ಕರೋನಾ ಸೋಂಕಿನಿಂದ ಲಾಕ್ಡೌನ್ ಆಗಿದ್ದ ದೇಶದಲ್ಲಿ ಇದೀಗ ವಲಸೆ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ತೆರಳಬಹುದು ಎಂದು ಕೇಂದ್ರ ಸರ್ಕಾರದ ನೂತನ ಆದೇಶದಲ್ಲಿ ತಿಳಿಸಲಾಗಿದೆ. ಅಂತರರಾಜ್ಯ ಕಾರ್ಮಿಕರನ್ನು ರೈಲು ಮೂಲಕ ಕಳುಹಿಸಿದ ರಾಜ್ಯ ಸರ್ಕಾರ, ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳುವ ಕಾರ್ಮಿಕರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಹೊಸ ಆದೇಶ ಹೊರಡಿಸಿದೆ. ಇಂದಿನಿಂದ ಮೂರು ದಿನಗಳ ಕಾಲ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯ ತನಕ ಪ್ರಯಾಣ ಮಾಡಬಹುದು. ಮಂಗಳವಾರದ ತನಕ ಮಾತ್ರ ಉಚಿತ ಪ್ರಯಾಣ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. KSRTC ಬಸ್ ಗಳಲ್ಲಿ ತೆರಳಲು ಸಾರಿಗೆ ಇಲಾಖೆಗೆ ವೆಚ್ಚವಾಗುವ ಹಣವನ್ನು ಸಾರಿಗೆ ಇಲಾಖೆಯೇ ಭರಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಆದರೆ, ಸಾರಿಗೆ ಇಲಾಖೆ ಮೊದಲು ಎರಡೂ ಕಡೆಯ ವೆಚ್ಚವನ್ನು ಕಾರ್ಮಿಕರಿಂದಲೇ ಸಂಗ್ರಹ ಮಾಡುವ ನಿರ್ಧಾರ ಮಾಡಿತ್ತು. ಯಾದಗಿರಿ – ₹ 1,411, ರಾಯಚೂರು – ₹1,201, ಉತ್ತರ ಕನ್ನಡ – ₹ 1,460, ಕಲಬುರಗಿ – ₹1,619 ದರ ನಿಗದಿ ಮಾಡಿತ್ತು. ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಕರೆದೊಯ್ದು ಬಿಟ್ಟು ವಾಪಸ್ ಬರುವಾಗ ಖಾಲಿ ಬಸ್ ಬರಲಿದೆ. ಹಾಗಾಗಿ ಎರಡೂ ಕಡೆಯ ವೆಚ್ಚವನ್ನು ಕಾರ್ಮಿಕರೇ ಭರಿಸಬೇಕು ಎಂದಿತ್ತು. ಮೊದಲೇ ಕೂಲಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತು ಸಾರಿಗೆ ಇಲಾಖೆ ಆದೇಶ. ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿಎಂ ಬಿ.ಎಸ್ ಯಡಿಯೂರಪ್ಪ ಎರಡು ಕಡೆಯ ಟಿಕೆಟ್ ದರ ಚಾರ್ಜ್ ಮಾಡಬೇಡಿ, ಸಾಮಾನ್ಯ ದರ ಮಾತ್ರ ಎಂದು ಸಾರಿಗೆ ಇಲಾಖೆಗೆ ಸೂಚನೆ ಕೊಟ್ಟಿದ್ದರು. ಜೊತೆಗೆ ಟ್ವೀಟ್ ಕೂಡ ಮಾಡಿದ್ದರು.
ಉಚಿತ ಪ್ರಯಾಣಕ್ಕೆ ಅವಕಾಶ
ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರು, ಇಂದಿನಿಂದ ಮಂಗಳವಾರದವರೆಗೆ ಕೆಎಸ್ ಆರ್ ಟಿಸಿ ಬಸ್ಗಳಲ್ಲಿ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಂದ ತಮ್ಮ ಊರುಗಳಿಗೆ ಉಚಿತವಾಗಿ ತೆರಳಬಹುದು.
ನೂಕುನುಗ್ಗಲು ಉಂಟಾಗದಂತೆ ನೋಡಿಕೊಳ್ಳುವುದರ ಜತೆಗೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲು ಮನವಿ.#ಮನೆಯಲ್ಲೇಇರಿ@BSYBJP pic.twitter.com/jPWmHsplNR— CM of Karnataka (@CMofKarnataka) May 3, 2020
ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಶನಿವಾರ ರಾತ್ರಿ ಕಾರ್ಮಿಕರು ತಂಗಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಅವ್ಯವಸ್ಥೆ ವಿರುದ್ಧ ಗುಡುಗಿದ್ದರು. “ಸಚಿವರು, ಶಾಸಕರು ಒಬ್ಬರು ಬಂದು ಇಲ್ಲಿನ ಕಾರ್ಮಿಕರ ಪರಿಸ್ಥಿತಿ ವಿಚಾರಿಸಿಲ್ಲ. ಮೊದಲೇ ಕೂಲಿಯಿಲ್ಲದೆ ಕಂಗೆಟ್ಟಿರುವ ಕಾರ್ಮಿಕರಿಂದ ಹಣ ವಸೂಲಿ ಮಾಡುವುದು ಬೇಡ. ಭಿಕ್ಷೆ ಬೇಡಿಯಾದರೂ ನಾವು ಕಾಂಗ್ರೆಸ್ ವತಿಯಿಂದ ಕಾರ್ಮಿಕರಿಗೆ ಸಾರಿಗೆ ಇಲಾಖೆ ವೆಚ್ಚ ಮಾಡುವ ಹಣವನ್ನು ಭರಿಸುತ್ತೇವೆ” ಎಂದಿದ್ದರು. ಕೊಟ್ಟ ಮಾತಿನಂತೆ 1 ಕೋಟಿ ರೂಪಾಯಿ ಮೊತ್ತದ ಚೆಕ್ ಹಸ್ತಾಂತರಕ್ಕೆ KSRTC ಬಸ್ ನಿಲ್ದಾಣದ ಬಳಿಗೆ ಬಂದಿದ್ದರು. KSRTC ಎಂಡಿ ಶಿವಯೋಗಿ ಸ್ವಾಮಿ ಅವರಿಗೂ ಚೆಕ್ ಪಡೆದುಕೊಳ್ಳಲು ಬರುವಂತೆ ತಿಳಿಸಲಾಗಿತ್ತು. ಆದರೆ ಚೆಕ್ ಪಡೆದುಕೊಳ್ಳಲು ಬರಲೇ ಇಲ್ಲ;.
ಸನ್ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಎಷ್ಟು ದುಡ್ಡು ಬೇಕು ಹೇಳಿ ಕೆಪಿಸಿಸಿ ವತಿಯಿಂದ ನಾನು ಕಟ್ಟಿ ಕೊಡುತ್ತೇನೆ. ಆದರೆ ಬೆಳಗ್ಗೆಯಿಂದ ಊಟ ತಿಂಡಿ ಇಲ್ಲದೇ ಕಂಗಾಲಾಗಿರುವ ಈ ಪ್ರಯಾಣಿಕರು ಸುರಕ್ಷಿತವಾಗಿ ಅವರ ಊರಿಗೆ ಹೋಗಲು ಬಸ್ ವ್ಯವಸ್ಥೆ ಕಲ್ಪಿಸಿ
ಈ ಸರ್ಕಾರಕ್ಕೆ ಒಂದು ಸಣ್ಣ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ pic.twitter.com/GxjxqrXtq3
— DK Shivakumar (@DKShivakumar) May 2, 2020
ಕಾರ್ಮಿಕರನ್ನು ಕರೆದುಕೊಂಡು ಹೋಗಲು ಕಾಂಗ್ರೆಸ್ 1 ಕೋಟಿ ರೂಪಾಯಿ ದೇಣಿಗೆ ನೀಡಲು ಮುಂದಾಗಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಸರ್ಕಾರವೇ ಉಚಿತ ಸಾರಿಗೆ ವ್ಯವಸ್ಥೆ ಘೋಷಣೆ ಮಾಡಿತ್ತು. ಕಾಂಗ್ರೆಸ್ ಹಣ ಪಾವತಿ ಮಾಡಿದರೆ ಎಲ್ಲಿ ಜನರು ಕಾಂಗ್ರೆಸ್ ಪರವಾಗಿ ಒಲವು ವ್ಯಕ್ತಪಡಿಸ್ತಾರೋ ಎನ್ನುವ ಆತಂಕದಲ್ಲಿ ಸಿಎಂ ಯಡಿಯೂರಪ್ಪ ಹರಿಬಿರಿಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಆದರೆ ಇದೀಗ ಮೂರು ದಿನಗಳ ಸಮಯ ನಿಗದಿ ಮಾಡಿದ್ದಾರೆ. ಮೂರು ದಿನದಲ್ಲಿ ಹೋಗುವವರಿಗೆ ಉಚಿತ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಬೆಳಗ್ಗೆ 6 ರಿಂದ ರಾತ್ರಿ 7 ಗಂಟೆ ತನಕ ಮಾತ್ರ ಕರೆದುಕೊಂಡು ಹೋಗಲು ಅವಕಾಶವಿದ್ದು, ಒಂದು ವೇಳೆ ಎಲ್ಲರನ್ನೂ ಕರೆದೊಯ್ಯಲು ಸಾಧ್ಯವಾಗದಿದ್ದರೆ ಉಳಿವರ ಕಥೆ ಏನು ಎನ್ನುವುದನ್ನು ಸರ್ಕಾರ ತಿಳಿಸಿಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಈ ನಿರ್ಧಾರಕ್ಕೆ ಕೆಂಡ ಕಾರಿದ್ದಾರೆ.
ಪ್ರಯಾಣಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕೆಪಿಸಿಸಿ ವತಿಯಿಂದ ಒಂದು ಕೋಟಿ ರೂ ಚೆಕ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕರುಗಳು ಕೆಪಿಸಿಸಿ ಕೊರೋನ ಪರಿಹಾರ ನಿಧಿಗಾಗಿ ದೇಣಿಗೆ ನೀಡಿರುವ ಹಣದಿಂದ ಕೆಎಸ್ಆರ್ ಟಿಸಿ ಸಂಸ್ಥೆಗೆ ನೀಡಲಾಗಿದೆ.@DKShivakumar @siddaramaiah#ಕಾಂಗ್ರೆಸ್_ಸಹಾಯ_ಹಸ್ತ pic.twitter.com/hFRT3ujgwg
— Karnataka Congress (@INCKarnataka) May 3, 2020
ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಕೆಪಿಸಿಸಿ.
ಕೆಪಿಸಿಸಿ ಅಧ್ಯಕ್ಷರಾದ @DKShivakumar
ಅವರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ತಮ್ಮ ಊರುಗಳಿಗೆ ತೆರಳಲು ಬಂದಿದ್ದ ಜನರ ಸಂಕಷ್ಟ ಆಲಿಸಿ,ತಾವೇ ಪ್ರಯಾಣದ ವೆಚ್ಚ ಭರಿಸುವುದಾಗಿ ನೀಡಿದ್ದ ವಾಗ್ದಾನದಂತೆಯೇ ₹ 1 ಕೋಟಿ ಚೆಕ್ ನೀಡಿದ ಕೆಪಿಸಿಸಿ.#ಕಾಂಗ್ರೆಸ್_ಸಹಾಯ_ಹಸ್ತ pic.twitter.com/qa6E1iJ4BG
— Karnataka Congress (@INCKarnataka) May 3, 2020
“ನಿನ್ನೆ ಭಿಕ್ಷೆ ಬೇಡಿಯಾದರೂ ಹಣ ಕೊಡ್ತೀವಿ ಅಂತ ಹೇಳಿದ್ದೆವು. ಅದರಂತೆ ಈಗ ನಮ್ಮ ಶಾಸಕರು, ಕಾರ್ಯಕರ್ತರು ಕೊಟ್ಟಿದ್ದ ಒಂದು ಕೋಟಿ ರೂಪಾಯಿ ಚೆಕ್ ಕೊಡ್ತಿದ್ದೇವೆ. ಚೆಕ್ ಪಡೆದುಕೊಳ್ಳಲು KSRTC ಚೇರ್ಮನ್ ಶಿವಯೋಗಿ ಸ್ವಾಮಿ ಅವರಿಗೆ ತಿಳಿಸಿದ್ದೆವು. ಬರ್ತೀನಿ ಎಂದಿದ್ದವರು ಇಲ್ಲೀವರೆಗೂ ಬಂದಿಲ್ಲ. 26 ಜನ ಬಿಜೆಪಿ ಬೆಂಬಲಿತ ಎಂಪಿಗಳು ಇದ್ದಾರೆ. ಒಂದು ರೈಲು ವ್ಯವಸ್ಥೆ ಮಾಡೋಕೆ ಆಗಿಲ್ಲ. ಕಾರ್ಮಿಕರು ಊರಿಗೆ ಹೋಗುವ ಮಾರ್ಗದಲ್ಲಿ ಊಟದ ವ್ಯವಸ್ಥೆ ಮಾಡಬೇಕು. ಇಲ್ಲದೆ ಇದ್ರೆ ನಾವೇ ನಮ್ಮ ಕಾರ್ಯಕರ್ತರ ಜೊತೆ ಸೇರಿ ವ್ಯವಸ್ಥೆ ಮಾಡ್ತೀವಿ. ಸಚಿವರು, ಶಾಸಕರು ಯಾರು ಇಲ್ಲ. ಇಷ್ಟು ಸಮಸ್ಯೆ ಆದ್ರು ಯಾರು ಕಾರ್ಮಿಕರನ್ನ ಬಂದು ಮಾತಾಡಿಸಿಲ್ಲ. ಬೆಂಗಳೂರು ಶಾಸಕರು, ಸಚಿವರು ಸಹ ಬಂದಿಲ್ಲ” ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಜೊತೆಗೆ ಮೂರು ದಿನ ಮಾತ್ರವಲ್ಲ, ಕಾರ್ಮಿಕರು ಸಂಪೂರ್ಣವಾಗಿ ಹೋಗುವವರೆಗು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹ ಮಾಡಿದ್ದಾರೆ.






