ಲವ್ ಜಿಹಾದ್ ಆಪಾದನೆ ಬಳಿಕ ತನ್ನ ಜಾಹಿರಾತು ಹಿಂಪಡೆದುಕೊಂಡ ತನಿಷ್ಕ್ ಬದ್ಧತೆ ಮೇಲೆ ಹಲವಾರು ಪ್ರಶ್ನೆಗಳೆದ್ದಿವೆ. ಈ ನಡುವೆ ತನಿಷ್ಕ್ ಜಾಹಿರಾತಿಗೆ ಬೆಂಬಲ ನೀಡಿ ಜಾಹಿರಾತು ಸಂಘಟನೆಗಳು ಮುಂದೆ ಬಂದಿವೆ.
ತನಿಷ್ಕ್ ಜಾಹಿರಾತಿನಲ್ಲಿ ಯಾವುದೇ ನೈತಿಕ ಮಾನದಂಡಗಳನ್ನು ಉಲ್ಲಂಘಿಸಲಾಗಿಲ್ಲ. ಯಾವುದೇ ವ್ಯಕ್ತಿ, ಸಂಘಟನೆ ಹಾಗೂ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ಜಾಹಿರಾತನ್ನು ನಿರ್ಮಿಸಿಲ್ಲ ಎಂದು ಜಾಹಿರಾತು ಕ್ಲಬ್ ಅಭಿಪ್ರಾಯಿಸಿದೆ. ಹಾಗೂ ಸೃಜನಶೀಲ ಅಭಿವ್ಯಕ್ತಿಗಳ ಮೇಲೆ ನಡೆದ ಆಧಾರರಹಿತ ಹಾಗೂ ಅಪ್ರಸ್ತುತ ದಾಳಿಯೆಂದು ಬಲಪಂಥೀಯ ದಾಳಿಯನ್ನು ಖಂಡಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತನಿಷ್ಕ್ ಜಾಹೀರಾತಿಗೆ ಸಂಬಂಧಿಸಿದಂತೆ ತನೀಷ್ಕ್ ಮತ್ತು ಅದರ ನೌಕರರ ಮೇಲೆ ನಡೆದ ಬೆದರಿಕೆ ಮತ್ತು ದಾಳಿಯನ್ನು ಭಾರತೀಯ ಮಾಧ್ಯಮ ಮತ್ತು ಜಾಹೀರಾತು ಉದ್ಯಮದ ಪರವಾಗಿ ಜಾಹೀರಾತು ಕ್ಲಬ್ ಬಲವಾಗಿ ಖಂಡಿಸುತ್ತದೆ ಎಂದು ತನ್ನ ಹೇಳಿಕೆಯಲ್ಲಿ ಅದು ತಿಳಿಸಿದೆ.
ಪ್ರೀತಿಗೆ ಯಾವುದೇ ಧಾರ್ಮಿಕ ಗಡಿಯಿಲ್ಲವೆಂಬ ಕಲ್ಪನೆಯ ಮೇಲೆ ಮುಸ್ಲಿಂ ಕುಟುಂಬವೊಂದು ತಮ್ಮ ಹಿಂದೂ ಸೊಸೆಗೆ ಸೀಮಂತ ಮಾಡುವ ದೃಶ್ಯವನ್ನು ಟಾಟಾ ಸಮೂಹದ ತನಿಷ್ಕ್ ಆಭರಣ ಮಳಿಗೆಯ ಜಾಹಿರಾತಿನಲ್ಲಿ ತೋರಿಸಲಾಗಿತ್ತು. ಇದಕ್ಕೆ ಬಲಪಂಥೀಯ ಗುಂಪುಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಲವ್ ಜಿಹಾದನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಆಪಾದಿಸಿ ಗುಜರಾತಿನ ತನಿಷ್ಕ್ ಮಳಿಗೆಯೊಂದಕ್ಕೆ ಬೆದರಿಕೆ ಕರೆಯೂ ಹೋಗಿತ್ತು. ತಮ್ಮ ವಹಿವಾಟು ಕುಸಿಯುವುದನ್ನು ಮನಗಂಡ ತನಿಷ್ಕ್, ತನ್ನ ಜಾಹಿರಾತನ್ನು ತಕ್ಷಣವೇ ಹಿಂಪಡೆಯಿತು.
ಅಂತರರಾಷ್ಟ್ರೀಯ ಜಾಹೀರಾತು ಸಂಘದ ಭಾರತೀಯ ವಿಭಾಗ ತನಿಷ್ಕ್ ಜಾಹಿರಾತಿನ ಮೇಲೆ ನಡೆದ ದಾಳಿಯನ್ನು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ತನಿಷ್ಕ್ ಹಾಗೂ ತನಿಷ್ಕ್ ಜಾಹಿರಾತಿನ ಪರವೂ ಅಭಿಯಾನ ನಡೆದಿದ್ದು, ಭಾರತದ ಜಾತ್ಯಾತೀತ ನಂಬಿಕೆಯ ಬುನಾದಿಯನ್ನು ಅಲುಗಾಡಿಸುವ ಪ್ರಯತ್ನ ಎಂದು ಬಲಪಂಥೀಯ ದಾಳಿಯನ್ನು ಹಲವರು ಖಂಡಿಸಿದ್ದಾರೆ.