ಉತ್ತರಪ್ರದೇಶ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಧಾರ್ಮಿಕ ಕೇಂದ್ರಗಳನ್ನು ನಿಯಂತ್ರಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಯೋಚಿಸುತ್ತಿದೆ. ಈ ಉದ್ದೇಶಿತ ಕಾಯ್ದೆಯು ಧಾರಮಿಕ ಕೇಂದ್ರಗಳಿಗೆ ಬರುವ ದೇಣಿಗೆ ಮತ್ತು ಜನರ ಕಾಣಿಕೆಗಳ ಬಗ್ಗೆ ನಿಗಾ ಇಡಲಿದೆ. ಸರ್ಕಾರದ ಮೂಲಗಳ ಪ್ರಕಾರ, ಧಾರ್ಮಿಕ ಸ್ಥಳಗಳ ನಿಯಂತ್ರಣ ಮತ್ತು ನೋಂದಣಿ ಎಂದು ಕರೆಯಲ್ಪಡುವ ಉದ್ದೇಶಿತ ಸುಗ್ರೀವಾಜ್ಞೆಯು ಧಾರ್ಮಿಕ ಸ್ಥಳಗಳ ನೋಂದಣಿ, ಕಾರ್ಯವಿಧಾನ, ದೈನಂದಿನ ಕೆಲಸ ಮತ್ತು ಸುರಕ್ಷತೆಗಾಗಿ ನಿಯಮಗಳನ್ನು ರಚಿಸಲಿದೆ. 2019 ರ ಅಕ್ಟೋಬರ್ ನಲ್ಲಿ ದೇಣಿಗೆ ಕುರಿತ ಧಾರ್ಮಿಕ ವಿವಾದವೊಂದರಲ್ಲಿ ಸುಪ್ರೀಂ ಕೋರ್ಟ್ ನ ಟಿಪ್ಪಣಿಯ ನಂತರ, ಎಲ್ಲಾ ಧರ್ಮಗಳ ಧಾರ್ಮಿಕ ಸ್ಥಳಗಳನ್ನು ಒಳಗೊಳ್ಳುವ ವಿಷಯವನ್ನು ಈ ಕಾನೂನು ಹೊಂದಿದೆ.
ರಾಜ್ಯದಲ್ಲಿ ಈ ಹಿಂದೆ ಇಂತಹ ಯಾವುದೇ ಕಾನೂನು ಇರಲಿಲ್ಲ. ಈ ಬಗ್ಗೆ ಔಪಚಾರಿಕ ಘೋಷಣೆಯನ್ನು ಸರ್ಕಾರ ಇನ್ನೂ ಮಾಡಿಲ್ಲವಾದರೂ, ಧರ್ಮತ್ ಕಾರ್ಯ ವಿಭಾಗದ ಅಧಿಕಾರಿಗಳು ಈಗಾಗಲೇ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್ ಅವರಿಗೆ ಪ್ರಸ್ತಾವನೆ ನೀಡಿವೆ ಎಂದು ಮೂಲಗಳು ತಿಳಿಸಿವೆ. ಈ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲು ಕ್ಯಾಬಿನೆಟ್ ಸಭೆಯನ್ನು ಶೀಘ್ರದಲ್ಲೇ ಕರೆಯಬಹುದು ಎಂದು ಮೂಲಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಸಂಪುಟ ಮಂತ್ರಿ ಮತ್ತು ಸರ್ಕಾರದ ವಕ್ತಾರ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಧಾರ್ಮಿಕ ಇಲಾಖೆಯು ಈ ಕುರಿತು ರೂಪು ರೇಷೆ ಸಿದ್ದಪಡಿಸಿರುವುದನ್ನು ಧೃಢಪಡಿಸಿದರಾದರೂ ಸುಗ್ರೀವಾಜ್ಞೆಯನ್ನು ಪರಿಚಯಿಸುವವರೆಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ವಿವಾದಗಳನ್ನು ತಪ್ಪಿಸಲು ಹೆಚ್ಚಿನ ಪ್ರಚಾರವಿಲ್ಲದೆ ಕಾನೂನನ್ನು ತರಲು ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಧಾರ್ಮಿಕ ಸ್ಥಳಗಳಲ್ಲಿನ ನಿರ್ವಹಣಾ ಹಕ್ಕುಗಳ ವಿವಾದಗಳನ್ನು ಸಂಪೂರ್ಣವಾಗಿ ಪರಿಹರಿಸಲು ರಾಜ್ಯ ಸರ್ಕಾರವು ಕಾನೂನನ್ನು ತರುತ್ತಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಯೊಬ್ಬರ ಪ್ರಕಾರ, ಸುಗ್ರೀವಾಜ್ಞೆಯು ಪ್ರಮುಖ ತಾಣಗಳು ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ. ಇದು ಹಣಕಾಸು ನಿರ್ವಹಣೆಗೂ ಘಟಕವೊಂದನ್ನು ಹೊಂದಲು ಅವಕಾಶ ಕಲ್ಪಿಸಲಿದ್ದು, ಈ ಧಾರ್ಮಿಕ ಕೇಂದ್ರಗಳಿಗೆ ನೀಡಲಾಗುವ ದೇಣಿಗೆ ಮತ್ತು ಕೊಡುಗೆಗಳ ಬಗ್ಗೆ ಎಲ್ಲಾ ವಿವರಗಳನ್ನು ಇಡುತ್ತದೆ. ಅಂತಹ ಧಾರ್ಮಿಕ ಸ್ಥಳಗಳ ಮೇಲೆ ಅವಲಂಬಿತವಾಗಿರುವವರ ಜೀವನೋಪಾಯಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಹ ಪ್ರಸ್ತಾಪಿಸಲಾಗಿದ್ದು ಭಕ್ತರ ಹೆಚ್ಚಿನ ಅನುಕೂಲತೆ ಮತ್ತು ಸ್ಥಳಗಳ ಉತ್ತಮ ನಿರ್ವಹಣೆಯನ್ನು ಈ ಉದ್ದೇಶಿತ ಕಾಯ್ದೆ ಹೊಂದಲಿದೆ.
ಮುಖ್ಯ ಮಂತ್ರಿಗಳ ಕಚೇರಿ ಮೂಲಗಳ ಪ್ರಕಾರ ಸುಗ್ರೀವಾಜ್ಞೆಯಲ್ಲಿ ಅಗತ್ಯ ಸುಧಾರಣೆಗಳನ್ನು ಸೇರಿಸಲು ಅಧಿಕಾರಿಗಳು ಕಾನೂನು ತಜ್ಞರಿಂದ ಪ್ರತಿಕ್ರಿಯೆ ಪಡೆಯಬೇಕು ಎಂದು ಆದಿತ್ಯನಾಥ್ ಸೂಚಿಸಿದ್ದಾರೆ. ಉದ್ದೇಶಿತ ಕಾನೂನು ಪೂಜಾ ಸ್ಥಳಗಳ ಉತ್ತಮ ನಿರ್ವಹಣೆಗಾಗಿ ಸಮಗ್ರ ನೀತಿ ಚೌಕಟ್ಟನ್ನು ಒದಗಿಸಲಿದೆ. ಇದಕ್ಕಾಗಿ ಸರ್ಕಾರ ಕಳೆದ ತಿಂಗಳು ರಾಜ್ಯದಲ್ಲಿ ಧರ್ಮಾರ್ಥ ಕಾರ್ಯಾ ವಿಭಾಗ್ ಅಡಿಯಲ್ಲಿ ಧಾರ್ಮಿಕ ವ್ಯವಹಾರಗಳ ನಿರ್ದೇಶನಾಲಯವನ್ನು ರಚಿಸುವುದಾಗಿ ಘೋಷಿಸಿತ್ತು. ಈ ನಿರ್ದೇಶನಾಲಯದ ಪ್ರಧಾನ ಕಚೇರಿಯು ವಾರಣಾಸಿಯಲ್ಲಿರಲಿದ್ದು ಉಪ-ಪ್ರಧಾನ ಕಚೇರಿ ಗಾಜಿಯಾಬಾದ್ ನಲ್ಲಿ ಇರುತ್ತದೆ.
ಹೊಸದಾಗಿ ರೂಪುಗೊಂಡ ಈ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಬುಲಂದ್ಶಹರ್ ನ ಧಾರ್ಮಿಕ ಸ್ಥಳವೊಂದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಉನ್ನತ ನ್ಯಾಯಾಲಯದ ಟಿಪ್ಪಣಿಯನ್ನು ಗಮನದಲ್ಲಿಟ್ಟುಕೊಂಡು ಈ ಸುಗ್ರೀವಾಜ್ಞೆಯನ್ನು ತರುವ ಸಿದ್ಧತೆಗಳು ಈಗ ಒಂದು ವರ್ಷದಿಂದ ನಡೆದಿವೆ. ರಾಜ್ಯದ ದೇವಾಲಯಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುವ ಕಾನೂನು ಇಲ್ಲ ಎಂದು ಸುಪ್ರೀಂ ಕೋರ್ಟ್ 2019 ರ ಅಕ್ಟೋಬರ್ 22 ರಂದು ಹೇಳಿತ್ತಲ್ಲದೆ ಈ ವಿಷಯದಲ್ಲಿ ಸರ್ಕಾರವು ಕಾನೂನು ಜಾರಿಗೆ ತರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ.
ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟು ನಡೆಸುತಿತ್ತು. ಅದು ದೇವಾಲಯದಲ್ಲಿ ಕೆಲಸ ಮಾಡುವ ಪುರೋಹಿತರಿಗೆ ದೇವಾಲಯದಲ್ಲಿ ದೇಣಿಗೆ ಮತ್ತು ಅರ್ಪಣೆಗಳಿಗೆ ಸಂಬಂಧಿಸಿದ ಎಲ್ಲಾ ಹಕ್ಕುಗಳನ್ನು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು. ಅಂದಿನಿಂದ, ಯುಪಿ ಸರ್ಕಾರವು ಧಾರ್ಮಿಕ ಸ್ಥಳಗಳ ನಿರ್ವಹಣೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಕಾನೂನು ತರಲು ಪ್ರಯತ್ನಿಸುತ್ತಿದೆ. ಮೂಲಗಳ ಪ್ರಕಾರ, ಅಂತಹ ವಿವಾದಗಳನ್ನು ಪರಿಹರಿಸಲು ಹಲವಾರು ಸಮಿತಿಗಳು ಈಗಾಗಲೇ ಅನೇಕ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ದೊಡ್ಡ ವಿವಾದಗಳು ಹೆಚ್ಚಾಗಿ ನ್ಯಾಯಾಲಯಗಳನ್ನು ತಲುಪುತ್ತವೆ. ಮುಖ್ಯ ಮಂತ್ರಿಗಳು ಈ ಸುಗ್ರೀವಾಜ್ಞೆಗೆ ಅನುಮತಿ ನೀಡಿದ್ದರೂ, ಈ ಕಾನೂನು ಸಂತರು ಮತ್ತು ಪುರೋಹಿತರಲ್ಲಿ ಹೆಚ್ಚು ಅಸಮಾಧಾನವನ್ನುಂಟುಮಾಡುತ್ತದೆ ಎಂಬ ಕಾರಣದಿಂದ ಇದನ್ನು ಹೆಚ್ಚು ಪ್ರಚಾರ ನೀಡದೇ ಜಾರಿಗೆ ತರಲಿದೆ ಎಂದು ಸಿಎಂಒ ಮೂಲಗಳು ತಿಳಿಸಿವೆ.
ಕಳೆದ ತಿಂಗಳು, ಅಖರಾ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಸರ್ಕಾರವು ಅಂತಹ ಯಾವುದೇ ಸುಗ್ರೀವಾಜ್ಞೆಯನ್ನು ಜಾರಿಗೆ ತರುವ ಮೊದಲು ಸಂತರೊಂದಿಗೆ ಅದನ್ನು ಚರ್ಚಿಸಬೇಕು ಎಂದು ಹೇಳಿದ್ದರು. ಮಠಗಳು ಮತ್ತು ದೇವಾಲಯಗಳಲ್ಲಿ ವಾಸಿಸುವ ಸಂತರು ಮತ್ತು ಪುರೋಹಿತರ ಚಟುವಟಿಕೆಗಳನ್ನು ಯಾವುದೇ ರೀತಿಯಲ್ಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ತರುವುದು ಸೂಕ್ತವಲ್ಲ ಎಂದ ಅವರು, ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ವ್ಯವಸ್ಥೆಯು ಸಮರ್ಪಕವಾಗಿದೆ ಮತ್ತು ಅದನ್ನು ಮುಂದುವರಿಸಬೇಕು ಎಂದು ಹೇಳಿದರು. ಕ್ರಿಶ್ಚಿಯನ್ ಧಾರ್ಮಿಕ ಮುಖಂಡರು ಕಾನೂನಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಾರೆ.
ಲಕ್ನೋ ಮೂಲದ ಶಿಯಾ ಧರ್ಮಗುರು ಮೌಲಾನಾ ಸೈಫ್ ಅಬ್ಬಾಸ್ ಅವರು ಈ ಸುಗ್ರೀವಾಜ್ಞೆಗೆ ಸಂಬಂಧಿಸಿದ ಯಾವುದೇ ರೀತಿಯ ಮಾಹಿತಿಯು ನಮಗೆ ಸಿಕ್ಕಿಲ್ಲ. ಅವರ ಪ್ರಕಾರ, ಕೃಷಿ ಕಾನೂನುಗಳನ್ನು ತರುವಾಗ ಕೇಂದ್ರವು ಮಾಡಿದ ತಪ್ಪನ್ನು ಧರ್ಮಕ್ಕೆ ಸಂಬಂಧಿಸಿದ ವಿಷಯದಲ್ಲಿ ಉತ್ತರ ಪ್ರದೇಶ ಸರ್ಕಾರ ಪುನರಾವರ್ತಿಸಬಾರದು. ಮುಸ್ಲಿಂ ಧರ್ಮದಲ್ಲಿ, ಶಿಯಾ ಮತ್ತು ಸುನ್ನಿ ವಕ್ಫ್ ಮಂಡಳಿಗಳಿಗೆ ಈಗಾಗಲೇ ಕಾನೂನುಗಳಿವೆ, ಅದರ ಮೂಲಕ ಧಾರ್ಮಿಕ ಕೇಂದ್ರಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಆದ್ದರಿಂದ, ಈ ಸುಗ್ರೀವಾಜ್ಞೆಯ ಬಗ್ಗೆ ಕೆಲವು ಸ್ಪಷ್ಟೀಕರಣ ಅಗತ್ಯ, ಎಂದು ಅವರು ಹೇಳಿದರು. ಲಕ್ನೋದ ಅಸೆಂಬ್ಲಿ ಆಫ್ ಬಿಲೀವರ್ಸ್ ಚರ್ಚ್ನ ಪಾದ್ರಿ ಫಾದರ್ ಮೋರಿಸ್ ಕುಮಾರ್ ಅವರು ಪ್ರಸ್ತಾವಿತ ಕಾನೂನಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ಸರ್ಕಾರ ಯಾವುದೇ ಚರ್ಚೆಗೆ ಕರೆದಿಲ್ಲ ಎಂದು ಹೇಳಿದರು.