ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಶಿವಮೊಗ್ಗದಲ್ಲಿ ಭಾಗಿಯಾದ ಕಾರ್ಯಕ್ರಮದಲ್ಲಿ ಕನ್ನಡ ಅವಗಣಿಸಿ ಹಿಂದಿ ಮಾತ್ರ ಬಳಸಿರುವುದು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕರ್ನಾಟಕದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ ಎಂದು ಕನ್ನಡಿಗರು ಸಾಮಾಜಿಕ ಜಾಲತಾಣ ಮೂಲಕ ಬಿಜೆಪಿಗೆ ಛೀಮಾರಿ ಹಾಕುತ್ತಿದ್ದಾರೆ.
ಶಿವಮೊಗ್ಗದ ಭದ್ರಾವತಿಯಲ್ಲಿ ಆರಂಭವಾಗಲಿರುವ “ಕ್ಷಿಪ್ರ ಕಾರ್ಯ ಪಡೆ” (Rapid Action Force) ಘಟಕದ ಶಂಕುಸ್ಥಾಪನೆಯನ್ನು ಅಮಿತ್ ಶಾ ನೆರವೇರಿಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡವನ್ನು ಎಲ್ಲೂ ಬಳಸದೆ, ಬರೀ ಹಿಂದಿಯನ್ನು ಮಾತ್ರ ಬಳಸಲಾಗಿತ್ತು. ಇದೀಗ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಕನ್ನಡಿಗರು, ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವುದು ಇದೇ ಮೊದಲೇನಲ್ಲ. ಹಿಂದಿ ಹೇರಿಕೆ, ನೆರೆ ಪರಿಹಾರ, ಜಿಎಸ್ಟಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ಕುರಿತಂತೆ ಬಿಜೆಪಿ ಸಾಕಷ್ಟು ಬಾರಿ ಕನ್ನಡಿಗರ ವಿರೋಧ ಕಟ್ಟಿಕೊಂಡಿದೆ.