ದೇಶಾದ್ಯಂತ ಕರೋನಾ ವೈರಸ್ನ ಆತಂಕ ಹೆಚ್ಚಾಗುತ್ತಿದ್ದರೂ, ಭಾರತದ ಜೈಲುಗಳು ತುಂಬಿ ತುಳುಕುವುದು ನಿಂತಿಲ್ಲ. ಸೋಂಕು ಜೈಲಿನೊಳಗಡೆ ಹೆಚ್ಚಾಗಿ ಹರಡುವ ಭೀತಿಯಿಂದ ಜೈಲುಗಳಲ್ಲಿದ್ದ ಕೆಲವು ಕೈದಿಗಳನ್ನು ಬಿಡುಗಡೆಗೊಳಿಸುವ ನಿರ್ಧಾರವನ್ನು ಹಲವು ರಾಜ್ಯ ಸರ್ಕಾರಗಳು ಕೈಗೊಂಡಿದ್ದವು ಹೀಗಿದ್ದರೂ ಪರಿಸ್ಥಿತಿ ಮಾತ್ರ ಮೊದಲಿನಂತೆಯೇ ಇದೆ.
ಮುಂಬೈನ ಓರ್ವ ಟ್ಯಾಕ್ಸಿ ಚಾಲಕ ಕಾರಿನ ಬ್ಯಾಟರಿ ಕದ್ದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದಾನೆ. ಮುಂಬೈನ ತಲೋಜಾ ಸೆಂರಲ್ ಜೈಲ್ನಲ್ಲಿ ಕಳೇದ ನವೆಂಬರ್ನಿಂದ ಬಂದಿತನಾಗಿರುವ ಈತನೊಂದಿಗೆ ಇನ್ನೂ 55 ಜನರು ಒಂದೇ ಕೋಣೆಯಲ್ಲಿ ಬಂಧಿಯಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಅಂತರವನ್ನು ಕಾಪಾಡಿಕೊಳ್ಳುವುದು ಹೇಗೇ?
“ನನ್ನ ಮತ್ತು ಇತರ ಕೈದಿಗಳ ನಡುವೆ ಕೇವಲ ಒಂದು ಅಡಿಯಷ್ಟು ಮಾತ್ರ ಅಂತರವಿದೆ. ನಮಗೆ ಸರಿಯಾಗಿ ಮಲಗಲೂ ಕೂಡಾ ಜಾಗವಿಲ್ಲ. ಸ್ನಾನಕ್ಕೆ ಸೋಪು ಕೂಡಾ ನೀಡುವುದಿಲ್ಲ. ದಿನೇ ದಿನೇ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಂದವರನ್ನೆಲ್ಲಾ ಇಲ್ಲಿಗೆ ಸೇರಿಸುತ್ತಿದ್ದಾರೆ,” ಎಂದು ಟ್ಯಾಕ್ಸಿ ಚಾಲಕ ಸ್ಕ್ರಾಲ್.ಇನ್ ಗೆ ಹೇಳಿಕೆ ನೀಡಿದ್ದಾರೆ.
ರಾಷ್ಟ್ರಾದ್ಯಂತ ಬಂಧಿಖಾನೆ ಪ್ರಾಧಿಕಾರದ ಸದಸ್ಯರು ಸುಪ್ರಿಂ ಕೋರ್ಟ್ಗೆ ಮನವಿ ಮಾಡಿ ತುಂಬಿ ತುಳುಕುತ್ತಿರುವ ಜೈಲುಗಳಿಂದ ಕೈದಿಗಳನ್ನು ಪರೋಲ್ ಮೇಲೆ ಬಿಡುಗಡೆ ಮಾಡಿ ಕರೋನಾ ಸೋಂಕು ಹಬ್ಬುವುದನ್ನು ತಪ್ಪಿಸಬಹುದು ಎಂದು ಹೇಳಿದ್ದರು.
ಸದ್ಯಕ್ಕೆ ಜೈಲಿನಲ್ಲಿರುವ ಕೈದಿಗಳಲ್ಲಿ 50%ಕ್ಕೂ ಹೆಚ್ಚಿನ ಜನ ವಿಚಾರಾಣಾಧೀನ ಕೈದಿಗಳು. ಜಡ್ಜ್ಗಳ ಕೊರತೆ ಹಾಗೂ ಸೂಕ್ತ ಕಾನೂನು ಸಲಹೆ ಎಲ್ಲರಿಗೂ ದೊರಕಿದಿರುವುದು ಕೂಡಾ ಇದಕ್ಕೆ ಕಾರಣ. ಸುಪ್ರಿಂಕೋರ್ಟ್ ಕೂಡಾ ಮಾರ್ಚ್ 23ರಂದೇ ಈ ಕುರಿತಾಗಿ ಆದೇಶ ಹೊರಡಿಸಿದ್ದು, ಸಾದ್ಯವಷ್ಟು ಕೈದಿಗಳನ್ನು ಜೈಲಿನಿಂದ ಹೊರಗೆ ಕಳುಹಿಸಿ ಎಂದು ಹೇಳಿತ್ತು. ಆದರೆ, ಆ ಕೆಲಸ ಮಾತ್ರ ಇನ್ನೂ ಸರಿಯಾಗಿ ಆಗುತ್ತಿಲ್ಲ.
ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಜೈಲಿನ ಒಳಗಡೆಯೂ ಸೋಂಕು ಹೆಚ್ಚಾಗುತ್ತಿದೆ. ಈಗಾಗಲೇ, ಬಹಳಷ್ಟು ರಾಜ್ಯಗಳ ಜೈಲುಗಳಲ್ಲಿ ಕರೋನಾ ಸೋಂಕು ಹಬ್ಬಿದ್ದು, ಮತ್ತಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ದೆಹಲಿಯ ಜೈಲೊಂದರಲ್ಲಿ ಓರ್ವ ಕೈದಿಯು ಕರೋನಾ ಸೋಂಕಿನಿಂದ ಮೃತಪಟ್ಟ ಘಟನೆಯೂ ನಡೆದಿದೆ.