ಆತ ರಾಕೇಶ್ ಬಿ ಕಿತ್ತೂರ್ ಮಠ. ಯುಎಇನ ಎಮಿರಿಲ್ ಸರ್ವೀಸ್ ಎಂಬ ಕಂಪೆನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಆದರೀಗ ಆತ ದುಬೈ ಪೊಲೀಸರ ಅತಿಥಿಯಾಗಿದ್ದಾರೆ. ವಿಷಯ ಇಷ್ಟೇ. ರಾಕೇಶ್ ಇತ್ತೀಚೆಗೆ ಫೇಸ್ ಬುಕ್ಕಿನಲ್ಲಿ ದ್ವೇಷ ಹರಡುವ ರೀತಿಯಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಪೋಸ್ಟ್ವೊಂದನ್ನು ಹಾಕಿದ್ದರು. ನೋಡ ನೋಡುತ್ತಲೇ ಈ ಕಮೆಂಟ್ ವೈರಲ್ ಆಗಿ ಹೋಯ್ತು. ರಾಕೇಶ್ ಕೆಲಸ ಮಾಡುತ್ತಿದ್ದ ಕಂಪೆನಿಯ ಗಮನಕ್ಕೂ ಬಂತು. ಕೋಮು ದ್ವೇಷ ಹರಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾನದಂಡದ ಮೇರೆಗೆ ರಾಕೇಶ್ ಅವರನ್ನು ಕೆಲಸದಿಂದ ವಜಾಗೊಳಿಸಿತು ಸಂಸ್ಥೆ. ಅಲ್ಲದೇ ಕಾನೂನಿನ ಮೊರೆ ಹೋಯಿತು. ಮೊದಲೇ ಮುಸ್ಲಿಂ ಸರ್ವಾಧಿಕಾರ ರಾಷ್ಟ್ರಗಳ ಪೈಕಿ ಯುಎಇ ಕೂಡ ಒಂದು.
ಆದರೆ, ತನ್ನ ಕಮೆಂಟ್ ತನಗೆ ಮುಳುವಾಗುತ್ತಿದೆ ಎಂದು ಗೊತ್ತಾದ ಕೂಡಲೇ ಅವಾಂತರಕ್ಕೆ ವೇದಿಕೆಯಾಗಿದ್ದ ಫೇಸ್ ಬುಕ್ಕಿನಲ್ಲೇ ಕ್ಷಮೆಯನ್ನೂ ಕೇಳಿದ್ದರು. ಆದರೆ ಇಸ್ಲಾಮೋಫೋಬಿಯಾ ಹೊಂದಿದ್ದ ರಾಕೇಶ್ ರನ್ನು ಅಲ್ಲಿನ ಆಡಳಿತ ವ್ಯವಸ್ಥ ಕಠಿಣ ಶಿಕ್ಷೆಗೆ ಗುರಿ ಪಡಿಸಿದೆ. ಇದರ ಜತೆಗೆ ಘಟನೆ ನಡೆಯೋದಕ್ಕು ಕೆಲವು ದಿನಗಳ ಹಿಂದೆ ಭಾರತ ಮೂಲದ ಇಬ್ಬರು ವ್ಯಕ್ತಿಗಳು ಇದೇ ರೀತಿಯಾಗಿ ಪೂರ್ವಾಗ್ರಹ ಪೀಡಿತವಾಗಿ ದ್ವೇಷ ಹರಡುವ ರೀತಿಯಲ್ಲಿ ಪೋಸ್ಟ್ ಮಾಡಿದ್ದರು. ಮಿತೇಶ್ ಉದೇಸಿ ಹಾಗೂ ಸುಮೀತ್ ಭಂಡಾರಿ ಎಂಬ ಇಬ್ಬರು ಹೀಗೆಯೇ ಮಾಡಿ ದುಬೈ ಪೊಲೀಸರ ವಶದಲ್ಲಿದ್ದಾರೆ.
Also Read: ಮುಳುವಾದ ತೇಜಸ್ವಿ ಸೂರ್ಯ ʼಮಹಿಳಾ ವಿರೋಧಿʼ ಟ್ವೀಟ್; ಟ್ವಿಟ್ಟರ್ನಿಂದಲೇ ಮುಕ್ತಿ ಕೊಡಿಸಿದ ಕೇಂದ್ರ ಸರಕಾರ
ಇದೇ ರೀತಿಯಾದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ. ಇದೇ ರೀತಿಯಾಗಿ, ಧಾರ್ಮಿಕ ಅವಹೇಳನ ಹಾಗೂ ಸೌದಿ ದೊರೆಯ ಬಗ್ಗೆ ಫೇಸ್ಬುಕ್ನಲ್ಲಿ ಸ್ಟೇಟಸ್ ಹಾಕಿದ ಆರೋಪದಡಿಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಬಿಜಾಡಿ ಗ್ರಾಮದ ಹರೀಶ್ ಬಂಗೇರ ಎಂಬವರನ್ನು ಸೌದಿ ಪೊಲೀಸರು ಬಂಧಿಸಿದ್ದರು.
ಹರೀಶ್ ಬಂಗೇರ ಕಳೆದ ಆರು ವರ್ಷಗಳಿಂದ ಸೌದಿ ಆರೇಬಿಯಾದ ‘ಗಲ್ಫ್ ಕಾರ್ಟೂನ್’ ಕಂಪನಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 19 ರಂದು ಹರೀಶ್ ಬಂಗೇರ ಎಸ್ ಹೆಸರಿನ ಅವರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಪ್ರಧಾನಿ ನರೇಂದ್ರ ಮೋದಿ ನಿಲುವು ಹಾಗೂ ಮಂಗಳೂರು ಗಲಭೆಯ ಕುರಿತಾಗಿ ಕೆಲವೊಂದು ಸ್ಟೇಟಸ್ ಹಾಗೂ ವಿಡಿಯೋ ಹಂಚಿಕೊಂಡಿದ್ದರು. ಆದರೆ ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದರು. ಇಷ್ಟೇ ಅಲ್ಲದೆ ಹರೀಶ್ ಬಂಗೇರ ಅವರಿಗೆ ಫೋನ್ ಕರೆ ಮಾಡಿ ತರಾಟೆಗೆ ತೆಗೆದುಕೊಂಡು ಬೆದರಿಕೆ ಒಡ್ಡಿದ್ದರು.
Also Read: B.R. ಶೆಟ್ಟಿ ಕಂಪೆನಿಯ ವಿರುದ್ಧ ವಂಚನೆ ಪ್ರಕರಣ ದಾಖಲು; ಭಾರತದಲ್ಲಿ ತಲೆಮರೆಸಿಕೊಂಡರೇ ಉದ್ಯಮಿ!?
ಹರೀಶ್ ಅವರ ಪೌರತ್ವ ಗಲಭೆಯ ಪೋಸ್ಟ್ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ವಿಚಾರ ಅವರು ಕೆಲಸ ಮಾಡುವ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೂ ಬಂದಿತ್ತು. ಕೂಡಲೇ ಹರೀಶ್, ತಾವು ಹಂಚಿಕೊಂಡಿದ್ದ ಪೋಸ್ಟ್ ಅಳಿಸಿ ಹಾಕಿದರು. ಅಲ್ಲದೆ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದರು. ಜೊತೆಗೆ ವಿಡಿಯೋ ಮೂಲಕ ಕ್ಷಮೆಯನ್ನು ಕೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಆದರೂ ಸೌದಿ ಅರೇಬಿಯಾ ಇದನ್ನು ಗಂಭೀರ ವಿಚಾರವೆಂದು ಪರಿಗಣಿಸಿ ಸೂಕ್ತ ಕ್ರಮಕೈಗೊಂಡಿತು.
ಹೀಗೆ ಹಲವಾರು ಪ್ರಕರಣಗಳು ನಮ್ಮ ಮುಂದಿವೆ. ಆದರೂ ದಿನದಿಂದ ದಿನಕ್ಕೆ ಇಂಥಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇವೆಲ್ಲವೂ ಭ್ರಮೆಯಲ್ಲಿರುವವರಿಂದ ನಡೆಯುತ್ತಿರುವ ಪ್ರಮಾದಗಳು. ಯಾಕೆಂದರೆ, ಭಾರತ ವಿಶ್ವಗುರು, ಎಲ್ಲರೂ ಭಾರತದ ಮುಂದೆ ಕೈ ಕಟ್ಟಿನಿಲ್ಲುತ್ತಿದೆ ಎಂಬ ಭ್ರಮೆಯನ್ನು ದೇಶದೊಳಗೆ ಹಬ್ಬಿಸಿ ಬಿಡಲಾಗಿದೆ. ಇದರ ಪೂರ್ವಪರ ಗೊತ್ತಿಲ್ಲದೆ ಯುವಕರು ಈ ರೀತಿಯಾಗಿ ಅವಹೇಳನಾ ರೀತಿಯಲ್ಲಿ ನಡೆದುಕೊಂಡು ಪರದೇಶದ ಪೊಲೀಸರ ಅತಿಥಿಗಳಾಗುತ್ತಿದ್ದಾರೆ.
Also Read: ಭಾರತದ ಅಂತರಾಷ್ಟ್ರೀಯ ಸಂಬಂಧಕ್ಕೆ ಹುಳಿ ಹಿಂಡಿದ ತೇಜಸ್ವಿ ಸೂರ್ಯ ʼಮಹಿಳಾ ವಿರೋಧಿʼ ಟ್ವೀಟ್!
ಬೆಟ್ಟದಷ್ಟು ಕನಸುಗಳನ್ನು ಕಟ್ಟಿಕೊಂಡು ತವರಿನಿಂದ ವಿಮಾನ ಹತ್ತುವಾಗ ಕಣ್ಣಾಲಿ ಕಂಪಿಸಿರುತ್ತದೆ. ಒಂದೊಳ್ಳೆಯ ಬದುಕು ಕಟ್ಟಿಕೊಳ್ಳಲು ವಿದೇಶಕ್ಕೆ ತೆರಳಿ ದುಡಿಯುತ್ತಿರುತ್ತಾರೆ. ಆದರೆ ಹೀಗೆ ರಾಜಕೀಯ ಭ್ರಮಾವಲಯಕ್ಕೆ ಸಿಲುಕಿ ತಮ್ಮ ಬದುಕಿಗೆ ತಾವೇ ಕುತ್ತು ತಂದುಕೊಂಡು ಬದುಕಿಗೆ ವಿರಾಮಹಾಕಿಕೊಳ್ಳುತ್ತಾರೆ. ಬಹುಶಃ ಭಾರತ ವಿಶ್ವಗುರು ಎಂಬ ಭ್ರಮೆಯನ್ನು ತಲೆಯಿಂದ ತೊಡೆದು ಹಾಕದೆ ಹೋದರೆ, ಇನ್ನೂ ಇಂಥಾ ಹಲವಾರು ಕೃತ್ಯಗಳು, ಬದುಕುಗಳು ಯಾವುದೋ ದೇಶದ ಸೆರೆಮನೆಯಲ್ಲಿ ಮುಗಿದು ಹೋಗುತ್ತದೆ.
ಇದೀಗ ಮತ್ತೆ ರಾಕೇಶ್ ಎಂಬ ನಮ್ಮ ಕರ್ನಾಟಕ ಮೂಲದ ಯುವಕ ಎಡವಟ್ಟು ಮಾಡಿಕೊಂಡು ದುಬೈ ಪೊಲೀಸರಿಂದ ಕೈಗೆ ಕೋಳ ತೊಡಿಸಿಕೊಂಡಿದ್ದಾರೆ. 2015ರಲ್ಲಿ ಯುಎಇ ಸರ್ಕಾರ ಈ ರೀತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ದ್ವೇಷ ಹರಡುವ ಬಗ್ಗೆ ಕಠಿಣ ಕಾನೂನೊಂದನ್ನ ರೂಪಿಸಿಕೊಂಡಿತ್ತು. ಈ ಕಾನೂನಿನ ಅನ್ವಯ ಜೀವನ ಪರ್ಯಂತ ಜೈಲು ಶಿಕ್ಷೆಯನ್ನೂ ವಿಧಿಸುವ ಸರ್ವಾಧಿಕಾರ ಯುಎಇಗೆ ಇದೆ. ಈಗ ರಾಕೇಶ್ ಎಸಗಿದ ಕೃತ್ಯವನ್ನೂ ಈ ಕಠಿಣ ಕಾನೂನಿನ ಅಡಿಯಲ್ಲೇ ದುಬೈ ಪೊಲೀಸ್ ಇಲಾಖೆ ದಾಖಲಿಸಿಕೊಂಡಿದೆ ಎಂದು ಅರಬ್ ಸುದ್ದಿ ಜಾಲತಾಣಗಳು ವರದಿ ಮಾಡಿದೆ.