ಜಗತ್ತೇ ಕರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದೆ. ಆದರೆ ಭಾರತ ಎರಡು ವಿಚಾರಗಳಿಗಾಗಿ ಹೋರಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಒಂದಂತೂ ಖಂಡಿತಾ ಸದ್ಯದ ಅನಿವಾರ್ಯವಾಗಿರುವ ಕರೋನಾ ವಿರುದ್ಧ ಹೋರಾಟ, ಇನ್ನೊಂದು ಮಾನವೀಯ ಬಿಕ್ಕಟ್ಟಿನ ಬಗ್ಗೆಯೂ ಭಾರತ ಪಣ ತೊಡಬೇಕಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರ್ಗತಿಕರ ಸಮಸ್ಯೆ ಹಾಗೂ ವಲಸೆ ಕಾರ್ಮಿಕರ ಹಸಿವನ್ನ ತಣಿಸಲೇಬೇಕಿದೆ.
ಇತಿಹಾಸದಲ್ಲಿ ಈ ಸಾಂಕ್ರಾಮಿಕ ರೋಗಗಳು ಭಾರತದ ಜನತೆಗೆ ಒಂದು ಅಧ್ಯಾಯವನ್ನೇ ಕಲಿಸಿದೆ. ಸಾಂಕ್ರಾಮಿಕ ರೋಗ ಮಾತ್ರವಲ್ಲದೇ ಕ್ಷಾಮ, ಯುದ್ಧಗಳು ನಡೆದಾಗಲೂ ಭಾರತೀಯರು ತಮ್ಮ ಪ್ರಜಾಪ್ರಭುತ್ವ ಆಧರಿತ ಹಕ್ಕುಗಳನ್ನು ಕಳೆದುಕೊಂಡಿದ್ದೂ ಇದೆ. ಒಮ್ಮೆ ಏನಾದರೂ ಈ ರೀತಿ ಹಕ್ಕುಗಳನ್ನು ಕಳೆದುಕೊಂಡರೆ ಮತ್ತೆ ಅದನ್ನ ಮರಳಿ ಪಡೆಯುವುದು ಸುಲಭದ ಮಾತಲ್ಲ.
1897 ರಲ್ಲಿ ಅಂದು ಭಾರತ ಇನ್ನೂ ಸ್ವಾತಂತ್ರ್ಯಗೊಂಡಿರಲಿಲ್ಲ. ಅದೇ ಕಾಲಕ್ಕೆ ದೇಶದಲ್ಲಿ ಪ್ಲೇಗ್ ರೋಗ ಭಯಾನಕವಾಗಿ ಕಾಡತೊಡಗಿತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಾಲ ಗಂಗಾಧರ ತಿಲಕ್ ಅವರು, ಬ್ರಿಟಿಷ್ ಸರ್ಕಾರದ ಕ್ರಮದ ವಿರುದ್ಧ ಬರವಣಿಗೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೇ ಗುರಿಯಾಗಿಸಿದ ಅಂದಿನ ಬ್ರಿಟಿಷ್ ಆಡಳಿತ ಅವರನ್ನ ದೇಶದ್ರೋಹ ಸೆಕ್ಷನ್ನಡಿ ಬ್ರಿಟಿಷ್ ಸರಕಾರ ಪ್ರಕರಣ ದಾಖಲಿಸಿತ್ತು. ಪ್ಲೇಗ್ ರೋಗ ಸಂಪೂರ್ಣ ಮುಕ್ತವಾದ ಬಳಿಕವೂ ಇವರ ಮೇಲಿನ ಕೇಸನ್ನ ಅಷ್ಟು ಸುಲಭವಾಗಿ ಹಿಂಪಡೆಯಲಾಗಿಲ್ಲ.
ಇದೀಗ ಮತ್ತೆ 123 ವರ್ಷಗಳ ಬಳಿಕ ಮತ್ತೆ ಭಾರತ ಅಂತಹದ್ದೇ ಭೀಕರ ಸಾಂಕ್ರಾಮಿಕ ರೋಗಕ್ಕೆ ಸಾಕ್ಷಿಯಾಗುತ್ತಿದೆ. ವ್ಯತ್ಯಾಸ ಅಂದ್ರೆ, ಅಂದು ಭಾರತದಲ್ಲಿ ಆಂಗ್ಲರ ಆಡಳಿತವಿದ್ದರೆ, ಇಂದು ಭಾರತೀಯರೇ ಆಯ್ಕೆ ಮಾಡಿದ ಸರಕಾರವೊಂದರ ಆಡಳಿತವಿದೆ. ಆದರೆ ಅಂದು ಬಾಲ ಗಂಗಾಧರ ತಿಲಕರು ತಮ್ಮ ಪತ್ರಿಕೆಯ ಬರವಣಿಗೆ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಸಿದ್ದರು. ಇಂದು ಭಾರತದ ಮಾಧ್ಯಮಗಳು ಇನ್ನಷ್ಟು ಮುಂದುವರೆದಿದ್ದಾವೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅನ್ನೋ ಹಿರಿಮೆ ಪಡೆದಿದೆ. ಆದರೆ ಸಾಂಕ್ರಾಮಿಕ ರೋಗದ ವರದಿ ಬಿತ್ತರಿಸುವಾಗ, ಮತ್ತದೇ ಸ್ವಾತಂತ್ರ್ಯ ಪೂರ್ವದ ಸಮಸ್ಯೆಯೂ ಎದುರಾಗಿದೆ. ಹಾಗಂತ ಮಾಧ್ಯಮಗಳ ನಡೆ ಸರಿಯಾಗಿದೆ ಅಂತಾನೂ ಹೇಳಲು ಬರೋದಿಲ್ಲ. ಕೆಲವೊಂದು ಮಾಧ್ಯಮಗಳು ಅತಿರೇಕದ ವರದಿಯಿಂದ ಜನರಲ್ಲಿ ಅನಗತ್ಯ ಭಯ ಹುಟ್ಟು ಹಾಕುವ ಪ್ರಯತ್ನದಲ್ಲಿದೆ. ಅದರ ಪರಿಣಾಮವೋ ಕೆಲ ದೇಶಗಳಲ್ಲಿ ಮಾಧ್ಯಮಗಳ ವರದಿಗೆ ನಿರ್ಬಂಧ ಬಿದ್ದರೆ, ಭಾರತದಲ್ಲೂ ಕೆಲವು ರಾಜ್ಯಗಳಲ್ಲಿ ರಾಜ್ಯ ಸರಕಾರದ ಅಧಿಸೂಚನೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಕರೋನಾ ವಿರುದ್ಧವಾಗಿ ದೊಡ್ಡದಾಗಿ ಧ್ವನಿ ಎತ್ತುವ ಮಾಧ್ಯಮಗಳನ್ನು ಸುಲಭವಾಗಿ ಸುಮ್ಮನೆ ಕೂರಿಸುವ ಪ್ರಯತ್ನ ನಡೆದಿದೆ.
ಲಾಕ್ಡೌನ್ ಘೋಷಣೆಯಾದ ಮೇಲೂ ಕಾನೂನು ಉಲ್ಲಂಘಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಡೆಯನ್ನ ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ ʼದಿ ವೈರ್ʼ ಸಂಪಾದಕ ಸಿದ್ದಾರ್ಥ್ ವರದರಾಜನ್ ಮೇಲೆ ಉತ್ತರ ಪ್ರದೇಶ ಸರಕಾರ ಭಾರೀ ಆಸಕ್ತಿಯಿಂದ ಕೇಸು ದಾಖಲಾಗುವಂತೆ ಮಾಡಿರುವುದು ಕರೋನಾ ಸಂದಿಗ್ಧ ಪರಿಸ್ಥಿತಿಯಲ್ಲೂ ಆಳುವ ಸರಕಾರ ಯಾವ ರೀತಿಯಾಗಿ ಸ್ವತಂತ್ರ ಮಾಧ್ಯಮವೊಂದರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಅನ್ನೋದಕ್ಕೆ ಉದಾಹರಣೆ.
ಸುದ್ದಿ ಪ್ರಸರಣ ವಿಚಾರವಾಗಿ ಸರಕಾರದ ಆದೇಶ ಪಾಲಿಸುವಂತೆ ನಿರ್ದೇಶನ ನೀಡುವಂತೆ ಕೇಂದ್ರ ಸರಕಾರ ಕೂಡಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅಲ್ಲದೇ ಇಂತಹ ವ್ಯಾಜ್ಯವನ್ನ ಆಲಿಸುವ ಆಸಕ್ತಿ ತೋರಲಿಲ್ಲ. ಮಾತ್ರವಲ್ಲದೇ ಸೋಂಕಿನ ವಿರುದ್ಧ ನಡೆಯುವ ಯಾವುದೇ ಮುಕ್ತ ಚರ್ಚೆ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ ಮಾಧ್ಯಮಗಳು ತಾವು ನೀಡುವ ವರದಿ ಬಗ್ಗೆ ಪರಿಶೀಲಿಸುವ ಅನಿವಾರ್ಯತೆ ಇದೆ ಎಂದಿದೆ. ಹೀಗೆ ಸುಪ್ರೀಂ ಕೋರ್ಟ್ ಮಾಧ್ಯಮಗಳಿಗೆ ಸೂಚನೆ ರವಾನಿಸುತ್ತಿರುವುದು ಮೊದಲು ಎನ್ನಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ವರದಿಗಾರನೊಬ್ಬ ಮಾಡಿದ್ದ ಎಡವಟ್ಟು, ಸ್ಲಂನಲ್ಲಿದ್ದ ಸಾವಿರಾರು ವಲಸೆ ಕಾರ್ಮಿಕರನ್ನು ಬೀದಿಗೆ ತಂದಿತ್ತು. ಆ ನಂತರ ಆ ವರದಿಗಾರನ ಬಂಧನವೂ ನಡೆಯಿತು. ಹಾಗಂತ ಇನ್ನಿತರ ಸ್ವತಂತ್ರ ಮಾಧ್ಯಮಗಳ ಕತ್ತು ಹಿಸುಕುವ ಪ್ರಯತ್ನ ಸರಿಯಲ್ಲ. ಕಾರಣ, ಈ ರೀತಿ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಅಡ್ಡಪಡಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೂ ಆಗುತ್ತದೆ. ಅದೆ ಕಾರಣಕ್ಕೆ ಸುಪ್ರೀಂ ಕೋರ್ಟ್ ಕೂಡಾ ಮಧ್ಯಪ್ರವೇಶ ನಿರಾಕರಿಸಿತು. ಸ್ವತಂತ್ರ ಮಾಧ್ಯಮಗಳು ಸದಾ ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸುತ್ತವೆಯೇ ಹೊರತು ಆಡಳಿತ ಪಕ್ಷದ ಅಣತಿ ಮೇರೆಗೆ ವರ್ತಿಸದು ಅನ್ನೋದು ಕೂಡಾ ಆಳುವ ಪಕ್ಷದ ಕೆಂಗಣ್ಣಿಗೆ ಗುರಿಯಾಗಲು ಕಾರಣವಾಗುತ್ತಿದೆ.
ಭಾರತ ಈಗಲೂ ಬ್ರಿಟಿಷರ ಕಾಲದ ಸಾಂಕ್ರಾಮಿಕ ರೋಗ ತಡೆ ಕಾಯ್ದೆ 1897 ನ್ನೇ ಅನುಸರಿಸುತ್ತಿದೆ. ಅಂದು ಈ ಕಾಯ್ದೆಯನ್ನು ಬ್ರಿಟಿಷ್ ಸರಕಾರ ಆರಂಭಿಸಿದ್ದೇ ಬಾಲ ಗಂಗಾಧರ ತಿಲಕರ ವಿರುದ್ಧ ಪ್ರಕರಣವನ್ನ ಇನ್ನಷ್ಟು ಬಿಗಿಗೊಳಿಸಲಾಗಿತ್ತು. 1897 ರಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಬ್ರಿಟಿಷ್ ಸರಕಾರ ತೋರಿದ ಉದಾಸೀನತೆಯನ್ನೇ ಪ್ರಶ್ನಿಸಿದ್ದ ತಿಲಕರನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಅದೇ ವರ್ಷ ಈ ಕಾಯ್ದೆ ಜಾರಿಗೆ ಬಂದಿತು. ತನ್ನ ಪತ್ರಿಕಾ ಬರವಣಿಗೆ ಮೂಲಕ ಬ್ರಿಟಿಷರ ಪಾಲಿಗೆ ನುಂಗಲಾರದ ತುತ್ತಾಗಿದ್ದ ತಿಲಕರನ್ನು ಈ ಮೂಲಕ ಮಣಿಸುವ ಪ್ರಯತ್ನ ನಡೆದಿತ್ತು.
ಉತ್ತರ ಪ್ರದೇಶದ ಇನ್ನೊಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ, ಪತ್ರಕರ್ತ ವಿಜಯ್ ವಿನೀತ್ ಎಂಬವರು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಸಿ ಕ್ಷೇತ್ರದ ಗಡಿಯಲ್ಲಿರುವ ಹಳ್ಳಿವೊಂದರಲ್ಲಿ ವಾಸಿಸುವ ಮುಸಾಹರ್ ಬುಡಕಟ್ಟು ಜನಾಂಗದ ಬಗ್ಗೆ ವರದಿ ಮಾಡಿದ್ದರು. ಲಾಕ್ಡೌನ್ ನಿಂದಾಗಿ ತಿನ್ನುವ ಹುಲ್ಲಿಗೂ (ಒಂದು ರೀತಿಯ ದ್ವಿದಳ ಧಾನ್ಯ ಮಾದರಿಯ ಹುಲ್ಲು) ಪರದಾಡುವ ಸ್ಥಿತಿ ಅಲ್ಲಿದ್ದು, ಅದನ್ನ ವಿಜಯ್ ವಿನೀತ್ ವರದಿ ಮಾಡಿದ್ದರು. ಆ ವರದಿಗೆ ಗರಂ ಆಗಿದ್ದ ವಾರಣಸಿ ಜಿಲ್ಲಾಡಳಿತ 24 ಗಂಟೆಗಳಲ್ಲಿ ಅವರಿಗೆ ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟೀಸ್ ನೀಡಿದ್ದರು. ಅಲ್ಲದೇ ಈ ವರದಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿವೆ ಅನ್ನೋ ಆರೋಪವನ್ನೂ ಹಾಕಲಾಗಿತ್ತು.
ಈ ರೀತಿ ಮಾಧ್ಯಮ ಸ್ವಾತಂತ್ರ್ಯವನ್ನ ಹತ್ತಿಕ್ಕುವ , ಅದರಲ್ಲೂ ʼದಿ ವೈರ್ʼ ಸಂಪಾದಕ ಸಿದ್ದಾರ್ಥ ವರದರಾಜನ್ ಮೇಲೆ ಹಾಕಲಾದ ಎಫ್ಐಆರ್ ವಿರುದ್ಧ ʼಎಡಿಟರ್ಸ್ ಗಿಲ್ಡ್ʼ ಸಹಿತ, 200 ಕ್ಕೂ ಅಧಿಕ ಹಿರಿಯ ಪತ್ರಕರ್ತರು ಹಾಗೂ ವಿಪಕ್ಷಗಳು ಭಾರೀ ದೊಡ್ಡದಾಗಿ ಧ್ವನಿ ಎತ್ತಿದ್ದಾವೆ. ದೆಹಲಿಯಿಂದ 700 ಕಿಲೋ ಮೀಟರ್ ದೂರದಲ್ಲಿರುವ ಸಣ್ಣ ಪಟ್ಟಣಕ್ಕೆ ಲಾಕ್ಡೌನ್ ಸಮಯದಲ್ಲಿ ಹೋಗಿ ವಿಚಾರಣೆ ಎದುರಿಸಬೇಕು ಅನ್ನೋ ಆಳುವ ಸರಕಾರದ ಆದೇಶ ಬರುತ್ತೆ ಅಂತಂದರೆ, ಸ್ವಾತಂತ್ರ್ಯ ಮಾಧ್ಯಮವೊಂದನ್ನು ಹತ್ತಿಕ್ಕಲು ದೇಶದಲ್ಲಿ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ಆದರೆ ಇನ್ನೊಂದು ಕಡೆಯಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಮುಸ್ಲಿಂ ಸಮುದಾಯವನ್ನೇ ಸಾಂಕ್ರಾಮಿಕ ರೋಗಕ್ಕೆ ಕಾರಣ ಅನ್ನೋ ರೀತಿಯಲ್ಲಿ ಬಲಪಂಥೀಯ ವಿಚಾರಧಾರೆಯ ಮಾಧ್ಯಮ ಹಾಗೂ ಗುಂಪುಗಳು ಅಪಪ್ರಚಾರ ದೇಶವನ್ನು ಮಾತ್ರವಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯನ್ನೂ ಇಕ್ಕಟ್ಟಿಗೆ ತಂದಿಟ್ಟಿವೆ. ಆದರೆ ಇದರ ಬಗ್ಗೆ ಯಾರೂ ಧ್ವನಿಯೆತ್ತುತ್ತಿಲ್ಲ. ದೂರದರ್ಶನದ ಮೂಲಕ ಸಂದೇಶ ನೀಡುವ ಪ್ರಧಾನ ಮಂತ್ರಿಗಳು ಖಂಡಿಸುವ ಮನಸ್ಸೂ ಮಾಡಿಲ್ಲ.
ಈಗಾಗಲೇ ದೇಶಾದ್ಯಂತ ಕರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಬೇಕಾದ ಪಿಪಿಇ, ಪರೀಕ್ಷಾ ಕಿಟ್ಗಳ ಕೊರತೆ ಇದ್ದು, ಇದರ ಬಗ್ಗೆ ವೈದ್ಯಕೀಯ ಸಿಬ್ಬಂದಿಗಳು ಯಾರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ತಡೆಯಲಾಗಿದೆ. ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆಯೊಬ್ಬರು ಜಾಲತಾಣದಲ್ಲಿ ತಾವು ಉಪಯೋಗಿಸುವ ರೈನ್ ಕೋಟ್ ನ ಗುಣಮಟ್ಟದ ಬಗ್ಗೆ ಫೋಟೋ ಹರಿಯಬಿಟ್ಟಿದ್ದರು. ಆ ಕಾರಣಕ್ಕಾಗಿ ಅವರು ಸತತ 16 ಗಂಟೆಗಳ ಕಾಲ ಪೊಲೀಸ್ ವಿಚಾರಣೆ ಎದುರಿಸಬೇಕಾಯಿತು. ದೇಶದಲ್ಲಿ ಹೀಗೆ ಹತ್ತಾರು ಘಟನೆಗಳು ನಡೆದಿದ್ದು, ಈ ರೀತಿ ಬಹಿರಂಗಪಡಿಸಿದ ವೈದ್ಯಕೀಯ ಸಿಬ್ಬಂದಿಗಳನ್ನು ಬೆದರಿಸುವ , ಇಲ್ಲವೇ ವರ್ಗಾಯಿಸುವ , ಅದೂ ಅಲ್ಲದೇ ಹೋದರೆ ಬಲವಂತದ ರಾಜೀನಾಮೆ ನೀಡಿಸುವ ಕೆಲಸವೂ ದೇಶದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ.
ಇತ್ತೀಚೆಗೆ ಪತ್ರಿಕಾ ಸಂಪಾದಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಕರೋನಾ ಸೋಂಕಿನ ವಿರುದ್ಧ ಅತಿಯಾದ ʼನಕರಾತ್ಮಕʼ ಸುದ್ದಿ ಪ್ರಕಟಿಸದಂತೆ ಕೇಳಿಕೊಂಡರು. ಈ ಮೂಲಕ ʼಸ್ವಯಂ ಸೆನ್ಸಾರ್ಶಿಪ್ʼ ಅಳವಿಡಿಸಿಕೊಳ್ಳಿ ಅನ್ನೋ ಆಗಿತ್ತು ಪ್ರಧಾನಿಯವರ ನಡೆ. ಆದರೆ ಈ ರೀತಿ ಆದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಹುದಾದ ನಕಲಿ ಸುದ್ದಿಗಳ ಬಗ್ಗೆ ಬೆಲೆ ತೆರಬೇಕಾದೀತು ಅನ್ನೋ ಸಣ್ಣ ಪರಿಕಲ್ಪನೆಯೂ ಪ್ರಧಾನಿ ಬಳಿ ಇದ್ದಂತಿರಲಿಲ್ಲ.
ಈ ಮೂಲಕ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನ ಹತ್ತಿಕ್ಕುವ ಪ್ರಯತ್ನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಳುವ ಸರಕಾರ ಮಾಡುತ್ತಿದೆ. ಅದರಲ್ಲೂ ಬಿಜೆಪಿ ಆಡಳಿತದಲ್ಲಿ ಇಂತಹ ವ್ಯವಸ್ಥೆ ಜಾಸ್ತಿಯಾಗಿದೆ. ಅತ್ತ ಕೇಂದ್ರ ಸರಕಾರ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗುತ್ತಲೇ ಇದೆ. ದೆಹಲಿ ಗಲಭೆ ಸಂದರ್ಭ ವಸ್ತುನಿಷ್ಠ ವರದಿ ಪ್ರಸಾರ ಮಾಡಿದ್ದಕ್ಕಾಗಿ ದೇಶದ ತಳಭಾಗದಲ್ಲಿರುವ ಕೇರಳ ರಾಜ್ಯದ ಎರಡು ಸುದ್ದಿವಾಹಿನಿಗಳಿಗೆ ನಿರ್ಬಂಧ ವಿಧಿಸಿತ್ತು. ಬಳಿಕ ನಿರ್ಬಂಧ ವಿಧಿಸಿದ ವೇಗದಲ್ಲೇ ವಿರೋಧ ವ್ಯಕ್ತವಾಗುತ್ತಲೇ ತೆರವು ಮಾಡಿತ್ತು.
ಕರ್ನಾಟಕದಲ್ಲಂತೂ ಬಿಜೆಪಿ ಅಧಿಕಾರ ಬರುತ್ತಲೇ ವಿಧಾನಸಭೆ ಹಾಗೂ ಪರಿಷತ್ ಕಲಾಪಗಳಿಗೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ಸರಕಾರದ ಇಂತಹ ಕುತ್ಸಿತ ಪ್ರಯತ್ನಗಳ ವಿರುದ್ಧ ಮಾಧ್ಯಮಗಳೂ ಕೂಡಾ ಎಚ್ಚೆತ್ತುಕೊಳ್ಳಬೇಕಿದೆ. ಮಾಧ್ಯಮಗಳನ್ನ ಹತ್ತಿಕ್ಕುವ ಹೊಸ ಸಂಪ್ರದಾಯಕ್ಕೆ ಸರಕಾರ ಕೈ ಹಾಕುತ್ತಿದೆ ಅಂದರೆ ಅದು ದೇಶದ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಬುಡಮೇಲುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದೇ ಅರ್ಥ. ಇದರಿಂದಾಗಿ ಸ್ವತಂತ್ರ ಮಾಧ್ಯಮಗಳನ್ನು ಹತ್ತಿಕ್ಕುವ ಇಲ್ಲವೇ ನಿಧಾನವಾಗಿ ಆಳುವ ಸರಕಾರಕ್ಕೆ ಶರಣಾಗುವ ಪರಿಸ್ಥಿತಿ ಸೃಷ್ಟಿಸಿದರೂ ಅಚ್ಚರಿಯಿಲ್ಲ.