ಇತ್ತೀಚೆಗೆ ಜೈಪುರ-.ದೆಹಲಿ ಗಡಿಯಲ್ಲಿರುವ ಶಹಜಹಾನ್ಪುರ್ ರೈತ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಹೋರಾಟ ನಿರತ ರೈತರಿಗೆ ಬೆಂಬಲ ಸೂಚಿಸಿ ಬಿಜೆಪಿ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು.
ರೈತ ವಿರೋಧಿ ಕಾನೂನುಗಳನ್ನು ಲಾಕ್ಡೌನ್ ಅವಧಿಯಲ್ಲಿ ಅವಸರದಲ್ಲಿ ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೇಧಾ ಪಾಟ್ಕರ್ ಅವರು, ” ಇತ್ತ ಬಿಜೆಪಿ ಸರ್ಕಾರ ಕಾನೂನುಗಳನ್ನು ಜಾರಿಗೆ ತಂದು, ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿರುವ ಇದೇ ಪಕ್ಷದ ಮುಖ್ಯಮಂತ್ರಿ ಶಿವರಾಜ್ ಸಿಂಘ್ ಚೌಹಾಣ್, ತಮ್ಮ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲು ಬರಲಿ ಅವರನ್ನು ಬಂಧಿಸಲಾಗುವುದು ಎಂದು ಹೇಳಿಕೆ ನೀಡುತ್ತಿದ್ದಾರೆ. ಇದು ಬಿಜೆಪಿ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುತ್ತದೆ” ಎಂದು ಹೇಳಿದರು.
ಇಂತಹ ಕಾನೂನು ವಿರೋಧಿಸಿ ರೈತರು ನಡೆಸಿರುವ ಈ ಮಹಾ ಹೋರಾಟ, ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುತ್ತದೆ ಮತ್ತು ಶೋಷಿತರು ದನಿ ಎತ್ತುವುದಕ್ಕೆ ನೆರವಾಗುತ್ತಿದೆ’ ಎಂದು ಹೇಳಿದರು.
ಇದುವರೆಗೂ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರೊಂದಿಗೆ ನಡೆಸಿದ ಎಲ್ಲಾ ಮಾತುಕತೆ ಸಭೆಗಳು ವಿಫಲವಾಗಿದೆ. ಹೀಗಾಗಿ ಸರ್ಕಾರದೊಂದಿಗೆ ಇನ್ನೂ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸಿದ ರೈತ ಸಂಘಟನೆಗಳು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ರೈತರ ಈ ಹೋರಾಟಕ್ಕೆ ಕೇವಲ ಕಾಂಗ್ರೆಸ್, ಎಎಪಿ, ಡಿಎಂಕೆ, ಎಸ್ಪಿ, ಸಿಪಿಎಂ, ಸಿಪಿಐ, ಟಿಆರ್ಎಸ್, ಟಿಎಂಸಿ, ಆರ್ಜೆಡಿ, ಎಸ್ಎಡಿ ರೀತಿಯ ರಾಜಕೀಯ ಪಕ್ಷಗಳು ಮಾತ್ರವಲ್ಲ ವಿದೇಶದ ಹಲವು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ.
ರಾಜಕೀಯ ಪಕ್ಷಗಳ ಜತೆಗೆ ಪಂಜಾಬ್ನ ಕ್ರೀಡಾ ಕ್ಷೇತ್ರದ ಕೆಲವು ಪ್ರಖ್ಯಾತರು ಮತ್ತು ಸಿನಮಾ ನಟರು ತಮ್ಮ ಸಾಧಕ ಪ್ರಶಸ್ತಿಗಳನ್ನು ಹಿಂತಿರುಗಿಸುವ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ರೈತ ಸಮಸ್ಯೆಗಳನ್ನು ಇತ್ಯರ್ಥಪಡಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
ಎಂಎಸ್ಪಿ ಹಾಗೂ ಎಪಿಎಂಸಿ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ನಿರ್ಧಾರ ಸರ್ಕಾರ ಬದಲಿಸಬೇಕು. ಹಾಗೆಯೇ ಹೊಸ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ.