ್ ನಲ್ಲೇ ಲ್ಯಾಂಡ್ ಮಾರ್ಕ್ ಕೂಡ ಹೇಳುತ್ತೇವೆ. ಅಂದರೆ ಗೂಗಲ್ ಅಷ್ಟೊಂದು ಅವಿಭಾಜ್ಯ ಸಂಗತಿ ಆಗಿದೆ. ಅಷ್ಟೇ ಅಲ್ಲ ದೇಶದ ಭದ್ರತಾ ಪಡೆಗಳು , ಸರ್ಕಾರೀ ಇಲಾಖೆಗಳು ಎಲ್ಲವೂ ಗೂಗಲ್ ಮ್ಯಾಪ್ನನ್ನೆ ಈವರೆಗೂ ಅವಲಂಬಿಸಿವೆ. ಇದೀಗ ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶೀಯ ಕಂಪೆನಿ ಮ್ಯಾಪ್ ಮೈ ಇಂಡಿಯಾ ಸಹಯೋಗದೊಂದಿಗೆ ಭಾರತದ ಸ್ಥಳೀಯ, ಮ್ಯಾಪಿಂಗ್ ಪೋರ್ಟಲ್ ಮತ್ತು ಜಿಯೋಸ್ಪೇಷಿಯಲ್ ಸೇವೆಗಳನ್ನು ನೀಡಲಿವೆ ಎಂದು ಘೋಷಿಸಿವೆ. ಮ್ಯಾಪ್ ಮೈ ಇಂಡಿಯಾ ಡಿಜಿಟಲ್ ನಕ್ಷೆಗಳು ಮತ್ತು ತಂತ್ರಜ್ಞಾನಗಳ ಶಕ್ತಿಯನ್ನು ಇಸ್ರೋ ಉಪಗ್ರಹ ಚಿತ್ರಣ ಮತ್ತು ಭೂ ವೀಕ್ಷಣಾ ದತ್ತಾಂಶಗಳೊಂದಿಗೆ ಸಂಯೋಜಿಸುತ್ತದೆ ಎಂದು ಮ್ಯಾಪ್ ಮೈ ಇಂಡಿಯಾದ ಸಿಇಒ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೋಹನ್ ವರ್ಮಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭಾರ ಭಾರತ್ ಯೋಜನೆಯಲ್ಲಿ ಈ ಬೆಳವಣಿಗೆ ಒಂದು ಮಹತ್ವದ ಮೈಲಿಗಲ್ಲು ಎಂದು ಅವರು ಹೇಳಿದರು. ಇನ್ನು ಮುಂದೆ ಭಾರತೀಯ ಬಳಕೆದಾರರು ನಕ್ಷೆಗಳು, ಸಂಚಾರ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ವಿದೇಶಿ ಸಂಸ್ಥೆಗಳ ಮೇಲೆ ಅವಲಂಬಿತವಾಗಿರಬೇಕಾಗಿಲ್ಲ. ಬದಲಾಗಿ ಭಾರತದಲ್ಲಿ ತಯಾರಿಸಿದ ಮ್ಯಾಪ್ ಮೈ ಬಳಸಬಹುದು ಎಂದು ಅವರು ಹೇಳಿದ್ದಾರೆ ಇನ್ನು ಮುಂದೆ ಗೂಗಲ್ ನಕ್ಷೆಗಳು ಮತ್ತು ಗೂಗಲ್ ಅರ್ಥ್ ನ ಅವಶ್ಯಕತೆ ಇಲ್ಲ ಎಂದೂ ವರ್ಮಾ ಲಿಂಕ್ಡ್ ಇನ್ ಲ್ಲಿನ ಅವರ ಲೇಖನದಲ್ಲಿ ಹೇಳಿದ್ದಾರೆ. ಇಸ್ರೋ ಪ್ರಕಾರ ಬಾಹ್ಯಾಕಾಶ ಇಲಾಖೆ (ಡಿಒಎಸ್) ಮ್ಯಾಪ್ ಮೈ ಇಂಡಿಯಾದೊಂದಿಗೆ ಕೈಜೋಡಿಸಿ ಅವರ ಜಿಯೋಸ್ಪೇಷಿಯಲ್ ಅನುಭವವನ್ನು ಮತ್ತು ಅವರ ಜಿಯೋಪೋರ್ಟಲ್ಗಳನ್ನು ನಿಯಂತ್ರಿಸುವ ಮೂಲಕ ಸೇವೆ ಒದಗಿಸಲು ಸಜ್ಜಾಗಿದೆ. ಮ್ಯಾಪ್ಮಿಇಂಡಿಯಾದ ಮಾಲೀಕತ್ವ ಹೊಂದಿರುವ ಜಿಯೋಸ್ಪೇಷಿಯಲ್ ಟೆಕ್ನಾಲಜಿ ಕಂಪನಿ ಸಿಇ ಇನ್ಫೋ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಇಸ್ರೋ ಗುರುವಾರ ಒಪ್ಪಂದ ಮಾಡಿಕೊಂಡಿದೆ.
ಪಾಲುದಾರಿಕೆಯಡಿಯಲ್ಲಿ, ಡಿಒಎಸ್ ಮತ್ತು ಸಿಇ ಮಾಹಿತಿ ವ್ಯವಸ್ಥೆಗಳ ಸಂಯೋಜಿತ ಜಿಯೋಸ್ಪೇಷಿಯಲ್ ಪರಿಣತಿಯನ್ನು ಆಯಾ ಜಿಯೋಪೋರ್ಟಲ್ಗಳ ಮೂಲಕ ನಿಯಂತ್ರಿಸಲಾಗುವುದು ಎಂದು ಇಸ್ರೋ ಬೆಂಗಳೂರು ಪ್ರಧಾನ ಕಚೇರಿಯು ತಿಳಿಸಿದೆ. ‘ಭುವನ್’, ‘ವೆದಾಸ್’ ಮತ್ತು ‘ಮೊಸ್ಡಾಕ್’ ಜಿಯೋಪೋರ್ಟಲ್ಸ್ನ್ ಮೂಲಕ ದಿ ಮ್ಯಾಪ್ ಮೈ ಇಂಡಿಯಾದಲ್ಲಿ ಲಭ್ಯವಿರುವ ಭೂಮಿಯ ವೀಕ್ಷಣೆ ಅಂಕಿ ಅಂಶಗಳು ನಾವಿಕ್ , ವೆಬ್ ಸೇವೆಗಳು ಮತ್ತು ಎಪಿಐಗಳನ್ನು (ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಬಳಸಿಕೊಂಡು ಸಮಗ್ರ ಜಿಯೋಸ್ಪೇಷಿಯಲ್ ಪರಿಕರಗಳನ್ನು ಜಂಟಿಯಾಗಿ ಗುರುತಿಸಲು ಮತ್ತು ನಿರ್ಮಿಸಲು ಸಹಯೋಗವು ಅನುವು ಮಾಡಿಕೊಡುತ್ತದೆ ಎಂದು ಇಸ್ರೋ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ನಾವಿಕ್ (ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲ್ಲೇಷನ್) ಎಂದು ಕರೆಯಲ್ಪಡುವ ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಐಆರ್ಎನ್ಎಸ್ಎಸ್) ಭಾರತದ ಸ್ವಂತ ನ್ಯಾವಿಗೇಷನ್ ಸಿಸ್ಟಮ್ ಆಗಿದ್ದು , ಇದನ್ನು ಇಸ್ರೋ ಅಭಿವೃದ್ಧಿಪಡಿಸಿದೆ. ಭುವನ್ ಎಂಬುದು ಭೌಗೋಳಿಕ ದತ್ತಾಂಶ, ಸೇವೆಗಳು ಮತ್ತು ವಿಶ್ಲೇಷಣೆಗಾಗಿ ಸಾಧನಗಳನ್ನು ಒಳಗೊಂಡಿರುವ ಇಸ್ರೋ ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಜಿಯೋ-ಪೋರ್ಟಲ್ ಆಗಿದೆ. ವೆದಾಸ್ (ವಿಷುಲೈಸೇಶನ್ ಆರ್ಥೊಬ್ಸರ್ವೇಶನ್ ಡಾಟಾ ಮತ್ತು ಆರ್ಕೈವಲ್ ಸಿಸ್ಟಂ) ಎಂಬುದು ಆನ್ಲೈನ್ ಜಿಯೋಪ್ರೊಸೆಸಿಂಗ್ ಪ್ಲಾಟ್ಫಾರ್ಮ್ ಆಗಿದ್ದು, ಆಪ್ಟಿಕಲ್, ಮೈಕ್ರೊವೇವ್, ಥರ್ಮಲ್ ಮತ್ತು ಹೈಪರ್ ಸ್ಪೆಕ್ಟ್ರಲ್ ಇಒ ಅಂಕಿ ಅಂಶಗಳನ್ನು ಒಳಗೊಂಡಿರುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೊಸ್ಡಾಕ್ (ಹವಾಮಾನ ಮತ್ತು ಸಾಗರಶಾಸ್ತ್ರದ ಉಪಗ್ರಹ ದತ್ತಾಂಶ ಸಂಗ್ರಹ ಕೇಂದ್ರ) ಇಸ್ರೋದ ಎಲ್ಲಾ ಹವಾಮಾನ ಕಾರ್ಯಗಳಿಗೆ ದತ್ತಾಂಶ ಭಂಡಾರವಾಗಿದೆ ಮತ್ತು ಹವಾಮಾನ ಸಂಬಂಧಿತ ಮಾಹಿತಿ, ಸಮುದ್ರಶಾಸ್ತ್ರ ಮತ್ತು ಉಷ್ಣವಲಯದ ಹವಾಮಾನ ಮಾಹಿತಿ ಹೊಂದಿದೆ.
ಮ್ಯಾಪ್ ಮೈ ಇಂಡಿಯಾ, ಜವಾಬ್ದಾರಿಯುತ, ಸ್ಥಳೀಯ, ಭಾರತೀಯ ಕಂಪನಿಯಾಗಿರುವುದರಿಂದ, ಅದರ ನಕ್ಷೆಗಳು ದೇಶದ ನಿಜವಾದ ಸಾರ್ವಭೌಮತ್ವವನ್ನು ಪ್ರತಿಬಿಂಬಿಸುತ್ತವೆ, ಭಾರತ ಸರ್ಕಾರದ ಪ್ರಕಾರ ಭಾರತದ ಗಡಿಗಳನ್ನು ಚಿತ್ರಿಸುತ್ತದೆ ಮತ್ತು ಭಾರತದಲ್ಲಿ ಅದರ ನಕ್ಷೆಗಳನ್ನು ನೀಡುತ್ತದೆ ಎಂದು ವರ್ಮಾ ಅವರು ಹೇಳಿದರು. ಇಸ್ರೋ ಜೊತೆಗಿನ ಸಂಯೋಜಿತ ಸಹಭಾಗಿತ್ವದ ಮೂಲಕ, ಮ್ಯಾಪ್ಮಿಇಂಡಿಯಾದ ಬಳಕೆದಾರ ನಕ್ಷೆಗಳು, ಅಪ್ಲಿಕೇಶನ್ಗಳು ಮತ್ತು ಸೇವೆಗಳು ಈಗ ಇಸ್ರೋದ ಬೃಹತ್ ಉಪಗ್ರಹ ಚಿತ್ರಣ ಮತ್ತು ಭೂ ವೀಕ್ಷಣಾ ದತ್ತಾಂಶದೊಂದಿಗೆ ಸಂಯೋಜನೆಗೊಳ್ಳುತ್ತವೆ ಎಂದು ಮ್ಯಾಪ್ ಮೈ ಇಂಡಿಯಾ ಹೇಳಿಕೆ ತಿಳಿಸಿದೆ. ವಿದೇಶಿ ನಕ್ಷೆ ಅಪ್ಲಿಕೇಶನ್ಗಳಿಗೆ ಹೋಲಿಸಿದರೆ ಇದು ಭಾರತೀಯರಿಗೆ ಹೆಚ್ಚು ಉತ್ತಮವಾದ, ಹೆಚ್ಚು ವಿವರವಾದ ಮತ್ತು ಸಮಗ್ರವಾದ ಗೌಪ್ಯತೆ ಹೊಂದಿರುವ ಹೈಪರ್ ಸ್ಥಳೀಯ ಮತ್ತು ಸ್ಥಳೀಯ ಮ್ಯಾಪಿಂಗ್ ಪರಿಹಾರವಾಗಿದೆ ಎಂದು ಅದು ಹೇಳಿದೆ. ವಿದೇಶಿ ಸರ್ಚ್ ಇಂಜಿನ್ಗಳು ಮತ್ತು ಕಂಪನಿಗಳು ಉಚಿತ ನಕ್ಷೆಗಳನ್ನು ನೀಡುವುದಾಗಿ ಹೇಳಿಕೊಳ್ಳುತ್ತವೆ, ಆದರೆ ವಾಸ್ತವದಲ್ಲಿ ಅವರು ಬಳಕೆದಾರರ ಗೌಪ್ಯತೆಯನ್ನು ಆಕ್ರಮಿಸುವ ಆಧಾರದ ಮೇಲೆ ಅದೇ ಬಳಕೆದಾರರಿಗೆ ಜಾಹೀರಾತನ್ನು ತೋರಿಸುವ ಮೂಲಕ ಮತ್ತು ಬಳಕೆದಾರರ ಖಾಸಗಿ ಸ್ಥಳ ಮತ್ತು ಚಲನೆಯ ಅಂಕಿ ಅಂಶವನ್ನು ಮಾರಾಟಗಾರ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ, ಅಂತಹ ಕಂಪನಿಗಳ ಜಾಹೀರಾತು ವ್ಯಾಪಾರದ ವಿರುದ್ಧ ಮ್ಯಾಪ್ಮಿಇಂಡಿಯಾ ನೈತಿಕ ದೃಷ್ಟಿಕೋನವನ್ನು ಹೊಂದಿದ್ದು ಮತ್ತು ಜಾಹೀರಾತು ಮಾರಾಟ ಮಾದರಿಯನ್ನು ಹೊಂದಿಲ್ಲ. ವಿದೇಶಿ ನಕ್ಷೆಯ ಅಪ್ಲಿಕೇಶನ್ಗಳಿಗೆ ಬದಲಾಗಿ ಮ್ಯಾಪ್ಮಿಇಂಡಿಯಾ ನಕ್ಷೆಗಳು ಮತ್ತು ಅಪ್ಲಿಕೇಶನ್ಗಳನ್ನು ಬಳಸುವ ಮೂಲಕ, ಬಳಕೆದಾರರ ಗೋಪ್ಯತೆಯನ್ನು ರಕ್ಷಿಸಬಹುದು ಎಂದು ಅವರು ಹೇಳಿದರು. ಮ್ಯಾಪ್ಮಿಇಂಡಿಯಾದ ನಕ್ಷೆಗಳು ಮತ್ತು ಅಪ್ಲಿಕೇಶನ್ಗಳನ್ನು ಉಚಿತವಾಗಿ ಬಳಕೆದಾರರಿಗೆ ನೀಡುವುದಲ್ಲದೆ ಜಾಹೀರಾತುಗಳಿಂದಲೂ ಮುಕ್ತವಾಗಿದೆ ಎಂದು ಅವರು ಹೇಳಿದರು.
ಮ್ಯಾಪ್ ಮೈ ಇಂಡಿಯಾದ ನಕ್ಷೆಗಳು ದೇಶದ ಎಲ್ಲಾ 7.5 ಲಕ್ಷ ಹಳ್ಳಿಗಳನ್ನು, 7500+ ನಗರಗಳ ಕಟ್ಟಡಗಳು , ಬೀದಿಗಳನ್ನು ಒಳಗೊಂಡಿದೆ . ದೇಶದ ಎಲ್ಲಾ 63 ಲಕ್ಷ ಕಿಲೋಮೀಟರ್ ಗಳ ರಸ್ತೆ ನೆಟ್ವರ್ಕ್ ಸಂಪರ್ಕ ಹೊಂದಿದೆ. ದೇಶದ 3 ಕೋಟಿ ಸ್ಥಳಗಳ ನಕ್ಷೆಗಳನ್ನು ಒದಗಿಸುತ್ತದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ಇಸ್ರೋದ ಈ ನೂತನ ಒಡಂಬಡಿಕೆಯಿಂದ ಬಳಕೆದಾರರು ಇನ್ನು ಮುಂದೆ ಜಾಹೀರಾತು ಮುಕ್ತ ನಕಾಶೆ ಸೇವೆ ಪಡೆಯಬಹುದಾಗಿದೆ.