ದೇಶದ ರೈತರ ಭಾವನೆಗಳನ್ನು ಅರ್ಥೈಸಿಕೊಳ್ಳದೆ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು ರೈತ ವಿರೋಧಿ ಧೋರಣೆ ತೋರಿದ ಕಾರಣ ದೇಶಾದ್ಯಂತ ರೈತರು ಕೊರೆಯುವ ಚಳಿಯಲ್ಲಿ 48 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಮನಗಂಡು ಈ ಪ್ರತಿಭಟನೆಯಲ್ಲಿ 74 ರೈತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯ ಕಾಯ್ದೆಗಳಿಗೆ ತಡೆ ಹಾಕಿರುವುದು ರೈತರ ಹೋರಾಟದ ಮೊದಲ ಹಂತದ ಗೆಲುವಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಧ್ಯಕ್ಷ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾದ್ಯಕ್ಷರಾಗಿರುವ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.
ಆದರೆ ತಜ್ಞರ ಸಮಿತಿ ರಚನೆ ಮಾಡಿರುವುದು ರೈತ ಸಂಘಟನೆಗಳಿಗೆ ನಿರಾಶೆ ತಂದಿದೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತಜ್ಞರು ಹಾಗೂ ಹೋರಾಟ ನಿರತ ರೈತ ಮುಖಂಡರುಗಳ ಒಳಗೊಂಡಂತೆ ಸಮಿತಿ ರಚನೆ ಮಾಡುವ ಬಗ್ಗೆ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಪುನರ್ ಪರಿಶೀಲನೆ ನಡೆಸಬೇಕು. ಈಗ ರಚಿಸಿರುವ ಸಮಿತಿಯಲ್ಲಿ ಸರ್ಕಾರದ ಕಾಯೆಗಳ ಬಗ್ಗೆ ಒಲವು ತೋರಿರುವ ಇಬ್ಬರು ಸದಸ್ಯರು ಇರುವ ಕಾರಣ ಇವರು ನೀಡುವ ವರದಿಗಳ ಬಗ್ಗೆ ದೇಶದ ರೈತರಿಗೆ ವಿಶ್ವಾಸ ಮೂಡಿ ಬರುವುದಿಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾದ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.