ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಇಂದು ಈ ಹೋರಾಟವನ್ನು ಬೆಂಬಲಿಸಿ ಪಂಜಾಬಿನ ಕ್ರೀಡಾಪಟುಗಳು ಪ್ರಶಸ್ತಿ ವಾಪಸ್ ಮಾಡಲಿದ್ದಾರೆ. ನಾಳೆ (ಡಿಸೆಂಬರ್ 8) ಭಾರತ್ ಬಂದ್ ನಡೆಯಲಿದೆ. ನಾಳಿದ್ದು (ಡಿಸೆಂಬರ್ 9) ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.
ಒಂದೆಡೆ ರೈತರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ರೈತರಿಗೆ ಪೂರಕವಾಗಿಲ್ಲದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಎಪಿಎಂಸಿ ಮಂಡಿಗಳ ಬಗೆಗಿನ ಕಳವಳವನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವುದು. ಕನಿಷ್ಠ ಬೆಂಬಲ ಬೆಲೆ ಪದ್ದತಿಯನ್ನು ಮುಂದುವರೆಸಲಾಗುವುದು ಎಂದು ಹೇಳುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದಕ್ಕೆ ಸಂಬಂಧಿಸಿದಂತೆ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಈಗಾಗಲೇ 5 ಸುತ್ತಿನ ಸಭೆಗಳು ನಡೆದಿವೆ. ಕಳೆದ ವಾರವೊಂದರಲ್ಲೇ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್, ವಾಣಿಜ್ಯ ವ್ಯವಹಾರಗಳ ಸಂಪುಟ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಮಂದಿ ಪ್ರತಿನಿಧಿಗಳ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ 3 ಸಭೆಗಳಾಗಿವೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳು ಕೇಂದ್ರ ಸರ್ಕಾರದ ತಂದಿರುವ ಕೃಷಿ ಕಾನೂನುಗಳು ಹೇಗೆ ರೈತರಿಗೆ ಮಾರಕವಾಗಿವೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ಸಿದ್ದವಿಲ್ಲ. ಹೀಗೆ ಎರಡೂ ಕಡೆಯಿಂದ ಬಿಗಿ ಪಟ್ಟು ಹಾಕಲಾಗುತ್ತಿರುವುದರಿಂದ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಂಡುಬರುತ್ತಿಲ್ಲ.
ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ನಡೆದಿರುವ 5 ಸಭೆಗಳೂ ವಿಫಲವಾಗಿರುವುದರಿಂದ ರೈತರು ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ. 12ನೇ ದಿನಕ್ಕೆ ಕಾಲಿಟ್ಟಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ‘ದೆಹಲಿ ಚಲೋ’ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ಈಗ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಕೆನಡಾ ಪ್ರಧಾನಿ, ಬ್ರಿಟನ್ನಿನ 36 ಸಂಸದರು ಮತ್ತಿತರರು ಬೆಂಬಲ ಸೂಚಿಸಿದ್ದಾರೆ. ದೆಹಲಿ ಗಡಿಯಲ್ಲಿ ಮಾತ್ರವಲ್ಲದೆ ದೇಶದ ಬೇರೆಡೆಯೂ ಪ್ರತಿಭಟನೆ ನಡೆಸುವಂತೆ ರೈತರು ಕರೆ ಕೊಟ್ಟಿದ್ದಾರೆ. ದೇಶದ 500ಕ್ಕೂ ರೈತ ಸಂಘಟನೆಗಳ ಒಕ್ಕೂಟ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಅರ್ಡಿನೇಷನ್ ಕಮಿಟಿ (AIKCC) ಸಂಘಟಿಸಿರುವ ಈ ಚಳವಳಿ ಯಾವ ಸ್ವರೂಪ ಪಡೆದುಕೊಳ್ಳಲಿದೆ? ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಒಪ್ಪಿ ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯುತ್ತದೆಯೆ? ಇಲ್ಲವೇ? ಕೇಂದ್ರ ಸರ್ಕಾರ ನಿಲುವು ಸಡಿಲಿಸದಿದ್ದರೆ ರೈತರು ಮುಂದೇನು ಮಾಡಲಿದ್ದಾರೆ ಎಂಬ ಸಂಗತಿಗಳು ಇಂದು, ನಾಳೆ ಮತ್ತು ನಾಳಿದ್ದು ನಿರ್ಧಾರವಾಗಲಿವೆ. ಏಕೆಂದರೆ?
ಇಂದು
ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಇಂದು ಪಂಜಾಬಿನ ಕ್ರೀಡಾಪಟುಗಳು ಪ್ರಶಸ್ತಿ ವಾಪಸ್ ಮಾಡಲಿದ್ದಾರೆ. ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕರ್ತಾರ್ ಸಿಂಗ್, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಸಜ್ಜನ್ ಸಿಂಗ್, ರಾಜ್ಬೀರ್ ಕೌರ್ ಈಗಾಗಲೇ ಪ್ರಶಸ್ತಿ ವಾಪಸ್ ನೀಡುವುದಾಗಿ ಘೋಷಿಸಿದ್ದು ಇಂದು ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ (ರಾಷ್ಟ್ರಪತಿಗಳಿಗೆ) ಕಳುಹಿಸಿಕೊಡಲಿದ್ದಾರೆ. ಇದರಿಂದ ರೈತರ ಹೋರಾಟ ಬೆಂಬಲಿಸಿ ಪ್ರಶಸ್ತಿ ವಾಪಸ್ ಮಾಡುವ ಅಭಿಯಾನ ಆರಂಭವಾಗಲಿದ್ದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಕ್ರೀಡಾ ಕ್ಷೇತ್ರವಲ್ಲದೆ ಇತರೆ ಕ್ಷೇತ್ರಗಳ ಸೆಲಬ್ರಿಟಿಗಳು ಕೂಡ ಪ್ರಶಸ್ತಿ ವಾಪಸ್ ನೀಡುವ ಸಾಧ್ಯತೆ ಇದೆ.
ನಾಳೆ
ಕೇಂದ್ರ ಸರ್ಕಾರದೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿಲ್ಲದ ಕಾರಣ ರೈತ ಸಂಘಟನೆಗಳ ಒಕ್ಕೂಟ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಅರ್ಡಿನೇಷನ್ ಕಮಿಟಿ ನಾಳೆ (ಡಿಸೆಂಬರ್ 8) ಭಾರತ್ ಬಂದ್ ಗೆ ಕರೆ ನೀಡಿದೆ. ಭಾರತ್ ಬಂದ್ ಗೆ ರೈತ ಸಂಘಟನೆಗಳಲ್ಲದೆ ಇತರೆ ಸಂಘ ಸಂಸ್ಥೆಗಳಿಂದ, ರಾಜಕೀಯ ಪಕ್ಷಗಳಿಂದ ಮತ್ತು ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಭಾರತ್ ಬಂದ್ ಯಶಸ್ವಿಯಾದರೆ ರೈತರು ತಮ್ಮ ನಿಲುವನ್ನು ಇನ್ನಷ್ಟು ಬಿಗಿಗೊಳಿಸುವ, ಒಂದೊಮ್ಮೆ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದೇ ಇದ್ದರೆ ಕೇಂದ್ರ ಸರ್ಕಾರ ತನ್ನ ಪಟ್ಟನ್ನು ಸಡಿಲಿಸದಿರುವ ಸಾಧ್ಯತೆಗಳು ಇವೆ.
ನಾಳಿದ್ದು
ಈವರೆಗೆ ನಡೆದ ಸಭೆಗಳು ವಿಫಲವಾಗಿರುವುದರಿಂದ ಡಿಸೆಂಬರ್ 9ಕ್ಕೆ ಕೇಂದ್ರ ಸರ್ಕಾರ ರೈತರ ಜೊತೆಗೆ ಮತ್ತೊಂದು ಸಭೆ ಕರೆದಿದೆ. ಈವರೆಗೆ ನಡೆದಿರುವ ಸಭೆಗಳಲ್ಲಿ ಮೂಡದ ಒಮ್ಮತ ಮುಂದಿನ ಸಭೆಯಲ್ಲಿ ಮೂಡುವುದೇ? ಸಮಸ್ಯೆಗೆ ಪರಿಹಾರ ಸಿಗುವುದೇ ಎಂಬ ಅನುಮಾನ ಸಹಜವಾಗಿಯೇ ಹುಟ್ಟಿಕೊಂಡಿದೆ. ರೈತ ಸಮುದಾಯಕ್ಕೆ ಅಪಾಯಕಾರಿಯಾಗಿರುವ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದರೆ ಮಾತ್ರ ತಾವು ಪ್ರತಿಭಟನೆ ಕೈಬಿಡುವುದಾಗಿ ರೈತ ಸಂಘಟನೆಗಳು ಖಚಿತವಾಗಿ ಹೇಳಿರುವುದರಿಂದ ಕೇಂದ್ರ ಸರ್ಕಾರ ರೈತವಿರೋಧಿ ಕಾನೂನುಗಳನ್ನು ಹಿಂಪಡೆಯುತ್ತದೆಯೋ ಅಥವಾ ಪ್ರತಿಭಟನಾನಿರತ ರೈತರ ಮುಂದೆ ಬೇರೊಂದು ಪರಿಹಾರೋಪಾಯ ಇಟ್ಟು ಮನವೊಲಿಸಲಾಗುತ್ತದೆಯೋ ಎಂಬುದು ಮುಂದಿನ ಸಭೆಯಲ್ಲಿ ನಿರ್ಧಾರವಾಗಲಿದೆ.