ಪನಾಮಾ ಮತ್ತು ಪ್ಯಾರಡೈಸ್ ಪೇಪರ್ಸ್ ಲೀಕ್ ಬಳಿಕ ಇದೀಗ ಮತ್ತೊಂದು ಅಂತಹದ್ದೇ ಹಣಕಾಸಿನ ಅಕ್ರಮದ ಕುರಿತ ಫಿನ್ ಸೆನ್ ಫೈಲ್ಸ್ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸುದ್ದಿಯಾಗಿದ್ದು, ಪ್ರಧಾನಿ ಮೋದಿಯವರ ಪರಮಾಪ್ತ ಅದಾನಿ ಉದ್ಯಮ ಸಮೂಹದ ಹೆಸರು ಪ್ರಮುಖವಾಗಿ ಕೇಳಿಬಂದಿದೆ.
ಹಣಕಾಸು ಅವ್ಯವಹಾರ ಕುರಿತ ಅಮೆರಿಕದ ಉನ್ನತ ಕಣ್ಗಾವಲು ಸಂಸ್ಥೆ ಫಿನ್ ಸೆನ್(FinCEN) ಸಂಸ್ಥೆಯ ‘ಅನುಮಾನಾಸ್ಪದ ಚಟುವಟಿಕೆ ವರದಿ(Suspicious Activity Reports ; SARs)’ಯಲ್ಲಿ ಭಾರತದ ಅದಾನಿ ಕಂಪನಿಯ ಸಿಂಗಾಪೂರ ನೆಲೆಯ ಅಂಗಸಂಸ್ಥೆ ಅದಾನಿ ಗ್ಲೋಬಲ್ ಪಿಟಿಇ ಸೇರಿದಂತೆ ಹಲವು ಕಂಪನಿಗಳು ನಡೆಸಿರುವ ಅನುಮಾನಾಸ್ಪದ ಹಣಕಾಸು ವಹಿವಾಟಿನ ಬಗ್ಗೆ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ ಅದಾನಿ ಕಂಪನಿ ತೆರಿಗೆ ಸ್ವರ್ಗ ಎಂದೇ ಕರೆಯಲಾಗುವ ತೆರಿಗೆಗಳ್ಳ ಭಾರೀ ವ್ಯವಹಾರದ ನೆಲೆಯಾದ ಸ್ಯಾಚಿಲ್ಲೆಯ ಶೆಲ್ ಕಂಪನಿಗಳ ಮೂಲಕ ಭಾರೀ ಮೊತ್ತದ ವಹಿವಾಟು ನಡೆಸಿದೆ ಎಂದು ಹೇಳಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಾಗತಿಕವಾಗಿ 1999ರಿಂದ 2017ರ ನಡುವಿನ ಅವಧಿಯಲ್ಲಿ ಸುಮಾರು 2 ಟ್ರಿಲಿಯನ್ ಡಾಲರ್(146 ಲಕ್ಷ ಕೋಟಿ ರೂಪಾಯಿ)ಯಷ್ಟು ಬೃಹತ್ ಮೊತ್ತದ ಹಣಕಾಸು ವಹಿವಾಟು ಇಂತಹ ಅನುಮಾನಾಸ್ಪದ ರೀತಿಯಲ್ಲಿ ನಡೆದಿದೆ. ಆಯಾ ದೇಶಗಳ ತೆರಿಗೆ ಮತ್ತು ಹಣಕಾಸು ವಹಿವಾಟು ಕಣ್ಗಾವಲು ವ್ಯವಸ್ಥೆಯ ಕಣ್ಣುತಪ್ಪಿಸಿ ನಡೆದಿರುವ ಇಂತಹ ಹಣ ಬಹುತೇಕ ಹಣ ದುಪ್ಪಟ್ಟು ಅಕ್ರಮ, ಭಯೋತ್ಪಾದನೆ ಮತ್ತಿತರ ಅಕ್ರಮ ಮತ್ತು ಸಮಾಜಬಾಹಿರ ಕೆಲಸಗಳಿಗೆ ಬಳಕೆಯಾಗಿರುವ ಸಾಧ್ಯತೆ ಹೆಚ್ಚು.
ಭಾರತವೂ ಸೇರಿದಂತೆ ವಿಶ್ವಾದ್ಯಂತ ವಿವಿಧ ಬ್ಯಾಂಕುಗಳು ತಮ್ಮಲ್ಲಿ ನಡೆದಿರುವ ಅನುಮಾನಾಸ್ಪದ ವಹಿವಾಟುಗಳ ಮಾಹಿತಿಯನ್ನು ಆಯಾ ಸರ್ಕಾರಿ ಹಣಕಾಸು ವಹಿವಾಟು ಕಣ್ಗಾವಲು ಸಂಸ್ಥೆಗಳಿಗೆ ರಹಸ್ಯವಾಗಿ ನೀಡುತ್ತವೆ. ಅಮೆರಿಕದ ಟ್ರಸರೀಸ್ ಫೈನಾನ್ಷಿಯಲ್ ಕ್ರೈಮ್ ಎನ್ ಫೋರ್ಸ್ ಮೆಂಟ್ ನೆಟ್ವರ್ಕ್ ಗೆ ಹೀಗೆ ಸಲ್ಲಿಸಿದ ಮಾಹಿತಿ ಆಧರಿಸಿ ಅದು ಸುಮಾರು 2,100 ಎಸ್ ಎಆರ್ ಗಳನ್ನು ಸಿದ್ಧಪಡಿಸಿದೆ. ಆ ಬೃಹತ್ ಮಾಹಿತಿಯನ್ನು ಒಳಗೊಂಡ ರಹಸ್ಯ ವರದಿಯನ್ನು ಪತ್ತೆ ಮಾಡಿ, ಅದರ ಮಾಹಿತಿಯನ್ನು ತೆಗೆದು ಬಹಿರಂಗಪಡಿಸುವ ಕಾರ್ಯವನ್ನು; ಈ ಹಿಂದೆ ಪನಾಮಾ ಮತ್ತು ಪ್ಯಾರಡೈಸ್ ಪೇಪರ್ಸ್ ಲೀಕ್ ಮಾಡಿ ಜಾಗತಿಕ ಮಟ್ಟದಲ್ಲಿ ಸಂಚಲನ ಉಂಟುಮಾಡಿದ್ದ ಇಂಟರ್ ನ್ಯಾಷನಲ್ ಕನ್ಸೋರ್ಷಿಯಮ್ ಆಫ್ ಇನ್ ವೆಸ್ಟಿಗೇಟಿವ್ ಜರ್ನಲಿಸ್ಟ್(ಐಸಿಐಜೆ) ಮಾಡಿದೆ. ಆ ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಸಂಘಟನೆಯ ಭಾಗವಾಗಿರುವ ಭಾರತದ ದ ಇಂಡಿಯನ್ ಎಕ್ಸ್ ಪ್ರೆಸ್ ದೈನಿಕ ಕೂಡ ಈ ತನಿಖೆಯ ಭಾಗವಾಗಿದ್ದು, ಭಾರತಕ್ಕೆ ಸಂಬಂಧಿಸಿದ ಕಡತಗಳನ್ನು ಜಾಲಾಡಿ ಮಹತ್ವದ ಮಾಹಿತಿಯನ್ನು ಬಯಲಿಗೆಳೆದಿದೆ.
ಆ ಪೈಕಿ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲನ್(ಬಿಎನ್ ವೈಎಂ) ಎಂಬ ಬ್ಯಾಂಕು ತನ್ನಲ್ಲಿ ನಡೆದಿರುವ ಅನುಮಾನಾಸ್ಪದ ಹಣ ವರ್ಗಾವಣೆ ಕುರಿತ ಪಟ್ಟಿಯನ್ನು ತಯಾರಿಸಿದ್ದು ಅದರಲ್ಲಿ ಒಂದು ಮಾಹಿತಿ ಸ್ಯಾಚೆಲ್ಲಿಯ ಕೆಲವು ಕಂಪನಿಗಳಿಂದ 2005ರಿಂದ 2014ರ ನಡುವಿನ ಅವಧಿಯಲ್ಲಿ 6.24 ಬಿಲಿಯನ್ ಡಾಲರ್(ಸುಮಾರು 45 ಸಾವಿರ ಕೋಟಿ ರೂ.) ವರ್ಗಾವಣೆಯಾಗಿರುವುದರ ಕುರಿತ ಉಲ್ಲೇಖವಾಗಿದೆ. ಅದರ ಮಾರನೇ ವರ್ಷ ಅದೇ ಬಿಎನ್ ವೈಎಂ ಬ್ಯಾಂಕಿಗೆ ಸಂಬಂಧಿಸಿದ ಮತ್ತೊಂದು ಎಸ್ ಎ ಆರ್ ಕಡತದಲ್ಲಿ ಸುಮಾರು 1,241 ಅನುಮಾನಾಸ್ಪದ ಹಣಕಾಸು ವರ್ಗಾವಣೆ ಪ್ರಕರಣಗಳ ಪ್ರಸ್ತಾಪವಿದ್ದು, ಒಂದೇ ತಿಂಗಳಿನಲ್ಲಿ 105 ಮಿಲಿಯನ್ ಡಾಲರ್ ನಷ್ಟು(771 ಕೋಟಿ ರೂ.) ಭಾರೀ ಮೊತ್ತ ವರ್ಗಾವಣೆಯಾಗಿದೆ.
ಆ ಪೈಕಿ ಮಾಹೆ ಮತ್ತು ಸ್ಯಾಚಿಲ್ಲೆ ದ್ವೀಪದ ವಿಕ್ಟೋರಿಯಾದ ವಿಳಾಸ ಹೊಂದಿರುವ ಥಿನೊವಿಲ್ ಫೈನಾನ್ಸಿಯರ್ ಲಿ., ಹೆಸರಿನಲ್ಲಿ ಅದಾನಿಯ ಅದಾನಿ ಗ್ಲೋಬಲ್ ಪಿಟಿಇ ಕಂಪನಿ ಹಲವು ಅನುಮಾನಾಸ್ಪದ ವ್ಯವಹಾರ ನಡೆಸಿತ್ತು. ಸ್ಯಾಚಿಲ್ಲೆಯ ಆ ಸಂಸ್ಥೆಯಿಂದ ಅದಾನಿ ಕಂಪನಿ ಸುಮಾರು 14.46 ಮಿಲಿಯನ್ ಡಾಲರ್(ಸುಮಾರು 106 ಕೋಟಿ ರೂ.) ಹಣ ಪಡೆದಿರುವುದರ ಕುರಿತ ವಿವರಗಳನ್ನು ಆ ಕಡತದಲ್ಲಿ ದಾಖಲಿಸಲಾಗಿದೆ ಎಂದು ‘ಇಂಡಿಯನ್ ಎಕ್ಸ್ ಪ್ರೆಸ್’ ಹೇಳಿದೆ. ಆದರೆ, ಈ ಹಣಕಾಸು ವರ್ಗಾವಣೆಯ ಬಗ್ಗೆ ಪತ್ರಿಕೆಯ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅದಾನಿ ಕಂಪನಿಯ ವಕ್ತಾರರು, “ಸ್ಯಾಚಿಲ್ಲೆ ಕಂಪನಿಯೊಂದಿಗಿನ ತಮ್ಮ ವ್ಯವಹಾರ ಎಲ್ಲವೂ ಸಂಪೂರ್ಣ ಕಾನೂನುಬದ್ಧವಾಗಿದ್ದು, ಆ ಸಂಬಂಧಪಟ್ಟ ಅಧಿಕೃತ ಸಂಸ್ಥೆಗಳಿಗೆ ಈ ಕುರಿತ ಎಲ್ಲಾ ವಿವರ ಸಲ್ಲಿಸಲಾಗಿದೆ” ಎಂದಿದ್ದಾರೆ.
ಆದರೆ, ಈ ಸ್ಯಾಚಿಲ್ಲೆ ಮೂಲದ ಥಿನೋವಿಲ್ ಸಂಸ್ಥೆಗೆ ಸೇರಿದ ವೆಬ್ ಸೈಟ್ 2013ರಿಂದ ಈವರೆಗೂ ‘ಅಂಡರ್ ಕನ್ ಸ್ಟ್ರಕ್ಷನ್’ ಎಂಬ ಹಣೆಪಟ್ಟಿಯನ್ನೇ ತೋರಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಕಂಪನಿಯ ವ್ಯವಹಾರಗಳ ಬಗ್ಗೆ ಅನುಮಾನಗಳು ಹುಟ್ಟಿವೆ ಎಂಬ ಅಂಶವನ್ನು ಬಿಎನ್ ವೈಎಂ ವರದಿಯಲ್ಲಿ ಹೇಳಲಾಗಿದೆ. ನಿರಂತರವಾಗಿ ಏಳು ವರ್ಷಗಳ ಕಾಲ ನಿರಂತರವಾಗಿ ಒಂದು ಸಂಸ್ಥೆ ತನ್ನ ವೆಬ್ ಸೈಟನ್ನು ಹೀಗೆ ನಿರ್ಮಿಸುತ್ತಲೇ ಇರುವುದರ ಹಿಂದಿನ ಗುಟ್ಟೇನು ಮತ್ತು ಅಂತಹದ್ದೊಂದು ಸಂಸ್ಥೆ ಅದಾನಿ ಕಂಪನಿಯೊಂದಿಗೆ ಹೊಂದಿರುವ ವಹಿವಾಟು ಯಾವುದು ಎಂಬುದು ಸಹಜವಾಗೇ ಹಲವು ಅನುಮಾನಗಳನ್ನು ಹುಟ್ಟಿಸಿದೆ.
ತಾನು ಪರಿಶೀಲಿಸಿದ ಕಡತಗಳ ಪೈಕಿ, 2013ರ ಜುಲೈನಲ್ಲಿ ಅದಾನಿ ಗ್ಲೋಬಲ್ ಪಿಟಿಇ ಟ್ರಸ್ಟ್ ಮತ್ತು ಸಿಂಗಾಪೂರದ ಅದರ ಐಸಿಐಸಿಐ ಬ್ಯಾಂಕ್ ಖಾತೆಗೆ ಒಟ್ಟು ನಾಲ್ಕು ವೈರ್ ಟ್ರಾನ್ಸಫರ್ ಮೂಲಕ ಬರೋಬ್ಬರಿ 5.6 ಮಿಲಿಯನ್ ಡಾಲರ್(41.5 ಕೋಟಿ) ಹಣ ವಹಿವಾಟು ನಡೆದಿದೆ. ಈ ವಹಿವಾಟು ಕುರಿತ ಕಡತದಲ್ಲಿ ಬಿಎನ್ವೈಎಂ ಹಣ ಕಳಿಸಿದ ಥಿನೊವಿಲ್ ಫೈನಾನ್ಷಿಯರ್ ಲಿ., ಕಂಪನಿಯ ಶೆಲ್ ಮಾದರಿ ವ್ಯವಸ್ಥೆಯ ಬಗ್ಗೆ ಅನುಮಾನದ ಜೊತೆಗೆ, ಆ ಮೊತ್ತವನ್ನು ಅತ್ಯಧಿಕ ‘ರೌಂಡ್ ಡಾಲರ್’(50 ಸಾವಿರ, ಒಂದು ಲಕ್ಷ, ಹತ್ತು ಲಕ್ಷದಂತಹ ಬೃಹತ್ ಮತ್ತು ಪೂರ್ಣ ಮೊತ್ತದಲ್ಲಿ) ಮೊತ್ತದಲ್ಲಿ ಹಣ ವರ್ಗಾವಣೆಯಾಗಿರುವುದು ಕೂಡ ಈ ವಹಿವಾಟನ್ನು ಅನುಮಾನಾಸ್ಪದ ವಹಿವಾಟು ಎಂದು ಪರಿಗಣಿಸಲು ಕಾರಣ ಎಂದು ಹೇಳಿದೆ.
ಅದಲ್ಲದೆ, 2013ರ ಜೂನ್ ನಲ್ಲಿ ನಡೆದ ಇದೇ ಥಿನೋವಿಲ್ ಮತ್ತು ಅದಾನಿ ಗ್ಲೋಬಲ್ ಪಿಟಿಇ ನಡುವಿನ ಹಣಕಾಸು ವರ್ಗಾವಣೆಯಲ್ಲಿ ಕೂಡ ಅದೇ ಹಳೆಯ ಬ್ಯಾಂಕ್ ಗಳನ್ನೇ ಬಳಸಿಕೊಳ್ಳಲಾಗಿದ್ದು, ಒಂದೇ ವಾರದಲ್ಲಿ ಎರಡು ವೈರ್ ಟ್ರಾನ್ಸಫರ್ ನಡೆದಿದ್ದು, ಸುಮಾರು 2.8 ಮಿಲಿಯನ್ ಡಾಲರ್(20.5 ಕೋಟಿ ರೂ.) ಅನುಮಾನಾಸ್ಪದ ವಹಿವಾಟು ಕಡತ ಸೇರಿರುವ ಈ ಥಿನೋವಿಲ್ ಮತ್ತು ಅದಾನಿ ಕಂಪನಿ ನಡುವಿನ ತೀರಾ ಇತ್ತೀಚಿನ ಹಣಕಾಸು ವಹಿವಾಟು ಎಂದರೆ; ಅದು 2015ರ ಜನವರಿಯಲ್ಲಿ ಥಿನೋವಿಲ್ ತನ್ನ ಸ್ಟ್ಯಾಂಡರ್ಡ್ ಚಾಟರ್ಡ್ ಬ್ಯಾಂಕ್ ಖಾತೆ ಮೂಲಕ ಕಳಿಸಿದ ಮೂರು ವೈರ್ ಟ್ರಾನ್ಸಫರ್ಗಳು. ಅದರಲ್ಲಿ ಬರೋಬ್ಬರಿ 6.06 ಮಿಲಿಯನ್ ಡಾಲರ್(44.5 ಕೋಟಿ ರೂ.) ಮೊತ್ತವನ್ನು() ಅದಾನಿ ಗ್ಲೋಬಲ್ ಪಿಟಿಇಗೆ ವರ್ಗಾವಣೆ ಮಾಡಲಾಗಿದೆ.
ಇದು ಕಪ್ಪುಹಣದ ವಿರುದ್ದ ಸಮರ ಸಾರುವುದಾಗಿ ಹೇಳಿ, ತೆರಿಗೆ ಸ್ವರ್ಗವೆಂದು ಕರೆಯಲಾಗುವ ಸ್ವಿಜರ್ ಲೆಂಡ್, ಸ್ಯಾಚಿಲ್ಲೆಯಂತಹ ಕಡೆ ಬೇನಾಯಿಯಾಗಿ ಮತ್ತು ಶೆಲ್ ಕಂಪನಿಗಳ ರೂಪದಲ್ಲಿ ಹೂಡಿಕೆಯಾಗಿರುವ ಮತ್ತು ತೆರಿಗೆ ವಂಚಿಸಿ ಇಟ್ಟಿರುವ ದೇಶದದ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೂ ಜಮಾ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರ ಪರಮಾಪ್ತ ಕಾರ್ಪೊರೇಟ್ ಉದ್ಯಮಿ ಅದಾನಿ ಕಂಪನಿಗೆ ಸಂಬಂಧಿಸಿದ ಅನುಮಾನಾಸ್ಪದ ವ್ಯವಹಾರ.
ಇಷ್ಟೇ ಅಲ್ಲದೆ, ದೇಶದ ಮುಂಚೂಣಿ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಬಹುತೇಕ ಬ್ಯಾಂಕುಗಳಲ್ಲಿ ನಡೆದಿರುವ ಇಂತಹ ಎಸ್ ಎಆರ್- ಅನುಮಾನಾಸ್ಪದ ವಹಿವಾಟು-ಗಳನ್ನು ಕೂಡ ಫಿನ್ ಸೆನ್ ಫೈಲ್ಸ್ ಬಹಿರಂಗಪಡಿಸಿವೆ.
ಆ ಪೈಕಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಅತಿ ಹೆಚ್ಚು ಮೊತ್ತದ ಅನುಮಾನಾಸ್ಪದ ವಹಿವಾಟು ಹಣ ಸ್ವೀಕರಿಸಿದ್ದರೆ(162.39 ಮಿಲಿಯನ್ ಡಾಲರ್-1193 ಕೋಟಿ ರೂ.), ಎಚ್ ಡಿಎಫ್ ಸಿ ಬ್ಯಾಂಕ್ (327.99 ಮಿಲಿಯನ್ ಡಾಲರ್- 2410 ಕೋಟಿ ರೂ.) ಅತಿ ಹೆಚ್ಚು ಮೊತ್ತದ ಹಣವನ್ನು ವರ್ಗಾವಣೆ ಮಾಡಿದೆ. ಇನ್ನುಳಿದಂತೆ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಡ್ಯಾಷ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾಟರ್ಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರೂರು ವೈಶ್ಯ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ವಿಜಯಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೋಟಕ್ ಮಹಿಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತಿತರ ಬ್ಯಾಂಕುಗಳೂ ಇಂತಹ ಬಹುಕೋಟಿ ಅನುಮಾನಾಸ್ಪದ ವಹಿವಾಟು ನಡೆಸಿವೆ ಎಂದು ಐಸಿಜೆಐ ಪಟ್ಟಿಮಾಡಿದೆ.
ಹಾಗೆ ಅನುಮಾನಾಸ್ಪದ ಎಂದು ಫಿನ್ ಸೆನ್ ಗುರುತಿಸಿರುವ ಭಾರತೀಯ ಬ್ಯಾಂಕುಗಳ ಒಟ್ಟು 406 ಹಣ ವರ್ಗಾವಣೆ ವಹಿವಾಟಿನಲ್ಲಿ, 482,181,226 ಡಾಲರ್ ಮೊತ್ತ(ಸುಮಾರು 3,544 ಕೋಟಿ ರೂ.)ವನ್ನು ದೇಶದ ಹೊರಗಿನಿಂದ ಬ್ಯಾಂಕುಗಳು ಸ್ವೀಕರಿಸಿದ್ದರೆ, 406,278,962 ಡಾಲರ್ ಮೊತ್ತ(2,986 ಕೋಟಿ ರೂ.)ವನ್ನು ದೇಶದಿಂದ ಹೊರಗೆ ವರ್ಗಾವಣೆ ಮಾಡಿವೆ ಎಂದು ಐಸಿಐಜೆ ಗುರುತು ಮಾಡಿದೆ.
ವಿಪರ್ಯಾಸವೆಂದರೆ; ಇಷ್ಟೊಂದು ಬೃಹತ್ ಮೊತ್ತದ ಹಣಕಾಸು ವರ್ಗಾವಣೆಯನ್ನು ಅಮೆರಿಕದ ಮುಂಚೂಣಿ ಹಣಕಾಸು ವಹಿವಾಟು ಕಣ್ಗಾವಲು ಸಂಸ್ಥೆ ಅನುಮಾನಾಸ್ಪದ ಎಂದು ಗುರುತಿಸಿ ಮಾಹಿತಿ ನೀಡಿರುವ ಸಂಗತಿಯನ್ನು ಐಸಿಜೆಐ ಬಹಿರಂಗಪಡಿಸಿದ್ದರೂ, ಆ ಕಾರ್ಯಾಚರಣೆಯ ಭಾಗವಾಗಿದ್ದ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆ ಹೊರತುಪಡಿಸಿ ಉಳಿದ ಬಹುತೇಕ ಮುಖ್ಯವಾಹಿನಿಗಳು ಈ ಕುರಿತ ವಿವರ ವರದಿಯನ್ನು ಪ್ರಕಟಿಸಿಲ್ಲ. ಇದೇ ಮಾಧ್ಯಮಗಳು ಈ ಹಿಂದೆ 2016ರ ಪನಾಮಾ ಪೇಪರ್ಸ್ ಲೀಕ್ ಮತ್ತು 2017ರ ಪ್ಯಾರಡೈಸ್ ಪೇಪರ್ಸ್ ಲೀಕ್ ವೇಳೆ ತೆರಿಗೆಗಳ್ಳತನ ಮತ್ತು ವಿದೇಶಿ ಹೂಡಿಕೆಯ ಕುರಿತು ಪುಟಗಟ್ಟಲೆ ಬರೆದಿದ್ದವು. ಟಿವಿ ವಾಹಿನಿಗಳು ಕೂಡ ವಾರಗಟ್ಟಲೆ ಆ ಕಡತಗಳನ್ನುಆಧಾರವಾಗಿಟ್ಟುಕೊಂಡು ಸರಣಿ ವರದಿಗಳನ್ನೂ, ಪ್ಯಾನಲ್ ಚರ್ಚೆಗಳನ್ನೂ ನಡೆಸಿದ್ದವು. ಆದರೆ, ಇದೀಗ ದೇಶದ ಪ್ರಧಾನಿಯ ಆಪ್ತರು ಮತ್ತು ಬಹುತೇಕ ಬ್ಯಾಂಕುಗಳ ವಹಿವಾಟಿನ ವಿವರಗಳು ಹೊರಬಿದ್ದಿರುವಾಗ ಜಾಣಕುರುಡತನಕ್ಕೆ ಮೊರೆಹೋಗಿವೆ!
ಆ ಹಿನ್ನೆಲೆಯಲ್ಲಿ ಕೂಡ ಈ ಫಿನ್ ಸೆನ್- ಎಸ್ ಎ ಆರ್ ಫೈಲ್ಸ್ ಲೀಕ್ ಕೇವಲ ಅಕ್ರಮ ವಹಿವಾಟನ್ನು ಮಾತ್ರವಲ್ಲದೆ; ದೇಶದ ಪ್ರಭಾವಿ ರಾಜಕೀಯ ನಾಯಕರು, ಪ್ರಭಾವಿ ಉದ್ಯಮಿಗಳು ಮತ್ತು ಪ್ರಭಾವಿ ಮಾಧ್ಯಮಗಳ ನಡುವಿನ ಅಪವಿತ್ರ ಮೈತ್ರಿ ಮತ್ತು ಅದರ ಪರಿಣಾಮವಾದ ಸೆಲೆಕ್ಟೀವ್ ಪತ್ರಿಕೋದ್ಯಮವನ್ನು ಬಯಲುಮಾಡಿದೆ.