ರೈತರ ಪ್ರತಿಭಟನೆಯನ್ನು ಸರಿಯಾಗಿ ನಿರ್ವಹಿಸುವಲ್ಲಿ ಎಡವಿರುವ ಕೇಂದ್ರಸರ್ಕಾರವನ್ನು ಖಂಡಿಸಿರುವ ಸುಪ್ರೀಂ ಕೋರ್ಟ್ ‘ನಾಗರಿಕರು ಪ್ರತಿಭಟಿಸುವಂತಿಲ್ಲ’ ಎಂದು ತೀರ್ಪು ನೀಡಲಾಗುವುದಿಲ್ಲ ಎಂದು ಜನವರಿ 11ರಂದು ಹೇಳಿದೆ. ಇದೇ ಹೊತ್ತು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ “ಮಹಿಳೆಯರನ್ನು ಮತ್ತು ಹಿರಿಯ ನಾಗರಿಕರನ್ನು ಪ್ರತಿಭಟನಾ ಸ್ಥಳದಲ್ಲಿ ಇರಿಸಿದ್ದು ಯಾಕೆ?” ಎಂದು ಕೇಳಿ ಹೊಸ ವಿವಾದವೊಂದನ್ನು ಸೃಷ್ಟಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅಡ್ವಕೋಟ್ ಹೆಚ್.ಎಸ್ ಫೋಲ್ಕಾ ಅವರಲ್ಲಿ “ಮಹಿಳೆಯರು ಮತ್ತು ಹಿರಿಯ ನಾಗರಿಕರು ಪ್ರತಿಭಟನಾ ಸ್ಥಳವನ್ನು ತೊರೆದು ಮನೆಗೆ ಮರಳುವಂತೆ” ಮನವೊಲಿಸಲು ಕೇಳಿಕೊಂಡಿದ್ದಾರೆ. ಜನವರಿ ಹನ್ನೆರಡರಂದು ಸುಪ್ರೀಂ ಕೋರ್ಟಿನಲ್ಲಿ ಬೋಬ್ಡೆ ಅವರು “ನಾವು ಈ ವಿಚಾರದಲ್ಲಿ (ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿರುವುದು)ಮಾಡುವ ಪ್ರಸಂಶೆಯನ್ನು ಕಡತದಲ್ಲಿ ಸೇರಿಸಲು ಬಯಸುತ್ತೇವೆ” ಎಂದು ಘೋಷಿಸಿದ್ದಾರೆ.
ನ್ಯಾಯಮೂರ್ತಿಗಳ ಈ ಹೇಳಿಕೆಯು ಹಲವು ಪ್ರಶ್ನೆಗಳನ್ನು ಹುಟ್ಟಿಸಿದ್ದು ಇಲ್ಲಿ ನಾಗರಿಕರು ಯಾರು? ಮತ್ತು ಯಾರು ನಾಗರಿಕರಲ್ಲ? ಪ್ರತಿಭಟನಾ ಸ್ಥಳದಲ್ಲಿ ಕಾವಲುಗಾರರನ್ನು ಇರಿಸಿ ಯಾರು ಪಾಲ್ಗೊಳ್ಳಬೇಕು, ಯಾರು ಪಾಲ್ಗೊಳ್ಳಬಾರದು ಎಂದು ನಿರ್ಧರಿಸಬೇಕೇ? ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ನಿರ್ಧರಿಸಬೇಕಾದದ್ದು ಕೋರ್ಟ್, ಕಛೇರಿಗಳೇ? ಮಹಿಳೆ ವಿವೇಕಶೂನ್ಯಳೆಂದೇ? ಸುಪ್ರೀಂ ಕೋರ್ಟಿನಂತಹ ದೇಶದ ಉನ್ನತ ಸಂಸ್ಥೆಯ ಮುಖ್ಯಸ್ಥರೊಬ್ಬರು ಇಂತಹ ಹೇಳಿಕೆ ಕೊಡುವುದು ಮಾನವ ಹಕ್ಕುಗಳ ಉಲ್ಲಂಘನೆಯಷ್ಟೇ ಅಲ್ಲ, ಕಾನೂನು ಪಾಲಕರ ಹಕ್ಕುಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕೃಷಿಯ ಕ್ಷೇತ್ರದಲ್ಲಿ ಪುರುಷರಷ್ಟೇ ಮಹಿಳೆಯರ ಕೊಡುಗೆಯೂ ಇದೆ. ನೀರು ಹಾಯಿಸುವುದು, ಗೊಬ್ಬರ ಸಂಗ್ರಹಿಸುವುದು, ಬಿತ್ತುವುದು, ಕೊಯ್ಯುವುದು, ತೆನೆ ಬಡಿಯುವುದು… ಹೀಗೆ ಪುರಯಷನಿಗೆ ಸಮಾನವಾಗಿ ಮಹಿಳೆಯರೂ ಕೆಲಸ ಹಂಚಿಕೊಳ್ಳುತ್ತಾರೆ. ಇದರ ಜೊತೆಗೆ ಅಡುಗೆ ಮಾಡುವುದನ್ನು ಹೆಚ್ಚುವರಿಯಾಗಿ ಮಾಡುತ್ತಾರೆ. ಹಾಗಿದ್ದೂ ಅವರ ಕೆಲಸ ಗುರುತಿಸಲ್ಪಡುವುದಿಲ್ಲ. NCAER (National Council of Applied Economic Research) ನೀಡಿರುವ ವರದಿಯಂತೆ 42% ರಷ್ಟು ಕೃಷಿ ಕಾರ್ಮಿಕರು ಮಹಿಳೆಯರೇ ಆದರೆ ಪ್ರತಿಶತ ಎರಡಕ್ಕಿಂತಲೂ ಕಡಿಮೆ ಮಹಿಳೆಯರು ಕೃಷಿ ಭೂಮಿಯ ಒಡೆತನ ಹೊಂದಿದ್ದಾರೆ.
ಮಹಿಳೆಯರ ಕೆಲಸಕ್ಕೆ ಬೆಲೆ ಇಲ್ಲ ಎನ್ನುವ ಕೂಗು ಎಲ್ಲಾ ಕಡೆ ಇದೆ. ಅದನ್ನು ಪುಷ್ಟೀಕರಿಸುವಂತೆ CJI ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ರೈತರ ಸಂಘವೂ ಅವರ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿದೆ. ಕಿಸಾನ್ ಸಭಾದ ಉಪಾಧ್ಯಕ್ಷರಾದ ಅಮ್ರಾ ರಾಮ್ ಡಿಸೆಂಬರ್ನಲ್ಲೇ “ರೈತ ಮಹಿಳೆಯರು ಹೋರಾಡುತ್ತಿದ್ದಾರೆ ಮತ್ತು ನಾವು ಅವರನ್ನು ಹಿಂಬಾಲಿಸುತ್ತೇವೆ” ಎಂದಿದ್ದರು. ಇದೀಗ ಕೋರ್ಟಿನ ತೀರ್ಪು ಬಂದಮೇಲೆ ಜನವರಿ ಹದಿಮೂರರಂದು ಸಂಯುಕ್ತ ಕಿಸಾನ್ ಮೋರ್ಚಾ “‘ಸುಪ್ರೀಂ ಕೋರ್ಟಿನ ವಿಚಾರಣಾವಧಿಯಲ್ಲಿ ಅದು ಮಹಿಳೆಯರಿಗೇಕೆ ಪ್ರತಿಭಟನೆ? ಮಹಿಳೆಯರು ಮತ್ತು ಹಿರಿಯ ನಾಗರಿಕರು ಪ್ರತಿಭಟನಾ ಸ್ಥಳದಲ್ಲಿ ಯಾಕಿದ್ದಾರೆ? ಅವರನ್ನು ಮನೆಗೆ ಮರಳಲು ಮನವೊಲಿಸಬೇಕು’ಎಂದು ಹೇಳಿದೆ. ಸಂಯುಕ್ತ ಕಿಸಾನ್ ಮೋರ್ಚಾ ಇಂತಹ ಹೇಳಿಕೆಗಳನ್ನು ಖಂಡಿಸುತ್ತದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಹೋಲಿಸಲು ಸಾಧ್ಯ. ಈ ಚಳವಳಿ ಮಹಿಳೆಯರ ಚಳವಳಿಯೂ ಹೌದು. ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಪ್ರಶ್ನಿಸುವುದು ನಾಚಿಕೆಗೇಡು” ಎಂದು ಪತ್ರಿಕಾ ಪ್ರಕಟಣೆ ಕೊಟ್ಟಿದೆ.
ಪ್ರತಿಭಟನೆ, ಧರಣಿ, ಅಹಿಂಸಾತ್ಮಕ ಹೋರಾಟ ಎಂದೆಲ್ಲಾ ಬಂದಾಗ ಮಹಿಳೆಯರು ಸದಾ ಮುಂಚೂಣಿಯಲ್ಲೇ ಇರುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲೂ ಭಾರತೀಯ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯೋತ್ತರ ಭಾರತದ ಚಳವಳಿಗಳಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಯಾರೂ ಪ್ರಶ್ನಿಸಿರಲಿಲ್ಲ. ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ, ಕಾರ್ಮಿಕರ ಪ್ರತಿಭಟನೆ, ವಿದ್ಯಾರ್ಥಿಗಳ ಪ್ರತಿಭಟನೆ ಹೀಗೆ ಮಹಿಳೆಯರು ಪಾಲ್ಗೊಳ್ಳದ ಪ್ರತಿಭಟನೆಗಳೇ ಇಲ್ಲ ಅನ್ನಬಹುದು.
CJI ಯ ಹೇಳಿಕೆಯು ಶತಮಾನಗಳಷ್ಟು ಇತಿಹಾಸ ಇರುವ ಊಳಿಗಮಾನ್ಯ ಪದ್ಧತಿ ಇನ್ನು ಭಾರತೀಯರಲ್ಲಿ ಅಂಟಿಕೊಂಡಿರುವ ಮನಸ್ಥಿತಿಯನ್ನು ಹೊರಹಾಕುತ್ತದೆ. ಸುಪ್ರೀಂ ಕೋರ್ಟ್ನಂತಹ ಉನ್ನತ ಸಂಸ್ಥೆಗಳಲ್ಲಿ ಇಂತಹ ಮನಸ್ಥಿತಿಗಳು ಉಳಿದಿರುವುದು ಖೇದಕರ.
ಚಳವಳಿಗಳಲ್ಲಿ ಪಾಲ್ಗೊಳ್ಳುವುದು ಸಂವಿಧಾನ ಪ್ರತಿ ಭಾರತೀಯನಿಗೆ ನೀಡಿರುವ ಹಕ್ಕು. ಸಂವಿಧಾನದ 19ನೇ ವಿಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಾಗ ಲಿಂಗ ಮತ್ತು ವಯಸ್ಸಿನ ನಿರ್ಬಂಧ ಹೇರಿಲ್ಲ. ಹಾಗಾಗಿ ಮಹಿಳೆಯಿಂದ ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಳ್ಳುವುದು, ಆಕೆಯ ಹಕ್ಕಿನ ವಿರುದ್ಧದ ನಿಲುವು ತಾಳುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಒಬ್ಬ ಸಾಮಾನ್ಯ ನಾಗರಿಕನೇ ಆಗಿರಲಿ, ಪಂಚಾಯತ್ ಸದಸ್ಯನೇ ಆಗಿರಲಿ, ರಾಷ್ಟ್ರಪತಿ ಪ್ರಧಾನಿಯೇ ಆಗಿರಲಿ ಅಥವಾ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೇ ಆಗಿರಲಿ ಸಂವಿಧಾನ ಉಲ್ಲಂಘಿಸುವಂತಿಲ್ಲ. ಭಾರತದ ನಾಗರಿಕರನ್ನು ಸಮಾನವಾಗಿ ಕಾಣದ, ಪರಿಗಣಿಸದ ಯಾವುದೇ ಹೇಳಿಕೆಯ ವಿರುದ್ಧ ಗಟ್ಟಿ ನಿಲುವು ತೆಗೆದುಕೊಳ್ಳುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಿದೆ. ಹಾಗೆ ವಿರೋಧದ ಧ್ವನಿ ಎದ್ದರೆ ಮಾತ್ರ ಇಂತಹ ಫ್ಯೂಡಲ್, ಪುರುಷ ಪ್ರಧಾನ ದಬ್ಬಾಳಿಕೆಗಳು ಕೊನೆಯಾಗಬಹುದು.