ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಬರೆಸಿ ಅಧಿಕಾರ ದುರಪಯೋಗಪಡಿಸಿಕೊಂಡ ಆರೋಪದ ಮೇಲೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು (ACB) ಮೂವರು ಸರ್ಕಾರಿ ಅಧಿಕಾರಿಗಳ ಮನೆಗೆ ಬುಧವಾರ ಮುಂಜಾನೆ ದಾಳಿ ನಡೆಸಿದೆ.
ಬೆಂಗಳೂರು ಉತ್ತರದ ಯಲಹಂಕ ಹೋಬಳಿಯ ಚಿಕ್ಕಬೆಟ್ಟಹಳ್ಳಿ ಗ್ರಾಮದಲ್ಲಿರುವ ಗೋಮಾಳ ಜಮೀನಿನ ಕುರಿತಾಗಿ ಈಗಾಗಲೇ ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಜಮೀನಿನ ಪರಾಭಾರೆಯನ್ನು ನಿಷೇಧಿಸಲಾಗಿದೆ ಎಂಬ ಆದೇಶವನ್ನು ನ್ಯಾಯಾಲಯ ನೀಡಿದೆ. ಆದರೂ, ಕಂದಾಯ ನಿರೀಕ್ಷಕರಾದ ಬಿ ಕೆ ಆಶಾ, ಶಿರಸ್ತೇದಾರರಾದ ಪಿ ಎಸ್ ಆರ್ ಪ್ರಸಾದ್ ಮತ್ತು ಕೆ ವಿ ನಾಯ್ಡು ಎಂಬುವವರು ಈ ಜಮೀನನ್ನು ಖಾಸಗಿಯವರ ಹೆಸರಿಗೆ ಪರಾಭಾರೆ ಮಾಡಿದ್ದಾರೆ.
ಯಲಹಂಕ ತಾಲೂಕು ಕಚೇರಿಯಲ್ಲಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಅವುಗಳ ಆಧಾರದ ಮೇಲೆ ಜಮೀನನ್ನು ಪರಾಭಾರೆ ಮಾಡಲಾಗಿದೆ. ಇದರ ಮೂಲಕ ಅಕ್ರಮವಾಗಿ ಲಾಭ ಗಳಿಸಿದ್ದಾರೆಂದು ದೂರು ನೀಡಿದವರು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಮೂವರ ಮನೆಗೆ ಬುಧವಾರ ಮುಂಜಾನೆ ದಾಳಿ ನಡೆದಿದ್ದು, ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಎಸಿಬಿ ಪತ್ರಿಕಾ ಪ್ರಕಟಣೆ ತಿಳಿಸಿದೆ.