ಕಳೆದ ವಾರ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಜನಸಮೂಹವೊಂದು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಶತಮಾನಗಳಷ್ಟು ಪುರಾತನವಾದ ಹಿಂದೂ ದೇವಾಲಯವನ್ನು ಪುನರ್ ನಿರ್ಮಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇವಾಕ್ಯೂ ಪ್ರಾಪರ್ಟಿ ಟ್ರಸ್ಟ್ ಬೋರ್ಡ್ (ಇಪಿಟಿಬಿ) ಗೆ ಆದೇಶಿಸಿದೆ. ದೇವಾಲಯದ ಧ್ವಂಸ ಪ್ರಕರಣವು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಇರಿಸು-ಮುರಿಸು ತರಿಸುವಂತಹ ಸಂಗತಿಯೆಂದು ಸುಪ್ರೀಂ ಕೋರ್ಟ್ ಹೇಳಿದೆ.
ದಾಳಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸ್ಥಳೀಯ ಅಧಿಕಾರಿಗಳಿಗೆ ಜನವರಿ 5 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿತ್ತು. ಪಾಕಿಸ್ತಾನದಾದ್ಯಂತದ ಎಲ್ಲಾ ಕ್ರಿಯಾತ್ಮಕ ಮತ್ತು ಕಾರ್ಯನಿರ್ವಹಿಸದ ದೇವಾಲಯಗಳು ಮತ್ತು ಗುರುದ್ವಾರಗಳ ವಿವರಗಳನ್ನು ಸಲ್ಲಿಸುವಂತೆ ಮಂಡಳಿಗೆ ನಿರ್ದೇಶಿಸಿದೆ ಎಂದು ಡಾನ್(Dawn) ಪತ್ರಿಕೆ ವರದಿ ಮಾಡಿದೆ.
ಖೈಬರ್ ಪಖ್ತುನ್ಖ್ವಾ (ಕೆಪಿ) ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿರುವ ದೇವಾಲಯದ ಮೇಲೆ ಬುಧವಾರ ಜಾಮಿಯತ್ ಉಲೆಮಾ-ಎ-ಇಸ್ಲಾಂ ಪಕ್ಷದ (ಫಜಲ್ ಉರ್ ರೆಹಮಾನ್ ಗುಂಪು) ಸದಸ್ಯರು ನಡೆಸಿದ ದಾಳಿಯು ಮಾನವ ಹಕ್ಕುಗಳ ಕಾರ್ಯಕರ್ತರು, ಪ್ರಗತಿಪರರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರಿಂದ ತೀವ್ರ ಖಂಡನೆಗೆ ಗುರಿಯಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಂಗಳವಾರ ನಡೆದ ವಿಚಾರಣೆಯ ವೇಳೆ, ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ನೇತೃತ್ವದ ಮೂವರು ಸದಸ್ಯರ ಪೀಠವು ದೇಶಾದ್ಯಂತದ ದೇವಾಲಯಗಳ ಮೇಲೆ ನಡೆದಿರುವ ಅತಿಕ್ರಮಣಗಳನ್ನು ತೆರವುಗೊಳಿಸಲು ಮತ್ತು ಅತಿಕ್ರಮಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಪಿಟಿಬಿಗೆ ನಿರ್ದೇಶನ ನೀಡಿದೆ.
ಇಪಿಟಿಬಿ ಒಂದು ಶಾಸನಬದ್ಧ ಮಂಡಳಿಯಾಗಿದ್ದು, ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದ ಹಿಂದೂಗಳು ಮತ್ತು ಸಿಖ್ಖರ ಧಾರ್ಮಿಕ ಆಸ್ತಿ ಮತ್ತು ದೇವಾಲಯಗಳನ್ನು ನಿರ್ವಹಿಸುತ್ತಾ ಬಂದಿದೆ.
ದಾಳಿಯಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ 109 ಜನರನ್ನು ಬಂಧಿಸಲಾಗಿದ್ದು, ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸೇರಿದಂತೆ 92 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆದರೆ ಪೊಲೀಸ್ ಅಧಿಕಾರಿಗಳ ʼಕೇವಲ ಅಮಾನತುʼ ಸಾಕಾಗುವುದಿಲ್ಲ, ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಕೋರ್ಟ್ ಹೇಳಿದೆ. ಅಲ್ಲದೆ, ದೇವಾಸ್ಥಾನ ಉರುಳಿಸಲು ಪ್ರಚೋದನೆ ನೀಡಿದ ಮೌಲ್ವಿ ಷರೀಫ್ ಅವರಿಂದ ದೇವಾಲಯದ ಪುನರ್ನಿರ್ಮಾಣಕ್ಕಾಗಿ ಹಣವನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ.
ಘಟನೆಯು “ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಮುಜುಗರವನ್ನುಂಟುಮಾಡಿದೆ” ಎಂದು ನ್ಯಾಯಮೂರ್ತಿ ಅಹ್ಮದ್ ಹೇಳಿದ್ದಾರೆ.