ಕೋವಿಡ್ ಕರಿ ನೆರಳು ಇನ್ನೂ ಮೂಡಿರುವಂತೆಯೇ ಶಾಲೆಗಳು ತೆರೆದುಕೊಂಡಿವೆ. ಶಾಲೆಗಳನ್ನು ತೆರೆಯಲು ಏಕೆ ಭಯವಿತ್ತೋ ಈಗ ಅದೇ ಭಯ ಸತ್ಯವಾಗಿದೆ. ಕೇರಳದಲ್ಲಿ ನಡೆದ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಯಲ್ಲಿ ಮಲಪ್ಪುರಂ ಜಿಲ್ಲೆಯ ಎರಡು ಶಾಲೆಗಳ ಒಟ್ಟು 192 ವಿದ್ಯಾರ್ಥಿಗಳ ವರದಿ ಪಾಸಿಟಿವ್ ಎಂದು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.
ಈ ಕುರಿತಾಗಿ ಮಾತನಾಡಿರುವ ಮಲಪ್ಪುರಂ ಜಿಲ್ಲಾ ವೈದ್ಯಾಧಿಕಾರಿ ಡಾ. ಸಕೀನಾ ಅವರು, ಓರ್ವ ವಿದ್ಯಾರ್ಥಿಯ ಕೋವಿಡ್ ಪರೀಕ್ಷೆಯ ವೇಳೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಆ ವಿದ್ಯಾರ್ಥಿ ಯಾರ ಸಂಪರ್ಕಕ್ಕೆ ಬಂದಿದ್ದಾನೆ ಎಂದು ನೋಡಿದಾಗ ಉಳಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಅದೇ ಪ್ರದೇಶದಲ್ಲಿರುವ ಇನ್ನೊಂದು ಶಾಲೆಯ ವಿದ್ಯಾರ್ಥಿಗಳನ್ನು ಕೂಡಾ ಪರೀಕ್ಷೆಗೆ ಒಳಪಡಿಸಲಾಯಿತು, ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷ ಜನವರಿ ಕೊನೆಯ ವಾರದಲ್ಲಿ ಕೇರಳದಲ್ಲಿ ದೇಶದ ಮೊಟ್ಟ ಮೊದಲ ಕರೋನಾ ಪ್ರಕರಣ ದಾಖಲಾಗಿತ್ತು. ಆ ನಂತರ ಲಾಕ್ಡೌನ್ ಸಂದರ್ಭದಲ್ಲಿ ಕೇರಳ ಕೈಗೊಂಡ ಯೋಜನೆಗಳಿಂದಾಗಿ ಕರೋನಾ ಹತೋಟಿಗೆ ಬಂದಿತ್ತು. ಕೇರಳ ಸರ್ಕಾರವು ಕೋವಿಡ್ ನಿಯಂತ್ರಿಸಿದ್ದ ಮಾದರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿತ್ತು.
ಈಗ ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಒಂದು ಶಾಲೆಯ 149 ಮತ್ತು ಅದೇ ಪ್ರದೇಶದ ಇನ್ನೊಂದು ಶಾಲೆಯ 43 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರು ಮಾತ್ರವಲ್ಲದೇ, ಒಟ್ಟು 72 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳಲ್ಲಿಯೂ ಸೋಂಕು ಕಾಣಿಸಿಕೊಂಡಿದೆ.