• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕರೋನಾಕ್ಕಿಂತಲೂ ವೇಗವಾಗಿ ಹರಡುತ್ತಿದೆ ಕೋಮುವೈರಸ್!

by
April 23, 2020
in ದೇಶ
0
ಕರೋನಾಕ್ಕಿಂತಲೂ ವೇಗವಾಗಿ ಹರಡುತ್ತಿದೆ ಕೋಮುವೈರಸ್!
Share on WhatsAppShare on FacebookShare on Telegram

ಜಗತ್ತಿನಾದ್ಯಂತ ಹರಡಿ ಸಾವಿರಾರು ಜನರನ್ನು ಬಲಿತೆಗೆದುಕೊಳ್ಳುತ್ತಾ, ಊಹಿಸಲಾರದಷ್ಟು ಜನರ ಪ್ರಾಣಕ್ಕೆ ಅಪಾಯ ಒಡ್ಡಿರುವ ಕರೋನಾ ಅಥವಾ ಕೋವಿಡ್- 19, ಮಾನವ ಕುಲದಲ್ಲಿರುವ ಅತ್ಯಂತ ಉತ್ಕೃಷ್ಟ ಕರ್ತೃತ್ವ ಶಕ್ತಿಯನ್ನೂ, ಜೊತೆಗೆ ನಮ್ಮೊಳಗೇ ಅಂತರ್ಗತವಾಗಿರುವ ಎಲ್ಲಾ ರೀತಿಯ ಸ್ವಭಾವಗಳ ರಾಡಿಯನ್ನೂ ಜೊತೆಜೊತೆಯಾಗಿಯೇ ಕಲಕಿ ಎಬ್ಬಿಸಿದೆ. ಜಗತ್ತಿನ ಬೇರೆಬೇರೆ ದೇಶಗಳು ಈ ಪಿಡುಗಿಗೆ ಬೇರೆಬೇರೆ ರೀತಿಯ ಪ್ರತಿಕ್ರಿಯೆ ನೀಡಿವೆ. ಅದರ ಹಿಂದಿರುವ ಜಾಗತಿಕ ಕಾರ್ಪೋರೇಟ್ ಹುನ್ನಾರಗಳು, ಅದರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳು ಅಥವಾ ಸಂಭವಿಸಬಹುದಾದ ಮಾನವೀಯತೆಯ ದುರಂತಗಳ ವರದಿಗಳು ಬದಲಿ ಅಥವಾ ಪರ್ಯಾಯ ಮಾಧ್ಯಮಗಳಲ್ಲಿ ಬರುತ್ತಲಿದ್ದು, ಕರೋನಾಕ್ಕಿಂತಲೂ ಹೆಚ್ಚು ಭಯ ಹುಟ್ಟಿಸುವಂತಿವೆ.

ADVERTISEMENT

ಕರೋನಾ ಪಿಡುಗಿನಿಂದ ಜಗತ್ತು ತತ್ತರಿಸುತ್ತಿರುವಾಗ ಭಾರತದಂತಹ ಧಾರ್ಮಿಕ ಅಮಲೇರಿರುವ, ಮೂಢನಂಬಿಕೆಯು ವ್ಯಾಪಕವಾಗಿರುವ ದೇಶದಲ್ಲಿ ಕೊರೋನಾಕ್ಕಿಂತಲೂ ಅಪಾಯಕಾರಿಯಾದ ವೈರಸ್‌ಗಳು ತಲೆಯೆತ್ತುತ್ತಿವೆ. ಅವು ಕೊರೋನಾಕ್ಕಿಂತಲೂ ಸಂಕೀರ್ಣವಾಗಿದ್ದು, ಒಂದನ್ನೊಂದು ಅವಲಂಬಿಸಿ ಹರಡುತ್ತವೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಕೋಮುವೈರಸ್ ಮತ್ತು ಅದನ್ನು ವೇಗವಾಗಿ ಮತ್ತು ನಿರ್ಲಜ್ಜವಾಗಿ ಹರಡುತ್ತಿರುವ ವೈರಸ್ ಮಾಧ್ಯಮಗಳು. ಈ ಹಿನ್ನೆಲೆಯಲ್ಲಿ ಕರೋನಾ ಸೋಂಕು ರೋಗವನ್ನು ಬಳಸಿಕೊಂಡು ಸಮಾಜವನ್ನು ಒಡೆದು, ಹುಸಿ ಧರ್ಮಾಧರಿತ ಸರ್ವಾಧಿಕಾರಿ ಪ್ರಭುತ್ವವೊಂದನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿರುವುದು ಸಾಕಷ್ಟು ಸ್ಪಷ್ಟವಾಗಿಯೇ ಗೋಚರವಾಗುತ್ತಿದೆ. ಇಂತಹಾ “ಕದಡಿದ ನೀರಿನಲ್ಲಿ ಮೀನು ಹಿಡಿಯುವ ಕೆಲಸ”ದ ಬಗ್ಗೆ ನಾವು ತಿಳಿದುಕೊಂಡು ಪ್ರತಿರೋಧ ಒಡ್ಡಬೇಕಾದ ಅಗತ್ಯವಿದೆ.

ಇತಿಹಾಸ ಪೂರ್ವದಲ್ಲಿ ಮಹಾ ಅಂಟುರೋಗಗಳು ಎಷ್ಟು ಜನರನ್ನು ಬಲಿತೆಗೆದುಕೊಂಡಿವೆ; ಆ ಕಾಲದಲ್ಲಿ ನಾಗರಿಕತೆಯ ಹೊಸ್ತಿಲಲ್ಲಿದ್ದ ನಮ್ಮ ಪೂರ್ವಜರು ಅನುಭವಿಸಿದ ಸಂಕಷ್ಟಗಳೇನು ಎಂಬುದನ್ನು ನಾವು ಊಹಿಸುವುದೂ ಬಹಳ ಕಷ್ಟ ಅಥವಾ ಕೇವಲ ಊಹಿಸುವುದು ಮಾತ್ರ ಸಾಧ್ಯ. ಆದರೆ, ಮಧ್ಯಯುಗೀನ ಮತ್ತು ಆಧುನಿಕ ಇತಿಹಾಸದಲ್ಲಿ ಬೇರೆಬೇರೆ ರೀತಿಯ ಸಾಂಕ್ರಾಮಿಕ ರೋಗಗಳು ಕೋಟ್ಯಂತರ ಜನರನ್ನು ಬಲಿತೆಗೆದುಕೊಂಡಿವೆ. ಆದರೆ, ಈ ಎಲ್ಲಾ ಸಂದರ್ಭಗಳಲ್ಲಿ ಮಾನವನ ಬದುಕಿ ಉಳಿಯುವ ಅಭೀಪ್ಸೆ ಹೆಚ್ಚಾಗಿದೆ. ಮಾನವ ಕುಲವು ತನ್ನೆಲ್ಲಾ ಮೂಢನಂಬಿಕೆಗಳ ಹೊರತಾಗಿಯೂ, ಇವುಗಳಿಂದ ಪಾರಾಗಿ ಉಳಿದಿರುವುದು ವಿಜ್ಞಾನದಿಂದ. ಇಂದು ಬಹುತೇಕ ರೋಗಗಳಿಗೆ ನಾವು ಔಷಧಿ ಕಂಡುಹಿಡಿದ್ದಿದ್ದೇವೆ. ಅದು ಎಲ್ಲರಿಗೂ ಲಭ್ಯವಾಗುತ್ತದೆಯೇ, ಅದು ಪ್ರತಿಯೊಬ್ಬ ಬಡ ಮಾನವನನ್ನು ತಲಪುತ್ತದೆಯೇ ಎಂಬುದು ಬೇರೆಯೇ ಮಾತು. ಇದು ಲಕ್ಷಾಂತರ ಕೋಟಿ ಡಾಲರ್‌ಗಳ ಮೆಡಿಕಲ್-ಡ್ರಗ್ ಮಾಫಿಯಾದ ಪ್ರಶ್ನೆ.

ಇಂದು ಸಾಮಾನ್ಯ ಕಾಯಿಲೆಯೆಂದು ನಾವು ಭಾವಿಸುವ, ಸಾಮಾನ್ಯವಾಗಿ ಫ್ಲೂ ಎಂದು ಕರೆಯುವ ಇನ್‌ಫ್ಲೂಯೆನ್ಝಾ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ ಎಂದರೆ, ಬಹುತೇಕ ಜನರು ನಂಬಲಾರರು. ಅದೇ ರೀತಿ, ಜಗತ್ತಿನಲ್ಲಿ ಅದರಲ್ಲೂ ಮುಖ್ಯವಾಗಿ ಭಾರತೀಯ ಉಪಖಂಡದಲ್ಲಿ, ಅತ್ಯಂತ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ರೋಗವೆಂದರೆ ಇಂದು ನಾವು ಔಷಧಿ ಹೊಂದಿದ್ದು, ಹೆಚ್ಚು ಭಯಪಡದಿರುವ ಮಲೇರಿಯಾ. ಪ್ಲೇಗ್ ಕೂಡಾ ಯುರೋಪ್ ಮತ್ತು ಭಾರತದಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ (ಭಾರತದಲ್ಲಿ ಮುಖ್ಯವಾಗಿ Smallpox ಅಥವಾ ಸಿಡುಬು). ಲಿಖಿತವಾಗಿ ದಾಖಲಾಗಿರುವಂತೆ, ಭಾರತವು 1817ರಿಂದ ಮತ್ತೆ ಮತ್ತೆ ಕಾಣಿಸಿಕೊಂಡ ಕಾಲರಾ (Cholerea- ವಾಂತಿ ಬೇಧಿ) ರೋಗಕ್ಕೆ ಲಕ್ಷಾಂತರ ಜನರನ್ನು ಕಳೆದುಕೊಂಡಿದೆ. ಇದೇ ರೀತಿ ಬಹಳಷ್ಟು ಜನರನ್ನು ಬಲಿತೆಗೆದುಕೊಂಡಿರುವ ಸಾಂಕ್ರಾಮಿಕ ರೋಗವೆಂದರೆ ಕ್ಷಯರೋಗ (Tuberculosis).

ನಂತರದಲ್ಲಿ ಭಾರತವು ಆನೆಕಾಲು ರೋಗ (Elephantiasis) ಮತ್ತು ಹೆಪಟೈಟಿಸ್ ಬಿ, ಮಂಗನ ಕಾಯಿಲೆ (ಕ್ಯಾಸನೂರು ಕಾಯಿಲೆ, ಇಲಿಜ್ವರ, ಹಂದಿ ಜ್ವರ (Swine Flu) ಮುಂತಾದ ಮೆದುಳಿಗೆ ಹಾನಿಯುಂಟುಮಾಡುವ ಸಾಂಕ್ರಾಮಿಕ ರೋಗಗಳನ್ನೂ, ಸಾರ್ಸ್, ಚಿಕುನ್‌ಗುನ್ಯಾ, ನೀಫಾ ಮುಂತಾದ ಹಲವಾರು “ಆಧುನಿಕ” ವೈರಲ್ ರೋಗಗಳನ್ನು ಎದುರಿಸಿದೆ. ಇದಕ್ಕೆಲ್ಲಾ ಕಾರಣವಾದದ್ದು ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ ಪ್ರಗತಿಯೇ ಹೊರತು, ಯಾವುದೇ ಬಣ್ಣದ ಧಾರ್ಮಿಕ ನಂಬಿಕೆಯಾಗಲೀ ಆಥವಾ ಹೋಮ, ಹವನ, ಪೂಜೆ, ಪುನಸ್ಕಾರಗಳಲ್ಲ. ಹೆಚ್ಚೆಂದರೆ ನಂಬಿಕೆ ಮತ್ತು ಆರಾಧನೆಗಳು ರೋಗವನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದಷ್ಟೇ. ಈ ಎಲ್ಲಾ ಸಂದರ್ಭಗಳು ರೋಗಗಳಿಗೂ ಧರ್ಮಗಳಿಗೂ ಸಂಬಂಧವಿಲ್ಲ ಎಂಬುದನ್ನು ನಮಗೆ ತೋರಿಸಿಕೊಟ್ಟಿವೆ. ಇಂದು ಮುಖ್ಯವಾಹಿನಿಯ ಮುದ್ರಣ ಮತ್ತು ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಕ್ರಿಮಿನಲ್ ವೈರಸ್‌ಗಳು ಕರೋನಾ ರೋಗಕ್ಕೆ ಧರ್ಮದ, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಬಣ್ಣ ಹಚ್ಚಿ ಸಮಾಜವನ್ನು ಮೊದಲ ಬಾರಿಗೆ ಈ ನಿಟ್ಟಿನಲ್ಲಿ ಒಡೆಯುವ ಪ್ರಯತ್ನವನ್ನು ಮಾಡುತ್ತಾ, ಬಹುತೇಕ ಯಶಸ್ವಿಯೂ ಆಗಿವೆ.

ಆದರೆ, ಇನ್ನೊಂದು ಸಾಮಾಜಿಕ ಆಯಾಮವನ್ನು ಒಂದು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಗಮನಿಸದೇ ಹೋದಲ್ಲಿ, ಒಂದೋ ನಾವು ಮೂರ್ಖರಾಗುತ್ತೇವೆ; ಇಲ್ಲವೇ, ಗೊತ್ತಿದ್ದೇ ಈ ಉದ್ದೇಶಪೂರ್ವಕ ತಪ್ಪನ್ನು ಮಾಡುತ್ತಿದ್ದೇವೆ. ಸರಕಾರ ಮೊದಲನೆಯ ಗುಂಪಿನಲ್ಲಿ ಬರುತ್ತದೆಯೋ, ಅಥವಾ ಮಾಧ್ಯಮಗಳ ಮತ್ತು ತನ್ನ ಅಂಧ ಹಿಂಬಾಲಕರ ನೆರವಿನಿಂದ ಎರಡನೆಯದನ್ನು ಮಾಡುತ್ತಿದೆಯೋ ಎಂಬುದು ಗಂಭೀರ ಪ್ರಶ್ನೆಯಾಗಿ ಮೂಡಿಬರುತ್ತಿದೆ. ಈ ಆಯಾಮವೇ ವರ್ಗ ಆಯಾಮ.

ಯಾವುದೇ ಸಾಂಕ್ರಾಮಿಕ ರೋಗ ತಾತ್ವಿಕವಾಗಿ ಯಾವುದೇ ಜಾತಿ, ಧರ್ಮ ಅಥವಾ ವರ್ಗಬೇಧ ಮಾಡುವುದಿಲ್ಲ. ಆದರೆ, ಅದರ ಪರಿಣಾಮದಿಂದ ರಕ್ಷಿಸಿಕೊಳ್ಳುವ ಸಾಧ್ಯತೆ, ನಂತರದ ಚಿಕಿತ್ಸೆ, ಅದು ಉಂಟುಮಾಡುವ ಸಂಕೀರ್ಣ ಬಿಕ್ಕಟ್ಟಿನಲ್ಲಿ ವರ್ಗ ತಾರತಮ್ಯ ಕಣ್ಣಿಗೆ ರಾಚುವಂತೆ ಕಾಣಿಸಿಕೊಳ್ಳುತ್ತದೆ. ಬದುಕುವ ಪರಿಸರ ಮತ್ತು ಜೀವನ ಶೈಲಿ ಇದಕ್ಕೆ ಮುಖ್ಯ ಕಾರಣ. ಕರೋನಾ ಇದನ್ನು ಕರುಳು ಕತ್ತರಿಸುವ ವಾಸ್ತವದೊಂದಿಗೆ ಬಿಚ್ಚಿಟ್ಟಿದೆ. ಈ ಸಾಂಕ್ರಾಮಿಕ ರೋಗಕ್ಕೆ ಸರಕಾರದ ಪ್ರತಿಕ್ರಿಯೆಯಾಗಲೀ, ಮಾಧ್ಯಮದ ಪ್ರತಿಕ್ರಿಯೆಯಾಗಲೀ ಕೇವಲ ಮಧ್ಯಮ ವರ್ಗಕ್ಕೆ ಸೀಮಿತವಾಗಿದೆ. ಬಡ ಮತ್ತು ದುಡಿಯುವ ವರ್ಗಗಳನ್ನು ಅದು ಪರಿಗಣಿಸಿದಂತೆಯೇ ಕಾಣುವುದಿಲ್ಲ. ಈ ವರ್ಗಗಳ ಕುರಿತು ಅದರ ಕಾಳಜಿಯು- ಈ ವರ್ಗಗಳ ಜನರು ರೋಗ ತಗಲಿಸಿಕೊಂಡು, ಅದನ್ನು ಶ್ರೀಮಂತ ಮತ್ತು ಮಧ್ಯಮ ವರ್ಗದ ಜನರಿಗೆ ಹರಡದಂತೆ- ಅವರನ್ನು ಪ್ರತ್ಯೇಕಿಸುವ ಅಮಾನವೀಯ ಕೆಲಸಕ್ಕೆ ಸೀಮಿತವಾದಂತೆ ಕಾಣುತ್ತದೆ. (ಲಾಕ್‌ಡೌನ್ ಮತ್ತು ಪ್ರತ್ಯೇಕಿಸುವಿಕೆ ಅಗತ್ಯ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ).

ಈ ಸಂಶಯಕ್ಕೆ ಪುಷ್ಟಿ ನೀಡುವ ಹಲವಾರು ಉದಾಹರಣೆಗಳನ್ನು ಕೊಡಬಹುದು. ಮೊದಲನೆಯದಾಗಿ- ಬಡವರು ಎದುರಿಸಬಹುದಾದ ಸಂಕಷ್ಟಗಳನ್ನು ಪರಿಗಣಿಸದೆಯೇ, ತಾವಿರುವಲ್ಲಿಯೇ ಸಿಕ್ಕಿಬೀಳುವ ಅಥವಾ ಕೆಲಸ ಕಳೆದುಕೊಂಡು ವಸ್ತುಶಃ ನಿರ್ಗತಿಕರಾಗಿ ಬೀದಿಗೆ ಬಿದ್ದು ಮನೆಗೆ ಮರಳಲು ತಹತಹಿಸುವ ಲಕ್ಷಾಂತರ ವಲಸೆ ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಿ, ಈ ಪಿಡುಗು ಮುಂದೊಡ್ಡುವ ವೈದ್ಯಕೀಯ, ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ಬಿಕ್ಕಟ್ಟುಗಳನ್ನು ಎದುರಿಸುವ ಯಾವೊಂದು ಪೂರ್ವಸಿದ್ಧತೆಯಾಗಲೀ, ಯೋಜನೆಯಾಗಲೀ ಇಲ್ಲದೆ ಏಕಾಏಕಿ ಹೇರಿದ ತುಘಲಕ್ ಲಾಕ್‌ಡೌನ್.

ಎರಡನೆಯದಾಗಿ- ಪ್ರಧಾನಿ ಮತ್ತೆಮತ್ತೆ ಟಿವಿಯಲ್ಲಿ ಬಂದು ಹಳ್ಳಿಶಾಲೆಯ ಮಾಸ್ತರರಂತೆ ಅದು ಮಾಡಿ, ಇದು ಮಾಡಿ ಎಂದು ಎಲ್ಲರಿಗೂ ಗೊತ್ತಿರುವ ಪುಕ್ಕಟೆ ಸಲಹೆ ನೀಡುತ್ತಾ- ತಾನು , ತನ್ನ ಸರಕಾರ ಏನು ಮಾಡಿದೆ, ಏನು ಮಾಡಲಿದೆ ಎಂದು ಹೇಳಿ ಧೈರ್ಯ ತುಂಬುವ ಒಂದು ಮಾತನ್ನೂ ಆಡದಿರುವುದು.

ಮೂರನೆಯದಾಗಿ- ಜಾಗಟೆ ಬಾರಿಸಿ, ದೀಪ ಹಚ್ಚಿ ಇತ್ಯಾದಿಯಾಗಿ ಧಾರ್ಮಿಕ ಛಾಯೆಯುಳ್ಳ ಕೃತ್ಯಗಳನ್ನು ನೀಡಿ, ಕೇವಲ ಇದರಿಂದಲೇ ಕರೋನಾ ಓಡಿಹೋಗುವಂತೆ ಜನರು ನಂಬುವಂತೆ ಮಾಡಿದ್ದು, ಅವರನ್ನು ಹುಚ್ಚೆಬ್ಬಿಸಿ ಬೀದಿಗಳಲ್ಲಿ ಗುಂಪಾಗಿ ಕುಣಿದಾಡಿಸಿ ದೈಹಿಕ ಅಂತರದ ಪರಿಕಲ್ಪನೆಯನ್ನೇ ಕಾಲಡಿ ಹೊಸಕಿ ರೋಗ ಹರಡುವ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದುದು. ಇದು ಉದ್ದೇಶಪೂರ್ವಕವಾಗಿ ಸಂಸ್ಕೃತಿಯ ಹೆಸರಿನಲ್ಲಿ ಈ ಪಿಡುಗಿಗೆ ಧಾರ್ಮಿಕ ಬಣ್ಣ ಹಚ್ಚುವ ಸೂಕ್ಷ್ಮವಾದ ಯೋಜಿತ ಪ್ರಯತ್ನದಂತೆ ಕಾಣುತ್ತದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳ ನೆರವಿಂದ ಶಬ್ದದ ಕಂಪನ, ಆ ನಕ್ಷತ್ರ, ಈ ಮುಹೂರ್ತ, ಉಷ್ಣಾಂಶ ಇತ್ಯಾದಿಯಾಗಿ ವೈಜ್ಞಾನಿಕತೆಯ ಮುಸುಕಿನಲ್ಲಿ ಅಪ್ಪಟ ಮೂಢನಂಬಿಕೆಯನ್ನು ಸರಕಾರಿ ಪ್ರಾಯೋಜಕತ್ವದಲ್ಲಿಯೇ ಹಬ್ಬಿಸಿ, ಜನರನ್ನು ಮರುಳುಗೊಳಿಸಲಾಯಿತು.

ನಾಲ್ಕನೆಯದಾಗಿ- ದೇಶಕ್ಕೆ ಕೊರೋನಾ ಕಾಲಿಟ್ಟಿದೆ ಎಂದು ಗೊತ್ತಾದ ಬಳಿಕವೂ, ಯುಎಸ್‌ಎಯ ದೊಡ್ಡಣ್ಣನನ್ನು ಮೆಚ್ಚಿಸಲು ಅಹಮದಾಬಾದ್‌ನಲ್ಲಿ “ನಮಸ್ತೇ ಟ್ರಂಪ್” ಎಂಬ ಕಾರ್ಯಕ್ರಮ ನಡೆಸಿ ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿದ್ದು, ಇಂದು ಅದೇ ಅಹಮದಾಬಾದ್ ನಗರ ಕರೋನಾ ಸಾವಿನ ಮುಂಚೂಣಿಯಲ್ಲಿ ಇರುವುದು ಮತ್ತು ಮಾಡೆಲ್ ಗುಜರಾತ್ ಇಂದು- ಒಂದು ಪಿಡುಗನ್ನು ಹೇಗೆ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದಕ್ಕೆ ಮಾಡೆಲ್ ಆಗಿ- ಸಾವಿನ ಸಂಖ್ಯೆ ನೂರು ದಾಟಿ, ದೇಶದಲ್ಲೇ ಎರಡನೆಯ ಸ್ಥಾನವನ್ನು “ಅಲಂಕರಿಸಿರುವುದು”…ಹೀಗೆ ಹೇಳುತ್ತಾ ಹೋದರೆ ನೂರಾರು ಉದಾಹರಣೆಗಳನ್ನು ಕೊಡಬಹುದು.

ಇವೆಲ್ಲವೂ ಸರಕಾರವು ಮಧ್ಯಮ ವರ್ಗದ ಬಾಲ್ಕನಿ ಜನರ ಬಗ್ಗೆ ಮಾತ್ರ ಕಾಳಜಿ ಹೊಂದಿದೆ; ಬಡವರನ್ನು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಸಿಯೂ, ತಲೆತಲಾಂತಗಳಿಂದ ನಡೆದುಕೊಂಡು ಬಂದಿರುವಂತೆ ಅವರಿಗೆ ಧಾರ್ಮಿಕತೆಯ ಕಷಾಯ ಕುಡಿಸಿ, ಧರ್ಮಾಂಧತೆಯ ಅಮಲೇರಿಸಿ, ತನ್ನ ವೈಫಲ್ಯಗಳನ್ನು ಮುಚ್ಚಿಡಲು ಯೋಜನೆ ರೂಪಿಸಿದೆ ಎಂಬ ಸಂಶಯವನ್ನು ಮೂಡಿಸಿವೆ. ಲಾಕ್‌ಡೌನ್ ಪ್ರಕ್ರಿಯೆಯಲ್ಲಿಯೇ ಇದನ್ನು ಗಮನಿಸಬಹುದು. ಈ ಪ್ರಕ್ರಿಯೆಯು ರೋಗ ಹರಡಂತೆ ತಡೆಯಲು ಅಪಾರ ಮಾನವೀಯತೆ ಮತ್ತು ಕಾಳಜಿಯಿಂದ, ತಿಳುವಳಿಕೆ ನೀಡುವಿಕೆ ಮತ್ತು ಅನುನಯದಿಂದ ಮಾಡಬೇಕಾದ ಕಾರ್ಯ ಎಂಬುದನ್ನು ಮರೆತು, ಬಡವರನ್ನು ಮತ್ತು ಅದರಲ್ಲೂ ಮುಖ್ಯವಾಗಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಪೊಲೀಸರು ಮಾಡಿದ ಲಾಠಿ ದೌರ್ಜನ್ಯ ಈ ಲಾಕ್‌ಡೌನ್ ಉದ್ದೇಶವೇ ಬಡವರನ್ನು ಪ್ರತ್ಯೇಕಿಸಿ, ಉಳ್ಳವರನ್ನು ರಕ್ಷಿಸುವುದು ಎಂಬ ಭಾವನೆ ಹುಟ್ಟುವುದಕ್ಕೆ ಕಾರಣವಾಗಿದೆ.

ಇದನ್ನು ನಿವಾರಿಸುವುದಕ್ಕೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಉಳ್ಳವರಿಗೆ, ಪ್ರಭಾವಿಗಳಿಗೆ- ಇದೇನು ರಾಜಪ್ರಭುತ್ವವೇ ಎಂದು ಯೋಚಿಸುವಂತೆ ಮಾಡುವ ರೀತಿಯಲ್ಲಿ- ವಿನಾಯಿತಿಗಳನ್ನು ನೀಡುತ್ತಿದೆ. ಆಳುವ ಪಕ್ಷದ ಪುಡಿ ನಾಯಕರೂ ರಾಜಾರೋಷವಾಗಿ ಕಾನೂನು ಉಲ್ಲಂಘಿಸುತ್ತಿದ್ದಾರೆ. ಇದು ಇನ್ನೂ ಮರ್ಯಾದೆರನ್ನು ಸ್ವಲ್ಪಮಟ್ಟಿಗಾದರೂ ಉಳಿಸಿಕೊಂಡಿರುವ ಮಾಧ್ಯಮಗಳಲ್ಲಿ ವರದಿಯಾಗಿದೆ. ಬಡವರ ಸಂಕಷ್ಟಗಳನ್ನು ಅರಿಯದೇ, ತಮ್ಮ ಸುರಕ್ಷೆಯ ಗೂಡುಗಳಲ್ಲಿ ಕುಳಿತಿರುವ ಶ್ರೀಮಂತ ಮತ್ತು ಮಧ್ಯಮ ವರ್ಗದ ಜನರು ಮತ್ತು ಮಾರಿಹೋಗಿರುವ ಟಿವಿ ಮಾಧ್ಯಮಗಳ ನಿರೂಪಕರು ನಮ್ಮದೇ ಜನರಿಗೆ, ಸ್ವದೇಶಿ ಭಾರತೀಯರಿಗೆ ಗುಂಡು ಹೊಡೆಯಿರಿ ಎಂದು ಹೇಳುತ್ತಾ, ಪ್ರಚೋದಿಸುತ್ತಾ, ಪೊಲೀಸರ ಪಿಸ್ತೂಲನ್ನು ಹೆಣ್ಣುಮಕ್ಕಳ ಸೊಂಟದ ಡಾಬಿಗೆ ಹೋಲಿಸುವ ಕ್ರೌರ್ಯ, ಅಹಂಕಾರ ತೋರಿಸುತ್ತಿದ್ದಾರೆ. ಶ್ರೀಮಂತರು ವಿಮಾನಗಳಲ್ಲಿ ಹೊತ್ತುತಂದ ಸೋಂನ್ನು ಹರಡುತ್ತಿರುವ ಆರೋಪವನ್ನು ಈ ನಿರ್ಲಜ್ಜ ಜನರು ಬಡವರ ಮೇಲೆ ಹೊರಿಸುತ್ತಿದ್ದಾರೆ.

ಇಂತಹಾ ಒಂದು ಬಿಕ್ಕಟ್ಟಿನ ಸಂದರ್ಭದಲ್ಲಿ, ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಿ, ಜನರಿಗೆ ತಿಳುವಳಿಕೆ ನೀಡುತ್ತಾ, ಅವರ ಸಂಕಷ್ಟಗಳನ್ನು ಸರಕಾರದ ಗಮನಕ್ಕೆ ತರುತ್ತಾ, ಸರಕಾರದ ತಪ್ಪುಗಳನ್ನು ಎತ್ತಿಹಿಡಿಯುತ್ತಾ, ಪರಿಹಾರ ಕಾರ್ಯಗಳಲ್ಲಿ ಸಮನ್ವಯ ಮೂಡಿಸುತ್ತಾ, ಪಿಡುಗಿನ ವಿರುದ್ಧ ಹೋರಾಡುವಂತೆ ಜನರನ್ನು ಹುರಿದುಂಬಿಸುತ್ತಾ ನಿಜವಾದ ದೇಶಪ್ರೇಮವನ್ನು ತೋರಿಸಬಹುದಿತ್ತು.

ಆದರೆ, ಬಹುತೇಕ ಮಾಧ್ಯಮಗಳು ಇದಕ್ಕೆ ವ್ಯತಿರಿಕ್ತವಾಗಿ, ಸರಕಾರದ ವೈಫಲ್ಯಗಳನ್ನು ಮುಚ್ಚಿಡುವುದರ ಜೊತೆಗೆ ಅದನ್ನು ಮಾನಗೇಡಿಯಾಗಿ ಹೊಗಳುತ್ತಾ, ಬಡಜನರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾ, ಸುಳ್ಳುಗಳನ್ನು ಹರಡುತ್ತಾ, ವದಂತಿಗಳನ್ನು ಹುಟ್ಟುಹಾಕುತ್ತಾ, ಸತ್ಯವನ್ನು ಮುಚ್ಚಿಡುತ್ತಾ, ಸುದ್ದಿಗಳನ್ನು ತಿರುಚುತ್ತಾ, ಭಯ ಹುಟ್ಟಿಸುತ್ತಾ, ಇಡೀ ಬಿಕ್ಕಟ್ಟಿಗೆ ಒಂದು ಸಮದಾಯ ಕಾರಣ ಎಂದು ಜನಸಾಮಾನ್ಯರು ನಂಬುವಂತೆ ಮಾಡುತ್ತಾ, ಜನರನ್ನು ವಿಭಜಿಸುತ್ತಾ, ಕೋಮು ವೈರಸನ್ನು ಕರೋನಾವನ್ನು ಮೀರಿಸುವಂತೆ ಹಬ್ಬಿಸುತ್ತಿವೆ.

ಇದು ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತಿರುವ ವಿದ್ಯಮಾನವಲ್ಲ. ಆದರೆ, ಭಾರತದ ಕೆಲ ಪತ್ರಕರ್ತರು ಮಾಫಿಯಾಗಿಂತಲೂ ಕಡೆಯಾಗಿ, ಉಳಿದ ಎಲ್ಲರಿಗಿಂತಲೂ ಅನೈತಿಕತೆಯ ಅಧಃಪಾತಾಳ ತಲಪಿದ್ದಾರೆ. ಈ ಪಿಡುಗನ್ನು ಬಳಸಿಕೊಂಡು ಜನರನ್ನು ವಿಭಜಿಸಿ, ಸರ್ವಾಧಿಕಾರಿ ಪ್ರಭುತ್ವ ಸ್ಥಾಪನೆಯ ಕಾರ್ಪೋರೇಟ್ ಪ್ರೇರಿತ ವಿನಾಶಕಾರಿ ಯೋಜನೆಯ ಭಾಗವಾಗಿಯೇ ಇವೆಲ್ಲವೂ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಯುಎಸ್‌ಎಯ ಟ್ರಂಪ್, ಬ್ರೆಜಿಲ್‌ನ ಬೊನ್ಸನಾರೋ, ಯು.ಕೆ.ಯ ಜಾನ್ಸನ್, ಭಾರತದ ಮೋದಿ ಮುಂತಾದ ಬಲಪಂಥೀಯರು ಮುಂಚೂಣಿಯಲ್ಲಿದ್ದಾರೆ.

ಆದುದರಿಂದಲೇ ಜಾಗತಿಕವಾಗಿ ಹಿಂದೆಂದೂ ಕಾಣದಷ್ಟು ಸುಳ್ಳು ಸುದ್ದಿಗಳು ಹಬ್ಬುತ್ತಿರುವ ಕುರಿತು ಆತಂಕ ವ್ಯಕ್ತಪಡಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ತೆದ್ರೋಸ್ ಅದನೋಮ್ ಚೆಬ್ರೆಯೇಸಸ್ ಅವರು ಒಂದು ಮಾತು ಹೇಳಿದ್ದಾರೆ. ಅದೆಂದರೆ, ಕರೋನಾ ಕೇವಲ ಒಂದು “ಪಿಡುಗು” ಅಲ್ಲ; ಅದೊಂದು “ಮಾಧ್ಯಮ ಪಿಡುಗು”. (Corona is not just a “Pandemic”; it is also an “Infomic”). ಅವರ ಮಾತು ಅಪ್ಪಟವಾದ ಪ್ರಸ್ತುತ ಸತ್ಯ!

(ಭಾರತದಲ್ಲಿ ಕೋಮುವೈರಸ್ ಹರಡಿ, ಕರೋನಾ ವಿರುದ್ಧ ಹೋರಾಟವನ್ನು ದುರ್ಬಲಗೊಳಿಸುವುದರಲ್ಲಿ ವೈರಸ್ ಮಾಧ್ಯಮದ ಪಾತ್ರದ ಕುರಿತು ಇನ್ನಷ್ಟು ವಿವರಗಳನ್ನು ಮುಂದೆ ನೋಡೋಣ.)

Tags: Communal VirusCommunalismcoronavirusCovid 19indian tv mediaಕರೋನಾಕೋಮುವೈರಸ್
Previous Post

ಪತ್ರಕರ್ತರಿಗೂ ಅಗತ್ಯವಾಗಿದೆ ಕೋವಿಡ್-19ನಿಂದ ರಕ್ಷಣೆ

Next Post

ಅರ್ನಾಬ್ ಗೋಸ್ವಾಮಿಗೆ ತಿರುಗುಬಾಣವಾಗುವುದೇ ಹಲ್ಲೆ ಪ್ರಕರಣ?

Related Posts

Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
0

ಹಾಸನ ಜಿಲ್ಲೆಯ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ರಾಜ್ಯದಲ್ಲಿ ಮೂರು ಸಾವಿರ ಅಕ್ರಮ ಪಂಪ್ ಸೆಟ್ ಗಳ ಸಕ್ರಮ ಕೃಷಿ ಫೀಡರ್ ಗಳನ್ನು ಸೌರೀಕರಣಗೊಳಿಸಿ ರೈತರ...

Read moreDetails

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025
Next Post
ಅರ್ನಾಬ್ ಗೋಸ್ವಾಮಿಗೆ ತಿರುಗುಬಾಣವಾಗುವುದೇ ಹಲ್ಲೆ ಪ್ರಕರಣ?

ಅರ್ನಾಬ್ ಗೋಸ್ವಾಮಿಗೆ ತಿರುಗುಬಾಣವಾಗುವುದೇ ಹಲ್ಲೆ ಪ್ರಕರಣ?

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada