ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನ ಕೊನೆಗೂ ಒಂದು ಅಂತ್ಯ ಕಂಡುಬಂದಿದೆ. ಏಳು ಮಂದಿ ಸಂಭಾವ್ಯ ಮಂತ್ರಿಗಳ ಪಟ್ಟಿ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಅಬಕಾರಿ ಸಚಿವ ಎಚ್. ನಾಗೇಶ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಿಎಂ, ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ , ಮುರುಗೇಶ್ ನಿರಾಣಿ, ಎಸ್ ಅಂಗಾರ, ಎಂಟಿಬಿ ನಾಗರಾಜ್, ಆರ್ ಶಂಕರ್, ಸಿಪಿ ಯೋಗೇಶ್ವರ್ ಅವರ ಹೆಸರನ್ನು ರಾಜಭವನಕ್ಕೆ ಕಳುಹಿಸಲಾಗಿದೆ. ಸಂಜೆ 3:30 ಕ್ಕೆ ಏಳು ಜನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದಿದ್ದಾರೆ.
ಸದ್ಯ ಒಂದು ಸಚಿವ ಸ್ಥಾನವನ್ನು ಉಳಿಸಲಾಗಿದ್ದು ಅದರ ಕುರಿತು ಮುಂದೆ ಬಿಜೆಪಿ ರಾಷ್ಟ್ರ ನಾಯಕರ ರಾಜ್ಯ ಭೇಟಿಯ ಬಳಿಕ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ರಾಜರಾಜೇಶ್ವರಿ ನಗರದ ಉಪಚುನಾವಣಾ ಪ್ರಚಾರದಲ್ಲಿ ಮುನಿರತ್ನ ಅವರನ್ನು ಮುಂದಿನ ಮಂತ್ರಿ ಎಂದು ಪ್ರಚಾರ ಮಾಡಿದ್ದ ಸಿಎಂ ಯಡಿಯೂರಪ್ಪ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ಶಾಸಕರ ಪಟ್ಟಿಯಲ್ಲಿ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರಶ್ನಿಸಿದಾಗ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಚಿವ ಸಂಪುಟ ವಿಸ್ತರಣೆ ಪಟ್ಟಿ ಬಿಡುಗಡೆ ಬಳಿಕ ಮಂತ್ರಿ ಸ್ಥಾನ ಆಕಾಂಕ್ಷಿಗಳು ಮುಖ್ಯಮಂತ್ರಿ ವಿರುದ್ಧ ಕಿಡಿ ಕಾರಲು ಶುರು ಮಾಡಿದ್ದಾರೆ.
ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಚ್ ವಿಶ್ವನಾಥ್ ʼ ನೀವು 15 ಜನರ ಭಿಕ್ಷೆಯಲ್ಲಿ ಮುಖ್ಯಮಂತ್ರಿಯಾಗಿದ್ದೀರ, ಅವರ ಮರ್ಜಿಯಲ್ಲಿ ನೀವಿದ್ದೀರʼ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಆದರೆ ಪಕ್ಷದ ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ಮುನಿರತ್ನ ಅವರಿಗೆ ಮಂತ್ರಿ ಸ್ಥಾನ ನೀಡಲು ನಿರಂತರವಾಗಿ ಹೈಕಮಾಂಡಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ಪಕ್ಷದ ವರಿಷ್ಠರು ಮುನಿರತ್ನ ಅವರಿಗೆ ಮಂತ್ರಿ ಸ್ಥಾನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ರಾಜರಾಜೇಶ್ವರಿ ಉಪಚುನಾವಣೆಗೆ ಟಿಕೆಟ್ ನೀಡುವಾಗಲೂ ಮುನಿರತ್ನ ಅವರನ್ನು ಕೊನೆಯ ಕ್ಷಣದವರೆಗೂ ಸತಾಯಿಸಲಾಗಿತ್ತು. ಅಂತಿಮವಾಗಿ ಯಡಿಯೂರಪ್ಪ ಅವರ ಸತತ ಪ್ರಯತ್ನದಿಂದ ಟಿಕೆಟ್ ಮುನಿರತ್ನರಿಗೆ ನೀಡಲಾಗಿತ್ತು.