ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಾಲ್ವರು ಮೇಲ್ಜಾತಿ ಪುರುಷರಿಂದ ಅತ್ಯಾಚಾರಕ್ಕೊಳಗಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ 19 ವರ್ಷದ ದಲಿತ ಹುಡುಗಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.
ಸೆಪ್ಟೆಂಬರ್ 14 ರಂದು ಭೀಕರ ಸಾಮೂಹಿಕ ಅತ್ಯಾಚಾರ ಮಾಡಿದ ಬಳಿಕ ಆರೋಪಿಗಳು ಹುಡುಗಿಯ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಹುಡುಗಿ ತನ್ನ ನಾಲಿಗೆ ಕಚ್ಚಿಕೊಂಡಿದ್ದು ನಾಲಿಗೆ ಕತ್ತರಿಸಲ್ಪಟ್ಟಿತ್ತು ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯಾಧಿಕಾರಿಗಳು ಹುಡುಗಿಯ ಮೇಲೆ ನಡೆದ ದಾಳಿಯ ತೀವ್ರತೆಯನ್ನು ವಿವರಿಸಿದ್ದಾರೆ. ಆಕೆಯ ಮೇಲೆ ನಡೆದ ದಾಳಿಯಲ್ಲಿ ಆಕೆಯ ಬೆನ್ನುಹುರಿಗೂ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಅಲಿಘರ್ ಆಸ್ಪತ್ರೆಯಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ರವಾನಿಸಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂತ್ರಸ್ತೆಯನ್ನು ಹೊಲಕ್ಕೆ ಬಲತ್ಕಾರದಿಂದ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಲಾಗಿದೆ, ದುಪ್ಪಟ್ಟದಿಂದ ಕತ್ತು ಹಿಸುಕಿ ಸಾಯಿಸಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿಗಳೂ ಆಕೆಯ ಗ್ರಾಮಕ್ಕೆ ಸೇರಿದ ಮೇಲ್ಜಾತಿಯವರೆನ್ನಲಾಗಿದ್ದು, ದಲಿತ ದೌರ್ಜನ್ಯ ತಡೆ ಕಾಯ್ದೆ ಹೊರತುಪಡಿಸಿ, ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯತ್ನ ಪ್ರಕರಣವನ್ನೂ ಅವರ ಮೇಲೆ ದಾಖಲಿಸಿ, ಬಂಧಿಸಲಾಗಿದೆ.
ಬಂಧಿತರನ್ನು ಸಂದೀ, ಆತನ ಸಂಬಂಧಿ ರವಿ, ಹಾಗೂ ಅವರ ಸಹವರ್ತಿ ಲವ್ ಕುಶ್ ಎಂದು ಗುರುತಿಸಲಾಗಿದ್ದು, ಸೆಪ್ಟೆಂಬರ್ 23 ರಂದು ಸಂತ್ರಸ್ತೆ ಪ್ರಜ್ಞೆ ಪಡೆದಾಗ ನೀಡಿದ ಹೇಳಿಕೆಯ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.

ತಮ್ಮ ಹಸುಗಳಿಗೆ ಹುಲ್ಲು ಕತ್ತರಿಸಲು ಹತ್ತಿರದ ಹೊಲಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ, ಅವಳಿಂದ 100 ಮೀಟರಷ್ಟೇ ದೂರದಲ್ಲಿದ್ದೆ, ನನಗೆ ಅವಳ ಕೂಗು ಕೇಳಿದ್ದರೆ ಬಹುಷ, ಅವಳನ್ನು ರಕ್ಷಿಸಬಹುದಿತ್ತು ಎಂದು ಸಂತ್ರಸ್ತೆಯ ತಾಯಿ ಗದ್ಗದಿತರಾಗಿ ಪತ್ರಕರ್ತರೊಂದಿಗೆ ಹೇಳಿದ್ದಾರೆ.
ಮುಖ್ಯ ಆರೋಪಿ ಸಂದೀಪ್ ಮತ್ತು ಆತನ ಕುಟುಂಬಸ್ಥರು “ತಮ್ಮ ಪ್ರದೇಶದಲ್ಲಿ ಯಾವಾಗಲೂ ದಲಿತರ ಮೇಲೆ ಕಿರುಕುಳ ನೀಡುತ್ತಿರುತ್ತಾರೆ” ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ. 19 ವರ್ಷಗಳ ಹಿಂದೆ ಸಂದೀಪ್‌ನ ಅಜ್ಜ, ಸಂತ್ರಸ್ತೆಯ ಅಜ್ಜನ ಮೇಲೆ ನಡೆಸಿದ ಹಲ್ಲೆ ಸಂಬಂಧಿಸಿ ದಲಿತ ದೌರ್ಜನ್ಯ ಕಾಯ್ದೆಯಡಿ ಮೂರು ತಿಂಗಳು ಬಂಧಿಸಲಾಗಿತ್ತು ಎಂಬುವುದನ್ನೂ ಅವರು ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯ ಸಹೋದರನ ಹೇಳಿಕೆಯ ಪ್ರಕಾರ, 19 ವರ್ಷಗಳ ಹಿಂದೆ ನಡೆದ ಆ ಘಟನೆಯ ಬಳಿಕ, ನಮ್ಮ ಕುಟುಂಬಸ್ಥರನ್ನು ಅವರು ಯಾವಾಗಲೂ ಏಕವಚನದಿಂದ ಕರೆಯುತ್ತಿದ್ದರು, ನಾವು ನಿರ್ಲಕ್ಷಿಸುತ್ತಿದ್ದೆವು, ಅವರು ನಮ್ಮ ಕುಟುಂಬದ ಮೇಲೆ ಹಗೆ ಸಾಧಿಸುತ್ತಿದ್ದರು, ಮುಖ್ಯ ಆರೋಪಿ ಮಾದಕ ವಸ್ತು ವ್ಯಸನಿಯಾಗಿದ್ದು, ಸದಾ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ, ಆದರೆ ಅವರ ಕುಟುಂಬದ ಪ್ರಭಾವಕ್ಕೆ ಹೆದರಿ ಯಾರೂ ದೂರು ದಾಖಲಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಎಷ್ಟೇ ವಿಜೃಂಬಿಸುತ್ತಿದ್ದರೂ, ಅವರ ಆಡಳಿತದಲ್ಲಿ ಅಪರಾಧ ಪ್ರಮಾಣ ಏರಿಕೆಯಾಗುತ್ತಿದೆ. ಅದರಲ್ಲೂ ಮಹಿಳೆ, ದಲಿತ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ಸಂಖ್ಯೆ, ಗುಂಪು ಹಲ್ಲೆಗಳ ಪ್ರಕರಣ ದಾಖಲಾಗುತ್ತಲೇ ಇದೆ.

ಉತ್ತರಪ್ರದೇಶದಲ್ಲಿ ಈ ಒಂದು ತಿಂಗಳಲ್ಲೇ ಮೂರು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಇಂಡಿಯಾ ಟುಡೆ ವರದಿ ಹೇಳುತ್ತದೆ. ದೆಹಲಿ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಘಟನೆ ಕಳೆದ ವಾರ ನಡೆದಿದ್ದು, ಚಲಿಸುತ್ತಿರುವ ಬಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಅಮಲು ಪದಾರ್ಥ ನೀಡಿ ಬಸ್ ಚಾಲಕ ಹಾಗೂ ನಿರ್ವಾಹಕ ಸತತ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಸೆಪ್ಟೆಂಬರ್ ತಿಂಗಳಾರಂಭದಲ್ಲಿ, ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಕಬ್ಬಿನ ಹೊಲದಲ್ಲಿ ಮೂರು ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಪೊಲೀಸ್ ವರದಿ ತಿಳಿಸಿತ್ತು.
ಲಖಿಂಪುರ ಜಿಲ್ಲೆಯೊಂದರಲ್ಲೇ ಆಗಸ್ಟ್ ಕೊನೆಯ ಮೂರು ವಾರದಲ್ಲಿ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ ಎಂದು ಸ್ಕ್ರಾಲ್.ಇನ್ ವರದಿಯಲ್ಲಿ ತಿಳಿಸಲಾಗಿದೆ. ಆಗಸ್ಟ್ 14 ರಂದು 13 ವರ್ಷದ ದಲಿತ ಬಾಲಕಿಯನ್ನು ಅತ್ಯಾಚಾರಗೈದು ಕತ್ತು ಹಿಸುಕಿ ಕೊಲೆಮಾಡಲಾಗಿತ್ತು. ಮತ್ತದೇ ಜಿಲ್ಲೆಯಲ್ಲಿ, ಅಗಸ್ಟ್ 24 ರಂದು 17 ವರ್ಷದ ಬಾಲಕಿಯನ್ನು ಬಲಾತ್ಕರಿಸಿ ತೀಕ್ಷ್ಣವಾದ ಆಯುಧದಿಂದ ಕೊಲೆಗೈಯಲಾಗಿತ್ತು ಎಂದು ವರದಿ ತಿಳಿಸಿದೆ.









