72 ವರ್ಷದ ಕರೋನಾ ರೋಗಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಿಸಿದ ಘಟನೆ ಆಂಧ್ರ ಪ್ರದೇಶದ ಸ್ರೀಕಾಕುಳಂ ಜಿಲ್ಲೆಯ ಪಳಸ ಪಟ್ಟಣದಲ್ಲಿ ನಡೆದಿದೆ. ಘಟನೆಯ ವೀಡಿಯೋ ವೈರಲ್ ಆದ ಬೆನ್ನಿಗೆ ಸ್ಥಳೀಯ ಆಡಳಿತದ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮೃತ ವ್ಯಕ್ತಿಯು ಮುನ್ಸಿಪಾಲಿಟಿಯ ಅಡಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯು ಗುರುವಾರದಂದು ತಮ್ಮ ಸ್ವ-ಗೃಹದಲ್ಲೇ ಮೃತಪಟ್ಟಿದ್ದಾರೆ.
ದುರದೃಷ್ಟವಶಾತ್, ಮೃತ ವ್ಯಕ್ತಿಯಲ್ಲಿ ಕೋವಿಡ್-19 ಸೋಂಕು ಕಂಡುಬಂದಿದೆ. ಮೃತದೇಹವನ್ನು ಅಂತ್ಯ ಸಂಸ್ಕಾರ ನಡೆಸಲು ನೆರೆಹೊರೆಯವರು ಭಯಬಿದ್ದ ಕಾರಣ ಮೃತರ ಕುಟುಂಬಸ್ಥರು ಮುನ್ಸಿಪಾಲಿಟಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಆದರೆ ಮೃತದೇಹ ಸಾಗಿಸಲು ಬಂದ ಅಧಿಕಾರಿಗಳು ಮೃತದೇಹವನ್ನು ಜೆಸಿಬಿ ಯಂತ್ರದ ಮೂಲಕ ಸಾಗಿಸಿದ್ದಾರೆ. ಮೃತದೇಹಕ್ಕೆ ಕೊಡಬೇಕಾದ ಕನಿಷ್ಟ ಗೌರವವನ್ನು ಕೊಡದ ಅಧಿಕಾರಿಗಳ ಬೇಜವಾಬ್ದಾರಿ ನಡೆ ವ್ಯಾಪಕ ಟೀಕೆಗೆ ಒಳಗಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಂಧ್ರ ಸರ್ಕಾರ ಪ್ರಾಥಮಿಕ ಹಂತವಾಗಿ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಇಂತಹಹ ಸಂಧರ್ಭಗಳಲ್ಲಿ ಹೇಗೆ ಕೆಲಸ ಮಾಡಬೇಕೆಂದು ಪ್ರೊಟೊಕಾಲ್‌ಗಳಲ್ಲಿ ಸ್ಪಷ್ಟವಾಗಿ ಹೇಳಿದೆ, ಮೃತದೇಹವನ್ನು ಸಾಗಿಸುವಾಗ ಅದನ್ನೆಲ್ಲಾ ಗಾಳಿಗೆ ತೂರಿರುವುದು ನಮಗೆ ಕಂಡುಬಂದಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.