ಕರೋನಾ ವೈರಸ್ ಸೋಂಕು ತಡೆಗೆ ಹಣಕಾಸು ಸಂಪನ್ಮೂಲ ಕ್ರೋಢೀಕರಿಸಲು ಬಹುತೇಕ ಎಲ್ಲಾ ಸರ್ಕಾರಿ ನೌಕರರ ವೇತನದಲ್ಲಿ ಒಂದಿಷ್ಟು ಪಾಲನ್ನು ಪಡೆಯುತ್ತಿರುವ ಮೋದಿ ಸರ್ಕಾರವು ಇಚ್ಚಾವರ್ತಿ ಸುಸ್ತಿದಾರರ ಸಾಲಮನ್ನ ಮಾಡಿರುವ ಮೊತ್ತ ಎಷ್ಟು ಗೊತ್ತೇ? ಬರೋಬ್ಬರಿ 68,607 ಕೋಟಿ ರುಪಾಯಿಗಳು. ಇದು ಕೇವಲ ಐವತ್ತು ವ್ಯಕ್ತಿಗಳು/ಕಂಪನಿಗಳಿಗಾಗಿ ಮಾಡಿರುವ ಸಾಲ ಮನ್ನಾ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅಗ್ರಸ್ಥಾನದಲ್ಲಿದ್ದಾರೆ. ಮೋದಿಯರ ಆಪ್ತರಾಗಿದ್ದ ಬಾಬಾ ರಾಮ್ ದೇವ್ ಅವರ ಕಂಪನಿಯ ಸಾಲವನ್ನೂ ಸಹ ಮನ್ನಾ ಮಾಡಲಾಗಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಇಚ್ಚಾವರ್ತಿ ಸಾಲಗಾರರ ವಿವರ ಮತ್ತು ಮನ್ನಾ ಮಾಡಿರುವ ಸಾಲದ ಮೊತ್ತದ ಬಗ್ಗೆ ಲಿಖಿತ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಾಗಲಿ, ವಿತ್ತ ಖಾತೆ ಸಚಿವ ಅನುರಾಗ್ ಥಾಕೂರ್ ಆಗಲಿ ಉತ್ತರಿಸಲು ನಿರಾಕರಿಸಿದ್ದರು. ಮಾಹಿತಿ ಹಕ್ಕು ಕಾರ್ಯಕರ್ತರಾದ ಸಾಕೇತ್ ಗೋಖಲೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಈ ಮಾಹಿತಿಯನ್ನು ಪಡೆದಿದ್ದಾರೆ.
2020 ನೇ ಸಾಲಿನ ಫೆಬ್ರವರಿ 16ನೇ ತಾರೀಖಿನವರೆಗೆ ಇಚ್ಚಾವರ್ತಿ ಸಾಲಗಾರರ ಪಟ್ಟಿ ಅವರ ಸಾಲದ ಪ್ರಮಾಣದ ಬಗ್ಗೆ ಮಾಹಿತಿಯನ್ನು ಕೋರಿ ಸಾಕೇತ್ ಗೋಖಲೆ ಅರ್ಜಿ ಸಲ್ಲಿಸಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ, ಮೋದಿ ಸರ್ಕಾರದ ಅವಧಿಯಲ್ಲಿ ಭಾರತದ ಬ್ಯಾಂಕುಗಳು ದೇಶದ ಐವತ್ತು ಇಚ್ಚಾವರ್ತಿ ಸುಸ್ಥಿದಾರರ ಒಟ್ಟು 68,607 ಕೋಟಿ ರುಪಾಯಿಗಳನ್ನು ‘ರಿಟನ್ ಆಫ್’ ಮಾಡಿವೆ.
Also Read: ಕಚ್ಚಾ ತೈಲ 0.01 ಡಾಲರ್ ಗೆ ಕುಸಿದಿದೆ! ಮೋದಿಜಿ ಈಗಲಾದರೂ ಪೆಟ್ರೋಲ್, ಡೀಸೆಲ್ ದರ ಇಳಿಸ್ತೀರಾ?
‘ರಿಟನ್ ಆಫ್’ ಎಂಬದರ ಪರೋಕ್ಷ ಅರ್ಥ ಸಾಲಮನ್ನಾ ಮಾಡಲಾಗಿದೆ ಎಂದೇ ಹೌದು. ಬ್ಯಾಂಕಿಂಗ್ ಪರಿಭಾಷೆಯಲ್ಲಿ ‘ರಿಟನ್ ಆಫ್’ ಎಂದರೆ, ಯಾವ ನಿಷ್ಕ್ರಿಯ ಸಾಲವನ್ನು ಬ್ಯಾಂಕುಗಳು ಹಿಂದಿರುಗಿ ಪಡೆಯಲು ಸಾಧ್ಯವಾಗುವುದಿಲ್ಲವೋ, ಮತ್ತು ಭವಿಷ್ಯದಲ್ಲಿ ಆ ಸಾಲಗಳು ವಾಪಾಸಾಗುವ ಯಾವುದೇ ಸಾಧ್ಯತೆ ಇರುವುದಿಲ್ಲವೋ, ಅಥವಾ ಯಾವ ಸಾಲಗಾರ ಸಾಲ ಪಡೆದು ದೇಶಬಿಟ್ಟು ಓಡಿ ಹೋಗಿರುತ್ತಾನೋ ಮತ್ತು ಆತನ ಅಥವಾ ಆತನ ಕಂಪನಿಯಿಂದ ಸಾಲದ ಮೊತ್ತವನ್ನು ಹಿಂದಿರುಗಿ ಪಡೆಯಲು ಸಾಧ್ಯವಾಗುವುದಿಲ್ಲವೋ ಅಂತಹ ಸಾಲದ ಮೊತ್ತವನ್ನು ಬ್ಯಾಂಕಿನ ಲಾಭನಷ್ಟ ತಖ್ತೆ (ಬ್ಯಾಲೆನ್ಸ್ ಶೀಟ್) ಯಿಂದ ತೆಗೆದು ಹಾಕಲಾಗುತ್ತದೆ. ಅಂದರೆ ಇದನ್ನು ಬ್ಯಾಲೆನ್ಸ್ ಶೀಟ್ ಶುದ್ಥೀಕರಿಸುವ ಪ್ರಕ್ರಿಯೆ ಎಂದೇ ಅರ್ಥ. ಆದರೆ, ‘ರಿಟನ್ ಆಫ್’ ಮಾಡಿದ ಬ್ಯಾಂಕುಗಳು ಹಾಲಿ ಮತ್ತು ಭವಿಷ್ಯದ ಲಾಭಾಂಶದಲ್ಲಿ ಅಲ್ಪಭಾಗವನ್ನು ‘ರಿಟನ್ ಆಫ್’ ಮಾಡಿದ ಮೊತ್ತಕ್ಕೆ ಮೀಸಲಿಟ್ಟು ಸರಿದೂಗಿಸಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ಬಹುತೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೆಲವೇ ಕೆಲವು ಇಚ್ಛಾವರ್ತಿ ಸುಸ್ತಿದಾರರ ಸಾಲವನ್ನು ‘ರಿಟನ್ ಆಫ್’ ಮಾಡಿ, ನಷ್ಟವನ್ನು ಘೋಷಣೆ ಮಾಡಿಕೊಳ್ಳುತ್ತಿವೆ.
ಸಾಕೇತ್ ಗೋಖಲೆ ಅವರು ಆರ್‌ಬಿಐನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರ ಅಭಯ್ ಕುಮಾರ್ ಅವರಿಂದ ಏಪ್ರಿಲ್ 24 ರಂದು ಮಾಹಿತಿ ಪಡೆದಿದ್ದಾರೆ. 2019 ಸೆಪ್ಟೆಂಬರ್ 29 ರವರೆಗೆ ಸಾಲಮನ್ನಾ ಮಾಡಲ್ಪಟ್ಟವರ ವಿವರವನ್ನು ಆರ್‌ಬಿಐ ನೀಡಿದೆ. ಸಾಲಮನ್ನಾ ಮಾಡಲ್ಪಟ್ಟ ಐವತ್ತು ಜನರ ಪೈಕಿ ಅತಿ ಹೆಚ್ಚು ಸಾಲ ಮನ್ನಾ ಮಾಡಲ್ಪಟ್ಟವರೆಲ್ಲರೂ ಗುಜರಾತ್ ಮೂಲದ ಚಿನ್ನಾಭರಣ, ವಜ್ರದ ವ್ಯಾಪಾರಿಗಳೇ ಆಗಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ. ಈ ಪೈಕಿ ಅತಿ ಹೆಚ್ಚು ಸಾಲ ಮನ್ನಾ ಆಗಿರುವುದು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಅವರದ್ದು. ಗೀತಾಂಜಲಿ ಜೆಮ್ಸ್ 5,492 ಕೋಟಿಗಳು, ಗಿಲಿ ಇಂಡಿಯಾ ಲಿಮಿಟೆಡ್ 1,447 ಕೋಟಿ ಮತ್ತು ನಕ್ಷತ್ರ ಬ್ರಾಂಡ್ ಲಿಮಿಟೆಡ್ 1,109 ಕೋಟಿಗಳನ್ನು ಮನ್ನಾ ಮಾಡಲಾಗಿದೆ. ಗುಜರಾತ್ ನ ಈ ಇಬ್ಬರೂ ಪ್ರಧಾನಿ ನರೇಂದ್ರಮೋದಿ ಸರ್ಕಾರದ ಅವಧಿಯಲ್ಲಿ ದೇಶದಿಂದ ತಲೆಮರೆಸಿಕೊಂಡು ಪರಾರಿಯಾಗಿದ್ದಾರೆ. ಈ ಪೈಕಿ ಮೆಹುಲ್ ಚೋಕ್ಸಿ ಆಂಟಿಗುವಾದ ನಾಗರಿಕತೆ ಪಡೆದುಕೊಂಡಿದ್ದರೆ, ನೀರವ್ ಮೋದಿ ಲಂಡನ್ ನಲ್ಲಿ ತಲೆ ಮರೆಸಿಕೊಂಡಿದ್ದಾರೆ.
Also Read: ಕರೋನಾ ನೆನಪಿಸಿದ ನರೇಂದ್ರ ಮೋದಿ ಸರ್ಕಾರದ ‘ಆರ್ಥಿಕ ಅನಕ್ಷರತೆ’ ಮತ್ತು ಗಗನಚುಂಬಿ ಪ್ರತಿಮೆ!
ಎರಡನೇ ಅತಿ ಹೆಚ್ಚು ಸಾಲ ಮನ್ನಾ ಆಗಿರುವುದು ಆರ್‌ಇಐ ಆಗ್ರೋ ಲಿಮಿಟೆಡ್ ಕಂಪನಿಯದ್ದು. ಮನ್ನಾ ಮಾಡಲಾದ ಮೊತ್ತವು 4,314 ಕೋಟಿ ರುಪಾಯಿಗಳು. ಈ ಕಂಪನಿಯ ನಿರ್ದೇಶಕರಾದ ಸಂದೀಪ್ ಜುಂಜುನ್ವಾಲಾ ಮತ್ತು ಸಂಜಯ್ ಜುಂಜುನ್ವಾಲ ಇಬ್ಬರನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿದೆ.
ವಿನ್ಸಮ್ ಡೈಮಂಡ್ಸ್ ಅಂಡ್ ಜುವೆಲರಿಯ ಜತಿನ್ ಮೆಹ್ತಾ ತಲೆ ಮರೆಸಿಕೊಂಡಿದ್ದಾರೆ. ಈತ ಪಡೆದಿದ್ದ 4,076 ಕೋಟಿ ರುಪಾಯಿಗಳನ್ನು ಮನ್ನಾ ಮಾಡಲಾಗಿದೆ. ಕಾನ್ಪುರ ಮೂಲದ ಪೆನ್ನುಗಳನ್ನು ತಯಾರಿಸುತ್ತಿದ್ದ ರೊಟಮ್ಯಾಕ್ ಗ್ಲೋಬಲ್ ಪ್ರೈವೆಟ್ ಲಿಮಿಟೆಡ್ ನ ಕೋಥಾರಿ ಗ್ರೂಪ್ 2,850 ಕೋಟಿ ರುಪಾಯಿ ಸಾಲ ಮನ್ನ ಮಾಡಲಾಗಿದೆ. 2000-3000 ಸಾಲದ ಪಡೆದವರ ಪೈಕಿ ಕುಡೊಸ್ ಕೆಮೀ, ಪಂಜಾಬ್ 2,346 ಕೋಟಿ, ಬಾಬಾ ರಾಮ್ ದೇವ್ ಮತ್ತು ಬಾಲಕೃಷ್ಣ ಗ್ರೂಪ್ ಆಫ್ ಕಂಪನಿ ರುಚಿ ಸೋಯಾ ಇಂಡಸ್ಟ್ರೀಸ್ ಇಂದೋರ್ 2,212 ಕೋಟಿ, ಗ್ವಾಲಿಯರ್ ಮೂಲದ ಜೂಮ್ ಡೆವಲಪರ್ಸ್ 2012 ಕೋಟಿ ರುಪಾಯಿ ಸೇರಿದೆ
Also Read: ಮೋದಿ ಪ್ರಣೀತ ಅಪನಗದೀಕರಣದ ವೈಫಲ್ಯಕ್ಕೆ ಸಾಕ್ಷಿಯಾದ ಮಿತಿಮೀರಿದ ನಗದು ಹರಿವು
ಗೋಖಲೆ ಅವರಿಗೆ ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ 1,000 ಕೋಟಿಯಿಂದ 2,000 ಕೋಟಿ ಸಾಲವನ್ನು ಪಡೆದ 18 ಇಚ್ಚಾವರ್ತಿ ಸಾಲಗಾರರ ಸಾಲ ಮನ್ನಾ ಮಾಡಲಾಗಿದೆ. ಈ ಪೈಕಿ ಅಹ್ಮದಾಬಾದ್ ಮೂಲದ ಫಾರ್ಎವರ್ ಪ್ರಿಷಿಯಸ್ ಜುವೆಲರಿ ಅಂಡ್ ಡೈಮಂಡ್ಸ್ ಪ್ರೈವೆಟ್ ಲಿಮಿಟೆಡ್ 1962 ಕೋಟಿ ತಲೆಮರೆಸಿಕೊಂಡಿರುವ ಕಿಂಗ್ ಫಿಶರ್ ಏರ್ಲೈನ್ ನ ವಿಜಯ್ ಮಲ್ಯ 1,943 ಕೋಟಿ ಮನ್ನಾ ಮಾಡಲಾಗಿದೆ. ಇನ್ನುಳಿದ 25 ವ್ಯಕ್ತಿಗಳು/ಕಂಪನಿಗಳು 1,000 ಕೋಟಿ ರುಪಾಯಿಗಿಂತ ಕಡಮೆ ಮೊತ್ತದ ಸಾಲ ಪಡೆದವರಾಗಿದ್ದಾರೆ. ಈ 25 ಮಂದಿಯು ಪಡೆದ 605 ಕೋಟಿಯಿಂದ 984 ಕೋಟಿ ರುಪಾಯಿಗಳಷ್ಟನ್ನು ಮನ್ನಾ ಮಾಡಲಾಗಿದೆ.
ಇಚ್ಚಾವರ್ತಿ ಸುಸ್ತಿದಾರರ ಪಟ್ಟಿಯಲ್ಲಿ ಅಗ್ರಸ್ತಾನದಲ್ಲಿರುವ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 14,500 ಕೋಟಿ ರುಪಾಯಿ ವಂಚಿಸಿದ್ದಾರೆ. ಇದು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿಯೇ ಅತಿದೊಡ್ಡದಾದ ಹಗರಣ ಎಂದೇ ಹೆಸರಾಗಿದೆ. ದೇಶಬಿಟ್ಟು ಹೋಗಿರುವ ಈ ಇಬ್ಬರ ಆಸ್ತಿಗಳನ್ನು ಮಟ್ಟುಗೋಲು ಹಾಕಿಕೊಳ್ಳಲಾಗಿದೆ.