ಚೈನಾದಲ್ಲಿ ಹುಟ್ಟಿಕೊಂಡು ಜಗತ್ತಿನಾದ್ಯಂತ ತನ್ನ ಕರಾಳ ಪ್ರಭಾವ ಬೀರುತ್ತಿರುವ ಕರೋನಾ ವೈರಸ್ ಮೊದಲ ಬಾರಿಗೆ ಚೈನಾದಲ್ಲಿ ಪತ್ತೆಯಾಗಿರುವುದನ್ನು 2019ರ ಡಿಸೆಂಬರ್ 31 ರಂದು WHO ಗೆ ವರದಿ ಮಾಡಿತು. ಕರೋನಾ ಸೋಂಕು ಸಾಂಕ್ರಾಮಿಕವೆಂದು ತಿಳಿದ ಬೆನ್ನಿಗೆ ಕೆಲವು ದೇಶಗಳು ತಕ್ಷಣವೇ ಕಾರ್ಯ ಪ್ರವೃತ್ತಗೊಂಡಿತು. ಉದಾಹರಣೆಗೆ ಚೈನಾದ ಗಡಿಯಿಂದ ಕೇವಲ 150 ಕಿ.ಮಿ ಪಕ್ಕದಲ್ಲಿ ಇರುವ ಥೈವಾನ್‌ನಲ್ಲಿ ಅತೀ ಹೆಚ್ಚು ಕರೋನಾ ಸೋಂಕು ಪತ್ತೆಯಾಗಿರಬೇಕಿತ್ತು. ಆದರೆ ಹಾಗಾಗಲಿಲ್ಲ. ಕರೋನಾದ ಕುರಿತು ಮಾಹಿತಿ ಸಿಕ್ಕಾಗಲೇ ಥೈವಾನ್ ಹೊರದೇಶದಿಂದ ಬರುವವರನ್ನು ಏರ್‌ಪೋರ್ಟಿನಲ್ಲೇ ಪರೀಕ್ಷಿಸಲು ಶುರು ಮಾಡಿಕೊಂಡಿತು. ಸೋಂಕು ಪತ್ತೆಯಾಗಿರುವವರನ್ನು ಮತ್ತು ಶಂಕಿತರನ್ನು ಅಲ್ಲಿಂದಲೇ ಐಸಲೋಷನ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿತು.
ಥೈವಾನ್‌ಗಿಂತ ಜನಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಿರುವ ಗುಜರಾತಿನಲ್ಲಿ 7,000 ಕರೋನಾ ಪ್ರಕರಣಗಳು ಪತ್ತೆಯಾಗಿರುವಾಗ ಥೈವಾನ್‌ನಲ್ಲಿ ಪತ್ತೆಯಾಗಿರುವ ಕರೋನಾ ಪ್ರಕರಣಗಳ ಸಂಖ್ಯೆ ಕೇವಲ 440. (ಮೇ ಏಳರ ವರದಿ) ಅಲ್ಲದೆ ಥೈವಾನ್ ತನ್ನ ದೇಶದಾದ್ಯಂತ ಲಾಕ್‌ಡೌನ್ ಕೂಡಾ ಘೋಷಿಸಲಿಲ್ಲ, ಉಳಿದೆಲ್ಲಾ ದಿಗ್ಗಜ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತಗೊಳ್ಳುವಾಗ ಥೈವಾನ್ ಎಂದಿನಂತೆ ತನ್ನ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಇದು ಪುಟ್ಟ ದ್ವೀಪವೊಂದು ಹೇಗೆ ತನ್ನ ದೇಶದ ಜನರ ಆರೋಗ್ಯದ ಮೇಲಿನ ಜವಾಬ್ದಾರಿಯನ್ನು ನಿಭಾಯಿಸಿತು ಎನ್ನುವುದಕ್ಕೆ ಒಂದು ಉದಾಹರಣೆ. ಥೈವಾನ್ ಆಡಳಿತಾಧಿಕಾರಿಗಳು ಇಷ್ಟು ಕಾರ್ಯಪ್ರವೃತ್ತವಾಗಿರುವ ವಿಶ್ವಗುರು ಭಾರತ ಏನು ಮಾಡುತ್ತಿತ್ತು ಗೊತ್ತೇ ?
ಜನವರಿ 13 ರಂದು ಮೊದಲ ಬಾರಿಗೆ ಕರೋನಾ ವೈರಸ್ ಚೈನಾದ ಹೊರಗಡೆ ಥೈಲ್ಯಾಂಡ್‌ನಲ್ಲಿ ಪತ್ತೆಯಾಯಿತು. ಅದೇ ತಿಂಗಳ 30 ರಂದು ವಿಶ್ವ ಆರೋಗ್ಯ ಸಂಸ್ಥೆ ಅಂತರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿತು. ಫೆಬ್ರವರಿ 17 ರಂದು ವಿದೇಶಿ ಪ್ರಯಾಣ ಮತ್ತು ಸಾರ್ವಜನಿಕ ಸಭೆ ಮಾಡದಂತೆ WHO ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತು. ಆದರೆ WHO ಎಚ್ಚರಿಕೆ ನೀಡಿ ಸರಿಯಾಗಿ 7 ದಿನಗಳ ಬಳಿಕ ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕರು ತನ್ನ ಅಪ್ರಬುಧ್ಧತೆ ತೋರಿದರು. ಭಾರತದ ಮೋದಿ ಸರ್ಕಾರ ಅಮೇರಿಕಾದ ಅಧ್ಯಕ್ಷ ಟ್ರಂಪನ್ನು ಬರಮಾಡಿ ನಮಸ್ತೇ ಟ್ರಂಪ್ ಕಾರ್ಯಕ್ರಮ ಮಾಡಿತು. ಸಮಾವೇಶ ಮಾಡುವ ಮೂಲಕ ಒಂದೇ ಬಾರಿಗೆ WHO ಸೂಚಿಸಿದ ಎರಡು ಮಾರ್ಗದರ್ಶನವನ್ನು ಎರಡು ದೇಶಗಳ ನಾಯಕರು ಮುರಿದು ಹಾಕಿದರು.
Also Read: ಟ್ರಂಪ್ ಬೆದರಿಕೆಗೆ ಅಂಜಿತೇ ನರೇಂದ್ರ ಮೋದಿ ಸರಕಾರ!?
ಫೆಬ್ರವರಿ 23 ರಂದು ಬಿಜೆಪಿ ನಾಯಕರು ಶೂಟ್ (ಗೋಲಿ ಮಾರೋ ಸಾಲೋಂಕಿ) ಮಾಡಲು ಸಾರ್ವಜನಿಕ ಹೇಳಿಕೆ ನೀಡಿದೊಡನೆ ದೆಹಲಿಯಲ್ಲಿ ಪ್ರತಿಭಟನೆ ಮಾಡುವವರ ಎದುರು ಸಾರ್ವಜನಿಕವಾಗಿ ಬಂದೂಕುಗಳನ್ನು ತೋರಿಸಿ ಗಲಭೆ ಸೃಷ್ಟಿಸಲಾಯಿತು. ಜಗತ್ತಿನ ಉಳಿದ ದೇಶಗಳು ಕರೋನದ ವಿರುದ್ದ ಜಾಗೃತಗೊಳ್ಳಬೇಕಿದ್ದರೆ ಭಾರತದಲ್ಲಿ ಕರೋನಾದ ಕುರಿತು ಯಾವ ಸುದ್ದಿಗಳೂ ಮುಖ್ಯವಾಹಿನಿಯ ಮಾಧ್ಯಮದಲ್ಲಿ ಪ್ರಸಾರಗೊಳ್ಳಲಿಲ್ಲ. ಒಂದು ಕಡೆ ಆಳುವ ಪಕ್ಷದ ಪ್ರತಿನಿಧಿಗಳು ಗಲಭೆಗೆ ಕುಮ್ಮಕ್ಕು ನೀಡುತ್ತಿರಬೇಕಾದರೆ, ಇನ್ನೊಂದೆಡೆ ಸರ್ಕಾರ ಭಾರತದ ಸ್ಲಮ್ಮುಗಳಿಗೆ ಗೋಡೆ ಕಟ್ಟಿ ಅಮೇರಿಕಾಗೆ ಇಲ್ಲದ ವೈಭವವನ್ನು ತೋರಿಸಲು ಹೆಣಗಾಡಿತು.
Also Read: ಮೂರು ಗಂಟೆಗೆ ನೂರು ಕೋಟಿ, ಟ್ರಂಪ್‌ಗೆ ಅಹಮದಾಬಾದ್‌ನಲ್ಲಿ ದುಬಾರಿ ಸ್ವಾಗತ
ಕರೋನಾ ಸೋಂಕು ಸಾಂಕ್ರಮಿಕವೆಂದು ಘೋಷಿಸಿದ ಹನ್ನೊಂದು ದಿವಸಗಳ ಬಳಿಕ ಫೆಬ್ರವರಿ 23 ರಂದು ಮಧ್ಯಪ್ರದೇಶದಲ್ಲಿ MLA ಗಳನ್ನು ಖರೀದಿಸಿ ಹೊಸ ಸರ್ಕಾರವನ್ನು ರಚಿಸಲಾಯಿತು. WHO ಕರೋನಾ ಸೋಂಕಿನ ಕುರಿತು ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ ಮೋದಿ ಸರ್ಕಾರ ಸಾಂಕ್ರಾಮಿಕ ರೋಗವನ್ನು ಎದುರಿಸಲು ಬೇಕಾದ ಕನಿಷ್ಟ ಸಿದ್ದತೆಯನ್ನೂ ಮಾಡಲಿಲ್ಲ. ಬದಲಾಗಿ ಮೋದಿ ಕುಶಲ ಕರ್ಮಿಗಳ ವಸ್ತು ಪ್ರದರ್ಶನ ಹುನಾರ್ ಹಾತ್‌ಗೆ ತೆರಳಿ ಚಹಾದೊಂದಿಗೆ ಲಿಟ್ಟಿ ಚೋಕ ತಿನ್ನುತ್ತಿರುವುದಾಗಿ ತನ್ನ ಟ್ವಿಟರ್ ಅಕಂಟಿಂದ ಟ್ವೀಟ್ ಮಾಡಿದ್ದರು. ಮೋದಿ ಹಾಯಾಗಿ ಸಾರ್ವಜನಿಕ ಸಭೆಯಲ್ಲಿ ಲಿಟ್ಟಿ ಛೊಖ ತಿನ್ನುವಾಗ WHO ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ 20 ದಿನಗಳಾಗಿತ್ತು.
Also Read: ಕರೋನಾ ಕತ್ತಲಲ್ಲಿ ಗದ್ದುಗೆ ಏರಿದ ಶಿವರಾಜ್ ಸಿಂಗ್ ಚೌಹಾಣ್
ಫೆಬ್ರವರಿ 27 ರಂದು WHO ಸಾಂಕ್ರಮಿಕ ರೋಗವನ್ನು ಎದುರಿಸಲು ಸಾಮಾಗ್ರಿಗಳು, ಸಿದ್ಧತೆಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿತು. ಆದರೆ WHO ಮಾರ್ಗಸೂಚಿಗಳ ಕಡೆಗೆ ಗಮನವೇ ಹರಿಸದ ಮೋದಿ ಸರ್ಕಾರ, ಆರೋಗ್ಯ ಕಾರ್ಯಕರ್ತರಿಗೆ ಬೇಕಾದ PPE ಕಿಟ್‌ಗಳ ಸೇರಿ ಯಾವುದನ್ನೂ ತಯಾರಿ ಮಾಡಿಟ್ಟುಕೊಳ್ಳಲಿಲ್ಲ. WHO ಎಚ್ಚರಿಸಿದ ನಂತರದ ದಿನದಲ್ಲಿ 27,000 ಜನರು ಸೇರಿದ್ದ ಹಿರಿಯ ನಾಗರಿಕರು ಮತ್ತು, ಅಂಗವಿಕಲರಿಗೆ ಏರ್ಪಡಿಸಿದ್ದ ಕ್ಯಾಂಪ್ ʼಸಾಮಾಜಿಕ ಅಧಿಕಾರ್ತ ಶಿಬಿರʼದಲ್ಲಿ ಭಾಗಿಯಾದರು. ಇದು WHO ದ ಎಚ್ಚರಿಕೆಯ ನಂತರ ಮೋದಿ ಭಾಗಿಯಾದ ಮತ್ತೊಂದು ದೊಡ್ಡ ಸಾರ್ವಜನಿಕ ಸಭೆ.
ಆದರೆ ಭಾರತದಲ್ಲಿ ಕರೋನಾ ತನ್ನ ಪ್ರಭಾವವನ್ನು ಬೀರುವವರೆಗೆ ಎಚ್ಚೆತ್ತುಕೊಳ್ಳದ ಮೋದಿ ಸರ್ಕಾರದ ವೈಫಲ್ಯವನ್ನು ಮುಚ್ಚಿಡುವ ಸಲುವಾಗಿ ಭಾರತದ ಸರ್ಕಾರದ ಪರವಿರುವ ಮುಖ್ಯವಾಹಿನಿಯ ಮಾಧ್ಯಮಗಳು ಕರೋನಾ ಪ್ರಕರಣಕ್ಕೆ ಕೋಮು ಆಯಾಮ ನೀಡಿತು. ಅಶಿಕ್ಷಿತ ಮತ್ತು ಸಂಕುಚಿತ ಧಾರ್ಮಿಕ ಚೌಕಟ್ಟಿನಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಒಂದು ಗುಂಪು ದೆಹಲಿಯಲ್ಲಿ ಧಾರ್ಮಿಕ ಸಭೆ ನಡೆಸಿರೋದು ಕರೋನಾ ಭಾರತದಲ್ಲಿ ಹರಡಲು ಕಾರಣವೆಂದು, ಆಧಾರವಿಲ್ಲದೆ ಪಾಕಿಸ್ತಾನದ ಏಜೆಂಟರೆಂದು ಬಿಂಬಿಸಲು ಯಶಸ್ವಿಯಾಯಿತು. ಆದರೂ ಅವರಿಗೆ ಧಾರ್ಮಿಕ ಸಮಾವೇಶ ನಡೆಸಲು ಅನುಮತಿ ನೀಡಿದ ಸರ್ಕಾರವನ್ನಾಗಲಿ, ವಿದೇಶದಿಂದ ಬಂದವರನ್ನು ಪರೀಕ್ಷಿಸದೆ ದೇಶದೊಳಗೆ ಬಿಟ್ಟ ಕುರಿತಾಗಲೀ ಯಾರೂ ಪ್ರಶ್ನೆಗಳನ್ನೆತ್ತಿಲ್ಲಾ..!
Also Read: ಅಲ್ಲಾಹನೇ ಬಂದು ಗುಣಪಡಿಸುತ್ತಾನೆ ಅನ್ನೋ ಭ್ರಮೆಯಲ್ಲಿದೆಯೇ ʼಮುಸ್ಲಿಂ ಸಮುದಾಯʼ!?
ಯಾಕೆಂದರೆ ದೆಹಲಿಯಲ್ಲಿ ಧಾರ್ಮಿಕ ಸಮಾವೇಶ ನಡೆಸುವಾಗ ಭಾರತ ಸರ್ಕಾರ ಸಾಂಕ್ರಾಮಿಕ ರೋಗದ ಕುರಿತು ತಾನೇ ಸ್ಪಷ್ಟ ನಿಲುವು ತಳೆದಿರಲಿಲ್ಲ. ಆರೋಗ್ಯ ಸೇವಕರು PPE ಮೊದಲಾದ ಸುರಕ್ಷತಾ ಸಾಮಾಗ್ರಿಗಳನ್ನು ಕೇಳಿ ಅವಲತ್ತುಕೊಳ್ಳತ್ತಿದ್ದರೂ ಮಾಧ್ಯಮಗಳು ಅದನ್ನು ಸುದ್ದಿ ಮಾಡಲಿಲ್ಲ.
Also Read: ಹೇಳೋಕೆ ಲಕ್ಷ ಕೋಟಿ ಪ್ಯಾಕೇಜ್, ತೊಡೋಕೆ ಕನಿಷ್ಠ ಪಿಪಿಇ ಕೂಡ ಇಲ್ಲ!
ಬಿಜೆಪಿಯ ಐಟಿ ಸೆಲ್ ‘ಪಪ್ಪು’ ಎಂದು ಬಿಂಬಿಸಿದ್ದ ರಾಹುಲ್ ಗಾಂಧಿ ಫೆಬ್ರವರಿ ಆದಿಯಲ್ಲೇ ಕರೋನಾದ ಕುರಿತು ಎಚ್ಚರಿಕೆಯಿಂದಿರಿ ಎಂದು ಸರ್ಕಾರವನ್ನು ಕೇಳಿಕೊಂಡಿದ್ದರು.ಆದರೆ ಇದರ ಕಡೆಗೆ ಪ್ರಜ್ಞಾಪೂರ್ವಕಾವಾಗಿ ಗಮನಹರಿಸದ ಮಾಧ್ಯಮಗಳು, ಭಾರತದಲ್ಲಿ ಲಾಕ್‌ಡೌನ್ ಘೋಷಿದ್ದರಿಂದ ಮುಂಬೈಯ ಬಾಂದ್ರಾ ರೈಲ್ವೇ ಸ್ಟೇಷನ್ನಿಂದ ಊರಿಗೆ ಹೋಗಲು ಸೇರಿದ್ದ ವಲಸೆ ಕಾರ್ಮಿಕರನ್ನು ಕರೋನಾ ಹರಡುವವರು ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿತು. ರಿಪಬ್ಲಿಕ್ ಟಿ.ವಿ ಒಂದು ಹೆಜ್ಜೆ ಇನ್ನೂ ಮುಂದೆ ಹೋಗಿ ಹಸಿವಿನಿಂದ ಬಳಲುತ್ತಿದ್ದ ಕಾರ್ಮಿಕರನ್ನು ಏಜೆಂಟುಗಳೆಂದೂ, ಮೋದಿ ಸರ್ಕಾರಕ್ಕೆ ಮುಜುಗರ ತರಿಸಲು ಬಂದ ಬಾಡಿಗೆ ನಟರೆಂದೂ, ಮಸೀದಿಯಲ್ಲಿ ಸೇರಿದ್ದಾರೆ ಎಂದು ವರದಿ ಮಾಡಿತು. ಆದರೆ ಮಸೀದಿಯ ಎದುರಿಗಿದ್ದ ರೈಲ್ವೇ ಸ್ಟೇಷನ್ನಿನಲ್ಲಿ ಸೇರಿದ್ದ ಕಾರ್ಮಿಕರಲ್ಲಿ ಹಿಂದೂಗಳೇ ಅಧಿಕವಾಗಿದ್ದರು. ಈ ಕುರಿತು ಕಾರ್ಮಿಕರೊಡನೆ ಸುದ್ದಿ ಸಂಸ್ಥೆಯೊಡನೆ ಮಾತನಾಡಿದಾಗ ಖಾಯಿಲೆ ಬರದಿದ್ದರೂ ನಾವು ಇಲ್ಲಿ ಸಾಯುತ್ತೇವೆ. ಹಲವು ದಿನಗಳಿಂದ ಬರೀ ಹೊಟ್ಟೆಯಲ್ಲಿರುವ ಕರುಣಾಜನಕ ಕತೆಯನ್ನು ವಿವರಿಸಿದರು.
Also Read: ಮಾಧ್ಯಮಗಳ ಕೋಮು ದ್ವೇಷ ; ಅರ್ನಬ್ ಗೋಸ್ವಾಮಿ ವಿರುದ್ದ ಮೊಕದ್ದಮೆ ದಾಖಲು
ಆಗಲೂ ಇವರ ಕುರಿತು ಯಾವುದೇ ಕಾಳಜಿ ವಹಿಸದ ದೇಶದ ಶ್ರೀಮಂತರ ಮತ್ತು ಮೇಲ್ಮಧ್ಯಮ ವರ್ಗದವರ ಪ್ರಧಾನಿ ಮೋದಿ ಮಾರ್ಚ್ 22 ರಂದು ಚಪ್ಪಾಳೆ ತಟ್ಟಿ, ತಟ್ಟೆಬಾರಿಸಿ ಕರೋನಾ ವಿರುದ್ದ ಹೋರಾಟಕ್ಕೆ ಬೆಂಬಲ ಕೋರಿದರು. ಲಾಕ್‌ಡೌನ್ ಘೋಷಿಸಿದ್ದರೂ ಸಾಮಾಜಿಕ ಅಂತರವನ್ನು ಕಾಪಾಡದೆ ಜನ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿ ತಟ್ಟೆ ಬಡಿದರು. ಒಂದು ಕಡೆ ಮೋದಿ ಮಾತು ಕೇಳಿ ತಟ್ಟೆ ಬಡಿದುಕೊಂಡು ಹೊಟ್ಟೆ ತುಂಬಿದ ಜನರು ರಸ್ತೆಗಿಳಿಯುವಾಗ ಇನ್ನೊಂದು ಕಡೆ ರಸ್ತೆಯಲ್ಲಿ ಬಡ ಕಾರ್ಮಿಕರು ಖಾಲಿ ತಟ್ಟೆಯೊಂದಿಗೆ ಹಸಿದ ಹೊಟ್ಟೆಯಲ್ಲಿ ತಮ್ಮೂರುಗಳಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಬಹುಷ ಇಂತಹ ಒಂದು ಹಸಿವಿನ ಅಣಕ ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಕ್ಕಿಲ್ಲ.
Also Read: ಪ್ರಧಾನಿ ಮೋದಿ ಟ್ವಿಟರ್ ಖಾತೆಯನ್ನು ಅನ್‌ಫಾಲೋ ಮಾಡಿದ ವೈಟ್‌ಹೌಸ್
ಎಪ್ರಿಲ್ 2 ರಂದು ಮತ್ತೆ ಲೈವ್ ಬಂದ ಮೋದಿ ದೀಪ ಉರಿಸುವ ಟಾಸ್ಕ್ ಜನರಿಗೆ ನೀಡಿದರು, ನೆನಪಿಟ್ಟುಕೊಳ್ಳಿ ಆಗಲೂ ಆರೋಗ್ಯ ಸೇವಕರು ತಮಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಇನ್ನೂ ಲಭ್ಯವಾಗದಿರುವ ಕುರಿತು ಅಳಲು ತೋಡಿಕೊಳ್ಳುತ್ತಿದ್ದರು. ಬಿಜೆಪಿ ಐಟಿ ಸೆಲ್ ಜನರನ್ನು ಅವೈಜ್ಞಾನಿಕವಾಗಿ ಮರುಳು ಗೊಳಿಸಲು ಶುರು ಮಾಡಿತು, ತಟ್ಟೆ ಬಡಿಯುವ ವೈಬ್ರೇಶನ್‌ನಿಂದಾಗಿ ಹಾಗೂ ಬೆಳಕಿನ ಕಿರಣಗಳಿಗೆ ವೈರಸ್ ಸಾಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲೇಖನಗಳು ಹರಿಯ ತೊಡಗಿತು. ಅದನ್ನು ನಂಬಿ ಜನರು ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಮೂರ್ಖತನ ಪ್ರದರ್ಶಿಸಿದರು.
Also Read: ಚಪ್ಪಾಳೆ ತಟ್ಟಿಸುವ, ದೀಪ ಹಚ್ಚಿಸುವ ಪ್ರಧಾನಿ ಮೋದಿ ನಿರ್ಧಾರ ಮೂರ್ಖತನದ್ದೇ? ಜಾಣತನದ್ದೇ?
ಭಾರತದಲ್ಲಿ ಲಾಕ್‌ಡೌನ್ ಘೋಷಿಸಿದ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಅಯೋಧ್ಯೆಯಲ್ಲಿ ನೂರಾರು ಮಂದಿಯನ್ನು ಸೇರಿಸಿ ಮೂರ್ತಿ ಸ್ಥಳಾಂತರಗೊಳಿಸುವ ಕಾರ್ಯಕ್ರಮ ಮಾಡಿದರು. ಮಹಾರಾಷ್ಟ್ರ ದೇಶದಲ್ಲೇ ಅತ್ಯಧಿಕ ಕರೋನಾ ಪ್ರಕರಣ ಪತ್ತೆಯಾಗುತ್ತಿದ್ದಾಗಲೂ ಸಂಸತ್ತಿನಲ್ಲಿ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿನಲ್ಲಿತ್ತು. ಕರೋನಾ ಸೋಂಕು ಹರಡಲು ಶುರುವಾದ ನಡುವೆಯೂ ಗುಜರಾತಿನಲ್ಲಿ ʼನಮಸ್ತೆ ಟ್ರಂಪ್ʼ ಕಾರ್ಯಕ್ರಮವನ್ನು ಬಾರತ ಸರ್ಕಾರ ಮಾಡಿತು. ಅತೀ ಹೆಚ್ಚು ಕರೋನಾ ಪತ್ತೆಯಾಗಿರುವ ರಾಜ್ಯದಲ್ಲಿ ಸಾವಿರಾರು ಮಂದಿ ಸೇರಿ ನಮಸ್ತೇ ಟ್ರಂಪ್ ಮಾಡಿದ್ದ ಗುಜರಾತ್ ಎರಡನೇ ಸ್ಥಾನ ಪಡೆದುಕೊಂಡಿದೆ.
Also Read: ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಣೆ ನಂತರವೂ ಯೋಗಿ ಆದಿತ್ಯನಾಥ್ ಟೆಂಪಲ್ ರನ್..!
ಇದು ವಿಶ್ವಗುರು ಆಗಲು ಹೊರಟ ಭಾರತದಲ್ಲಿ ಕರೋನಾ ಪ್ರಕರಣದ ಸ್ಥೂಲ ಇತಿಹಾಸ. WHO ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದರೂ ಎಚ್ಚೆತ್ತುಕೊಳ್ಳದ ಭಾರತ ಸರ್ಕಾರ ತನ್ನ ಬೇಜವಾಬ್ದಾರಿಯಿಂದ ದೇಶ ನರಳುವಂತೆ ಮಾಡಿತು. ಆದರೆ ಮೋದಿ ಸರ್ಕಾರದ ಈ ಬೇಜವಾಬ್ದಾರಿತನಗಳನ್ನು ಮರೆಮಾಚುವ ಉದ್ದೇಶದಿಂದ ಸರ್ಕಾರದ ಕಾವಲು ನಾಯಿಯಂತೆ ವರ್ತಿಸುವ ಮಾಧ್ಯಮಗಳು ಸಮಾಜವನ್ನು ಕೋಮು ಆಧಾರದಲ್ಲಿ ವಿಭಜಿಸಿ ಸರ್ಕಾರದ ವೈಫಲ್ಯತೆಗಳನ್ನು ಅಡಗಿಸಿತು ಎನ್ನುವುದು ಖೇದದ ಸಂಗತಿ. ಯಾವ ಸಂದರ್ಭದಲ್ಲಿ ದೇಶವು ಒಗ್ಗಟ್ಟಿನಿಂದ ಇರಬೇಕಿತ್ತೋ, ಯಾವ ಸಂದರ್ಭದಲ್ಲಿ ಮಾಧ್ಯಮದವರು ಸಾಮರಸ್ಯದ ಪಾಠವನ್ನು ಸಾರಬೇಕಿತ್ತೋ ಅಂತಹ ದಿನಗಳಲ್ಲಿ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ ಮಾಧ್ಯಮಗಳು ಕೂಡಾ ಭಾರತದಲ್ಲಿ ಕರೋನಾ ಸಂಕಷ್ಟ ಇನ್ನಷ್ಟು ಹೆಚ್ಚಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
Also Read: ಮಾಧ್ಯಮಗಳ ಕೋಮು ದ್ವೇಷ ; ಅರ್ನಬ್ ಗೋಸ್ವಾಮಿ ವಿರುದ್ದ ಮೊಕದ್ದಮೆ ದಾಖಲು