ರಾಜ್ಯದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು, ವಿಶಿಷ್ಟ ಸಂಸ್ಕೃತಿಯನ್ನೂ ಹೊಂದಿರುವ ಪುಟ್ಟ ಜಿಲ್ಲೆ ಕೊಡಗು ಕಳೆದ ಎರಡು ವರ್ಷಗಳಿಂದ ಭೀಕರ ಭೂ ಕುಸಿತ ಮತ್ತು ಮಳೆಗೆ ಸಿಲುಕಿ ನಲುಗಿ ಹೋಗಿದೆ. ಒಂದೆಡೆ ಭೀಕರ ಮಳೆ, ಚಳಿಯಿಂದಾಗಿ ಕೃಷಿ ಉತ್ಪನ್ನಗಳ ಬೆಳೆಗಳು ರೈತರ ಕೈ ಸೇರುತ್ತಿಲ್ಲ. ಮತ್ತೊಂದೆಡೆ ಉತ್ಪನ್ನಗಳಿಗೆ ಬೆಲೆಯೂ ಕುಸಿದಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಕಣ್ಣೀರು ಒರೆಸಬೇಕಾದ ಸರ್ಕಾರಗಳದ್ದು ಎಂದಿನಂತೆ ಬರೀ ಭರವಸೆ ಅಷ್ಟೆ. ಈ ನಡುವೆ ಚೀನಾದ ಮಹಾ ಮಾರಿ ಕೋವಿಡ್ 19 ಕೂಡ ವಕ್ಕರಿಸಿದ್ದು ಪ್ರವಾಸೋದ್ಯಮದಿಂದ ಒಂದಷ್ಟು ಹಣ ನೋಡುತಿದ್ದ ಕೃಷಿಕರು ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕಳೆದ ಎರಡು ವರ್ಷಗಳ ಭೂ ಕುಸಿತಕ್ಕೆ ಸಿಲುಕಿ ಮನೆ ಮಠ ಬದುಕನ್ನೇ ಕಳೆದುಕೊಂಡು ಸಂತ್ರಸ್ಥರಾದವರ ಸಂಖ್ಯೆ 2 ಸಾವಿರ ಮೀರಿದೆ.
ಈಗ ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಮದ್ಯಮ ವರ್ಗದ, ಬಡವರು ಮನೆ ಕುಸಿಯುವ ಭೀತಿಯನ್ನೂ ಎದುರಿಸುತಿದ್ದಾರೆ. ಏಕೆಂದರೆ ಈ ಹಿಂದೆ ಎರಡು ವರ್ಷಗಳಲ್ಲಿ ಭೂ ಕುಸಿತ ಆದಾಗ ಜನರಿಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಕೆಲವೆಡೆಗಳಲ್ಲಿ ಗುಡ್ಡ ಕೊರೆದು ಅವೈಜ್ಞಾನಿಕ ಕಟ್ಟಡ ಕಾಮಗಾರಿ ಮಾಡಿದ್ದರಿಂದಾಗಿ ಕುಸಿಯಿತು ಎಂದು ಭೂಗರ್ಭ ತಜ್ಞರು ಹೇಳಿದರು. ಆದರೆ ಅನೇಕ ಕಡೆಗಳಲ್ಲಿ ಇನ್ನೂ ಯಾವುದೇ ಕಾಮಗಾರಿ ಮಾಡದ, ಕಟ್ಟಡವನ್ನೇ ಕಟ್ಟದ ಸ್ಥಳಗಳಲ್ಲೂ ಭೂ ಕುಸಿತ ಸಂಭವಿಸಿದೆ. ಹಾಗಾಗಿ, ಮಳೆಗಾಲದಲ್ಲಿ ಜನರು ಬೆಟ್ಟ ಗುಡ್ಡಗಳಲ್ಲಿ ವಾಸಿಸಲೇ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಗು ಇರುವುದೇ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಇಲ್ಲಿ ಬೆಟ್ಟ ಗುಡ್ಡ ಇರುವುದು ಸಹಜ ಭೌಗೋಳಿಕ ಹಿನ್ನೆಲೆ. ಇಲ್ಲಿ ಕೃಷಿಕರು ಮನೆ ಕಟ್ಟಿಕೊಳ್ಳುವುದೂ ಕೂಡ ತಮ್ಮ ತೋಟ, ಗದ್ದೆಗಳಲ್ಲೆ. ಇದರಿಂದ ಕೃಷಿಕರ ದೈನಂದಿನ ಕಾರ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ.
ಸರ್ಕಾರವು ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ದೇಶದ ಈಶಾನ್ಯ ರಾಜ್ಯಗಳ ಭೌಗೋಳಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಅದೇ ಮಾದರಿಯನ್ನೂ ಇಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರ ಇಲ್ಲೆಲ್ಲ ಈಗಲೂ ಜನರು ವಾಸಿಸುತ್ತಿರುವುದು ಗುಡ್ಡಗಾಡು ಪ್ರದೇಶಗಳಲ್ಲೇ ಅಲ್ಲವೆ? ಅಲ್ಲಿ ಅವರು ಗುಡ್ಡ ಕೊರೆದು ನಗರಗಳನ್ನೇ ನಿರ್ಮಿಸಿದ್ದಾರೆ. ಅಲ್ಲಿ ಸಂಭವಿಸದ ಭೂ ಕುಸಿತ ಇಲ್ಲಿ ಮಾತ್ರ ಏಕೆ ಸಂಭವಿಸುತ್ತಿದೆ ಎನ್ನುವುದಕ್ಕೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ.
ಮೊನ್ನೆ ಕೊಡಗಿಗೆ ಭೇಟಿ ನೀಡಿದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿರುವ ಅನಂತ ಹೆಗಡೆ ಅಶೀಸರ ಅವರು ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿಯನ್ನು ತಡೆಗಟ್ಟುವುದರೊಂದಿಗೆ ನಿಸರ್ಗದ ಮರು ಸಂರಕ್ಷಣೆಗೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಜಂಟಿಯಾಗಿ ಯೋಜನೆ ರೂಪಿಸುವಲ್ಲಿ ಕಾಳಜಿ ತೋರಬೇಕೆಂದು ಹೇಳಿದರು.

ಅವರು ಮಾತನಾಡುತ್ತಾ, ತಮ್ಮ ನೇತೃತ್ವದಲ್ಲಿ ಕರ್ನಾಟಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥರು, ಭೂವಿಜ್ಞಾನ ಇಲಾಖೆಯ ಮುಖ್ಯಸ್ಥರು, ವಿಜ್ಞಾನಿಗಳನ್ನು ಒಳಗೊಂಡಂತೆ ಭೂಕುಸಿತ ಅಧ್ಯಯನ ಸಮಿತಿಯನ್ನು ರಾಜ್ಯ ಸರಕಾರ ರಚಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಅವರು ನುಡಿದರು.ಅಧ್ಯಯನ ಸಮಿತಿಯು ಭೂ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂ ಕುಸಿತ ಉಂಟಾಗಿರುವ ಪ್ರದೇಶಗಳಿಗೆ ತಮ್ಮ ತಂಡವು ಭೇಟಿ ನೀಡಿ ಭೂಕುಸಿತ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಜನರ ರಕ್ಷಣೆ, ಪರಿಸರ ಸಂರಕ್ಷಣೆ ಎರಡು ಅತೀ ಮುಖ್ಯ ಅಂಶವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ತಾಂತ್ರಿಕ ಮಾಹಿತಿಯೊಂದಿಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ಪ್ರಕೃತಿ ನಾಶವಾಗದಂತೆ ಮಾನವನ ಹಸ್ತಕ್ಷೇಪ ಪ್ರಕೃತಿಯ ಮೇಲೆ ಹೆಚ್ಚಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಈ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದೇವೆ ಎಂದು ಅನಂತ ಹೆಗಡೆ ಅಶೀಸರ ಹೇಳಿದರು.
ಈ ತಂಡದಲ್ಲಿದ್ದ ಕರ್ನಾಟಕ ಹವಾಮಾನ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರ ಅಭಿಪ್ರಾಯದಂತೆ ಕೊಡಗಿನಲ್ಲಿ ಜುಲೈನಿಂದ ಮಳೆ ಜೋರಾಗಲಿದ್ದು, ಈ ದಿಸೆಯಲ್ಲಿ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಕ್ಕೆ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದರು.ಮಾನವನಿಗೆ ವಾಸಿಸುವ ಪ್ರದೇಶ ನಾಶವಾದಲ್ಲಿ ಪುನರ್ ವಸತಿ ಕಲ್ಪಿಸಬಹುದು. ಆದರೆ ಅರಣ್ಯ ನಾಶಕ್ಕೆ ಪರ್ಯಾಯ ವ್ಯವಸ್ಥೆ ಸಾಧ್ಯವೇ ಎಂದು ಪ್ರಶ್ನಿಸಿದ ಅಶೀಸರ ಕೊಡಗಿನ ಕಾಡುಗಳನ್ನು ಉಳಿಸಿಕೊಂಡರೆ ಮಾನವನೊಂದಿಗೆ ಜೀವ ಸಂಕುಲವೂ ರಕ್ಷಿಸಲ್ಪಡುತ್ತದೆ ಎಂದರು.
ಮೋಡ ಬಿತ್ತನೆಗೂ ಭೂಕುಸಿತಕ್ಕೂ ಸಂಬಂಧವಿಲ್ಲ
ಕೃತಕ ಮೋಡ ಬಿತ್ತನೆಗೂ, ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೂ ಯಾವುದೇ ಸಂಬಂಧವಿಲ್ಲವೆಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹವಾಮಾನ ಇಲಾಖೆಯ ಪ್ರಕಾರ 2019ರಲ್ಲಿ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಿರಲಿಲ್ಲವೆಂದು ಸಮರ್ಥಿಸಿಕೊಂಡರು.
ಕೊಡಗು ಜಿಲ್ಲೆ ಅಪಾರವಾದ ಅರಣ್ಯ ಸಂಪತ್ತು ಮತ್ತು ದಟ್ಟ ಕಾಡುಗಳನ್ನು ಹೊಂದಿದೆ. ಈ ಅರಣ್ಯ ಸಂಪತ್ತನ್ನು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ರಕ್ಷಿಸುವ ಕಾರ್ಯವಾಗಬೇಕಿದೆ ಎಂದೂ ತಜ್ಞರು ಅಭಿಪ್ರಾಯಿಸಿದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ತಂಡಕ್ಕೆ ವಿವರಿಸಿದರು. ಜಿಲ್ಲೆಯಲ್ಲಿ ಸಮತಟ್ಟಾದ ಪ್ರದೇಶ ಸಿಗುವುದು ತೀರಾ ವಿರಳ. ಜನವಸತಿ ಮಾತ್ರವಲ್ಲದೆ ದಟ್ಟ ಅರಣ್ಯ ಪ್ರದೇಶದಲ್ಲಿಯೂ ಸಹ ಭೂಕುಸಿತ ಉಂಟಾಗಿತ್ತು ಎಂದು ಹೇಳುತ್ತಾರೆ.
ಭೂಕುಸಿತ ಸಂಬವಿಸಿದ ಮೊದಲ ವರ್ಷದಲ್ಲೇ ಸರ್ಕಾರ ಎಚ್ಚತ್ತುಕೊಂಡು ತಜ್ಞರ ಸಮಿತಿಯನ್ನು ರಚಿಸಿ ಕುಸಿತಕ್ಕೆ ಶಾಸ್ವತ ತಡೆ ಯೋಜನೆ ರೂಪಿಸಬೇಕಿತ್ತು. ಆದರೆ ತಡವಾಗಿ ಸರ್ಕಾರ ಎಚ್ಚತ್ತುಕೊಂಡಿದೆ. ತಮಿಳುನಾಡಿದ ಕೆಲವೆಡೆಗಳಲ್ಲಿ ವೆಟ್ರಿವೇರ್ ಎಂಬ ದಪ್ಪ ಹುಲ್ಲು ಬೆಳೆಸಿ ಭೂ ಕುಸಿತ ತಡೆಯಲಾಗುತ್ತಿದೆ. ಅದೇ ಮಾದರಿಯನ್ನೇ ಇಲ್ಲೂ ಅಳವಡಿಸಿಕೊಂಡರೆ ಕುಸಿತ ಕಡಿಮೆಯಾಗಲಿದೆ ಎಂದು ಸ್ಥಳಿಯರ ಅಭಿಪ್ರಾಯ. ಸರ್ಕಾರ ಕೂಡಲೇ ಜನರನ್ನು ಭೂಕುಸಿತದಿಂದ ರಕ್ಷಿಸಲು ಕಾರ್ಯೋನ್ಮುಖವಾಗಬೇಕಿದೆ.






