ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಭೂಮಿ ಪೂಜೆ ಸಾಕಷ್ಟು ಆಡಂಬರದಿಂದ ಸಾಗುತ್ತಿದೆ. ಈವರೆಗೆ ವಿವಾದದ ಕೇಂದ್ರ ಬಿಂದುವಾಗಿದ್ದ ರಾಮ ಜನ್ಮಭೂಮಿ ಈಗ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಚುನಾವಣೆಯ ಪ್ರಮುಖ ಅಸ್ತ್ರವಾಗಿ ರಾಮ ಮಂದಿರವನ್ನು ಬಿಜೆಪಿ ಬಳಸಿಕೊಳ್ಳುತ್ತಾ ಬಂದಿತ್ತು. ಆದರೆ, ಈಗ ಕಾಂಗ್ರೆಸ್ ಮುಖಂಡರು ಕೂಡಾ ತಾವು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಮ ಮಂದಿರಕ್ಕೆ ಜೈ ಎಂದ ಕಾಂಗ್ರೆಸ್‌ನ ಪ್ರಿಯಾಂಕ..?
ಕಾಂಗ್ರೆಸ್‌ನಲ್ಲಿ ಪ್ರಸ್ತುತ ಪೀಳಿಗೆಯ ಇಂದಿರಾ ಗಾಂಧಿ ಎಂದೇ ಗುರುತಿಸಿಕೊಂಡಿರುವ ಪ್ರಿಯಾಂಕಾ ಗಾಂಧಿ ರಾಮ ಮಂದಿರ ನಿರ್ಮಾಣಕ್ಕೆ ಸೈ ಎಂದಿದ್ದಾರೆ. ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ಶ್ರೀರಾಮ ಮಂದಿರ ದೇಶದ ಐಕ್ಯತೆಯ ಸಂಕೇತ ಎಂದಿದ್ದಾರೆ. ಭೂಮಿಪೂಜೆ ಪರವಾಗಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ರಾಷ್ಟ್ರೀಯ ಐಕ್ಯತೆಯ ಸಮಯವಿದು ಎನ್ನುವ ಮೂಲಕ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದಾರೆ.
ಸೋದರತೆ, ದೇಶದ ಐಕ್ಯತೆಗೆ ಸಂಕೇತ ಎಂದಿರುವ ಪ್ರಿಯಾಂಕಾ ಗಾಂಧಿ ಇಡೀ ಉತ್ತರ ಪ್ರದೇಶದ ತುಂಬಾ ಸಂಚಲನ ಮೂಡಿಸಿದೆ. ಪ್ರಿಯಾಂಕಾ ಗಾಂಧಿ, ಹೇಳಿಕೆಯನ್ನು ಉಲ್ಲೇಖಿಸಿ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಚೌಧರಿ ಟ್ವೀಟ್ ಮಾಡಿದ್ದಾರೆ. ರಾಮ ಧೈರ್ಯ, ರಾಮ ಸಂಗಮ, ರಾಮ ಸಂಯಮ, ರಾಮ ಮಿತ್ರ, ರಾಮ ಎಲ್ಲರಿಗೂ ಸೇರಿದವನು, ಭಗವಾನ್ ರಾಮನು ಎಲ್ಲರ ಕಲ್ಯಾಣವನ್ನು ಬಯಸುತ್ತಾನೆ. ಹಾಗಾಗಿಯೇ ಅವನು ಮರ್ಯಾದ ಪುರುಷೋತ್ತಮ ಎಂದಿದ್ದಾರೆ.
'राम सबके हैं – राम सबमें है' pic.twitter.com/KgrBRCRUPL
— Mamta Choudhary (@iMamtaChoudhary) August 4, 2020
ಮಧ್ಯಪ್ರದೇಶ ಕಾಂಗ್ರೆಸ್‌ನಿಂದ ಬೆಳ್ಳಿ ಇಟ್ಟಿಗೆ ದೇಣಿಗೆ..!
ಪ್ರಿಯಾಂಕಾ ಗಾಂಧಿ ಅಯೋಧ್ಯೆ ಎಲ್ಲರಿಗೂ ಸೇರಿದ್ದು, ಶ್ರೀರಾಮ ಎಲ್ಲರಿಗೂ ಭಗವಂತ ಎನ್ನುತ್ತಿದ್ದ ಹಾಗೆ ಮಧ್ಯಪ್ರದೇಶ ಕಾಂಗ್ರೆಸ್ 11 ಬೆಳ್ಳಿ ಇಟ್ಟಿಗೆಗಳನ್ನು ರಾಮಮಂದಿರಕ್ಕೆ ನೀಡಲು ಮುಂದಾಗಿದೆ. ಕಮಲ್‌ನಾಥ್ ನಿವಾಸದಲ್ಲಿ ಹನುಮಾನ್ ಚಾಲೀಸ ಪಠಣದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್, ನಾವು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 11 ಬೆಳ್ಳಿ ಇಟ್ಟಿಗೆಗಳನ್ನು ಮಧ್ಯಪ್ರದೇಶದ ನಾಗರಿಕನಾಗಿ ಕಳುಹಿಸಲು ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಜೊತೆಗೆ 1985ರಲ್ಲಿ ರಾಜೀವ್ ಗಾಂಧಿ ಸಮಯದಲ್ಲಿ ರಾಮ ಮಂದಿನ ನಿರ್ಮಾಣದ ಬಾಗಿಲು ತೆರೆಯಿತು ಎನ್ನುವುದನ್ನು ನಾವು ಮರೆಯಬಾರದು ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೌದು, ರಾಮ ಬಿಜೆಪಿ ಸ್ವತ್ತಲ್ಲ – ಉಮಾ ಭಾರತಿ
ಪ್ರಿಯಾಂಕಾ ಗಾಂಧಿ ಟ್ವೀಟ್‌ಗೆ ಉತ್ತರ ಕೊಟ್ಟಿರುವ ಮಧ್ಯಪ್ರದೇಶದ ಬಿಜೆಪಿ ನಾಯಕಿ ಉಮಾ ಭಾರತೀ ಹೌದು, ಶ್ರೀರಾಮ ಮಂದಿರ ಬಿಜೆಪಿ ಸ್ವತ್ತಲ್ಲ. ಇದೆಲ್ಲಾ ಅವರವರ ನಂಬಿಕೆಗೆ ಬಿಟ್ಟದ್ದು ಎಂದಿದ್ದಾರೆ. ರಾಮನ ಹೆಸರನ್ನು ಯಾರೂ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ. ರಾಮನ ಹೆಸರೇ ಆಗಲಿ, ಅಯೋಧ್ಯೆ ಆಗಲಿ ಯಾವುದೂ ಬಿಜೆಪಿ ಸ್ವತ್ತಲ್ಲ. ರಾಮ ಎಲ್ಲರಿಗೂ ಸೇರಿದವನು. ಬಿಜೆಪಿಯವರೇ ಆಗಿರಲಿ ಬೇರೆಯವರೇ ಆಗಿರಲಿ ಎಲ್ಲರಿಗೂ ಸಲ್ಲುವವನು ಎಂದಿದ್ದಾರೆ. ಬೇರೆ ಧರ್ಮದವರೇ ಆಗಿರಲಿ, ರಾಮನ ಮೇಲೆ ನಂಬಿಕೆ ಇಟ್ಟಿದ್ದರೆ ಅಲ್ಲಿ ರಾಮ ಇರುವನು ಎಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.
ಬಿಜೆಪಿ ರಾಜಕಾರಣದ ಆಧಾರ ಸ್ತಂಭವೇ ಹಿಂದುತ್ವ ಅಜೆಂಡಾ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ ಸಂಗತಿ. ಕೆಲವು ಅಭ್ಯರ್ಥಿಗಳು ನಿಮ್ಮ ಮತವೇ ನಮಗೆ ಬೇಡ ಎಂದು ಅನ್ಯ ಕೋಮಿನ ಜನರಿಗೆ ನೇರವಾಗಿ ಹೇಳುವ ಕೆಲಸವನ್ನೂ ಬಿಜೆಪಿ ಅಭ್ಯರ್ಥಿಗಳು ಹೇಳುತ್ತಾರೆ. ಹಿಂದುತ್ವ ಅಜೆಂಡಾ ಮೂಲಕವೇ ದೇಶದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹಿಂದೂಗಳನ್ನು ಓಲೈಸಿಕೊಂಡಿದೆ ಎನ್ನುವ ಸತ್ಯ ಕಾಂಗ್ರೆಸ್‌ಗೆ ಅರ್ಥವಾಗಿದೆ.
ಕೇವಲ ಜಾತ್ಯಾತೀತವಾದ ಎನ್ನುತ್ತ ಕುಳಿತರೆ ನಾವು ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಏರುವ ಸಾಧ್ಯತೆಗಳಿವೆ ಎಂಬ ಲೆಕ್ಕಾಚಾರದಿಂದ, ಬಹುಸಂಖ್ಯಾತರಾಗಿರುವ ಹಿಂದೂಗಳ ಭಾವನೆಗೆ ಘಾಸಿಯಾಗುವ ಯಾವುದೇ ಹೇಳಿಕೆ ನೀಡುವುದು ತರವಲ್ಲ ಎನ್ನುವ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಒಟ್ಟಾರೆ. ಬಿಜೆಪಿ ನೇರಾ ನೇರವಾಗಿಯೇ ಹಿಂದುತ್ವ ಅಜೆಂಡಾ ಪಾಲಿಸುತ್ತಾ ಸಾಗಿದರೆ, ಕಾಂಗ್ರೆಸ್ ಕೂಡ ಇದೀಗ ಹಸ್ತದಲ್ಲಿ ಕೇಸರಿ ಬಾವುಟವನ್ನೇ ಹಾರಿಸುತ್ತ ಮತಬ್ಯಾಂಕ್ ಸೃಷ್ಟಿಸಲು ಮುಂದಾಗಿದೆ ಎನ್ನುವ ರೀತಿ ಕಾಣುತ್ತಿದೆ.










