ಜಗತ್ತನ್ನೇ ಕಾಡುತ್ತಿರುವ ಕರೋನಾ ಭಯಾನಕ ಸಾಂಕ್ರಾಮಿಕ ರೋಗದ ಮಧ್ಯೆಯೂ ಆಡಳಿತ ವರ್ಗಗಳ ಪಕ್ಷಪಾತ ಧೋರಣೆ ವಿರುದ್ಧ ನಡೆಯುವ ಪ್ರತಿಭಟನೆಗಳು ಕಡಿಮೆಯಾಗಿಲ್ಲ. ಅಮೆರಿಕಾದಲ್ಲಿ ವಾಸಿಸುತ್ತಿದ್ದ ಕಪ್ಪು ವರ್ಣದ ಆಫ್ರಿಕನ್ ಜಾರ್ಜ್ ಫ್ಲಾಯ್ಡ್ ಹತ್ಯೆಗೆ ಇಡೀ ಅಮೆರಿಕಾವೇ ದಂಗಾಗಿ ಹೋಗಿತ್ತು. ಈಗಲೂ ಅಲ್ಲಿ ಅಲ್ಲೊಂದಿಲ್ಲೊಂದು ತೀವ್ರ ಪ್ರತಿಭಟನೆಗಳು ನಡೆಯುತ್ತಲೇ ಇದೆ. ʼBlack Lives Matterʼ ಅನ್ನೋ ಚಳವಳಿಯನ್ನೇ ಹುಟ್ಟುಹಾಕಿದ್ದ ಅಮೆರಿಕನ್ನರು ಜಗತ್ತಿನ ಮುಂದೆ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದ್ದರು. ಅಮೆರಿಕಾ ತನ್ನೆಲ್ಲ ಬಲವನ್ನ ಪ್ರಯೋಗಿಸಿ ದೇಶದೊಳಗೆ ತಲೆ ಎತ್ತಿದ್ದ ಚಳವಳಿಯನ್ನ ಮಟ್ಟ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅಚ್ಚರಿ ಅಂದ್ರೆ, ಒಂದು ಕಡೆ ಅಮೆರಿಕಾ ಕರೋನಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಲೇ ಇದ್ದರೂ, ಅಲ್ಲಿದ್ದ ಮಂದಿಯನ್ನ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಲೇ ಇಲ್ಲ.
ಇಂತಹ ಅಸಹಿಷ್ಣುತೆ, ಜಾತಿ ಅಥವಾ ಜನಾಂಗೀಯವಾದದ ವಿರುದ್ಧದ ಪ್ರತಿಭಟನೆ 2016ರಲ್ಲಿ ಭಾರತದಲ್ಲೂ ನಡೆದಿತ್ತು. ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ರೋಹಿತ್ ವೇಮುಲಾ ಸಾಂಸ್ಥಿಕ ಹತ್ಯೆ ವಿರುದ್ಧ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿತ್ತು. ಆ ನಂತರ ಈ ರೀತಿ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾದದ್ದೇ ಸಿಎಎ ವಿರೋಧಿ ಪ್ರತಿಭಟನೆ. 2019 ರ ಡಿಸೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗುತ್ತಲೇ, ದೇಶದ ಹಲವು ಯೂನಿವರ್ಸಿಟಿಗಳಲ್ಲಿ ತೀವ್ರ ತರಹದ ಆಕ್ರೋಶಗಳು ವ್ಯಕ್ತವಾದವು. ಸರಕಾರದ ಪಕ್ಷಪಾತಿ ಧೊರಣೆ ವಿರುದ್ಧ ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ಹೊರಬಂದು ಪ್ರತಿಭಟಿಸ ತೊಡಗಿದ್ದಾರೆ. ವಿದ್ಯಾರ್ಥಿಗಳನ್ನ ಎಷ್ಟೇ ಓದು, ಹವ್ಯಾಸ ಅನ್ನೋ ಲೋಕದ ನಡುವೆ ಕಟ್ಟಿ ಹಾಕುವ ಪ್ರಯತ್ನ ನಡೆಸಿದರೂ ವಿದ್ಯಾರ್ಥಿಗಳು ಹಳೆಯ ತಲೆಮಾರುಗಳಿಗಿಂತಲೂ ಅತೀ ಹೆಚ್ಚು ಜಾಗೃತರಾಗಿದ್ದಾರೆ ಅಂತಾ YouGov-Mint-CPR Millennial ಸರ್ವೇ ತಿಳಿಸಿದೆ.
ಈ ಸರ್ವೇಯ ಪ್ರಕಾರ ಇಂದಿನ ಯುವಕರು ಜಾತಿ, ಧರ್ಮ ಹಾಗೂ ಲಿಂಗ ತಾರತಮ್ಯದ ವಿರುದ್ಧ ಹಿಂದೆಂಗಿಂತಲೂ ಹೆಚ್ಚು ಪ್ರಬುದ್ಧರಾಗಿದ್ದಾರೆ. 40 ವರುಷಕ್ಕಿಂತಲೂ ಹೆಚ್ಚು ಹಳೆಯ ತಲೆಮಾರಿಗೆ ಹೋಲಿಸಿದಾಗ ಇಂದಿನ ಯುವಕರಲ್ಲಿ ಅದೆಲ್ಲಕ್ಕಿಂತಲೂ ಹೆಚ್ಚಿನ ಅರಿವು ಹಾಗೂ ಜಾಗೃತಿ ಇದೆ ಅನ್ನೋದಾಗಿ ಸರ್ವೆ ತಿಳಿಸುತ್ತದೆ.
ಇದು ಮಾತ್ರವಲ್ಲದೇ ಮೂಲ ಸಮಸ್ಯೆ ಬಗ್ಗೆಯೂ YouGov-Mint-CPR Millennial ಅಧ್ಯಯನ ನಡೆಸಿದ್ದು, ಅದರಂತೆ ಸಮಾಜದಲ್ಲಿನ ಹೆಚ್ಚಾಗಿ ದೌರ್ಜನ್ಯಕ್ಕೆ ಒಳಗಾಗುವವರು ಯಾರೆಂಬುದನ್ನ ಬೆಳಕು ಚೆಲ್ಲಲ್ಲಾಗಿದೆ. ಸರ್ವೇ ವರದಿ ಪ್ರಕಾರ, ತಿಂಗಳಿಗೆ 25 ಸಾವಿರ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬವು ಸಾಮಾನ್ಯವಾಗಿ ಲಿಂಗ, ಭಾಷೆ, ದೈಹಿಕ ಹಾಗೂ ರಾಜ್ಯ ಇಲ್ಲವೇ ಪ್ರದೇಶ ವಿಚಾರವಾಗಿ ಹೆಚ್ಚು ಅನ್ಯಾಯವನ್ನ ಎದುರಿಸುತ್ತಾರೆ. ಆದರೆ ಅದೇ 60 ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಮಾಸಿಕ ವೇತನ ಹೊಂದಿದವರು ಇಂತಹ ಸಮಸ್ಯೆಗಳಿಂದ ಬಹಳಷ್ಟು ದೂರವಿರುತ್ತಾರೆ ಎಂದು ಸರ್ವೆಯು ತಿಳಿಸುತ್ತದೆ. ಇನ್ನೊಂದು ವಿಚಾರವನ್ನ ಸಮಾಜದ ಮುಂದಿಡುವ ಈ ಸರ್ವೇ ವರದಿಯು, 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಜಾತಿ, ಲಿಂಗ, ಪ್ರಾಂತ್ಯ ಇಂತಹ ವಿಚಾರಧಾರೆಗಳ ಅಸಹಿಷ್ಣುತೆ ಕಡಿಮೆಯಿದ್ದರೆ, ಸಣ್ಣ ನಗರದಲ್ಲಿ ಇದು ತುಸು ಜಾಸ್ತಿಯೇ ಇರುತ್ತದೆ ಎಂದು ವರದಿ ತಿಳಿಸುತ್ತದೆ.
ಮಾರ್ಚ್ 12 ರಿಂದ ಎಪ್ರಿಲ್ 2ರ ವರೆಗೆ ನಡೆಸಿದ ಸರ್ವೇಯಲ್ಲಿ ಸುಮಾರು 184 ನಗರ ಹಾಗೂ ಪಟ್ಟಣಗಳನ್ನ ಆನ್‌ಲೈನ್ ಮೂಲಕ ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಸುಮಾರು 10,005 ಮಂದಿಯನ್ನ ಈ ವಿಚಾರಕ್ಕಾಗಿ ಮಾತನಾಡಿಸಲಾಗಿದೆ. ಒಟ್ಟು ಹತ್ತು ಅಂಶಗಳನ್ನ ಮುಂದಿಡಲಾಗಿದ್ದ ಪ್ರಶ್ನೆಗಳಲ್ಲಿ, ಶೇಕಡಾ 80 ರಷ್ಟು ಮಂದಿ ಕೆಲವು ಅಂಶಗಳಲ್ಲಾದರೂ ಅಸಮಾನತೆ ಇದೆ ಅನ್ನೋದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಅಧ್ಯಯನಕ್ಕೆ ಮಾತನಾಡಿಸಿರುವ ವ್ಯಕ್ತಿಗಳಲ್ಲಿ ವಯಸ್ಸಿನ ವರ್ಗೀಕರಣವನ್ನೂ ನಡೆಸಲಾಗಿತ್ತು. 1981 ಹಾಗೂ 1996 ನಡುವಿನ ಜನಿಸಿದವರು ಹಾಗೂ 1996 ರ ನಂತರ ಜನಿಸಿದವರು ಅನ್ನೋದಾಗಿ ವರ್ಗೀಕರಿಸಲಾಗಿತ್ತು.
ಸದ್ಯ ದೇಶದಲ್ಲಿ ನಡೆಯುತ್ತಿರುವ ಇಂತಹ ಅಸಹಿಷ್ಣುತೆ ಬಗ್ಗೆ ಜನಸಾಮಾನ್ಯರು ಸುಮ್ಮನೆ ಕೂತಿಲ್ಲ. ಹಿಂದಿಗಿಂತಲೂ ಹೆಚ್ಚು ಪ್ರಬಲವಾಗಿ ವಿರೋಧಿಸತೊಡಗಿದ್ದಾರೆ. ಕಳೆದ ಒಂದು ವರುಷದಲ್ಲಿ ಅದೆಷ್ಟೋ ಹೋರಾಟಗಾರರಿಗೆ ಡಿಜಿಟಲ್ ಮೀಡಿಯಾ ಸಾಕಷ್ಟು ಕೊಡುಗೆ ನೀಡಿದೆ. ಸಾಮಾಜಿಕ ಜಾಲತಾಣದ ಮೂಲಕವೇ ಹೋರಾಟಗಳನ್ನ ಸಂಘಟಿಸುತ್ತಿದ್ದಾರೆ. 2018 ರಲ್ಲಿ ಹವಾಮಾನ ಬದಲಾವಣೆ ವಿಚಾರವಾಗಿ ಗ್ರೆಟ್ಟಾ ಥನ್ ಬರ್ಗ್ ನಡೆಸಿದ #FridaysForFuture, ಲೈಂಗಿಕ ದೌರ್ಜನ್ಯದ ವಿರುದ್ಧ ಕಲಾವಿದರು ಹಾಗೂ ಇನ್ನಿತರ ಸಾರ್ವಜನಿಕ ಜೀವನದಲ್ಲಿರುವ ಮಹಿಳೆಯರು ಧ್ವನಿ ಎತ್ತಿದ #MeToo ಹಾಗೂ ಗುಂಪು ಥಳಿತದ ವಿರುದ್ಧ ನಡೆದ #NotInMyName ಅಭಿಯಾನಗಳಿಗೆಲ್ಲ ಜಾಲತಾಣ ಹೆಚ್ಚಿನ ಸ್ಫೂರ್ತಿ ನೀಡಿತ್ತು. ಇತ್ತೀಚೆಗೆ ಸಿಎಎ ವಿರೋಧಿ ಪ್ರತಿಭಟನೆಗೂ ಜಾಲತಾಣದ ಬಳಕೆಯೂ ಅತಿಯಾಗಿದ್ದವು. ಇವೆಲ್ಲವೂ ದೇಶದ ಅಸಹಿಸ್ಣುತೆ ವಿರುದ್ಧ ನಡೆದ ಅಭಿಯಾನಗಳೇ ಆಗಿದ್ದವು.
ಇನ್ನು ಅಭಿಯಾನದಲ್ಲಿ ಪಾಲ್ಗೊಂಡಿದ್ದ ಕೆಲವು ಮಹಿಳೆಯರು ತಮ್ಮನ್ನು ತಾವು ʼಸ್ತ್ರೀವಾದಿʼ ಗಳೆಂದೇ ಗುರುತಿಸಿಕೊಂಡರು. ಆದರೆ ಅದರಲ್ಲಿ ಹತ್ತನೇ ಒಂದು ಭಾಗದಷ್ಟು ಮಹಿಳೆಯರು, ಗಂಡಂದಿರಿಗೆ ಇರುವ ವೇತನಕ್ಕಿಂತ ಹೆಚ್ಚಿನ ವೇತನ ಪತ್ನಿಯಂದಿರಿಗೆ ಇರಬಾರದು ಅನ್ನೋದಾಗಿ ನಂಬಿದ್ದಾರೆ.
ಹೀಗೆ ಭಾರತದಲ್ಲಿ ಆನ್‌ಲೈನ್ ಮೂಲಕವೇ YouGov-Mint-CPR Millennial ನಡೆಸಿದ ಸರ್ವೆ ಪ್ರಮುಖ ಹತ್ತು ಪ್ರಶ್ನೆಗಳಲ್ಲಿ ಬಹುಮುಖ್ಯವಾದ ವಿಚಾರಧಾರೆಯನ್ನ ಗಮನಿಸುವಂತೆ ಮಾಡಿದೆ. ಒಟ್ಟಿನಲ್ಲಿ ದೇಶದಲ್ಲಿ ಪೌರತ್ವ ತಿದ್ದುಪಡಿಯಂತಹ ಕಾಯ್ದೆಯ ಹೊರತಾಗಿಯೂ ದೇಶದ ಯುವಕರಲ್ಲಿ ಅದಕಲ್ಕೂ ಮಿಗಿಲಾದ ಅಥವಾ ಪರ್ಯಾಯವಾದ ಆಲೋಚನೆ ತುಂಬಿಕೊಂಡಿದೆ ಅನ್ನೋದನ್ನ ಸರ್ವೆ ಸ್ಪಷ್ಟಪಡಿಸಿದೆ.