ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ ನಂತರ ಏಳನೇ ಬಾರಿಗೆ ವೀಡಿಯೋ ಮೂಲಕ ಪ್ರಧಾನಿ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಭಾರತದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿ ಪ್ರಧಾನಿಯವರು ಭಾಷಣವನ್ನು ಮಾಡಿದ್ದಾರೆ.
ಕೋವಿಡ್‌ನಿಂದಾಗಿ ನೆಲಕ್ಕಪ್ಪಳಿಸಿದ್ದ ನಮ್ಮ ಜೀವನ ಮತ್ತೆ ಚಿಗುರುತ್ತಾ ಇದೆ. ಹಬ್ಬದ ವಾತಾವರಣ ಎಲ್ಲಡೆ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ನಾವು ನೆನಪಿಡಬೇಕಾದ್ದು, ಲಾಕ್‌ಡೌನ್ ಮುಗಿದಿರಬಹುದು ಆದರೆ, ಕರೋನಾ ಸೋಂಕು ಇನ್ನೂ ಮುಗಿದಿಲ್ಲ. ಈಗಲೂ ಅದು ನಮಗೆ ಅಪಾಯಕಾರಿಯೇ. ಭಾರತ ಈಗಿರುವ ಪರಿಸ್ಥಿತಿಯಿಂದ ಕೆಳಕ್ಕಿಯಲು ನಾವು ಬಿಡಬಾರದು. ಇನ್ನೂ ಮೇಲಕ್ಕೆತ್ತಲು ಪ್ರಯತ್ನ ಪಡಬೇಕು, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಕರೋನಾ ಸೋಂಕನ್ನು ದೊಡ್ಡ ಮಟ್ಟಿಗೆ ನಾವು ತಡೆ ಹಿಡಿದಿದ್ದೇವೆ. ಭಾರತದಲ್ಲಿ ಗುಣಮುಖರಾದ ಸೋಂಕಿತರ ಸಂಖ್ಯೆ ಬೇರೆಲ್ಲಾ ದೇಶಗಳಿಗಿಂತ ಅತೀ ಹೆಚ್ಚು. ಭಾರತದಲ್ಲಿ ಮೃತಪಟ್ಟವರ ಸಂಖ್ಯೆ ಅತೀ ಕಡಿಮೆ. ಪ್ರತೀ ಮಿಲಿಯನ್ ಜನಸಂಖ್ಯೆಗೆ ಕೇವಲ 83 ಸೋಂಕಿತರು ಸಾವನ್ನಪ್ಪಿದ್ದಾರೆ. ಬೇರೆ ದೇಶಗಳಲ್ಲಿ ಪ್ರತಿ ಮಿಲಿಯನ್‌ಗೆ 600 ಸಾವುಗಳು ಸಂಭವಿಸಿವೆ. 2000 ಪ್ರಯೋಗಾಲಯಗಳು ಕೋವಿಡ್ ಪರೀಕ್ಷೆ ನಡೆಸಲು ತಯಾರಾಗಿವೆ,” ಎಂದರು.
ಭಾರತದಲ್ಲಿ ಕೋವಿಡ್ ಟೆಸ್ಟ್‌ಗಳ ಸಂಖ್ಯೆ ಶೀಘ್ರವೇ 10 ಕೋಟಿಯನ್ನು ದಾಟಲಿದೆ. ಕರೋನಾ ವಿರುದ್ದದ ಹೋರಾಟದಲ್ಲಿ ಟೆಸ್ಟ್‌ಗಳೇ ನಮ್ಮ ಪ್ರಮುಖ ಅಸ್ತ್ರ. ಭಾರತದ ಬೃಹತ್ ಜನಸಂಖ್ಯೆಯನ್ನು ನಮ್ಮ ವೈದ್ಯರು ಹಾಗೂ ದಾದಿಯರು ತುಂಬಾ ಉತ್ತಮವಾಗಿ ಸಂಬಾಳಿಸಿದ್ದಾರೆ. ಆದರೆ, ಇದು ನಿರ್ಲ್ಯಕ್ಷಿಸುವ ಸಮಯವಲ್ಲ. ನೀವು ಮಾಸ್ಕ್ ಇಲ್ಲದೇ ಹೊರಗೆ ಬಂದರೆ, ನೀವು ನಿಮ್ಮನ್ನ, ನಿಮ್ಮ ಕುಟುಂಬವನ್ನು ಮತ್ತು ಹಿರಿಯರನ್ನು ಆಪತ್ತಿಗೆ ತಳ್ಳುತ್ತೀರಿ ಎಂದು, ಎಂದು ಎಚ್ಚರಿಕೆ ನೀಡಿದ್ದಾರೆ.
ಯೂರೋಪ್, ಅಮೇರಿಕಾ ಮತ್ತು ಇತರ ದೇಶಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾದ ಮೇಲೆ ಮತ್ತೆ ಏರಿಕೆ ಕಂಡಿದೆ. ಹಾಗಾಗಿ ಲಸಿಕೆ ದೊರೆಯುವವರೆಗೂ ನಾವು ತುಂಬಾ ಜಾಗರೂಕರಾಗಿರಬೇಕು. ಭಾರತದಲ್ಲಿಯೂ ಹಲವು ರೀತಿಯ ಲಸಿಕೆಯನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವೊಂದು ಪ್ರಯತ್ನಗಳು ಮುಂದುವರೆದ ಹಂತದಲ್ಲಿವೆ. ಕೋವಿಡ್ ಲಸಿಕೆಯು ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ದೊರೆಯುವಂತೆ ಮಾಡುತ್ತೇವೆ, ಎಂದು ಹೇಳಿದ್ದಾರೆ.