ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಲು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಮಥುರಾ ನ್ಯಾಯಾಲಯವು ಮಸೀದಿಯ ಆಡಳಿತ ಮಂಡಳಿ ಹಾಗೂ ಇತರರಿಗೆ ನೋಟೀಸ್ ನೀಡಿದೆ. ಹದಿನೇಳನೇ ಶತಮಾನದಲ್ಲಿ ನಿರ್ಮಾಣವಾದ ಮಸೀದಿಯು ಶ್ರೀಕೃಷ್ಣನ ಜನ್ಮಸ್ಥಾನವಾದ ಕತ್ರಾ ಕೇಶವ್ ದೇವ್ ದೇವಸ್ಥಾನದ ಪರಿಸರದಲ್ಲಿದೆ ಎಂದು ಹೊಸ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಮಥರಾದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಧೀಶರಾದ ದೇವ್ಕಾಂತ್ ಶುಕ್ಲಾ ಅವರು ಈ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮಸೀದಿಯ ಆಡಳಿತ ಮಂಡಳಿ ಹಾಗೂ ಇತರರಿಗೆ ಈಗ ನೋಟೀಸ್ ಜಾರಿ ಮಾಡಿದ್ದು, ಈ ಅರ್ಜಿಯ ಕುರಿತು ಅವರ ಪ್ರತಿಕ್ರಿಯೆಯನ್ನು ಕೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಸೀದಿಯ ಆಡಳಿತ ಮಂಡಳಿಯ ಜೊತೆಗೆ ಲಕ್ನೋ ಸುನ್ನಿ ವಕ್ಫ್ ಬೋರ್ಡ್ ಅಧ್ಯಕ್ಷರಿಗೆ, ಶ್ರೀಕೃಷ್ಣ ಜನ್ಮಭೂಮಿ ಟ್ರಸ್ಟ್ನ ಕಾರ್ಯನಿರ್ವಾಹಕ ಟ್ರಸ್ಟಿಗಳಿಗೆ ಹಾಗೂ ಶ್ರೀಕೃಷ್ಣಾ ಸೇವಾ ಸಂಸ್ಥಾನ ಇವರಿಗೆ ನೋಟೀಸ್ ನೀಡಲಾಗಿದೆ.
ಪವನ್ ಕುಮಾರ್ ಶಾಸ್ತ್ರಿ ಎಂಬವರು ಈ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಒಟ್ಟು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೊದಲನೇಯದು, ಕತ್ರಾ ಕೇಶವ್ ದೇವ್ ದೇವಸ್ಥಾನದ ಪರಿಸರದಲ್ಲಿ ಬರುವಂತಹ 13.37 ಎಕರೆ ಭೂಮಿಯು ಸಂಪೂರ್ಣವಾಗಿ ದೇವಸ್ಥಾನಕ್ಕೆ ಸೇರಿದ್ದು. ಪವನ್ ಶಾಸ್ತ್ರಿ ಅವರ ಪೂರ್ವಜರು ಈ ದೇವಸ್ಥಾನದಲ್ಲಿ ಪೂಜಾರಿಗಳಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಹಾಗಾಗಿ ಅವರಿಗೂ ಈ ಭೂಮಿಯಲ್ಲಿ ಹಕ್ಕಿದೆ.
ಎರಡನೇಯದು, 1967ರಲ್ಲಿ ದೇವಸ್ಥಾನದ ಪರಿಸರದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಲು ಮಥರಾ ಕೋರ್ಟ್ ನೀಡಿದ ಆದೇಶವನ್ನು ಹಿಂಪಡೆಯಬೇಕು.
ಮೂರನೇಯದು, ಶಾಹೀ ಈದ್ಗಾ ಮಸೀದಿಯನ್ನು ಈಗಿರುವ ಸ್ಥಳದಿಂದ ತೆರವುಗೊಳಿಸುವಂತೆ ಮಸೀದಿಯ ಆಡಳಿತ ಮಂಡಳಿ ಹಾಗೂ ಲಕ್ನೋ ಸುನ್ನೀ ವಕ್ಫ್ ಬೋರ್ಡ್ಗೆ ನಿರ್ದೇಶನ ನೀಡಬೇಕು.
ಈ ಪ್ರಕರಣ ಮಾತ್ರವಲ್ಲದೇ, ಇದೇ ವಿಚಾರಕ್ಕೆ ಸಂಬಂಧಪಟ್ಟ ಮೂರು ಇತರೆ ಪ್ರಕರಣಗಳು ಕೂಡಾ ಇನ್ನೂ ವಿಚಾರಣೆಯ ಹಂತದಲ್ಲಿವೆ.